India vs South Africa: ಮೈದಾನಕ್ಕೆ ನುಗ್ಗಿ ಕಾಲು ಹಿಡಿದ ಅಭಿಮಾನಿ; ನೆಲಕ್ಕುರುಳಿದ ರೋಹಿತ್ ಶರ್ಮ!

Rohit Sharma: ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ಭಾರತ ಕ್ರಿಕೆಟ್​ ತಂಡದ ಅಭಿಮಾನಿಯೊಬ್ಬ ಇದ್ದಕ್ಕಿದ್ದಂತೆ ಮೈದಾನಕ್ಕಿಳಿದು ಕ್ರಿಕೆಟಿಗ ರೋಹಿತ್ ಶರ್ಮಾ ಅವರ ಕಾಲಿಗೆ ಬಿದ್ದಿದ್ದಾನೆ. ಅಚಾನಕ್ಕಾಗಿ ವ್ಯಕ್ತಿಯೋರ್ವ ಮೈದಾನದೊಳಗೆ ಓಡಿಬಂದು ಕಾಲು ಹಿಡಿದುಕೊಂಡಿದ್ದರಿಂದ ವಿಚಲಿತರಾದ ಹಿಟ್​ಮ್ಯಾನ್ ರೋಹಿತ್ ಶರ್ಮ ಮುಗ್ಗರಿಸಿ ಕೆಳಗೆ ಬಿದ್ದಿದ್ದಾರೆ.

Sushma Chakre | news18-kannada
Updated:October 12, 2019, 6:34 PM IST
India vs South Africa: ಮೈದಾನಕ್ಕೆ ನುಗ್ಗಿ ಕಾಲು ಹಿಡಿದ ಅಭಿಮಾನಿ; ನೆಲಕ್ಕುರುಳಿದ ರೋಹಿತ್ ಶರ್ಮ!
ಕಾಲು ಹಿಡಿದ ಅಭಿಮಾನಿಯಿಂದ ಆಯತಪ್ಪಿದ ರೋಹಿತ್ ಶರ್ಮ
Sushma Chakre | news18-kannada
Updated: October 12, 2019, 6:34 PM IST
ನಮ್ಮ ದೇಶದಲ್ಲಿ ಕ್ರಿಕೆಟ್​ ಆಟಗಾರರ ಬಗ್ಗೆ ಇರುವ ಕ್ರೇಜ್ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಸಿನಿಮಾ ತಾರೆಗಳಿಗಿರುವುದಕ್ಕಿಂತ ಹೆಚ್ಚು ಅಭಿಮಾನಿಗಳು ಕ್ರೀಡಾಪಟುಗಳಿಗಿದ್ದಾರೆ ಎಂದರೂ ಅತಿಶಯೋಕ್ತಿಯೇನಲ್ಲ. ಈ ಮೊದಲು ಅನೇಕ ಬಾರಿ ಅಭಿಮಾನಿಗಳು ತಮ್ಮ ಮೆಚ್ಚಿನ ಆಟಗಾರರನ್ನು ಹತ್ತಿರದಿಂದ ನೋಡಲು, ಒಂದೇ ಒಂದು ಫೋಟೋ ಕ್ಲಿಕ್ಕಿಸಿಕೊಳ್ಳಲು, ಒಂದು ಆಟೋಗ್ರಾಫ್​ ಪಡೆಯಲು, ಅವರನ್ನು ಸ್ಪರ್ಶಿಸಲು ಏನು ಬೇಕಾದರೂ ಮಾಡುವವರಿದ್ದಾರೆ. ಇಂದು ಕೂಡ ಆಗಿದ್ದು ಇದೇ.

ಇಂದು ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟೆಸ್ಟ್ ಪಂದ್ಯದ ವೇಳೆ ಭಾರತ ಕ್ರಿಕೆಟ್​ ತಂಡದ ಅಭಿಮಾನಿಯೊಬ್ಬ ಇದ್ದಕ್ಕಿದ್ದಂತೆ ಮೈದಾನಕ್ಕಿಳಿದು ಕ್ರಿಕೆಟಿಗ ರೋಹಿತ್ ಶರ್ಮಾ ಅವರ ಕಾಲಿಗೆ ಬಿದ್ದಿದ್ದಾನೆ. ಅಚಾನಕ್ಕಾಗಿ ವ್ಯಕ್ತಿಯೋರ್ವ ಮೈದಾನದೊಳಗೆ ಓಡಿಬಂದು ಕಾಲು ಹಿಡಿದುಕೊಂಡಿದ್ದರಿಂದ ವಿಚಲಿತರಾದ ಹಿಟ್​ಮ್ಯಾನ್ ರೋಹಿತ್ ಶರ್ಮ ಮುಗ್ಗರಿಸಿ ಕೆಳಗೆ ಬಿದ್ದಿದ್ದಾರೆ. ಅಭಿಮಾನಿ ಕಾಲು ಹಿಡಿದುಕೊಂಡಿದ್ದರಿಂದ ಆಯತಪ್ಪಿ ಆತನ ಮೈಮೇಲೆ ಬಿದ್ದ ರೋಹಿತ್ ಶರ್ಮ ಜೊತೆಗಿದ್ದ ಕೆ.ಎಲ್​. ರಾಹುಲ್ ಸಹಾಯದಿಂದ ಮೇಲಕ್ಕೆ ಎದ್ದಿದ್ದಾರೆ.

ಈ ಹಿಂದೆ ಟೀಂ ಇಂಡಿಯಾ ಟೆಸ್ಟ್​ಮ್ಯಾಚ್ ಹಾಗೂ ಐಪಿಎಲ್ ಪಂದ್ಯಗಳ ವೇಳೆ ಟೀಂ ಇಂಡಿಯಾ ಆಟಗಾರರಾದ ಧೋನಿ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ ಕಾಲಿಗೆ ಅಭಿಮಾನಿಗಳು ನಮಸ್ಕರಿಸಿದ್ದ ಘಟನೆಗಳು ನಡೆದಿತ್ತು. ಇದೀಗ ಹಿಟ್​ಮ್ಯಾನ್ ಎಂದೇ ಖ್ಯಾತರಾಗಿರುವ ರೋಹಿತ್ ಶರ್ಮ ಕಾಲಿಗೆ ಅಭಿಮಾನಿಯೊಬ್ಬರು ನಮಸ್ಕಾರ ಮಾಡಿ ಕಾಲಿಗೆ ಮುತ್ತಿಕ್ಕಿರುವ ಫೋಟೋ, ವಿಡಿಯೋಗಳು ವೈರಲ್ ಆಗಿವೆ.

ರೋಹಿತ್ ಶರ್ಮ ಕಾಲಿಗೆ ನಮಸ್ಕರಿಸುತ್ತಿರುವ ಅಭಿಮಾನಿ


ಈ ಘಟನೆಯನ್ನು ನೋಡಿದ ಭದ್ರತಾ ಸಿಬ್ಬಂದಿ ಕೂಡಲೇ ಮೈದಾನಕ್ಕೆ ಓಡಿಬಂದು ಆ ಅಭಿಮಾನಿಯನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಕಾಮೆಂಟರಿ ಮಾಡುತ್ತಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಮೈದಾನದ ಸುತ್ತಲೂ ಇರುವ ಭದ್ರತಾ ಸಿಬ್ಬಂದಿ ಆಟ ನೋಡಲು ಬಂದ ಪ್ರೇಕ್ಷಕರತ್ತ ಗಮನಹರಿಸುವುದನ್ನು ಬಿಟ್ಟು ಕ್ರಿಕೆಟ್ ಪಂದ್ಯವನ್ನು ನೋಡುತ್ತಾ ನಿಲ್ಲುತ್ತಾರೆ. ಇದರಿಂದಾಗಿ ಈ ರೀತಿಯ ಘಟನೆಗಳು ನಡೆಯುತ್ತಿವೆ. ಪಂದ್ಯ ನಡೆಯುತ್ತಿರುವಾಗ ಯಾರೂ ಮೈದಾನ ಪ್ರವೇಶಿದಂತೆ ನೋಡಿಕೊಳ್ಳುವುದಕ್ಕೆ ನಿಮ್ಮನ್ನು ನೇಮಿಸಲಾಗಿದೆ. ಆದರೆ, ನಿಮ್ಮ ಕೆಲಸವನ್ನು ನೀವು ಸರಿಯಾಗಿ ನಿರ್ವಹಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮೈದಾನಕ್ಕೆ ನುಗ್ಗಿದ ಅಭಿಮಾನಿಯನ್ನು ಎಳೆದುಕೊಂಡು ಹೋಗುತ್ತಿರುವ ಭದ್ರತಾ ಸಿಬ್ಬಂದಿ


ಮೈದಾನದ ಸುತ್ತ ಸಾಕಷ್ಟು ಬ್ಯಾರಿಕೇಡ್​ಗಳಿದ್ದರೂ ಅದನ್ನು ದಾಟಿಕೊಂಡು ಪ್ರೇಕ್ಷಕನೊಬ್ಬ ಮೈದಾನಕ್ಕೆ ಬರುತ್ತಾನೆಂದರೆ ಸೆಕ್ಯುರಿಟಿಗಳು ಏನು ಮಾಡುತ್ತಿದ್ದಾರೆ? ಎಂಬುದನ್ನು ಗಮನಿಸಬೇಕಾಗುತ್ತದೆ. ಇನ್ನುಮುಂದೆ ಸೆಕ್ಯುರಿಟಗಳ ಮೇಲೆ ನಿಗಾ ಇಡಲು ಅಲ್ಲಲ್ಲಿ ಸಿಸಿಟಿವಿ ಹಾಕಿಸುವುದು ಉತ್ತಮ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದ ಟೀಂ ಇಂಡಿಯಾ ಪಂದ್ಯದಲ್ಲೂ ಇದೇ ರೀತಿಯಾಗಿತ್ತು. ಇದ್ದಕ್ಕಿದ್ದಂತೆ ಮೈದಾನಕ್ಕೆ ಬಂದಿದ್ದ ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿಗೆ ಶೇಕ್ ಹ್ಯಾಂಡ್ ಮಾಡಿ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಪ್ರಯತ್ನಿಸಿದ್ದ. ನಂತರ ಆತನನ್ನು ಮೈದಾನದಿಂದ ಹೊರಗೆ ಹಾಕಲಾಗಿತ್ತು.
First published:October 12, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...