ಲಂಡನ್: ಇಲ್ಲಿಯ ದಿ ಓವಲ್ ಮೈದಾನದಲ್ಲಿ ನಿನ್ನೆ ಮುಕ್ತಾಯಗೊಂಡ ಭಾರತ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ 157 ರನ್ಗಳಿಂದ ಹೀನಾಮಯವಾಗಿ ಸೋತಿತು. ಹೀನಾಯ ಯಾಕೆಂದರೆ, 99 ರನ್ಗಳ ಅಮೂಲ್ಯ ಮೊದಲ ಇನ್ನಿಂಗ್ಸ್ ಮುನ್ನಡೆ ಹೊಂದಿದ್ದೂ ಬ್ಯಾಟಿಂಗ್ ಟ್ರ್ಯಾಕ್ನಲ್ಲಿ ಇಂಗ್ಲೆಂಡ್ ತಂಡ ಸೋತಿದೆ. ಮುಂದಿನ ಪಂದ್ಯದಲ್ಲಿ ತಿರುಗಿಬೀಳುವುದಾಗಿ ಹೇಳಿರುವ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರು ಓವಲ್ನಲ್ಲಿ ಇಂಗ್ಲೆಂಡ್ ಸೋಲಿಗೆ ಕೆಲ ಕಾರಣಗಳನ್ನೂ ನೀಡಿದ್ಧಾರೆ. ಅದರಲ್ಲಿ ಪ್ರಮುಖವಾದುದು ಕೆಲ ಕ್ಯಾಚುಗಳನ್ನ ಡ್ರಾಪ್ ಮಾಡಿದ್ದು. ಕಷ್ಟಕರವಾಗಿದ್ದ ಆ ಕ್ಯಾಚುಗಳನ್ನ ಫೀಲ್ಡರ್ಗಳು ಹಿಡಿದಿದ್ದರೆ ಭಾರತದ ಇನ್ನಿಂಗ್ಸ್ ಅಷ್ಟು ಉದ್ದ ಬೆಳೆಯುತ್ತಿರಲಿಲ್ಲ ಎಂಬುದು ಅವರ ಅಭಿಪ್ರಾಯ.
ನಿನ್ನೆಯ ಈ ಪಂದ್ಯದಲ್ಲಿ ಇಂಗ್ಲೆಂಡ್ 99 ರನ್ ಮುನ್ನಡೆ ಪಡೆದ ಬಳಿಕ ಭಾರತ ಎರಡನೇ ಇನ್ನಿಂಗ್ಸಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಇಂಗ್ಲೆಂಡ್ ಗೆಲ್ಲಲು 368 ರನ್ಗಳ ಕಠಿಣ ಗುರಿ ನೀಡಿತು. ಆದರೆ, ಇಂಗ್ಲೆಂಡ್ ಬ್ಯಾಟುಗಾರರು ಹೆಚ್ಚು ಪ್ರತಿರೋಧ ಒಡ್ಡದೇ 210 ರನ್ಗೆ ಆಲೌಟ್ ಆಯಿತು. ಜೋ ರೂಟ್ ಅವರ ಪ್ರಕಾರ 99 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯ ಮೊತ್ತ ಕಡಿಮೆ ಆಯಿತಂತೆ. “ನಾನು ಇನ್ನೂ ಹೆಚ್ಚು ಮುನ್ನಡೆ ಪಡೆಯಬೇಕಿತ್ತು. ಇನ್ನೂ 100 ರನ್ಗಳ ಮುನ್ನಡೆ ಇದ್ದಿದ್ದರೆ ಗೇಮ್ ಸ್ಥಿತಿ ವಿಭಿನ್ನವಾಗಿರುತ್ತಿತ್ತು” ಎಂದು ರೂಟ್ ಹೇಳುತ್ತಾರೆ.
“ಒಂದೇ ದಿನ 10 ವಿಕೆಟ್ ಕಳೆದುಕೊಳ್ಳುವುದು ಹತಾಶೆ ಮೂಡಿಸುತ್ತದೆ. ಆದರೆ, ಹಿಂದಿನ ದಿನ ಆಟದಲ್ಲಿ ನಾವು ಪ್ರಾಬಲ್ಯ ತೋರದೇ ಹೋಗಿದ್ದು ಪಂದ್ಯ ಕಳೆದುಕೊಳ್ಳಲು ಕಾರಣ” ಎಂದು ಅವರು ಕ್ಯಾಚ್ ಡ್ರಾಪ್ನತ್ತ ಕೈಬೊಟ್ಟು ಮಾಡುತ್ತಾರೆ. ಶತಕ ಭಾರಿಸಿದ ರೋಹಿತ್ ಶರ್ಮಾ ಅವರು ಒಂದು ಹಂತದಲ್ಲಿ ಸ್ಲಿಪ್ನಲ್ಲಿ ಕ್ಯಾಚ್ ಕೊಟ್ಟಿದ್ದರು. ಆದರೆ ರೋರಿ ಬರ್ನ್ಸ್ ಅವರು ಆ ಕ್ಯಾಚ್ ಹಿಡಿಯಲು ವಿಫಲರಾದರು. ಆ ಡ್ರಾಪ್ಡ್ ಕ್ಯಾಚ್ ಬಹಳ ನಿರ್ಣಾಯಕವಾಯಿತು ಎಂದು ಅವರು ತಿಳಿಸಿದ್ಧಾರೆ.
“ನಾವು ಈ ಪಂದ್ಯದಲ್ಲಿ ತುಸು ಕಠಿಣವಾಗಬೇಕಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಗಳಿಸಿದ ಕಡಿಮೆ ರನ್ನುಗಳು ಮುಳುವಾದವು. ಕ್ಯಾಚ್ ಕೈಬಿಟ್ಟಿದ್ದೂ ಪರಿಣಾಮ ಬೀರಿತು… ಕೆಲ ಕಠಿಣ ಕ್ಯಾಚ್ಗಳೂ ಇದ್ದವು… ಆದರೆ, ವಿಶ್ವ ದರ್ಜೆಯ ಆಟಗಾರರಿಗೆ ನೀವು ಜೀವದಾನ ಕೊಟ್ಟರೆ ಅವರು ಉಪಯೋಗಿಸಿಕೊಳ್ಳದೇ ಇರುತ್ತಾರಾ? ಈ ಪಂದ್ಯದಲ್ಲಿ ಅದೇ ಆಗಿದ್ದು” ಎಂದು ಪಂದ್ಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಇಂಗ್ಲೆಂಡ್ ನಾಯಕ ಹೇಳಿದ್ದಾರೆ.
ಇದನ್ನೂ ಓದಿ: India Vs England Test: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಓವಲ್ನಲ್ಲಿ 157 ರನ್ಗಳ ಜಯ
ಇಂಗ್ಲೆಂಡ್ ಸೋಲಿನ ವಿವರಣೆ:
ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಪ್ರತಿಯೊಂದು ಪಂದ್ಯವೂ ಸಾಕಷ್ಟು ಕುತೂಹಲದಿಂದ ಕೂಡಿದೆ. ಸದ್ಯ ನಾಲ್ಕು ಪಂದ್ಯಗಳು ಮುಗಿದಿದ್ದು ಭಾರತ ಸರಣಿಯಲ್ಲಿ 2-1ರಿಂದ ಮುಂದಿದೆ. ಸರಣಿಯ ಕೊನೆಯ ಪಂದ್ಯ ಓಲ್ಡ್ ಟ್ರಫಾರ್ಡ್ ನಲ್ಲಿ ಸೆ. 10ರಂದು ಪ್ರಾಋಂಭವಾಗುತ್ತದೆ.
ನಿನ್ನೆ ಮುಗಿದ ನಾಲ್ಕನೇ ಪಂದ್ಯ ಮೊದಲ ದಿನದಿಂದಲೂ ಒಂದು ರೀತಿಯಲ್ಲಿ ತೂಗುಯ್ಯಾಲೆಯ ಸ್ಥಿತಿಯಲ್ಲೇ ಸಾಗಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 191 ರನ್ಗಳಿಗೆ ಆಲ್ ಔಟ್ ಆಗುವ ಮೂಲಕ ಭಾರತ ತಂಡ ತೀವ್ರ ಮುಖಭಂಗ ಎದುರಿಸಿತ್ತು. ಆಲ್ರೌಂಡರ್ ಶಾರ್ದುಲ್ ಠಾಕೂರ್ ಹೊರತುಪಡಿಸಿ ಮಿಕ್ಕೆಲ್ಲಾ ಸ್ಪೆಷಲಿಸ್ಟ್ ಬ್ಯಾಟ್ಸ್ಮನ್ಗಳ ಆಟ ಇಂಗ್ಲೆಂಡ್ ಬೌಲರ್ಗಳ ವಿರುದ್ಧ ನಡೆಯಲಿಲ್ಲ. ಆದರೆ ಉತ್ತಮವಾಗಿ ಬೌಲಿಂಗ್ ಪ್ರದರ್ಶಿಸಿದ ಭಾರತದ ವೇಗಿಗಳು 290 ರನ್ಗಳಿಗೆ ಇಂಗ್ಲೆಂಡ್ ಆಟಗಾರರನ್ನು ಕಟ್ಟಿಹಾಕಿದರು. ಪಿಚ್ ಕೇವಲ ಬೌಲರ್ಗಳಿಗೆ ಸಹಾಯ ಮಾಡುತ್ತಿದೆ ಎಂಬಂತಿದ್ದಾಗ, ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡದ ಓಪನರ್ಸ್ಗಳಾದ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್ ಉತ್ತಮ ಆರಂಭ ಒದಗಿಸಿದರು. ಇಬ್ಬರೂ ಶತಕದ ಜತೆಯಾಟವಾಡಿದರು. ಅರ್ಧ ಶತಕದ ಅಂಚಿನಲ್ಲಿದ್ದ ಕೆ.ಎಲ್. ರಾಹುಲ್ ವಿಕೆಟ್ ಒಪ್ಪಿಸಿದರೆ, ರೋಹಿತ್ ಅಮೋಘ ಶತಕ ಸಿಡಿಸಿದರು.
ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಆಟವಾಡಿ ಇಂಗ್ಲೆಂಡ್ಗೆ 368 ರನ್ಗಳ ಟಾರ್ಗೆಟ್ ನೀಡಿದರು. ಇದನ್ನು ಬೆನ್ನತ್ತಿದ್ದ ಇಂಗ್ಲೆಂಡ್ ತಂಡದ ಆರಂಭಿಕ ದಾಂಡಿಗರಾದ ರೋರಿ ಬರ್ನ್ಸ್ ಮತ್ತು ಹಸೀಬ್ ಹಮೀದ್ ಒಳ್ಳೆಯ ಪ್ರದರ್ಶನ ನೀಡಿ ಶತಕದ ಜತೆಯಾಟ ಆಡಿದರಾದರೂ ಬರ್ನ್ಸ್ 50 ಮತ್ತು ಹಮೀದ್ 63 ರನ್ಗಳಿಗೆ ಹೋರಾಟ ನಿಲ್ಲಿಸಿದರು.ನಂತರ ಬಂದ ಡೇವಿಡ್ ಮಲನ್ (David Malan) ಮತ್ತು ಜೋ ರೂಟ್ (Joe Root) ಇಬ್ಬರೂ ಉತ್ತಮ ಪ್ರದರ್ಶನ ನೀಡಲಿಲ್ಲ. ಅವರ ನಂತರ ಬಂದ ಯಾರೂ ಭಾರತದ ದಾಳಿಗೆ ಸರಿಯಾದ ಉತ್ತರ ನೀಡಲೇ ಇಲ್ಲ. ನಾಲ್ಕು ಟೆಸ್ಟ್ಗಳಲ್ಲಿ ಕಳಪೆ ಪ್ರದರ್ಶನ ನೀಡಿ ಆಯ್ಕೆಯ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದ್ದ ರವೀಂದ್ರ ಜಡೇಜಾ 5 ವಿಕೆಟ್ ಪಡೆದು ಮಿಂಚಿದರು. ಇನ್ನೂ ಜಸ್ಪ್ರೀತ್ ಬುಮ್ರಾ 2 ಮತ್ತು ಉಮೇಶ್ ಯಾದವ್ 3 ವಿಕೆಟ್ ಪಡೆದು ಮಿಂಚಿದರು.
ಶಾರ್ದುಲ್ ಠಾಕೂರ್ ಎರಡು ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್ ಯಾವುದೇ ವಿಕೆಟ್ ಪಡೆಯಲಿಲ್ಲ. ಒಟ್ಟಿನಲ್ಲಿ ಐದು ಪಂದ್ಯಗಳ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದು ಸರಣಿಯಲ್ಲಿ ಭಾರತ ಮುಂದಿದೆ. ಒಂದು ಪಂದ್ಯ ಗೆದ್ದಿರುವ ಇಂಗ್ಲೆಂಡ್ಗೆ ಮುಂದಿನ ಮತ್ತು ಕಡೆಯ ಪಂದ್ಯದಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ