Eng vs SA: ಉದ್ಘಾಟನಾ ಪಂದ್ಯದಲ್ಲಿ ಗೆದ್ದು ಬೀಗಿದ ಆಂಗ್ಲರು; ಸೋಲಿನಿಂದ ಅಧ್ಯಾಯ ಆರಂಭಿಸಿದ ಆಫ್ರಿಕಾ

ICC Cricket World Cup 2019: ಅರ್ಧಶತಕ ಬಾರಿಸಿದ ಬೆನ್ನಲ್ಲೆ ಡಸ್ಸೆನ್ ಕೂಡ ಪೆವಿಲಿಯನ್ ಹಾದಿ ಹಿಡಿದರು. ಕೊನೆ ಹಂತದಲ್ಲಿ ಮತ್ತೆ ಬ್ಯಾಟಿಂಗ್​ಗೆ ಬಂದ ಆಮ್ಲಾ ಕೂಡ 13 ರನ್​ಗೆ ಬ್ಯಾಟ್ ಕೆಳಗಿಟ್ಟರು.

zahir | news18
Updated:May 30, 2019, 10:33 PM IST
Eng vs SA: ಉದ್ಘಾಟನಾ ಪಂದ್ಯದಲ್ಲಿ ಗೆದ್ದು ಬೀಗಿದ ಆಂಗ್ಲರು; ಸೋಲಿನಿಂದ ಅಧ್ಯಾಯ ಆರಂಭಿಸಿದ ಆಫ್ರಿಕಾ
ಸಂಭ್ರಮಿಸುತ್ತಿರುವ ಇಂಗ್ಲೆಂಡ್ ತಂಡ
zahir | news18
Updated: May 30, 2019, 10:33 PM IST
ಬೆಂಗಳೂರು (ಮೇ. 30): ಲಂಡನ್​ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಐಸಿಸಿ ವಿಶ್ವಕಪ್ 2019ರ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 104 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಬ್ಯಾಟಿಂಗ್-ಬೌಲಿಂಗ್​​ನಲ್ಲಿ ಮಿಂಚಿದ ಆಂಗ್ಲರು ಗೆಲುವಿನ ಆರಂಭ ಪಡೆದರೆ, ಹರಿಣಗಳ ಪಡೆ ಸೋಲಿನಿಂದ ಅಧ್ಯಾಯ ಆರಂಭಿಸಿದೆ.

ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ನಾಯಕ ಫಾಫ್​​ ಡುಪ್ಲೆಸಿಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ನಾಯಕನ ನಿರ್ಧಾರ ಸರಿ ಎಂಬಂತೆ ಮೊದಲ ಓವರ್​ನಲ್ಲೇ ಇಮ್ರಾನ್ ತಾಹಿರ್ ಜಾನಿ ಬೇರ್​ಸ್ಟೊ(0) ರನ್ನು ಪೆವಿಲಿಯನ್​ಗೆ ಕಳುಹಿಸಿದ್ದರು. ಮೊದಲ ವಿಕೆಟ್​ ಪತನದಿಂದ ಎಚ್ಚರಿಕೆಯ ಆಟದತ್ತ ಮುಖ ಮಾಡಿದ ಆಂಗ್ಲ ಬ್ಯಾಟ್ಸ್​ಮನ್​ಗಳು​ ನಿಧಾನಕ್ಕೆ ರನ್ ಪೇರಿಸುವ ಕಾಯಕಕ್ಕೆ ಕೈ ಹಾಕಿದರು.

ಅದರಂತೆ ಇಂಗ್ಲೆಂಡ್ ತಂಡದ ಮೊದಲ ನಾಲ್ವರು ಬ್ಯಾಟ್ಸ್​ಮನ್​ಗಳು ಅರ್ಧಶತಕ ಸಿಡಿಸಿ ಭರ್ಜರಿಯಾಗಿಯೇ ವಿಶ್ವಕಪ್ ಅಭಿಯಾನಕ್ಕೆ ಮುನ್ನುಡಿ ಬರೆದರು. ಬೆನ್‌ಸ್ಟೋಕ್ಸ್(89), ಜಾಸನ್ ರಾಯ್(54), ಇಯಾನ್ ಮೊರ್ಗನ್(57) ಹಾಗೂ ಜಾಯ್ ರೂಟ್(51) ಸಂಘಟಿತರಾಗಿ ದಕ್ಷಿಣ ಆಫ್ರಿಕಾ ಬೌಲರ್​ಗಳನ್ನು ಕಾಡಿದರು.

ಅದರಲ್ಲೂ ಮೊರ್ಗನ್ ಹಾಗೂ ಸ್ಟೋಕ್ಸ್​ ನಾಲ್ಕನೇ ವಿಕೆಟ್​ಗೆ 106 ರನ್​ಗಳ ಜೊತೆಯಾಟ ಆಡುವ ಮೂಲಕ ಬೃಹತ್ ಟಾರ್ಗೆಟ್​ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು ಜೋಸ್‌ ಬಟ್ಲರ್‌ (18), ಮೋಯಿನ್‌ ಅಲಿ (3) ಮತ್ತು ಕ್ರಿಸ್‌ ವೋಕ್ಸ್‌ (13) ಬೇಗನೆ ವಿಕೆಟ್‌ ಒಪ್ಪಿಸಿ ತವರಿನ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಕೊನೆಯಲ್ಲಿ ಲುಂಗಿ ಎನ್​ಗಿಡಿ ಮತ್ತು ರಬಾಡರ ಮಾರಕ ದಾಳಿಯ ಪರಿಣಾಮ 350 ರ ಗಡಿ ದಾಟಬೇಕಿದ್ದ ಇಂಗ್ಲೆಂಡ್​ ಮೊತ್ತವನ್ನು 311ರಲ್ಲಿ ನಿಯಂತ್ರಿಸುವಂತಾಯಿತು. ಸೌತ್ ಆಫ್ರಿಕಾ ಪರ ಇಮ್ರಾನ್ ತಾಹಿರ್ ಹಾಗೂ ರಬಾಡ ತಲಾ 2 ವಿಕೆಟ್ ಪಡೆದರೆ, ಲುಂಗಿ ಎನ್​ಗಿಡಿ 3 ವಿಕೆಟ್ ಉರುಳಿಸಿ ಮಿಂಚಿದರು.

Cricket World Cup 2019, Eng vs SA Live Score: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಆಫ್ರಿಕಾ; ಇಂಗ್ಲೆಂಡ್​ಗೆ ಭರ್ಜರಿ ಜಯ

312 ರನ್​ಗಳ ಸವಾಲಿನ ಮೊತ್ತ ಬೆನ್ನಟ್ಟಿದ ಆಫ್ರಿಕಾ ಆರಂಭಲ್ಲೇ ತನ್ನ ಪ್ರಮುಖ ವಿಕೆಟ್ ಕಳೆದುಕೊಂಡಿತು. ಚೆಂಡು ತಲೆಗೆ ಬಡಿದ ಪರಿಣಾಮ ಹಶೀಮ್ ಆಮ್ಲಾ ಮೈದಾನ ತೊರೆದರೆ, ಆ್ಯಡನ್ ಮರ್ಕ್ರಮ್(11) ಹಾಗೂ ನಾಯಕ ಫಾಫ್ ಡುಪ್ಲೆಸಿಸ್(5) ಬೇಗನೆ ಪೆವಿಲಿಯನ್ ಸೇರಿಕೊಂಡರು.

ಈ ಸಂದರ್ಭ ಕ್ವಿಂಟನ್ ಡಿಕಾಕ್ ಜೊತೆಯಾದ ರಾಸ್ಸಿ ಡಸ್ಸೆನ್ ಉತ್ತಮ ಆಟ ಪ್ರದರ್ಶಿಸಿದರು. ಕುಸಿದ ತಂಡಕ್ಕೆ ಆಸರೆಯಾದ ಈ ಜೋಡಿ 85 ರನ್​ಗಳ ಕಾಣಿಕೆ ನೀಡಿತು. ಅಂತೆಯೆ ಡಿಕಾಕ್ ಭರ್ಜರಿ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ 68 ರನ್ ಗಳಿಸಿರುವಾಗ ಡಿಕಾಕ್ ಪ್ಲಂಕೆಟ್ ಬೌಲಿಂಗ್​​ನಲ್ಲಿ ಔಟ್ ಆದರೆ, ಬಂದ ಬೆನ್ನಲ್ಲೆ ಜೆಪಿ ಡುಮಿನಿ(8) ಹಾಗೂ ಡ್ವೇನ್ ಪ್ರೆಟೋರಿಸ್(1) ಔಟ್ ಆಗಿದ್ದು ತಂಡ ಸಂಕಷ್ಟಕ್ಕೆ ಸಿಲುಕಿತು.

ಬಳಿಕ ಬಂದ ಬ್ಯಾಟ್ಸ್​ಮನ್​ಗಳು ಯಾರು ಕ್ರೀಸ್​ ಕಚ್ಚಿ ಆಡುವಲ್ಲಿ ವಿಫಲರಾದರು. ಇತ್ತ ಅರ್ಧಶತಕ ಬಾರಿಸಿದ ಬೆನ್ನಲ್ಲೆ ಡಸ್ಸೆನ್ ಕೂಡ ಪೆವಿಲಿಯನ್ ಹಾದಿ ಹಿಡಿದರು. ಕೊನೆ ಹಂತದಲ್ಲಿ ಮತ್ತೆ ಬ್ಯಾಟಿಂಗ್​ಗೆ ಬಂದ ಆಮ್ಲಾ ಕೂಡ 13 ರನ್​ಗೆ ಬ್ಯಾಟ್ ಕೆಳಗಿಟ್ಟರು. ಅಂತಿಮವಾಗಿ ಆಫ್ರಿಕಾ 39.5 ಓವರ್​ಗೆ 207 ರನ್​ಗಳಿಸಿರುವಾಗ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಗೊಂಡಿತು. ಇಂಗ್ಲೆಂಡ್ ಪರ ಆರ್ಚೆರ್ 3 ವಿಕೆಟ್ ಕಿತ್ತರೆ, ಪ್ಲಂಕೆಟ್ ಹಾಗೂ ಬೆನ್ ಸ್ಟೋಕ್ಸ್​ ತಲಾ 2 ವಿಕೆಟ್ ಪಡೆದರು.

104 ರನ್​​ಗಳ ಭರ್ಜರಿ ಜಯದೊಂದಿಗೆ ಮಾರ್ಗನ್ ಪಡೆ ವಿಶ್ವಕಪ್ ಟೂರ್ನಿಯನ್ನು ಅತ್ಯುತ್ತಮವಾಗಿ ಆರಂಭಿಸಿದೆ. ಬ್ಯಾಟಿಂಗ್​ ಜೊತೆ ಬೌಲಿಂಗ್, ಫೀಲ್ಡಿಂಗ್​​ನಲ್ಲೂ ಮಿಂಚಿದ ಸ್ಟೋಕ್ಸ್​ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

ಇದನ್ನೂ ಓದಿ: ವಿಶ್ವಕಪ್ 2019ಕ್ಕೆ ಕ್ರಿಕೆಟ್ ದೇವರ ಎಂಟ್ರಿ : ಹೊಸ ಇನಿಂಗ್ಸ್ ಆರಂಭಿಸಿದ ಸಚಿನ್ ತೆಂಡೂಲ್ಕರ್

 

First published:May 30, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...