Ind vs Eng- ಕುತೂಹಲ ಘಟ್ಟದಲ್ಲಿ ಲಾರ್ಡ್ಸ್ ಟೆಸ್ಟ್; ಭಾರತ ಎಷ್ಟು ರನ್ ಟಾರ್ಗೆಟ್ ಕೊಟ್ಟರೆ ಗೆಲ್ಲುತ್ತೆ?

27 ರನ್​ಗಳ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆಡಿದ ಭಾರತ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿದೆ. ಪೂಜಾರ, ರಹಾನೆ ತಮ್ಮ ಆಟದ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಕೊನೆಯ ದಿನ ಗೆಲುವು ಯಾರಿಗೆ ಬೇಕಾದರೂ ದಕ್ಕಬಹುದು.

ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ

ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ

  • Share this:
ಬೆಂಗಳೂರು: ಇಂಗ್ಲೆಂಡ್ ರಾಜಧಾನಿ ಲಂಡನ್​ನ ಲಾರ್ಡ್ಸ್​ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ಬಹಳ ಕುತೂಹಲಕಾರಿ ಹಂತದಲ್ಲಿದೆ. ಪಂದ್ಯ ನಾಲ್ಕು ದಿನ ಮುಗಿದರೂ ರೋಚಕತೆ ಉಳಿಸಿಕೊಂಡಿದೆ. ನಿನ್ನೆಯ ನಾಲ್ಕನೇ ದಿನದಾಟದ ವೇಳೆ ಒಂದು ಹಂತದಲ್ಲಿ ಭಾರತ ತನ್ನ ಎರಡನೇ ಇನ್ನಿಂಗ್ಸಲ್ಲಿ ಬೇಗ ಮುರುಟಿಹೋಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಅಮೋಘ ಪ್ರತಿರೋಧದ ಆಟದಿಂದಾಗಿ ಭಾರತ ಮತ್ತೆ ಗೇಮ್​ಗೆ ಮರಳಿದೆ. ಕಳಪೆ ಫಾರ್ಮ್​ನಲ್ಲಿದ್ದ ಈ ಇಬ್ಬರೂ ಕ್ಲಾಸಿಕ್ ಆಟಗಾರರು ಕ್ರೀಸ್​ನಲ್ಲಿ ಕಚ್ಚಿ ನಿಂತು ಆಡಿ ತಂಡದ ಮಾನ ಕಾಪಾಡಿದರು. ಕ್ಲಾಸಿ ಬ್ಯಾಟುಗಾರರ ಕಳಪೆ ಫಾರ್ಮ್ ಶಾಶ್ವತ ಅಲ್ಲ ಎಂಬುದನ್ನು ನಿರೂಪಿಸಿದರು. 27 ರನ್​ಗಳ ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆಡಿದ ಭಾರತ ನಿನ್ನೆ ದಿನಾಂತ್ಯದ ವೇಳೆ 6 ವಿಕೆಟ್ ನಷ್ಟಕ್ಕೆ 181 ರನ್ ಗಳಿಸಿ ಒಟ್ಟಾರೆ 154 ರನ್ ಮುನ್ನಡೆ ಪಡೆದುಕೊಂಡಿದೆ. ಮೇಲ್ನೋಟಕ್ಕೆ ಭಾರತ ಈ ಪಂದ್ಯ ಉಳಿಸಿಕೊಳ್ಳಲು ಹೋರಾಡುತ್ತಿರುವಂತೆ ತೋರುತ್ತಿದೆಯಾದರೂ ಗೆಲುವಿನ ಅವಕಾಶ ಈಗಲೂ ಇದೆ.

ನಿನ್ನೆ ಇಡೀ ದಿನ ಭಾರತ ತನ್ನ ಎರಡನೇ ಇನ್ನಿಂಗ್ಸಲ್ಲಿ ಗಳಿಸಿದ್ದು 181 ರನ್ ಮಾತ್ರ. ಅಜಿಂಕ್ಯ ರಹಾನೆ ಮತ್ತು ಚೇತೇಶ್ವರ್ ಪೂಜಾರ ಇಬ್ಬರೇ 58 ಓವರ್​ಗಳಷ್ಟು ಬ್ಯಾಟಿಂಗ್ ಮಾಡಿದರು. ಈ ವೇಳೆ ಇಬ್ಬರಿಂದ ಬಂದ ರನ್ 106 ಮಾತ್ರವಾದರೂ, ಹಾಗೊಂದು ವೇಳೆ ಅವರು ಅಷ್ಟು ರಕ್ಷಣಾತ್ಮಕವಾಗಿ ಆಡದೇ ಹೋಗಿದ್ದರೆ ಭಾರತ ನಿನ್ನೆಯೇ ಸೋಲಿನಂಚಿಗೆ ಸಿಲುಕುತ್ತಿದ್ದುದು ನಿಶ್ಚಿತ. ಒಳ್ಳೆಯ ಫಾರ್ಮ್​ನಲ್ಲಿದ್ದ ಕೆ ಎಲ್ ರಾಹುಲ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 55 ರನ್ನಾಗುಷ್ಟರಲ್ಲಿ ಔಟಾದ ಬಳಿಕ ಪೂಜಾರ ಮತ್ತು ರಹಾನೆ ಇಬ್ಬರೂ ತಂಡದ ಇನ್ನಿಂಗ್ಸ್​ಗೆ ಚೇತರಿಕೆ ನೀಡಿದರು. 4ನೇ ವಿಕೆಟ್​ಗೆ ಅಮೂಲ್ಯ 100 ರನ್ ಜೊತೆಯಾಟ ಆಡಿದರು. ಈ ಹಂತದಲ್ಲಿ ಭಾರತಕ್ಕೆ ಪಂದ್ಯದ ಮೇಲೆ ಹಿಡಿತ ಇತ್ತು. ಆದರೆ, ಪೂಜಾರ ನಿರ್ಗಮನದೊಂದಿಗೆ ಈ ಶತಕದ ಜೊತೆಯಾಟ ಅಂತ್ಯವಾಯಿತು. ಜೊತೆಗೆ ಇನ್ನೂ ಎರಡು ವಿಕೆಟ್ ಬಿದ್ದು ಪಂದ್ಯ ಮತ್ತೆ ತೂಗುಯ್ಯಾಲೆ ಸ್ಥಿತಿಗೆ ಬಂತು.

ಇದನ್ನೂ ಓದಿ: Kohli Nagin Dance: ಲಾರ್ಡ್ಸ್ ಬಾಲ್ಕನಿಯಲ್ಲಿ ಕೊಹ್ಲಿ ನಾಗಿನ್ ಡ್ಯಾನ್ಸ್ ವೈರಲ್.. ಟ್ರೋಲ್​​ಗಳ ಸುರಿಮಳೆ

ರವೀಂದ್ರ ಜಡೇಜಾ ಕೂಡ ಔಟಾಗಿದ್ದಾರೆ. ಇದೀಗ ಕ್ರೀಸ್​ನಲ್ಲಿ ರಿಷಭ್ ಪಂತ್ ಮಾತ್ರವೇ ಏಕೈಕ ಸ್ಪೆಷಲಿಸ್ಟ್ ಬ್ಯಾಟ್ಸ್​ಮನ್ ಇರುವುದು. ಈ ಹಂತದಲ್ಲಿ ಭಾರತ ಈ ಪಂದ್ಯ ಉಳಿಸಿಕೊಳ್ಳುವುದರತ್ತ ಹೆಚ್ಚು ಗಮನ ಕೊಡುವುದು ಸ್ವಾಭಾವಿಕ. ಆದರೂ ಭಾರತಕ್ಕೆ ಗೆಲುವಿನ ಅವಕಾಶ ಇಲ್ಲದಿಲ್ಲ. ವಿವಿಎಸ್ ಲಕ್ಷ್ಮಣ್ ಪ್ರಕಾರ ಇಂಗ್ಲೆಂಡ್ ತಂಡಕ್ಕೆ ಭಾರತ 225 ರನ್ ಟಾರ್ಗೆಟ್ ಕೊಟ್ಟರೆ ಈ ಚಾನ್ಸ್ ಇದೆ ಎನ್ನುತ್ತಾರೆ. ಅಂದರೆ ಭಾರತ ಇನ್ನೂ 70 ರನ್​ಗಳನ್ನಾದರೂ ಗಳಿಸಬೇಕು. ಆಕ್ರಮಣಕಾರಿ ಬ್ಯಾಟಿಂಗ್ ಶೈಲಿಯ ರಿಷಭ್ ಪಂತ್ ಅವರು ಒಳ್ಳೆಯ ಲಯಕ್ಕೆ ಬಂದರೆ ಇದು ಸಾಧ್ಯ. ಇವತ್ತು ಕೊನೆಯ ದಿನ ಭಾರತ ಈ ಪಂದ್ಯ ಗೆದ್ದು 5 ಪಂದ್ಯಗಳ ಸರಣಿಯಲ್ಲಿ ಮೊದಲ ಮುನ್ನಡೆ ಪಡೆದುಕೊಳ್ಳುತ್ತಾ ಎಂದು ಕಾದು ನೋಡಬೇಕು.

ಸ್ಕೋರು ವಿವರ (ನಾಲ್ಕನೇ ದಿನದಾಟ):

ಭಾರತ ಮೊದಲ ಇನ್ನಿಂಗ್ಸ್ 126.1 ಓವರ್ 364/10

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 128 ಓವರ್ 391/10

ಭಾರತ ಎರಡನೇ ಇನ್ನಿಂಗ್ಸ್ 82 ಓವರ್ 181/6
(ಅಜಿಂಕ್ಯ ರಹಾನೆ 81, ಚೇತೇಶ್ವರ್ ಪೂಜಾರ 45, ರೋಹಿತ್ ಶರ್ಮಾ 21, ವಿರಾಟ್ ಕೊಹ್ಲಿ 20 ರನ್ – ಮಾರ್ಕ್ ವೂಡ್ 40/3, ಮೊಯೀನ್ ಅಲಿ 52/2)
Published by:Vijayasarthy SN
First published: