ದುಬೈ, ಅ. 29: ಅಫ್ಘಾನಿಸ್ತಾನ ವಿಶ್ವದ ಬಲಾಢ್ಯ ತಂಡವಾಗಿ ಬೆಳೆದಿದೆ. ಇದರ ಆಟಗಾರರು ವಿಶ್ವ ಕ್ರಿಕೆಟ್ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ, ಸ್ಟಾರ್ಗಳೆನಿಸಿದ್ದಾರೆ. ಅಫ್ಘಾನಿಸ್ತಾನ್ ಕ್ರಿಕೆಟ್ ತಂಡದ ನಾಯಕ ಮೊಹಮ್ಮದ್ ನಬಿ ಅವರು ತಮ್ಮ ಇಂಗ್ಲೀಷ್ ಜ್ಞಾನದ ಬಗ್ಗೆ ಹಾಸ್ಯ ಮಾಡಿಕೊಂಡಿರುವ ವಿಡಿಯೋ ಬಹಳ ವೈರಲ್ ಆಗಿದೆ. ನಬಿ ಅವರ ನೇರ ನುಡಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಪಂದ್ಯಕ್ಕೆ ಮುನ್ನ ಸ್ಕಾಟ್ಲೆಂಡ್ ವಿರುದ್ಧ
ಅಫ್ಘಾನಿಸ್ತಾನ ಭರ್ಜರಿ ಗೆಲುವು ಪಡೆದಿತ್ತು. ಆ ಪಂದ್ಯಕ್ಕೆ ಮುಂಚಿನ ಪತ್ರಿಕಾಗೋಷ್ಠಿಯಲ್ಲಿ ನಬಿ ಮಾತನಾಡಿರುವ ಒಂದು ಚಿಕ್ಕ ತುಣುಕು ಇದಾಗಿದೆ.
ಈ ವಿಡಿಯೋದಲ್ಲಿ ಕಾಣುವ ಪ್ರಕಾರ, ಮೊಹಮ್ಮದ್ ನಬಿ ಟೆನ್ಷನ್ನಲ್ಲಿ ಪತ್ರಿಕಾಗೋಷ್ಠಿಗೆ ಬಂದು ಕೂರುತ್ತಾರೆ. ಅದಕ್ಕೆ ಮುಂಚೆಯೇ ಅವರು ಪತ್ರಕರ್ತರೊಂದಿಗೆ ಏನೋ ಸಂವಾದ ಮಾಡಿದಂತಿರುತ್ತದೆ. ಜೋರಾಗಿ ನಗು ಮನೆಮಾಡಿರುತ್ತದೆ. “ಸಬ್ಸೆ ಮುಷ್ಕಿಲ್ ಕಾಮ್ ಹೈ ಭಾಯ್ ಯೇ” (ಎಲ್ಲಕ್ಕಿಂತ ಕಷ್ಟದ ಕೆಲಸ ಅಂದರೆ ಇದು) ಎಂದು ನಬಿ ಹೇಳುತ್ತಾ ಬಂದು ಕೂರುತ್ತಾರೆ.
ಗೋಷ್ಠಿಯಲ್ಲಿ ನಗು ಮುಂದುವರಿಯುತ್ತದೆ. ನಬಿ ಮುಖ ಒರೆಸಿಕೊಳ್ಳುತ್ತಾ, ಮುಖದಲ್ಲಿ ನಗು ತಂದುಕೊಳ್ಳುತ್ತಾ, “ಕಿತ್ನೆ ಕ್ವಶ್ಚನ್ಸ್ ಹೈ? 5 ಮಿನಿಟ್ಸ್ ಮೇ ಮೆರಿ ಇಂಗ್ಲೀಷ್ ಖತಂ ಹೋ ಜಾಯೇಗಿ ಭಾಯ್ (ಎಷ್ಟು ಪ್ರಶ್ನೆ ಇವೆ? ನನ್ನ ಇಂಗ್ಲೀಷ್ 5 ನಿಮಿಷದಲ್ಲಿ ಮುಗಿದುಹೋಗುತ್ತದೆ)” ಎಂದು ನಬಿ ಹೇಳುತ್ತಾರೆ. ರೂಮ್ನಲ್ಲಿ ನಗು ಇನ್ನೂ ಹೆಚ್ಚಾಗುತ್ತದೆ.
ತಾಲಿಬಾನ್ ಆಡಳಿತದಲ್ಲಿ ಕ್ರಿಕೆಟ್ ಹೇಗೆ?
ಆ ಪತ್ರಿಕಾ ಗೋಷ್ಠಿಯಲ್ಲಿ ಮೊಹಮ್ಮದ್ ನಬಿ ಅವರಿಗೆ ಪತ್ರಕರ್ತರಿಂದ ನಾನಾ ತರಹದ ಪ್ರಶ್ನೆಗಳು ಕೇಳಿದರು. ಅಫ್ಘಾನಿಸ್ತಾನ ದೇಶದಲ್ಲಿ ತಾಲಿಬಾನ್ ಸರ್ಕಾರದಿಂದ ಕ್ರಿಕೆಟ್ಗೆ ಯಾವ ತರಹ ಪ್ರೋತ್ಸಾಹ ಸಿಗುತ್ತಿದೆ ಎಂಬ ಕುತೂಹಲದ ಪ್ರಶ್ನೆ ಪ್ರಮುಖವಾಗಿತ್ತು. ನಬಿ ತಮಗೆ ಗೊತ್ತಿದ್ದಷ್ಟು ಇಂಗ್ಲೀಷ್ನಲ್ಲಿ ಪ್ರಶ್ನೆಗಳಿಗೆ ಉತ್ತರಿಸಿದರು. ಹಿಂದಿಯಲ್ಲೂ ಉತ್ತರ ಕೊಟ್ಟರು.
ಇದನ್ನೂ ಓದಿ: Neeraj Chopra- ಪುಟ್ಟ ಬಾಲಕಿ ಮಾತು, ನೀರಜ್ ಚೋಪ್ರಾ ಸರಳತೆ: ವಿಡಿಯೋ ವೈರಲ್
ಸ್ಕಾಟ್ಲೆಂಡ್ ವಿರುದ್ಧ ಭರ್ಜರಿ ಗೆಲುವು:
ಅಫ್ಘಾನಿಸ್ತಾನ ತಂಡ ಸೂಪರ್-12 ಸುತ್ತಿನ ತನ್ನ ಮೊದಲ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡವನ್ನು ಬಹಳ ಜಬರದಸ್ತ್ ಆಗಿ ಸೋಲಿಸಿತ್ತು. ಆ ಪಂದ್ಯಕ್ಕೆ ಮುನ್ನ ಮೈದಾನದಲ್ಲಿ ತಂಡಗಳು ಸೇರಿದಾಗ ರಾಷ್ಟ್ರೀಯ ಗೀತೆ ಹಾಡುವಾಗ ಮೊಹಮ್ಮದ್ ನಬಿ ಅವರ ಕಣ್ಣಂಚಲಿ ನೀರು ಜಿನುಗಿದ್ದನ್ನ ಗಮನಿಸಬಹುದಾಗಿತ್ತು.
ಸ್ಕಾಟ್ಲೆಂಡ್ ವಿರುದ್ಧ ಅಫ್ಘಾನಿಸ್ತಾನ್ 130 ರನ್ಗಳಿಂದ ಭರ್ಜರಿ ಗೆಲುವು ಸಾಧಿಸಿತ್ತು. 20 ಓವರ್ನಲ್ಲಿ 190 ರನ್ ಗಳಿಸಿದ ಅಫ್ಘಾನಿಸ್ತಾನ ತನ್ನ ಎದುರಾಳಿಗಳನ್ನ ಕೇವಲ 60 ರನ್ಗೆ ಆಲೌಟ್ ಮಾಡಿತು. ಮುಜೀಬ್ ಉರ್ ರಹಮಾನ್ ಮತ್ತು ರಷೀದ್ ಖಾನ್ ಅವರ ಮಾರಕ ಬೌಲಿಂಗ್ಗೆ ಸ್ಕಾಟ್ಲೆಂಡ್ ಧೂಳೀಪಟವಾಯಿತು. ಮುಜೀಬ್ 5 ಮತ್ತು ರಷೀದ್ 4 ವಿಕೆಟ್ ಕಿತ್ತು ತಮ್ಮ ಗುಂಪಿನ ಇತರ ತಂಡಗಳಿಗೆ ಬಲವಾದ ಸಂದೇಶ ರವಾನಿಸಿದರು.
ಇದನ್ನೂ ಓದಿ: Saqlain Mushtaq- ಭಾರತ-ಪಾಕ್ ಫೈನಲ್ ಆಗಬೇಕು ಎಂದು ಪಾಕ್ ಕೋಚ್ ಹೇಳಿದ್ದು ಈ ಕಾರಣಕ್ಕೆ
ಪಾಕ್ ವಿರುದ್ಧ ನಬಿ ಭರ್ಜರಿ ಬ್ಯಾಟಿಂಗ್:
ಇವತ್ತು ಶುಕ್ರವಾರ ಪಾಕಿಸ್ತಾನ ವಿರುದ್ಧ ದುಬೈನಲ್ಲಿ ಪಂದ್ಯ ನಡೆಯುತ್ತಿದ್ದು, ಮೊಹಮ್ಮದ್ ನಬಿ 32 ಬಾಲ್ನಲ್ಲಿ ಅಜೇಯ 35 ರನ್ ಗಳಿಸಿ ಅಫ್ಘಾನಿಸ್ತಾನಕ್ಕೆ 147 ರನ್ಗಳ ಉತ್ತಮ ಮೊತ್ತ ದೊರಕಲು ನೆರವಾದರು. ಒಂದು ಹಂತದಲ್ಲಿ 76 ರನ್ಗೆ 6 ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿದ್ದ ಅಫ್ಘಾನ್ ತಂಡಕ್ಕೆ ಮೊಹಮ್ಮದ್ ನಬಿ ಮತ್ತು ಗುಲ್ಬದಿನ್ ನಯೀಬ್ ಇಬ್ಬರೂ 7ನೇ ವಿಕೆಟ್ಗೆ 7 ಓವರ್ನಲ್ಲಿ 71 ರನ್ಗಳ ಮುರಿಯದ ಜೊತೆಯಾಟ ಕೊಟ್ಟರು.
ಅಫ್ಘಾನಿಸ್ತಾನ ಇರುವ ಎರಡನೇ ಗುಂಪಿನಲ್ಲಿ ಭಾರತ, ಪಾಕಿಸ್ತಾನ, ಸ್ಕಾಟ್ಲೆಂಡ್ ಮತ್ತು ನಮೀಬಿಯಾ ತಂಡಗಳೂ ಇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ