ವಿಶ್ವಕಪ್​ ಆರಂಭಕ್ಕೂ ಮುನ್ನವೇ ಭಾರತದ ದಾಖಲೆಯನ್ನು ಧೂಳೀಪಟಗೈದ ಇಂಗ್ಲೆಂಡ್

ಈ ಬಾರಿಯ ವಿಶ್ವಕಪ್ ಇಂಗ್ಲೆಂಡ್ ಮತ್ತು ವೇಲ್ಸ್​ನಲ್ಲಿ ನಡೆಯಲಿದ್ದು, ಇದು ಆಂಗ್ಲರ ತಂಡಕ್ಕೆ ಪ್ಲಸ್​ ಪಾಯಿಂಟ್ ಆಗಲಿದೆ.

zahir | news18
Updated:May 19, 2019, 10:54 PM IST
ವಿಶ್ವಕಪ್​ ಆರಂಭಕ್ಕೂ ಮುನ್ನವೇ ಭಾರತದ ದಾಖಲೆಯನ್ನು ಧೂಳೀಪಟಗೈದ ಇಂಗ್ಲೆಂಡ್
@DNA India
  • News18
  • Last Updated: May 19, 2019, 10:54 PM IST
  • Share this:
ವಿಶ್ವಕಪ್ ತಯಾರಿಗಳು ಗದಿಗೆದರುತ್ತಿರುವ ಬೆನ್ನಲ್ಲೇ ಇಂಗ್ಲೆಂಡ್ ತಂಡವು ಭರ್ಜರಿ ಪ್ರದರ್ಶನ ನೀಡುತ್ತಿದೆ. ತವರಿನಲ್ಲಿ ಪಾಕಿಸ್ತಾನದ ವಿರುದ್ದದ 5 ಪಂದ್ಯಗಳ ಸರಣಿಯಲ್ಲಿ  ಇಂಗ್ಲೆಂಡ್ ಈಗಾಗಲೇ 3-0 ಅಂತರದಿಂದ ಮುನ್ನಡೆ ಸಾಧಿಸಿದೆ. ಇಲ್ಲಿ ವಿಶೇಷ ಎಂದರೆ ಈ ಮೂರು ಪಂದ್ಯದಲ್ಲೂ ಆಂಗ್ಲರು 340 ಕ್ಕಿಂತಲೂ ಹೆಚ್ಚು ರನ್ ಬಾರಿಸಿರುವುದು. ಇನ್ನು 4ನೇ ಏಕದಿನ ಪಂದ್ಯ ಭಾನುವಾರ ನಡೆಯುತ್ತಿದ್ದು ಅದರಲ್ಲೂ 351 ರನ್ ಸಿಡಿಸಿ ಅಬ್ಬರಿಸಿದೆ.

ಬಲಿಷ್ಠ ಬ್ಯಾಟಿಂಗ್​ ಪಡೆಯನ್ನು ಹೊಂದಿರುವ ಆಂಗ್ಲರು ಇದೀಗ ಭಾರತ ದಾಖಲೆಯನ್ನು ಪುಡಿಗಟ್ಟಿ ಹೊಸ ಇತಿಹಾಸ ಬರೆದಿದ್ದಾರೆ. ಈ ಹಿಂದೆ ಟೀಂ ಇಂಡಿಯಾ ಏಕದಿನ ಕ್ರಿಕೆಟ್​ನಲ್ಲಿ 340 ಕ್ಕಿಂತಲೂ ಹೆಚ್ಚಿನ ಮೊತ್ತವನ್ನು​ ಮೂರು ಬಾರಿ ಚೇಸ್ ಮಾಡಿ ದಾಖಲೆ ನಿರ್ಮಿಸಿತ್ತು. ಆದರೆ ಇದೀಗ ಇಯಾನ್ ನೇತೃತ್ವದ ಇಂಗ್ಲೆಂಡ್ ತಂಡವು 340+ ರನ್​ಗಳನ್ನು 4 ಬಾರಿ ಬೆನ್ನತ್ತುವ ಮೂಲಕ ವಿಶ್ವ ದಾಖಲೆ ಬರೆದಿದೆ. ಅದರಲ್ಲೂ ಮುಖ್ಯವಾಗಿ ಇಂಗ್ಲೆಂಡ್ ಕಳೆದ ನಾಲ್ಕು ಪಂದ್ಯಗಳಿಂದ ಸತತ 340+ ರನ್​ ಸಿಡಿಸಿ ಮತ್ತೊಂದು ಅಪರೂಪದ ಸಾಧನೆ ಮಾಡಿದೆ. ಇನ್ನು ಒಂದೇ ವಾರದಲ್ಲಿ ಮೂರು ಬಾರಿ 340+ ರನ್ ಬಾರಿಸಿದ ದಾಖಲೆ ಕೂಡ ಇಂಗ್ಲೆಂಡ್ ಪಾಲಾಗಿದೆ.

ಭಾರತ ತಂಡವು ಇದುವರೆಗೂ ಏಕದಿನ ಕ್ರಿಕೆಟ್​ನಲ್ಲಿ 340+ ರನ್​ಗಳನ್ನು 3 ಬಾರಿ ಬೆನ್ನಟ್ಟಿ ಗೆದ್ದಿದ್ದು, ದಕ್ಷಿಣ ಆಫ್ರಿಕಾ 2 ಬಾರಿ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ 1 ಬಾರಿ ಕಠಿಣ ಸವಾಲಿನ ಗುರಿಯನ್ನು ದಾಟಿದೆ. ಇನ್ನು 2019 ರಲ್ಲಿ 340+ ರನ್​ಗಿಂತಲೂ ಹೆಚ್ಚಿನ ಮೊತ್ತವನ್ನು ಚೇಸ್​ ಮಾಡಿದ ತಂಡಗಳ ಪಟ್ಟಿಯಲ್ಲಿ ಇಂಗ್ಲೆಂಡ್ ಮುಂಚೂಣಿಯಲ್ಲಿದ್ದು, ಈಗಾಗಲೇ 4 ಬಾರಿ ಬೃಹತ್ ಮೊತ್ತದ ಸವಾಲನ್ನು ಗೆದ್ದು ಬೀಗಿದೆ. ಹಾಗೆಯೇ ಈ ವರ್ಷಾರಂಭದಲ್ಲಿ ನಡೆದ ಭಾರತದ ವಿರುದ್ಧದ ಪಂದ್ಯದಲ್ಲಿ  358 ರನ್​ಗಳ ಕಠಿಣ ಸವಾಲನ್ನು ಬೆನ್ನತ್ತಿ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ತಂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.

ಬಲಿಷ್ಠ ಬ್ಯಾಟಿಂಗ್ ಪಡೆ:

2015 ವಿಶ್ವಕಪ್ ಸೋಲಿನ ಬಳಿಕ ಇಂಗ್ಲೆಂಡ್ ತಂಡದಲ್ಲಿ ಭಾರೀ ಬದಲಾವಣೆ ಮಾಡಲಾಗಿತ್ತು. ಪರಿಣಾಮ ಆಂಗ್ಲರ ತಂಡದಲ್ಲಿ ಇದೀಗ ಆಕ್ರಮಣಕಾರಿ ಆಟಗಾರರು ಮಿಂಚುತ್ತಿದ್ದು, ಬೌಲರ್​ಗಳ ವಿರುದ್ಧ ಆರ್ಭಟಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ಏಕದಿನ ಪಂದ್ಯದಲ್ಲಿ ಅಧಿಪತ್ಯ ಸಾಧಿಸುತ್ತಾ ಬಂದಿರುವ ಇಂಗ್ಲೆಂಡ್ ಆಸ್ಟ್ರೇಲಿಯಾ ವಿರುದ್ಧ 481 ರನ್ ಸಿಡಿಸಿ ಏಕದಿನ ಕ್ರಿಕೆಟ್​ ಅತ್ಯಧಿಕ ರನ್​ ಎಂಬ ವಿಶ್ವದಾಖಲೆ ಬರೆದಿತ್ತು. ಹಾಗೆಯೇ ಪಾಕ್ ವಿರುದ್ಧ 444 ರನ್​ ಸಿಡಿಸಿದ ಇಂಗ್ಲೆಂಡ್ ಅತ್ಯಧಿಕ ರನ್​ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ತನ್ನದಾಗಿಸಿದೆ. ಮೂರನೇ ಸ್ಥಾನದಲ್ಲಿ ನೆದರ್​ಲೆಂಡ್ಸ್​ ವಿರುದ್ದ 443 ರನ್​ ಬಾರಿಸಿದ ಶ್ರೀಲಂಕಾ ಇದೆ.

ಇನ್ನು  ವೆಸ್ಟ್​ ಇಂಡೀಸ್ ವಿರುದ್ಧ 418 ರನ್​ ಸಿಡಿಸಿದ ಟೀಂ ಇಂಡಿಯಾ ಈ ಪಟ್ಟಿಯಲ್ಲಿ 8ನೇ ಸ್ಥಾನ ಪಡೆದಿದೆ. ಹಾಗೆಯೇ ಏಕದಿನ ಕ್ರಿಕೆಟ್​ನಲ್ಲಿ ಹೆಚ್ಚು ಬಾರಿ 400+ ರನ್​ ಬಾರಿಸಿದ ದಾಖಲೆಯನ್ನು ದಕ್ಷಿಣ ಆಫ್ರಿಕಾ-ಭಾರತ ಜಂಟಿಯಾಗಿ ಹಂಚಿಕೊಂಡಿದೆ. ದಕ್ಷಿಣ ಆಫ್ರಿಕಾ 5 ಬಾರಿ 400ಕ್ಕೂ ಹೆಚ್ಚು ರನ್ ಬಾರಿಸಿದರೆ, ಟೀಂ ಇಂಡಿಯಾ ಸಹ ಅಷ್ಟೇ ಬಾರಿ 400+ ರನ್​ ದಾಖಲಿಸಿ ತನ್ನ ಬ್ಯಾಟಿಂಗ್ ವೈಭವವನ್ನು ಧರೆಗೆಳೆದಿದೆ.

ಈ ಬಾರಿಯ ವಿಶ್ವಕಪ್ ಇಂಗ್ಲೆಂಡ್ ಮತ್ತು ವೇಲ್ಸ್​ನಲ್ಲಿ ನಡೆಯಲಿದ್ದು, ಇದು ಆಂಗ್ಲರ ತಂಡಕ್ಕೆ ಪ್ಲಸ್​ ಪಾಯಿಂಟ್ ಆಗಲಿದೆ. ಅದರಲ್ಲೂ ಕಳೆದ 5 ವರ್ಷಗಳಲ್ಲಿ ಇಂಗ್ಲೆಂಡ್ ತವರಿನಲ್ಲಿ ಬಲಿಷ್ಠ ಏಕದಿನ ತಂಡವಾಗಿ ರೂಪುಗೊಂಡಿರುವುದನ್ನು ಗಮನಿಸಬಹುದು. ಇದೀಗ ಜಾನಿ ಬೇರ್​ಸ್ಟೊ, ಜೋಸ್ ಬಟ್ಲರ್,  ಜಾಯ್ ರೂಟ್, ಇಯಾನ್ ಮೋರ್ಗನ್​ರ ಆರ್ಭಟ ನೋಡುತ್ತಿದ್ದರೆ, ವಿಶ್ವಕಪ್​ ಪಂದ್ಯವಾಳಿಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್​ಮನ್​ಗಳನ್ನು ನಿಯಂತ್ರಿಸುವುದ ಇತರೆ ತಂಡಗಳ ಬೌಲರ್​ಗಳಿಗೆ ತುಸು ಕಷ್ಟವಾಗಲಿದೆ ಎನ್ನಬಹುದು.ಇದನ್ನೂ ಓದಿ: ಟೀಂ ಇಂಡಿಯಾದ ಈ ಆಟಗಾರ ತಂಡದಲ್ಲಿದ್ದರೆ, 2023ರ ವಿಶ್ವಕಪ್​ನಲ್ಲಿ ಆಡುವೆ ಎಂದ ಎಬಿಡಿ

ಇದನ್ನೂ ಓದಿ: ಮಾನವೀಯತೆ ಮರೆದ ವಿಶ್ವದ ಶ್ರೇಷ್ಠ ಆಟಗಾರ..!

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ

First published:May 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ