ಲಂಡನ್: ಇಂಗ್ಲೆಂಡ್ನ ರಾಜಧಾನಿ ನಗರದ ಕ್ರಿಕೆಟ್ ಕಾಶಿ ಎನಿಸಿರುವ ಲಾರ್ಡ್ಸ್ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಭಾರತ ತಂಡಗಳ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯ ಕುತೂಹಲದ ಘಟ್ಟದಲ್ಲಿದೆ. ನಿನ್ನೆ ನಡೆದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ತಂಡದ ಮೊದಲ ಇನ್ನಿಂಗ್ಸ್ 391 ರನ್ಗೆ ಅಂತ್ಯವಾಯಿತು. ಇದರೊಂದಿಗೆ ಆತಿಥೇಯರು 27 ರನ್ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದುಕೊಂಡರು. ಒಂದು ಹಂತದಲ್ಲಿ 5 ವಿಕೆಟ್ ನಷ್ಟಕ್ಕೆ 340 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ಬಹಳ ಸುಲಭವಾಗಿ ನೂರಕ್ಕೂ ಹೆಚ್ಚು ರನ್ಗಳ ಮುನ್ನಡೆ ಪಡೆಯಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಕೊನೆಯ ಸೆಷೆನ್ನಲ್ಲಿ ಇಶಾಂತ್ ಶರ್ಮಾ, ಮೊಹಮ್ಮದ್ ಸಿರಾಜ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿ ಕೇವಲ 50 ರನ್ಗಳ ಅಂತರದಲ್ಲಿ 5 ವಿಕೆಟ್ ಕಬಳಿಸಿ ಇಂಗ್ಲೆಂಡ್ ತಂಡ ಅಲ್ಪಮೊತ್ತದ ಮುನ್ನಡೆಗೆ ತೃಪ್ತಿಪಡುವಂತೆ ಮಾಡಿದರು.
ಇಂಗ್ಲೆಂಡ್ ಇನ್ನಿಂಗ್ಸಲ್ಲಿ ಹೈಲೈಟ್ ಆಗಿದ್ದು ನಾಯಕ ಜೋ ರೂಟ್ ಮಾತ್ರವೇ. ಲಾರ್ಡ್ಸ್ ಮೈದಾನ ಜೋ ರೂಟ್ ಪಾಲಿಗೆ ಸ್ವರ್ಗ. ರೂಟ್ ಅವರು ಒಟ್ಟಾರೆ 22 ಶತಕ ಭಾರಿಸಿದರೆ ಲಾರ್ಡ್ಸ್ವೊಂದರಲ್ಲೇ ಒಂದೇ ವರ್ಷದಲ್ಲಿ ನಾಲ್ಕು ಟೆಸ್ಟ್ ಶತಕಗಳನ್ನ ಗಳಿಸಿದ್ದಾರೆ. ಲಾರ್ಡ್ಸ್ನಲ್ಲಿ ಅವರು ಶತಕ ಗಳಿಸಿದಾಗ ಕನಿಷ್ಠ ಸ್ಕೋರ್ ಎಂದರೆ 180 ರನ್ ಎಂಬುದು ಗಮನಾರ್ಹ. ರೂಟ್. ಜೋ ರೂಟ್ ನಿನ್ನೆ 180 ರನ್ ಗಳಿಸಿ ಅಜೇಯರಾಗಿ ಉಳಿದರು. ಅವರಿಗೆ ಬೆಂಬಲವಾಗಿ ಯಾರಾದರೂ ಕ್ರೀಸ್ನಲ್ಲಿ ಉಳಿದಿದ್ದರೆ ಸುಲಭವಾಗಿ ದ್ವಿಶತಕ ದಾಟುವ ನಿರೀಕ್ಷೆ ಇತ್ತು.
ಜೋ ರೂಟ್ ಬಿಟ್ಟರೆ ಇಂಗ್ಲೆಂಡ್ನ ಮೊದಲ ಇನ್ನಿಂಗ್ಸಲ್ಲಿ ಅರ್ಧಶತಕದ ಗಡಿ ದಾಟಿದವರು ಜಾನಿ ಬೇರ್ಸ್ಟೋ ಮಾತ್ರವೇ. ಇವರು 57 ರನ್ ಗಳಿಸಿದರು. ರೋರಿ ಬರ್ನ್ಸ್ 49 ರನ್ ಗಳಿಸಿದರು. ಈ ಮೂವರನ್ನ ಬಿಟ್ಟರೆ 20 ಕ್ಕಿಂತ ಹೆಚ್ಚು ರನ್ ಸ್ಕೋರ್ ಮಾಡಿದ್ದು ಜೋಸ್ ಬಟ್ಲರ್ ಮತ್ತು ಮಯೀನ್ ಅಲಿ. ಇನ್ನು, 450 ರನ್ಗಿಂತ ಹೆಚ್ಚು ಮೊತ್ತ ಗಳಿಸುವ ಸನ್ನಾಹದಲ್ಲಿದ್ದ ಇಂಗ್ಲೆಂಡ್ ತಂಡವನ್ನ 391 ರನ್ಗೆ ಸೀಮಿತಗೊಳಿಸಲು ಭಾರತದ ಬೌಲರ್ಗಳು ಯಶಸ್ವಿಯಾಗಿದ್ದನ್ನ ಒಪ್ಪಿಕೊಳ್ಳಬೇಕು. ಮೊಹಮ್ಮದ್ ಸಿರಾಜ್ 94 ರನ್ನಿತ್ತು 4 ವಿಕೆಟ್ ಪಡೆದರು. ಇಶಾಂತ್ ಶರ್ಮಾ 3 ಮತ್ತು ಮೊಹಮ್ಮದ್ ಶಮಿ 2 ವಿಕೆಟ್ ಪಡೆದರು. ಜಸ್ಪ್ರೀತ್ ಬುಮ್ರಾಗೆ ಒಂದೂ ವಿಕೆಟ್ ದಕ್ಕಲಿಲ್ಲ. ಏಕೈಕ ಸ್ಪಿನ್ನರ್ ರವೀಂದ್ರ ಜಡೇಜಾ ಕೂಡ ಯಾವುದೇ ವಿಕೆಟ್ ಪಡೆಯಲು ವಿಫಲರಾದರು.
ಇದನ್ನೂ ಓದಿ: ಕೆ.ಎಲ್. ರಾಹುಲ್ ಗಳಿಸಿದ ಶತಕ ನನಗೆ ಹುಟ್ಟುಹಬ್ಬದ ಉಡುಗೊರೆ: ಸುನೀಲ್ ಶೆಟ್ಟಿ
ಮೊದಲ ಇನ್ನಿಂಗ್ಸಲ್ಲಿ ಕೆ ಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ಫಲವಾಗಿ 364 ರನ್ ಗಳಿಸಿದ್ದ ಭಾರತ ಇಂದು ನಾಲ್ಕನೇ ದಿನದಂದು ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಲಿದೆ. ಈ ಇಬ್ಬರು ಆರಂಭಿಕ ದಾಂಡಿಗರು ಮತ್ತೊಮ್ಮೆ ಶತಕದ ಜೊತೆಯಾದಲ್ಲಿ ಭಾಗಿಯಾಗಿ ಭಾರತವನ್ನು ಸೋಲಿನ ಭೀತಿಯಿಂದ ಪಾರು ಮಾಡುವ ನಿರೀಕ್ಷೆ ಇದೆ. ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಕಳಪೆ ಫಾರ್ಮ್ನಲ್ಲಿರುವುದನ್ನ ಹೊರತುಪಡಿಸಿದರೆ ಉಳಿದ ಭಾರತೀಯ ಬ್ಯಾಟುಗಾರರು ಉತ್ತಮ ಲಯದಲ್ಲಿದ್ದಾರೆ. ಪಿಚ್ ಕೂಡ ಉತ್ತಮವಾಗಿ ವರ್ತಿಸುತ್ತಿದೆ. ಹವಾಮಾನ ಕೂಡ ಸ್ಥಿರವಾಗಿದೆ. ಹೀಗಾಗಿ ಭಾರತ ಎರಡನೇ ಇನ್ನಿಂಗ್ಸಲ್ಲಿ ಬೇಗನೇ ಆಲೌಟ್ ಆಗುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಸ್ಕೋರು ವಿವರ (3ನೇ ದಿನದಾಟ):
ಭಾರತ ಮೊದಲ ಇನ್ನಿಂಗ್ಸ್ 126.1 ಓವರ್ನಲ್ಲಿ 364/10
(ಕೆಎಲ್ ರಾಹುಲ್ 129, ರೋಹಿತ್ ಶರ್ಮಾ 86, ವಿರಾಟ್ ಕೊಹ್ಲಿ 42, ರವೀಂದ್ರ ಜಡೇಜಾ 40, ರಿಷಭ್ ಪಂತ್ 37 ರನ್ – ಜೇಮ್ಸ್ ಆಂಡರ್ಸನ್ 62/5, ಓಲೀ ರಾಬಿನ್ಸನ್ 73/2, ಮಾರ್ಕ್ ವುಡ್ 91/2)
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 128 ಓವರ್ 391/10
(ಜೋ ರೂಟ್ ಅಜೇಯ 180, ಜಾನಿ ಬೇರ್ಸ್ಟೋ 57, ರೋರಿ ಬರ್ನ್ಸ್ 49, ಮೊಯೀನ್ ಅಲಿ 27, ಜೋಸ್ ಬಟ್ಲರ್ 23 ರನ್ – ಮೊಹಮ್ಮದ್ ಸಿರಾಜ್ 94/4, ಇಶಾಂತ್ ಶರ್ಮಾ 69/3, ಮೊಹಮ್ಮದ್ ಶಮಿ 95/2)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ