Moeen Ali: ಟೆಸ್ಟ್ ಕ್ರಿಕೆಟ್​ನಿಂದ ಮೊಯೀನ್ ನಿವೃತ್ತಿ; ಭಾರತ ವಿರುದ್ಧದ ಪಂದ್ಯವೇ ಕಾರಣವಾಯಿತಾ?

Retirement from Test Cricket- ಭಾರತ ಮತ್ತು ಇಂಗ್ಲೆಂಡ್ ನಡುವಿನ ಸರಣಿಯ ಆ ಎರಡು ಪಂದ್ಯಗಳು ಮೊಯೀನ್ ಅಲಿ ಅವರನ್ನ ಟೆಸ್ಟ್ ಕ್ರಿಕೆಟ್​ನಿಂದ ನಿವೃತ್ತರಾಗುವಂತೆ ಮಾಡಿವೆ. ಏಳು ವರ್ಷಗಳ 64 ಪಂದ್ಯಗಳ ಮೊಯೀನ್ ಟೆಸ್ಟ್ ಜೀವನ ಅಂತ್ಯಗೊಂಡಿದೆ.

ಮೊಯೀನ್ ಅಲಿ

ಮೊಯೀನ್ ಅಲಿ

  • Cricketnext
  • Last Updated :
  • Share this:
ಅಬುಧಾಬಿ, ಸೆ. 27: ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುವ ಇಂಗ್ಲೆಂಡ್ ಆಲ್​ರೌಂಡರ್ ಮೊಯೀನ್ ಅಲಿ ಅವರು ಟೆಸ್ಟ್ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ಧಾರೆ. ಇರೊಂದಿಗೆ ಮೊಯೀನ್ ಅಲಿ ಅವರ ಏಳು ವರ್ಷಗಳ ಮತ್ತು 64 ಪಂದ್ಯಗಳ ಟೆಸ್ಟ್ ವೃತ್ತಿಜೀವನ ಅಂತ್ಯಗೊಂಡಿದೆ. ಅವರು ಯಾವಾಗಲೇ ನಿವೃತ್ತರಾದರೂ ಇಂಗ್ಲೆಂಡ್ ಕ್ರಿಕೆಟ್​ನ ಅತ್ಯುತ್ತಮ ಆಲ್​ರೌಂಡರ್​ಗಳ ಪೈಕಿ ಒಬ್ಬರಾಗಿ ಸದಾ ಗುರುತಾಗಿರುತ್ತಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅವರು ಯಾವುದೇ ತಂಡಕ್ಕೆ ಕೊಡುಗೆ ನೀಡಬಲ್ಲಂಥ ಆಟಗಾರರಾಗಿದ್ದವು. ವಯಸ್ಸಿನ ಕಾರಣಕ್ಕೆ ಅವರು ಟೆಸ್ಟ್ ಕ್ರಿಕೆಟ್​ನಿಂದ ಹಿಂದೆ ಸರಿದಿದ್ದಾರೆ. “ನನಗೆ ಈಗ 34 ವರ್ಷ. ಇನ್ಮುಂದೆ ಎಷ್ಟು ವರ್ಷ ಕ್ರಿಕೆಟ್ ಆಟವನ್ನ ಸವಿಯಲು ಸಾಧ್ಯವಾಗುತ್ತೋ ಅಲ್ಲಿಯವರೆಗೆ ಆಡಲು ಬಯಸುತ್ತೇನೆ” ಎಂದು ಮೊಯೀನ್ ಅಲಿ ಹೇಳಿದ್ಧಾರೆ. ಟೆಸ್ಟ್ ಮಾದರಿ ಕ್ರಿಕೆಟ್​ನಿಂದ ಹಿಂದೆ ಸರಿದು ಚುಟುಕು ಕ್ರಿಕೆಟ್​ನಲ್ಲಿ ಅವರ ಪ್ರಯಾಣ ಮುಂದುವರಿಯಲಿದೆ.

“ಟೆಸ್ಟ್ ಕ್ರಿಕೆಟ್ ನಿಜಕ್ಕೂ ಅದ್ಭುತ. ನೀವು ಟೆಸ್ಟ್ ಪಂದ್ಯದಲ್ಲಿ ಚೆನ್ನಾಗಿ ಆಡುತ್ತಿದ್ದರೆ ಬೇರಾವ ಮಾದರಿ ಕ್ರಿಕೆಟ್​ಗಿಂತಲೂ ಟೆಸ್ಟ್ ಕ್ರಿಕೆಟ್ ಬಹಳ ಉತ್ತಮ ಎನಿಸುತ್ತದೆ. ಹೆಚ್ಚು ತೃಪ್ತಿ ಕೊಡುತ್ತದೆ. ಸಹ ಆಟಗಾರರ ಜೊತೆ ಮೈದಾನದೊಳಗೆ ಕಾಲಿಟ್ಟು ವಿಶ್ವದ ಅತ್ಯುತ್ತಮ ತಂಡಗಳ ಎದುರು ಆಡುವ ಆತಂಕ ಮತ್ತು ಸವಾಲಿನ ಕ್ಷಣಗಳು ಇನ್ಮುಂದೆ ನನಗೆ ಸಿಕ್ಕುವುದಿಲ್ಲವಲ್ಲ ಎಂಬ ಕೊರಗು ಉಳಿಯುತ್ತದೆ. ನನ್ನ ಅತ್ಯುತ್ತಮ ಎಸೆತದಿಂದ ಯಾರನ್ನ ಬೇಕಾದರೂ ಔಟ್ ಮಾಡಬಲ್ಲೆ ಎಂಬ ಆಸೆ, ನಿರೀಕ್ಷೆ ಇನ್ಮುಂದೆ ಈಡೇರುವುದಿಲ್ಲ ಎಂಬ ನಿರಾಸೆ ನನಗಾಗಲಿದೆ…. ನಾನು ಟೆಸ್ಟ್ ಕ್ರಿಕೆಟ್ ಅನ್ನು ಖುಷಿಯಾಗಿ ಅನುಭವಿಸಿರುವುದು ಹೌದಾದರೂ ಅದರ ತೀವ್ರತೆ ತುಸು ಹೆಚ್ಚಾಯಿತೇನೋ ಎಂದನಿಸುತ್ತದೆ. ನನಗೆ ಸಾಧ್ಯವಾಗಿದ್ದನ್ನ ಮಾಡಿದ್ದೇನೆ. ಅದರಲ್ಲಿ ನನಗೆ ಸಂತೃಪ್ತಿ ಇದೆ ಎನಿಸುತ್ತದೆ” ಎಂದು ಮೊಯೀನ್ ಅಲಿ ತಮ್ಮ ನಿವೃತ್ತಿ ನಿರ್ಧಾರ ಪ್ರಕಟಿಸುವಾಗ ಹೇಳಿದ ಮಾತುಗಳು ಇವು.

ಭಾರತ ವಿರುದ್ಧದ ಪಂದ್ಯವೇ ನಿವೃತ್ತಿಗೆ ಕಾರಣವಾಯಿತಾ?

ಮೊಯೀನ್ ಅಲಿ ಅವರು ತಮಗೆ 34 ವರ್ಷವಾದ್ದರಿಂದ ಟೆಸ್ಟ್ ಕ್ರಿಕೆಟ್ ಆಡಲು ಬೇಕಾದ ತೀವ್ರತೆ ಇಲ್ಲ ಎಂದು ಹೇಳಿದ್ಧಾರೆ. ಅವರಿಗೆ ಆ ಕೊರತೆ ಇದೆ ಎಂದನಿಸಿದ್ದು ಇತ್ತೀಚೆಗೆ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಂತೆ. ಈ ಸರಣಿಯ ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ತಮಗೆ ಆಟದ ಮೇಲೆ ಸರಿಯಾಗಿ ಗಮನ ಕೊಡಲು ಆಗುತ್ತಿರಲಿಲ್ಲ. ಲಯ ಕಳೆದುಕೊಂಡಿದ್ದೇನೇನೋ ಎಂದಿಸಿತ್ತು ಎಂದು ಅವರು ಇಎಸ್​ಪಿನ್ ಕ್ರಿಕ್ ಇನ್ಫೋಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ ಬಗ್ಗೆ ಟೀಮ್ ಇಂಡಿಯಾದ ಒಬ್ಬ ಆಟಗಾರನಿಂದ ಬಿಸಿಸಿಐಗೆ ದೂರು: ಯಾರು ಆತ?

ಲೀಡ್ಸ್​ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇನ್ನಿಂಗ್ಸ್ ಹಾಗೂ 76 ರನ್​ಗಳಿಂದ ಭಾರತವನ್ನು ಸೋಲಿಸಿತ್ತು. ಆ ಪಂದ್ಯದಲ್ಲಿ ಮೊಯೀನ್ ಅಲಿ ಬ್ಯಾಟಿಂಗ್​ನಲ್ಲಿ ವಿಫಲರಾಗಿದ್ದರು. ಬೌಲಿಂಗ್​ನಲ್ಲಿ ಎರಡೂ ಇನ್ನಿಂಗ್ಸ್ ಸೇರಿ ಸಿಕ್ಕಿದ್ದು ಒಂದೇ ವಿಕೆಟ್. ಅದರ ನಂತರ ನಡೆದ ನಾಲ್ಕನೇ ಪಂದ್ಯದಲ್ಲೂ ಮೊಯೀನ್ ಆಟ ತೃಪ್ತಿದಾಯಕವಿರಲಿಲ್ಲ. ಈ ಎರಡು ಪಂದ್ಯಗಳಲ್ಲಿ ಮೊಯೀನ್ ಅಲಿ ಮನಸಾರೆ ಆಡಲಿಲ್ಲ ಎನ್ನಲು ಆಗುವುದಿಲ್ಲ. ಆದರೆ, ಚುಟುಕು ಮಾದರಿ ಕ್ರಿಕೆಟ್​ನಲ್ಲೇ ಸತತವಾಗಿ ಎರಡು ವರ್ಷ ಆಡಿದ ಬಳಿಕ ಟೆಸ್ಟ್ ಕ್ರಿಕೆಟ್ ಆಡುವ ಸಾಮರ್ಥ್ಯ ಕಳೆದುಕೊಂಡಿದ್ದರು. ಟೆಸ್ಟ್ ಕ್ರಿಕೆಟ್​ನಲ್ಲ ಲಯ ಕಂಡುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲವಂತೆ.

“ಆ ಎರಡು ಪಂದ್ಯಗಳ ಬಳಿಕ ನನಗೆ ಇದು ಸಾಕು ಎಂದನಿಸಿತು. ಟೆಸ್ಟ್ ಕ್ರಿಕೆಟ್​ನಲ್ಲಿ ಕೆಲ ಮೈಲಿಗಲ್ಲುಗಳನ್ನ ನಾನು ದಾಟಬೇಕೆಂಬ ಅಪೇಕ್ಷೆಯಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನ ಆಡಬೇಕೆಂದುಕೊಂಡಿದ್ದೆ. ಆದರೆ, ಆ ಪಂದ್ಯ ರದ್ದಾಗಿ ಹೋಯಿತು” ಎಂದು ಇಂಗ್ಲೆಂಡ್ ತಂಡದ ಆಲ್​ರೌಂಡರ್ ಮೊಯೀನ್ ಅಲಿ ಹೇಳಿದ್ಧಾರೆ.

2014ರಲ್ಲಿ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ಮೊಯೀನ್ ಅಲಿ ಈ ಏಳು ವರ್ಷಗಳಲ್ಲಿ 64 ಪಂದ್ಯ ಆಡಿ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಮಿಂಚಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ 3 ಸಾವಿರ ರನ್ ಗಡಿ ಮುಟ್ಟಲು ಅವರಿಗೆ 86 ರನ್​ಗಳ ಅವಶ್ಯಕತೆ ಇತ್ತು. 200 ವಿಕೆಟ್ ಗಡಿ ಮುಟ್ಟಲು 5 ವಿಕೆಟ್​ಗಳ ಅವಶ್ಯಕತೆ ಇತ್ತು. ಭಾರತ ವಿರುದ್ಧದ ಕೊನೆಯ ಪಂದ್ಯದಲ್ಲಿ ಈ ಎರಡು ಮೈಲಿಗಲ್ಲುಗಳನ್ನ ಮುಟ್ಟುವ ಅಪೇಕ್ಷೆ ಅವರಲ್ಲಿತ್ತು. ಆದರೆ, ವಿಧಿಯಾಟ ಬೇರೆಯೇ ಆಗಿತ್ತು.

ಮೊಯೀನ್ ಅಲಿ ಟೆಸ್ಟ್ ಕ್ರಿಕೆಟ್ ಅಂಕಿ ಅಂಶ:

















ಪಂದ್ಯ ರನ್ ಶತಕ ಅರ್ಧಶತಕ ವಿಕೆಟ್
64 2914 5 14 195



ಅದೇನೇ ಇರಲಿ, ಐಪಿಎಲ್​ನಲ್ಲಿ ಹಿಂದು ಒಂದು ಋತುವಿನಲ್ಲಿ ಆರ್​ಸಿಬಿ ತಂಡದಲ್ಲೂ ಆಡಿದ್ದ ಮೊಯೀನ್ ಅಲಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೂಪರ್ ಆಟಗಾರನಾಗಿದ್ಧಾರೆ. ಕೆಲ ಪಂದ್ಯಗಳಲ್ಲಿ ಅವರು ಗೆಲುವಿನ ರೂವಾರಿಯೂ ಆಗಿದ್ಧಾರೆ.
Published by:Vijayasarthy SN
First published: