IPL- ಭಾರತ ವಿರುದ್ಧ ಅಕ್ರೋಶ: ಐಪಿಎಲ್​ನಿಂದ ಹೊರನಡೆಯಲಿದ್ದಾರೆ ಇಂಗ್ಲೆಂಡ್ ಆಟಗಾರರು

England Players Anguish- ಕೋವಿಡ್ ಕಾರಣಕ್ಕೆ ಪಂದ್ಯ ರದ್ದುಗೊಳಿಸಿದ ಭಾರತ ತಂಡದ ಆಟಗಾರರು ಹೋಟೆಲ್ ರೂಮಲ್ಲಿ ಇರುವುದು ಬಿಟ್ಟು ಸಿಟಿ ಗಲ್ಲಿಗಳಲ್ಲಿ ತಿರುತ್ತಿದ್ದರು ಎಂಬುದು ಇಂಗ್ಲೆಂಡ್ ಆಟಗಾರರ ಆಕ್ರೋಶ. ಹೀಗಾಗಿ, ಐಪಿಎಲ್​ನಿಂದ ಹೊರ ಬಂದು ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದಾರೆನ್ನಲಾಗುತ್ತಿದೆ.

ಇಂಗ್ಲೆಂಡ್ ಟೆಸ್ಟ್ ಆಟಗಾರರು

ಇಂಗ್ಲೆಂಡ್ ಟೆಸ್ಟ್ ಆಟಗಾರರು

  • News18
  • Last Updated :
  • Share this:
    ಬೆಂಗಳೂರು: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಆಡದೇ ಇರಲು ತೆಗೆದುಕೊಂಡ ನಿರ್ಧಾರ ಕೆಲ ಆಂಗ್ಲ ಕ್ರಿಕೆಟಿಗರನ್ನ ಕೆರಳಿಸಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) ಸುಮ್ಮನಾದರೂ ಇಂಗ್ಲೆಂಡ್ ತಂಡದ ಆಟಗಾರರು ಒಳಗೊಳಗೆ ಕುದ್ದು ಹೋಗಿದ್ದಾರೆನ್ನಲಾಗಿದೆ. ಮುಂದಿನ ವಾರ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಒಬ್ಬ ಇಂಗ್ಲೆಂಡ್ ಆಟಗಾರ ಹೊರ ಉಳಿಯಲೂ ನಿರ್ಧರಿಸಿದ್ದಾರೆಂಬ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಭಾರತದ ಆಟಗಾರರು ಇಂಗ್ಲೆಂಡ್ ಕ್ರಿಕೆಟ್​ಗೆ ದ್ರೋಹ ಎಸಗಿದ್ದಾರೆ ಎಂಬುದು ಇಂಗ್ಲೆಂಡ್ ಆಟಗಾರರ ಆಕ್ರೋಶ. ಐಪಿಎಲ್​ನಿಂದ ಹೊರಗುಳಿಯುವ ಮೂಲಕ ಏಟಿಗೆ ಪ್ರತಿಯೇಟು ಕೊಡುವ ಚಿಂತನೆಯಲ್ಲಿ ಇದ್ದಾರೆನ್ನಲಾಗಿದೆ.

    ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನಾಲ್ಕು ಪಂದ್ಯಗಳು ನಡೆದಿವೆ. ಭಾರತ ಎರಡು ಪಂದ್ಯಗಳನ್ನ ಗೆದ್ದರೆ ಇಂಗ್ಲೆಂಡ್ ಒಂದರಲ್ಲಿ ಗೆಲುವು ಸಾಧಿಸಿದೆ. ನಾಲ್ಕನೇ ಪಂದ್ಯ ನಡೆಯುವ ವೇಳೆಯೇ ಭಾರತದ ಕೋಚ್ ರವಿಶಾಸ್ತ್ರಿ ಹಾಗೂ ಕೆಲ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢಪಟ್ಟಿತ್ತು. ಆದರೂ ಪಂದ್ಯ ಪೂರ್ಣ ಮುಗಿಸಲಾಯಿತು. ಐದನೇ ಟೆಸ್ಟ್ ಪಂದ್ಯ ಆಡುವ ಬಗ್ಗೆ ಆಗಲೇ ಅನುಮಾನ ಇತ್ತು. ಪಂದ್ಯದಲ್ಲಿ ಪಾಲ್ಗೊಳ್ಳಲು ಹಿಂದಿನ ದಿನ ನಿರ್ಧರಿಸಲಾಯಿತು. ಆದರೆ, ಪಂದ್ಯ ಶುರುವಾಗುವ ಸ್ವಲ್ಪ ಹೊತ್ತಿನ ಮೊದಲು ಭಾರತ ತನ್ನ ತಂಡವನ್ನು ಕಣಕ್ಕಿಳಿಸಲು ನಿರಾಕರಿಸಿತು. ಕೋವಿಡ್ ಹಿನ್ನೆಲೆಯಲ್ಲಿ ತನ್ನ ಆಟಗಾರರ ಸುರಕ್ಷತೆ ದೃಷ್ಟಿಯಿಂದ ತಂಡವನ್ನು ನಿಲ್ಲಿಸಲಿಲ್ಲ ಎಂದು ಬಿಸಿಸಿಐ ಕೂಡ ಹೇಳಿತು.

    ಭಾರತ ತಂಡದ ಈ ನಿರ್ಧಾರವನ್ನು ಇಂಗ್ಲೆಂಡ್ ತಂಡದ ಮಾಜಿ ಕ್ಯಾಪ್ಟನ್ ಮೈಕೇಲ್ ವಾನ್ ಸೇರಿದಂತೆ ಹಲವು ಮಂದಿ ಬಲವಾಗಿ ಖಂಡಿಸಿದರು. ಇಂಗ್ಲೆಂಡ್ ಕ್ರಿಕೆಟ್​ಗೆ ಭಾರತ ದ್ರೋಹ ಎಸಗಿತು ಎಂದು ದೂರಿದರು. ಆದರೆ, ಭಾರತ ತಂಡದ ನಿರ್ಧಾರವನ್ನು ಇಂಗ್ಲೆಂಡ್​ನ ಕೆವಿನ್ ಪೀಟರ್ಸನ್ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ಸಮರ್ಥನೆ ಕೂಡ ಮಾಡಿಕೊಂಡರು. ಕೋವಿಡ್ ಕಾರಣಕ್ಕೆ ಪಂದ್ಯ ರದ್ದು ಮಾಡಿದ ಭಾರತ ತಂಡದ ಆಟಗಾರರು ತಂಡದ ಹೋಟೆಲ್ ರೂಮ್​ನಲ್ಲಿ ಉಳಿದುಕೊಳ್ಳುವ ಬದಲು ಮ್ಯಾಂಚೆಸ್ಟರ್ ನಗರದಲ್ಲಿ ಸುತ್ತಾಟ ನಡೆಸಿದರು ಎಂದು ಕೆಲ ಆಂಗ್ಲ ಆಟಗಾರರು ಆರೋಪ ಮಾಡಿದರೆಂದು ದಿ ಸನ್ ಪತ್ರಿಕೆಯಲ್ಲಿ ವರದಿಯಾಯಿತು. ಪಂದ್ಯವನ್ನು ಒಂದೆರಡು ದಿನ ಮುಂದೂಡಬಹುದಾಗಿತ್ತು. ಹೀಗೆ ಪಂದ್ಯವನ್ನೇ ರದ್ದು ಮಾಡುವ ಅಗತ್ಯ ಇರಲಿಲ್ಲ ಎಂಬುದು ಇಂಗ್ಲೆಂಡ್ ಆಟಗಾರರ ಆಕ್ಷೇಪ.

    ಇದನ್ನೂ ಓದಿ: Pak vs NZ| ಸೆ.17ರಿಂದ ಪಾಕಿಸ್ತಾನ-ನ್ಯೂಜಿಲ್ಯಾಂಡ್ ಏಕದಿನ ಸರಣಿ; ಇದು ವಿಶ್ವಕಪ್ ಸೂಪರ್ ಲೀಗ್‌ನ ಭಾಗವೇ?

    ಐಪಿಎಲ್​ನಿಂದ ಹೊರಬೀಳುವ ಆ ಆಂಗ್ಲ ಕ್ರಿಕೆಟಿಗ ಯಾರು?

    ಹೀಗಾಗಿ ಐಪಿಎಲ್ ಟೂರ್ನಿಯಲ್ಲಿ ಕೈಕೊಟ್ಟು ತಮ್ಮ ಪ್ರತಿಭಟನೆ ವ್ಯಕ್ತಪಡಿಸುವ ಬಗ್ಗೆ ಇಂಗ್ಲೆಂಡ್ ತಂಡದ ಆಟಗಾರರೊಳಗೆ ಚರ್ಚೆ ನಡೆದಿರುವುದು ತಿಳಿದುಬಂದಿದೆ ಎಂದು ಟೈಮ್ಸ್ ನೌ ಸುದ್ದಿವಾಹಿನಿಯ ವೆಬ್​​ಸೈಟ್ ವರದಿ ಮಾಡಿದೆ. ಈ ಸುದ್ದಿ ನಿಜವೇ ಆದಲ್ಲಿ ಯಾವ್ಯಾವ ಇಂಗ್ಲೆಂಡ್ ಆಟಗಾರ ಐಪಿಎಲ್​ನಿಂದ ಹಿಂದಕ್ಕೆ ಸರಿಯುತ್ತಾರೆ ಎಂಬುದು ಕುತೂಹಲ. ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಇಂಗ್ಲೆಂಡ್​ನ ಐವರು ಕ್ರಿಕೆಟಿಗರು ವಿವಿಧ ತಂಡಗಳಲ್ಲಿ ಆಡುತ್ತಿದ್ದಾರೆ. ಜಾನಿ ಬೇರ್​ಸ್ಟೋ, ಸ್ಯಾಮ್ ಕುರನ್, ಮೊಯೀನ್ ಅಲಿ, ಡೇವಿಡ್ ಮಲನ್ ಮತ್ತು ಕ್ರಿಸ್ ವೋಕ್ಸ್ ಅವರ ಪೈಕಿ ಒಬ್ಬರಾದರೂ ಐಪಿಎಲ್​ನಿಂದ ಹೊರಬೀಳುತ್ತಾರೆ ಎಂಬ ಗುಸು ಗುಸು ಸುದ್ದಿ ಇದೆ.

    ಈ ವರ್ಷದ ಐಪಿಎಲ್ ಟೂರ್ನಿ ಭಾರತದಲ್ಲಿ ಆರಂಭವಾಗಿತ್ತು. ಕೋವಿಡ್ ಕಾರಣಕ್ಕೆ ಅರ್ಧಕ್ಕೆ ಸ್ಥಗಿತಗೊಂಡಿತ್ತು, ಕೇವಲ 29 ಪಂದ್ಯಗಳು ನಡೆದಿದ್ದವು. ಈಗ ಯುಎಇಯಲ್ಲಿ ಟೂರ್ನಿ ಮುಂದುವರಿಯುತ್ತಿದೆ. ಸೆಪ್ಟೆಂಬರ್ 19 ರಂದು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಿಂದ ಆರಂಭಗೊಂಡು ಅಕ್ಟೋಬರ್ 15ರಂದು ಫೈನಲ್​ನಲ್ಲಿ ಐಪಿಎಲ್ ಅಂತ್ಯಗೊಳ್ಳಲಿದೆ.
    Published by:Vijayasarthy SN
    First published: