ಸೌತಾಂಪ್ಟನ್‌ನ ರೋಸ್‌ಬೌಲ್ ಸ್ಟೇಡಿಯಂನಲ್ಲಿ ಅಂತ್ಯಕಂಡ ಆತಿಥೇಯ ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವಣ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಕಂಡಿದೆ. ಈ ಮೂಲಕ ಆಂಗ್ಲರು 1-0 ಅಂತರದಲ್ಲಿ ಸರಣಿ ಜಯಿಸಿದ್ದಾರೆ. ಅಂತಿಮ ಟೆಸ್ಟ್ನಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಪಾಕ್ಗೆ ಮಳೆ ವರದಾನವಾಯಿತು. ಮಳೆ ಹಿನ್ನೆಲೆ ಹೆಚ್ಚಿನ ಸಮಯದ ಆಟ ನಡೆಯದ ಕಾರಣ ಪಾಕ್ ಎದುರಾಗಬಹುದಾದ ಸೋಲಿನಿಂದ ಬಚಾವಾಯಿತು.
ಮೊದಲ ಇನ್ನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡ ಜ್ಯಾಕ್ ಕ್ರಾವ್ಲೆ(267) ಅವರ ಅಮೋಘ ದ್ವಿಶತಕ ಹಾಗೂ ಜಾಸ್ ಬಟ್ಲರ್ ಅವರ 152 ರನ್ಗಳ ನೆರವಿನಿಂದ 583 ರನ್ಗೆ ಡಿಕ್ಲೇರ್ ಘೋಷಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್ ಆರಂಭಿಸಿದ ಪಾಕ್ ಪಡೆ, ಜೇಮ್ಸ್ ಆಂಡರ್ಸನ್(5 ವಿಕೆಟ್) ಬೌಲಿಂಗ್ ದಾಳಿಗೆ ಸಿಲುಕಿ ಹೋಯಿತು. ಪಾಕ್ ಪರ ಅಜರ್ ಅಲಿ ಅಜೇಯ 141 ರನ್ ಗಳಿಸಿದ್ದು ಬಿಟ್ಟರೆ, ರಿಜ್ವಾನ್ 53 ರನ್ ಗಳಿಸಿದ್ದೇ ಹೆಚ್ಚು.
ಈ ಮೂವರು ಆಟಗಾರರನ್ನು ಕೈಬಿಟ್ಟಿರುವುದು KKR ತಂಡಕ್ಕೆ ಮುಳುವಾದೀತೇ?
ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 273 ರನ್ಗಳಿಗೆ ಆಲೌಟ್ ಆದ ಪಾಕ್ ತಂಡ ಫಾಲೋಆನ್ಗೂ ಗುರಿಯಾಯಿತು. ಬಳಿಕ 310 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ನಡೆಸಿದ ಪಾಕ್ ನಾಲ್ಕನೇ ದಿನದಾಟದ ಅಂತ್ಯಕ್ಕೆ 100 ರನ್ಗಳಿಸಿ 2 ವಿಕೆಟ್ ಕಳೆದುಕೊಂಡಿತ್ತು. ಆದರೆ, 5ನೇ ದಿನ ವರುಣ ಹಾಗೂ ಮಂದ ಬೆಳಕಿನಿಂದ ದಿನದ ಎರಡು ಸೆಷನ್ಗಳು ನಡೆಯದೆ ಕೇವಲ 27 ಓವರ್ಗಳ ಆಟ ಮಾತ್ರ ಸಾಧ್ಯವಾಯಿತು.
ಅಂತಿಮವಾಗಿ ಪಾಕಿಸ್ತಾನ 4 ವಿಕೆಟ್ಗೆ 187 ರನ್ ಗಳಿಸಿದ್ದಾಗ ಉಭಯ ತಂಡಗಳು ಡ್ರಾಗೆ ಸಮ್ಮತಿಸಿದವು. ಪಾಕ್ ಪರ ಬಾಬರ್ ಅಜಮ್ ಔಟಾಗದೆ 63 ರನ್ ಗಳಿಸಿದರೆ, ಅಬಿದ್ ಅಲಿ 42 ರನ್ ಬಾರಿಸಿದರು.
ಮೂರು ಪಂದ್ಯಗಳ ಟೆಸ್ಟ್ ಸರಣಿ ಪೈಕಿ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 3 ವಿಕೆಟ್ಗಳ ಗೆಲುವು ಸಾಧಿಸಿದರೆ, ಎರಡನೇ ಹಾಗೂ ಮೂರನೇ ಟೆಸ್ಟ್ ಡ್ರಾನಲ್ಲಿ ಅಂತ್ಯಕಂಡಿತು. ಹೀಗಾಗಿ ಇಂಗ್ಲೆಂಡ್ ಸರಣಿ ಗೆಲುವು ತನ್ನದಾಗಿಸಿತು. ಅಲ್ಲದೆ 2010ರಿಂದ ಪಾಕಿಸ್ತಾನದ ವಿರುದ್ಧದ ಇಂಗ್ಲೆಂಡ್ಗೆ ಇದು ಮೊದಲ ಟೆಸ್ಟ್ ಸರಣಿ ವಿಜಯವಾಗಿದೆ.
ವೆಸ್ಟ್ ಇಂಡೀಸ್ನ ಈ ಮೂವರು ಕ್ರಿಕೆಟಿಗರು ಸಹ IPL ಆಡಿದ್ದರು..!
ಪಂದ್ಯಶ್ರೇಷ್ಠ ಜ್ಯಾಕ್ ಕ್ರಾವ್ಲೆ ಬಾಜಿಕೊಂಡರೆ, ಸರಣಿ ಶ್ರೇಷ್ಠ ಪ್ರಶಸ್ತಿ ಮೊಹಮ್ಮದ್ ರಿಜ್ವಾನ್ ಹಾಗೂ ಜಾಸ್ ಬಟ್ಲರ್ ತಮ್ಮದಾಗಿಸಿದರು. ಇಂಗ್ಲೆಂಡ್ ಹಾಗೂ ಪಾಕಿಸ್ತಾನ ನಡುವೆ ಆಗಸ್ಟ್ ರಂದು ಮೂರು ಪಂದ್ಯಗಳ ಟಿ-20 ಸರಣಿ ಪೈಕಿ ಮೊದಲ ಕದನ ನಡೆಯಲಿದೆ.
ಜೇಮ್ಸ್ ಆಂಡರ್ಸನ್ ದಾಖಲೆಯ 600 ವಿಕೆಟ್:
ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಟೆಸ್ಟ್ ಇತಿಹಾಸದಲ್ಲಿ 600 ವಿಕೆಟ್ ಉಡಾಯಿಸಿದ ವಿಶ್ವದ 4ನೇ ಹಾಗೂ ಇಂಗ್ಲೆಂಡಿನ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾದರು. ಪಾಕ್ ಎದುರಿನ ಅಂತಿಮ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಪಾಕ್ ನಾಯಕ ಅಜರ್ ಅಲಿ ಅವರ ವಿಕೆಟ್ ಹಾರಿಸುವ ಮೂಲಕ ಆಂಡರ್ಸನ್ ಈ ಮೈಲುಗಲ್ಲು ನೆಟ್ಟರು.
ಆಯಂಡರ್ಸನ್ 600 ವಿಕೆಟ್ ಹಾರಿಸಿದ ಮೊದಲ ವೇಗಿ ಎಂಬ ಹಿರಿಮೆಗೂ ಭಾಜನರಾಗಿದ್ದಾರೆ. ಈ ಹಾದಿಯಲ್ಲಿರುವ ಮುತ್ತಯ್ಯ ಮುರಳೀಧರನ್ (800), ಶೇನ್ ವಾರ್ನ್ (708) ಮತ್ತು ಅನಿಲ್ ಕುಂಬ್ಳೆ (619) ಸ್ಪಿನ್ನರ್‌ಗಳೇ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ