ENG vs AFG: ಆಂಗ್ಲರ ಬ್ಯಾಟಿಂಗ್ ಬಿರುಗಾಳಿಗೆ ತಬ್ಬಿಬ್ಬಾದ ಕ್ರಿಕೆಟ್ ಶಿಶುಗಳು; ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್

ICC Cricket World Cup 2019: 105 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಅಮೋಘ ಆಟ ಪ್ರದರ್ಶಿಸಿದ ಮಾರ್ಗನ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.

Vinay Bhat | news18
Updated:June 18, 2019, 10:47 PM IST
ENG vs AFG: ಆಂಗ್ಲರ ಬ್ಯಾಟಿಂಗ್ ಬಿರುಗಾಳಿಗೆ ತಬ್ಬಿಬ್ಬಾದ ಕ್ರಿಕೆಟ್ ಶಿಶುಗಳು; ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್
ಇಂಗ್ಲೆಂಡ್ ತಂಡದ ಆಟಗಾರರು
Vinay Bhat | news18
Updated: June 18, 2019, 10:47 PM IST
ಬೆಂಗಳೂರು (ಜೂ. 18): ವಿಶ್ವಕಪ್​ನಲ್ಲಿಂದು ನಡೆದ 24ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ನಾಯಕ ಇಯಾನ್ ಮಾರ್ಗನ್​ರ ಸ್ಫೋಟಕ ಶತಕ, ಜೋ ರೂಟ್ ಹಾಗೂ ಬೈರ್​ಸ್ಟೋರ ಅರ್ಧಶತಕದ ನೆರವಿನಿಂದ ಆಂಗ್ಲರು 150 ರನ್​ಗಳ ಜಯ ಗಳಿಸಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಆಂಗ್ಲರು ನೀಡಿದ್ದ 398 ರನ್​ಗಳ ಬೆಟ್ಟದಂತಹ ಟಾರ್ಗೆಟ್ ಬೆನ್ನಟ್ಟಿದ ಕ್ರಿಕೆಟ್ ಶಿಶುಗಳಿಗೆ ಆರಂಭದಲ್ಲೇ ಆಘಾತ ಉಂಟಾಯಿತು. ಜೋಫ್ರಾ ಆರ್ಚೆರ್ ಬೌಲಿಂಗ್​ನಲ್ಲಿ ನೂರ್ ಅಲಿ ಜರ್ದನ್ ಶೂನ್ಯಕ್ಕೆ ನಿರ್ಗಮಿಸಿದರೆ, ನಾಯಕ ಗುಲ್ಬದಿನ್ ನೈಬ್ ಆಟ 37 ರನ್​ಗೆ ಅಂತ್ಯವಾಯಿತು.

ಬಳಿಕ 3ನೇ ವಿಕೆಟ್​ಗೆ ಜೊತೆಯಾದ ಹಶ್ಮತುಲ್ಲಾ ಹಾಗೂ ರೆಹ್ಮತ್ ಶಾ ನಿಧಾನಗತಿಯ ಇನ್ನಿಂಗ್ಸ್​ ಕಟ್ಟಿದರು. ಅರ್ಧಶತಕದ ಜೊತೆಯಾಟ ಆಡಿದ ಈ ಜೋಡಿ ಪೈಕಿ ರೆಹ್ಮತ್ ಶಾ 46 ರನ್​ಗೆ ಬ್ಯಾಟ್ ಕೆಳಗಿಟ್ಟರು.

ಬಳಿಕ ಹಶ್ಮತುಲ್ಲ ಹಾಗೂ ಅಸ್ಗರ್ ಅಫ್ಗರ್ ಖಾತೆಯಿಂದ ಮತ್ತೊಂದು ಉತ್ತಮ ಇನ್ನಿಂಗ್ಸ್​ ಮೂಡಿಬಂತು. ತಂಡಕ್ಕೆ 94 ರನ್​ಗಳ ಕಾಣಿಕೆ ನೀಡಿದ ಈ ಜೋಡಿ ಕೊಂಚ ಸಮಯ ವಿಕೆಟ್ ಕಳೆದುಕೊಳ್ಳದಂತೆ ನೋಡಿಕೊಂಡಿತು. ಆದರೆ, ಆದಿಲ್ ರಶೀದ್ ಬೌಲಿಂಗ್​ನಲ್ಲಿ 44 ರನ್ ಗಳಿಸಿದ್ದ ಅಫ್ಗರ್ ಔಟ್ ಆದರೆ, ಹಶ್ಮತುಲ್ಲ ಹೋರಾಟ 76 ರನ್​ಗೆ ಅಂತ್ಯವಾಯಿತು.

ಬಳಿಕ ಬಂದ ಬ್ಯಾಟ್ಸ್​ಮನ್​ಗಳು ರನ್ ಕಲೆಹಾಕಲು ಪರದಾಡಿದರು. ಪರಿಣಾಮ 50 ಓವರ್​ಗೆ 8 ವಿಕೆಟ್ ಕಳೆದುಕೊಂಡು ಅಫ್ಘಾನಿಸ್ತಾನ 247 ರನ್ ಕಲೆಹಾಕಲಷ್ಟೇ ಶಕ್ತವಾಗಿ ಸೋಲೊಪ್ಪಿಗೊಂಡಿತು. ಇಂಗ್ಲೆಂಡ್ ಪರ ಆದಿಲ್ ರಶೀದ್ 3 ವಿಕೆಟ್ ಕಿತ್ತರೆ, ಜೋಫ್ರಾ ಆರ್ಚೆರ್ ಹಾಗೂ ಮಾರ್ಕ್​ ವುಡ್ ತಲಾ 2 ವಿಕೆಟ್ ಪಡೆದರು.

150 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಇಂಗ್ಲೆಂಡ್ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಅಮೋಘ ಆಟ ಪ್ರದರ್ಶಿಸಿದ ಮಾರ್ಗನ್ ಪಂದ್ಯಶ್ರೇಷ್ಠ ಪ್ರಶಸ್ತಿ ಬಾಜಿಕೊಂಡರು.
Loading...

ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅದರಂತೆ ಜೇಸನ್ ರಾಯ್​ ಅನುಪಸ್ಥಿತಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಜೇಮ್ಸ್​ ವಿನ್ಸ್ ಅವರು ಜಾನಿ ಬೈರ್​ಸ್ಟೋ ಜೊತೆಗೂಡಿ ಇನ್ನಿಂಗ್ಸ್​ ಆರಂಭಿಸಿದರು. ರಾಯ್ ಮೂಲಕನೇ ಬಿರುಸಿನ ಆಟ ಪ್ರಾರಂಭಿಸಿದ ವಿನ್ಸ್​ ಹೆಚ್ಚುಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. 31 ಎಸೆತಗಳಲ್ಲಿ 26 ರನ್ ಬಾರಿಸಿ ನಿರ್ಗಮಿಸಿದರು.

ಮೊದಲ ವಿಕೆಟ್ ಪತನವಾದ ಬಳಿಕ ಒಂದಾಗಿರುವ ಬೈರ್​ಸ್ಟೋ ಹಾಗೂ ಜೋ ರೂಟ್ ಭರ್ಜರಿ ಜೊತೆಯಾಟ ಆಡಿದರು. ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡಿದ ಈ ಜೋಡಿ ಅಮೋಘ ಆಟ ಪ್ರದರ್ಶಿಸಿತು. ಅದರಲ್ಲು ಬೈರ್​ಸ್ಟೋ ಆಕರ್ಷಕ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಆದರೆ ಶತಕದ ಅಂಚಿನಲ್ಲಿ ಬೈರ್​ಸ್ಟೋ ಎಡವಿದ್ದು ಇವರಿಬ್ಬರ ಜೊತೆಯಾಟಕ್ಕೆ ಬ್ರೇಕ್ ಬಿದ್ದಿತು. ಗುಲ್ಬದಿನ್ ನೈಬ್ ಬೌಲಿಂಗ್​ನಲ್ಲಿ ಬೌಲರ್​ಗನೇ ಕ್ಯಾಚ್ ನೀಡಿ ಬೈರ್​ಸ್ಟೋ ನಿರ್ಗಮಿಸಿದರು. 99 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸ್​ ಸಿಡಿಸಿದ ಬೈರ್​ಸ್ಟೋ ಆಟ 90 ರನ್​ಗೆ ಅಂತ್ಯವಾಯಿತು.

ಬಳಿಕ ಶುರುವಾಗಿದ್ದು ನಾಯಕ ಇಯಾನ್ ಮಾರ್ಗನ್ ಆಟ. ರೂಟ್ ಜೊತೆಗೂಡಿ ಅಫ್ಘಾನ್ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಮಾರ್ಗನ್ ಸ್ಫೋಟಕ ಆಟ ಪ್ರದರ್ಶಿಸಿದರು. ಚೆಂಡನ್ನು ಬೌಂಡರಿ-ಸಿಕ್ಸರ್​ಗೆ ಅಟ್ಟಿದ ಮಾರ್ಗನ್ ನೋಡ ನೋಡುತ್ತಲೇ ಕೇವಲ 56 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದರು. ಶತಕದ ನಂತರವೂ ಅಬ್ಬರಿಸಿದ ಮಾರ್ಗನ್ ತಂಡದ ಮೊತ್ತವನ್ನು 350ರ ಗಡಿ ದಾಟಿಸಿದರು.

ಇತ್ತ ರೂಟ್ ಕೊನೆ ಹಂತದಲ್ಲಿ 82 ಎಸೆತಗಳಲ್ಲಿ 85 ರನ್ ಬಾರಿಸಿ ಔಟ್ ಆದರು. ಇದರ ಬೆನ್ನಲ್ಲೆ ಮಾರ್ಗನ್ ಅಮೋಘ ಆಟಕ್ಕೂ ಬ್ರೇಕ್ ಬಿತ್ತು. 71 ಎಸೆತಗಳಲ್ಲಿ 4 ಬೌಂಡರಿ ಹಾಗೂ 17 ಭರ್ಜರಿ ಸಿಕ್ಸ್​ ಸಿಡಿಸಿ 148 ರನ್​ಗೆ ಮಾರ್ಗನ್ ಬ್ಯಾಟ್ ಕೆಳಗಿಟ್ಟರು. ಕೊನೆಯಲ್ಲಿ ಮೊಯೀನ್ ಅಲಿ 9 ಎಸೆತಗಳಲ್ಲಿ 31 ರನ್ ಚಚ್ಚಿದರು. ಅಂತಿಮವಾಗಿ ಇಂಗ್ಲೆಂಡ್ 50 ಓವರ್​ಗೆ 6 ವಿಕೆಟ್ ಕಳೆದುಕೊಂಡು 397 ರನ್ ಕಲೆಹಾಕಿತು. ಅಫ್ಘಾನ್ ಪರ ಗುಲ್ಬದಿನ್ ನೈಬ್ 3 ವಿಕೆಟ್ ಕಿತ್ತರೆ, ದವ್ಲತ್ ಜರ್ದನ್ ಕೂಡ 3 ವಿಕೆಟ್ ಪಡೆದರು.

ಇಂದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದಿಂದ ಬರೋಬ್ಬರು 25 ಸಿಕ್ಸರ್​ಗಳು ಮೂಡಿಬಂತು. ಅಫ್ಘಾನ್ ಪರ ರಶೀದ್ ಖಾನ್ 9 ಓವರ್​ಗೆ 110 ರನ್ ನೀಡಿದ ದುಬಾರಿ ಬೌಲರ್ ಎನಿಸಿ ಕೊಂಡರು.

 
First published:June 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...