T20 World Cup- ವಿಶ್ವಕಪ್ ಗೆಲ್ಲಲು ಭಾರತ ಫೇವರಿಟ್ ಅಲ್ಲ ಎಂದ ವಾನ್; ಈ 4 ತಂಡಕ್ಕಿದೆಯಂತೆ ಚಾನ್ಸ್

Michael Vaughan- ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಇಂಗ್ಲೆಂಡ್ ತಂಡ ಪ್ರಬಲವಾಗಿದೆ. ಟಿ20 ವಿಶ್ವಕಪ್ ಗೆಲ್ಲಲು ಸಮರ್ಥವಾಗಿದೆ. ಭಾರತ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳಿಂದ ಇಂಗ್ಲೆಂಡ್ ಸ್ಪರ್ಧೆ ಎದುರಿಸಬಹುದು ಎಂದು ಮೈಕೇಲ್ ವಾನ್ ಹೇಳಿದ್ದಾರೆ.

ಮೈಕೇಲ್ ವಾನ್

ಮೈಕೇಲ್ ವಾನ್

  • Share this:
    ದುಬೈ, ಅ. 20: ಭಾರತ ಟಿ20 ತಂಡ ಈ ಬಾರಿಯ ವಿಶ್ವಕಪ್​ನಲ್ಲಿ ಚಾಂಪಿಯನ್ ಆಗಲು ಫೇವರಿಟ್ ತಂಡವಲ್ಲ. ಏಕದಿನ ವಿಶ್ವಕಪ್​ನ ಹಾಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗೆಲ್ಲುವ ಅವಕಾಶ ಹೆಚ್ಚು ಹೊಂದಿದೆ ಎಂದು ಮಾಜಿ ಇಂಗ್ಲೆಂಡ್ ಕ್ರಿಕೆಟಿಗ ಮೈಕೇಲ್ ವಾನ್ (Former England Cricket Player Michael Vaughan) ಅಭಿಪ್ರಾಯಪಟ್ಟಿದ್ದಾರೆ. ಮೊನ್ನೆ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸುಲಭವಾಗಿ ಜಯಭೇರಿ ಭಾರಿಸಿದ ಬೆನ್ನಲ್ಲೇ ವಾನ್ ಈ ಮಾತು ಹೇಳಿದ್ದಾರೆ. ಭಾರತ ತಂಡ ಈ ವಿಶ್ವಕಪ್ ಗೆಲ್ಲುತ್ತೆ ಎಂಬ ಮಾತುಗಳು ಯಾಕೆ ಬರುತ್ತಿದೆಯೋ ಎಂದು ಬಿಬಿಸಿ ಕಾರ್ಯಕ್ರಮವೊಂದರಲ್ಲಿ ಅಚ್ಚರಿ ವ್ಯಕ್ತಪಡಿಸಿದ ಅವರು, ಟೀಮ್ ಇಂಡಿಯಾ ತನ್ನ ಹಿಂದಿನ ಕೆಲ ಟೂರ್ನಿಗಳಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ಸಮರ್ಥಿಸಿಕೊಂಡಿದ್ದಾರೆ.

    “ನನ್ನ ಪ್ರಕಾರ ಈ ವಿಶ್ವಕಪ್ ಗೆಲ್ಲಲು ಇಂಗ್ಲೆಂಡ್ ಫೇವರಿಟ್ ಆಗಿದೆ. ಟಿ20 ಕ್ರಿಕೆಟ್​ನಲ್ಲಿ ಭಾರತಕ್ಕೆ ಹೇಗೆ ಫೇವರಿಟ್ ಹಣೆಪಟ್ಟಿ ಸಿಗುತ್ತದೋ ನಂಗಂತೂ ಗೊತ್ತಿಲ್ಲ. ಕಳೆದ ಕೆಲ ಟೂರ್ನಿಗಳಲ್ಲಿ ಭಾರತದವರು ಹೆಚ್ಚು ಯಶಸ್ಸು ಕಂಡಿಲ್ಲ” ಎಂದು ವಾನ್ ವಿಶ್ಲೆಷಿಸಿದ್ದಾರೆ.

    ಮೈಕೇಲ್ ವಾನ್ ಪ್ರಕಾರ, ಇಂಗ್ಲೆಂಡ್ ತಂಡಕ್ಕೆ ಈ ವಿಶ್ವಕಪ್ ಗೆಲ್ಲಲು ಪ್ರಬಲ ಸಾಧ್ಯತೆ ಇದೆ. ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ತಂಡಗಳಿಂದ ಇಂಗ್ಲೆಂಡ್ ತಂಡಕ್ಕೆ ತೀವ್ರ ಪೈಪೋಟಿ ಎದುರಾಗಬಹುದು. ಭಾರತ ಮತ್ತು ಪಾಕಿಸ್ತಾನಗಳೂ ಪ್ರಬಲ ಸವಾಲೊಡ್ಡಬಲ್ಲವಂತೆ.

    ಭಾರತ ಮತ್ತು ಪಾಕಿಸ್ತಾನವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ವೆಸ್ಟ್ ಇಂಡೀಸ್ ಅಪಾಯಕಾರಿ ಆಗಬಹುದು. ನ್ಯೂಜಿಲೆಂಡ್ ತಂಡದಲ್ಲಿ ಹೈ ಕ್ಲಾಸ್ ಆಟಗಾರರಿದ್ದಾರೆ. ಪಂದ್ಯಗಳನ್ನ ಗೆಲ್ಲಲು ಬೇಕಾದ ರಣತಂತ್ರಗಳೊಂದಿಗೆ ಅವರು ಆಟಕ್ಕೆ ಇಳಿಯುತ್ತಾರೆ ಎಂಬುದು ಮೈಕೇಲ್ ವಾನ್ ವಿಶ್ಲೇಷಣೆ.

    ಆಸ್ಟ್ರೇಲಿಯಾಗೆ ಟಿ20 ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ:

    ಆಸ್ಟ್ರೇಲಿಯಾಗೆ ಟಿ20 ವಿಶ್ವಕಪ್ ಗೆಲ್ಲುವ ಶಕ್ತಿ ಇಲ್ಲ ಎನ್ನುತ್ತಾರೆ ವಾನ್. “ಆಸ್ಟ್ರೇಲಿಯಾಗೆ ಗೆಲ್ಲಲು ಹೆಚ್ಚು ಅವಕಾಶ ಇದೆ ಅಂತ ನನಗೆ ಅನಿಸುವುದಿಲ್ಲ. ಟಿ20 ಕ್ರಿಕೆಟ್​ನಲ್ಲಿ ಅವರು ಬಹಳ ಪರದಾಡುತ್ತಾರೆ. ಗ್ರೆನ್ ಮ್ಯಾಕ್ಸ್​ವೆಲ್ ಇದಕ್ಕೆ ಅಪವಾದವಾಗಿದ್ದಾರೆ. ಮ್ಯಾಕ್ಸ್​ವೆಲ್ ಈ ವಿಶ್ವಕಪ್​ನಲ್ಲಿ ಅದ್ವಿತೀಯ ಪ್ರದರ್ಶನ ತೋರಬಹುದು.

    ಆದರೆ, ಆಸ್ಟ್ರೇಲಿಯಾ ಈ ಟೂರ್ನಿಯಲ್ಲಿ ಹೆಚ್ಚು ಪ್ರಗತಿ ಕಾಣುವುದು ಅನುಮಾನ. ಇಂಗ್ಲೆಂಡ್, ಭಾರತ, ವೆಸ್ಟ್ ಇಂಡೀಸ್, ನ್ಯೂಜಿಲೆಂಡ್ ಈ ನಾಲ್ಕು ತಂಡಗಳಲ್ಲಿ ಒಂದು ವಿಶ್ವಕಪ್ ಗೆಲ್ಲಬಹುದು. ಇಲ್ಲಿನ ಪಿಚ್​ಗಳ ಕಾರಣಕ್ಕೆ ಪಾಕಿಸ್ತಾನಕ್ಕೂ ಅವಕಾಶ ಇದೆ” ಎಂಬುದು ಇಂಗ್ಲೆಂಡ್ ಮಾಜಿ ಕ್ರಿಕೆಟಿನ ಅನಿಸಿಕೆ.

    ಇದನ್ನೂ ಓದಿ: ಟಿ20 ವಿಶ್ವಕಪ್​ನಲ್ಲಿ ಪಾಕ್ ವಿರುದ್ಧ ಭಾರತ ಯಾಕೆ ಒಮ್ಮೆಯೂ ಸೋತಿಲ್ಲ: ಸೆಹ್ವಾಗ್ ಬಳಿ ಇದೆ ಉತ್ತರ

    ಯುಎಇ ಪಿಚ್​ಗಳು ನಿರ್ಣಾಯಕ:

    ವಿಶ್ವಕಪ್ ನಡೆಯುತ್ತಿರುವ ಇಲ್ಲಿನ ಪಿಚ್​ಗಳಲ್ಲಿ ಐಪಿಎಲ್ ಪಂದ್ಯಗಳು ನಡೆದಿವೆ. ಸ್ಲೋ ಇರುವ ಇಲ್ಲಿನ ಪಿಚ್​ಗಳಲ್ಲಿ 150-160 ರನ್​​ಗಳ ಮೊತ್ತ ಗೆಲುವನ್ನ ತಂದುಕೊಡಬಲ್ಲುದು ಎಂದಿದ್ದಾರೆ.

    ಸ್ಟೋಕ್ಸ್, ಆರ್ಚರ್ ಇಲ್ಲದಿದ್ದರೂ ಇಂಗ್ಲೆಂಡ್ ಸ್ಟ್ರಾಂಗ್:

    ಇಂಗ್ಲೆಂಡ್ ತಂಡದ ಪ್ರಮುಖ ಬ್ಯಾಟರ್ ಬೆನ್ ಸ್ಟೋಕ್ಸ್ ಮತ್ತು ಪ್ರಮುಖ ಬೌಲರ್ ಜೋಫ್ರಾ ಆರ್ಚರ್ ಅವರಿಲ್ಲ. ಐಪಿಎಲ್​ನಲ್ಲಿ ಆಡಿದ ಇಂಗ್ಲೆಂಡ್ ಆಟಗಾರರಲ್ಲಿ ಹೆಚ್ಚಿನವರು ಹೆಚ್ಚು ರನ್ ಗಳಿಸಿಲ್ಲ. ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ ಬ್ಯಾಟಿಂಗ್​ನಲ್ಲಿ ಪೂರ್ಣ ವೈಫಲ್ಯ ಅನುಭವಿಸಿದ್ದಾರೆ. ಆದರೆ, ಇಂಗ್ಲೆಂಡ್ ತಂಡ ಟಿ20 ವಿಶ್ವಕಪ್ ಗೆಲ್ಲಲು ಬೇಕಾದ ಎಲ್ಲಾ ಸರಕುಗಳನ್ನ ಹೊಂದಿದೆ ಎನ್ನುತ್ತಾರೆ ವಾನ್.

    ಇದನ್ನೂ ಓದಿ: T20 World Cup- ಜೋಗಿಂದರ್​ನಿಂದ ಯೂಸುಫ್​ವರೆಗೂ… 2007ರ ಟಿ20 ವಿಶ್ವಕಪ್ ಗೆದ್ದ ಆಟಗಾರರು ಈಗೇನ್ಮಾಡ್ತಿದಾರೆ?

    “ಟಿ20 ಕ್ರಿಕೆಟ್ ಪಂದ್ಯ ಹೀಗೇ ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲಿ ಅದೃಷ್ಟ ಹೆಚ್ಚು ಮಹತ್ವದ್ದು. 50 ಓವರ್ ಕ್ರಿಕೆಟ್​ನಲ್ಲಿ ಅತ್ಯುತ್ತಮ ತಂಡ ಸಾಮಾನ್ಯವಾಗಿ ಗೆಲ್ಲುತ್ತದೆ. ಟಿ20 ಕ್ರಿಕೆಟ್​ನಲ್ಲಿ ಒಬ್ಬ ಬ್ಯಾಟರ್ ಅಥವಾ ಬೌಲರ್ ಏಕಾಂಗಿಯಾಗಿ ಪಂದ್ಯವನ್ನ ಗೆಲ್ಲಬಲ್ಲ” ಎಂದು ವಾನ್ ಹೇಳಿದ್ದಾರೆ.

    ಈ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡಕ್ಕೆ ಇಯಾನ್ ಮಾರ್ಗನ್ ನಾಯಕತ್ವ ಬಹಳ ಮುಖ್ಯವಾದ ಅಂಶವಾಗಿದೆ ಎಂದಿದ್ದಾರೆ. “ಇಯಾನ್ ಮಾರ್ಗನ್ ನೇತೃತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ ಫೈನಲ್ ತಲುಪಿದೆ. ಇಯಾನ್ ಮಾರ್ಗನ್ ನಾಯಕತ್ವ ಅದ್ಭುತವಾಗಿತ್ತು. ಬ್ಯಾಟಿಂಗ್​ನಲ್ಲಿ ಅವರಿಂದ ಏನೂ ಬರಲಿಲ್ಲ. ಅವರು ಬ್ಯಾಟಿಂಗ್​ನಲ್ಲಿ ಹೆಚ್ಚು ರನ್ ಗಳಿಸದಿದ್ದರೂ ಅದು ಮುಖ್ಯವೆನಿದಂತೆ ಇಂಗ್ಲೆಂಡ್​ನಲ್ಲಿ ಬೇರೆ ಆಟಗಾರರು ಫಾರ್ಮ್​ನಲ್ಲಿದ್ದಾರೆ. ಬೆನ್ ಸ್ಟೋಕ್ಸ್ ಮತ್ತು ಜೋಯಾ ಆರ್ಚರ್ ಅನುಪಸ್ಥಿತಿ ಕಾಡಬಹುದು. ಆದರೂ ಇಂಗ್ಲೆಂಡ್ ತಂಡ ಪ್ರಬಲವಾಗಿದೆ” ಎಂದು ಮೈಕೇಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
    Published by:Vijayasarthy SN
    First published: