Caribbean Premier League 2021| ಡೊಮಿನಿಕ್ ಡ್ರೇಕ್ಸ್ ಆರ್ಭಟ; CPL ನಲ್ಲಿ ಪೇಟ್ರಿಯಾಟ್ಸ್ಗೆ ಚೊಚ್ಚಲ ಪಟ್ಟ
ಯೂನಿವರ್ಸ್ ಬಾಸ್ ಕ್ರಿಸ್ ಗೇಲ್, ಎವಿನ್ ಲೂಯಿಸ್ ಮತ್ತು ಡ್ವೇಯ್ನ್ ಬ್ರಾವೊ ಸೇರಿದಂತೆ ಹಲವು ಅನುಭವಿ ಮತ್ತು ಸ್ಫೋಟಕ ಬ್ಯಾಟ್ಸ್ಮನ್ಗಳ ಬಲ ಈ ತಂಡಕ್ಕೆ ಇತ್ತು. ಆದರೂ, ಫೈನಲ್ನಲ್ಲಿ ಈ ಯಾರ ಆಟವೂ ಕೈ ಹಿಡಿಯಲಿಲ್ಲ. ಬದಲಾಗಿ ಸೋಲಿನ ಅಂಚಿಗೆ ಸರಿದಿದ್ದ ಪಂದ್ಯವನ್ನು ಗೆಲ್ಲಿಸಿದ್ದು ಆತನೊಬ್ಬನ ಆಟ.
ಕೊರೋನಾ ಕಾಟನ ನಡುವೆಯೂ ಕಳೆದ ಒಂದು ತಿಂಗಳಿನಿಂದ ಕಳೆಗಟ್ಟಿದ್ದ ಕೆರಿಬಿಯನ್ ಪ್ರೀಮಿಯರ್ ಲೀಗ್ (CPL-2021) ಕೊನೆಗೂ ಅಂತ್ಯಗೊಂಡಿದೆ. ಆಲ್ರೌಂಡರ್ ಡೊಮಿನಿಕ್ ಡ್ರೇಕ್ಸ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸೇಂಟ್ ಕಿಂಗ್ಸ್ ತಂಡದ ವಿರುದ್ಧ ಗೆಲುವು ಸಾಧಿಸುವ ಮೂಲಕ ಡ್ವೇಯ್ನ್ ಬ್ರಾವೋ (Dwayne Bravo) ನೇತೃತ್ವದ ವೇವಿಸ್ ಪೇಟ್ರಿಯಾಟ್ಸ್ ತಂಡ ಚೊಚ್ಚಲ ಬಾರಿಗೆ ಸಿಪಿಎಲ್-2021 ಪಟ್ಟಕ್ಕೇರಿದೆ. ಇಡೀ ಟೂರ್ನಿಯಲ್ಲಿ ನೇವಿಸ್ ಪೇಟ್ರಿಯಾಟ್ಸ್ ಸಾಕಷ್ಟು ಬಲಿಷ್ಠ ತಂಡವನ್ನು ಹೊಂದಿತ್ತು. ಮೊದಲ 6 ಪಂದ್ಯಗಳಲ್ಲಿ ಸತತ ಗೆಲುವನ್ನು ಕಾಣುವ ಮೂಲಕ ಪ್ರಶಸ್ತಿಯ ಭರವಸೆ ನೀಡಿತ್ತು. ಯೂನಿವರ್ಸ್ ಬಾಸ್ ಕ್ರಿಸ್ ಗೇಲ್ (chris gayle), ಎವಿನ್ ಲೂಯಿಸ್ (evin lewis) ಮತ್ತು ಡ್ವೇಯ್ನ್ ಬ್ರಾವೊ ಸೇರಿದಂತೆ ಹಲವು ಅನುಭವಿ ಮತ್ತು ಸ್ಫೋಟಕ ಬ್ಯಾಟ್ಸ್ಮನ್ಗಳ ಬಲ ಈ ತಂಡಕ್ಕೆ ಇತ್ತು. ಆದರೂ, ಫೈನಲ್ನಲ್ಲಿ ಈ ಯಾರ ಆಟವೂ ಕೈ ಹಿಡಿಯಲಿಲ್ಲ. ಬದಲಾಗಿ ಸೋಲಿನ ಅಂಚಿಗೆ ಸರಿದಿದ್ದ ಪಂದ್ಯವನ್ನು ಗೆಲ್ಲಿಸಿದ್ದು ಆತನೊಬ್ಬನ ಆಟ.
ಡ್ರೇಕ್ಸ್ ಆರ್ಭಟಕ್ಕೆ ತಬ್ಬಿಬ್ಬಾದ ಮಾಜಿ ಚಾಂಪಿಯನ್:
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಡಿದ್ದ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 160 ರನ್ಗಳ ಗೌರವಾರ್ಹ ಮೊತ್ತವನ್ನೇ ಪೇರಿಸಿತ್ತು. ರಕೀಮ್ ಕಾರ್ನ್ವಾಲ್ (43) ಮತ್ತು ಆಲ್ರೌಂಡರ್ ರೋಸ್ಟನ್ ಚೇಸ್ (43) ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿದ್ದರೆ, ಸ್ಲಾಗ್ ಓವರ್ಗಳಲ್ಲಿ ಹ್ಯಾಟ್ರಿಕ್ ಸಿಕ್ಸ್ ಬಾರಿಸುವ ಮೂಲಕ ಕೀಮೋ ಪೌಲ್ ಕೇವಲ 21 ಎಸೆತಗಳಲ್ಲಿ 39 ರನ್ ಬಾರಿಸುವ ಮೂಲಕ ಕಿಂಗ್ಸ್ 150ರ ಗಡಿ ದಾಟುವಂತೆ ಮಾಡಿದ್ದರು. ಆದರೂ, ಪೇಟ್ರಿಯಾಟ್ಸ್ ಪಾಲಿಗೆ ಇದು ಸುಲಭದ ಗುರಿ ಎಂದೇ ಊಹಿಸಲಾಗಿತ್ತು. ಆದರೆ, ಕಿಂಗ್ಸ್ ಬೌಲರ್ಗಳು ನಂತರ ಎಲ್ಲವನ್ನೂ ಬದಲಿಸಿದ್ದರು.
ಸಾಧರಣ ಮೊತ್ತವನ್ನ ಬೆನ್ನಟ್ಟಲು ಕ್ರಿಸ್ ಗೇಲ್ ಮತ್ತು ಇವೆನ್ ಲೂಯೀಸ್ ಆರಂಭಿಕರಾಗಿ ಕಣಕ್ಕಿಳಿದಾಗ ಇಬ್ಬರೂ ಸ್ಪೋಟಕ ಬ್ಯಾಟಿಂಗ್ ನಡೆಸಲಿದ್ದಾರೆ ಎಂದೇ ನಂಬಲಾಗಿತ್ತು. ಆದರೆ, ಮೊದಲ ಓವರ್ನಲ್ಲೇ ಕಿಂಗ್ಸ್ ಬೌಲರ್ ರೋಸ್ಟನ್ ಚೇಸ್ ಕ್ರಿಸ್ ಗೇಲ್ ಅವರನ್ನು ಶೂನ್ಯಕ್ಕೆ ಔಟ್ ಮಾಡಿದ್ದರೆ, ಇವೆನ್ ಲೂಯಿಸ್ ಕೇವಲ 6ಗಳಿಗೆ ವಾಹಬ್ ರಿಯಾಸ್ಗೆ ವಿಕೆಟ್ ಒಪ್ಪಿಸಿದ್ದರು.
ಮೂರನೇ ವಿಕೆಟ್ಗೆ ಜೊತೆಯಾದ ಜೋಸ್ವಾ ಡಸಿಲ್ವ (37) ಮತ್ತು ಶೆರ್ಫೇನ್ ರುದರ್ಫೋರ್ಡ್ (25) ಅರ್ಧ ಶತಕದ ಜೊತೆ ನೀಡಿದ್ದರೂ ಸಹ ಇಬ್ಬರೂ ಒಬ್ಬರ ಬೆನ್ನಿಗೆ ಒಬ್ಬರು ಔಟ್ ಆಗುವ ಮೂಲಕ ನಿರಾಸೆ ಅನುಭವಿಸಿದ್ದರು. ಒಂದು ಹಂತದಲ್ಲಿ ಪೇಟ್ರಿಯಾಟ್ಸ್ ತಂಡ 13.5 ಓವರ್ಗಳಿಗೆ ಕೇವಲ 95 ರನ್ ಗಳಿಸಿ ಪ್ರಮುಖ 5 ವಿಕೆಟ್ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು.
ಆದರೆ, ಈ ವೇಳೆ ಅಂಗಳಕ್ಕಿಳಿದ ಡೊಮಿನಿಕ್ ಡ್ರೇಕ್ಸ್ ಕೆಚ್ಚೆದೆಯ ಹೋರಾಟ ತೋರಿದ್ದರು. ಕೇವಲ 6 ಓವರ್ಗಳಿಗೆ ಗೆಲ್ಲಲು 65 ರನ್ಗಳ ಗುರಿ ಇದ್ದಾಗ ಸ್ಪೋಟಕದ ಬ್ಯಾಟಿಂಗ್ ಪ್ರದರ್ಶಿಸಿದರು. ಅಂಗಳದ ಮೂಲೆ ಮೂಲೆಗೂ ಸಿಕ್ಸ್ಗಳ ಸುರಿಮಳೆ ಗೈದರು. ಅವರ ಬ್ಯಾಟ್ನಿಂದ ಒಟ್ಟು 3 ಬೌಂಡರಿ ಮತ್ತು 3 ಸಿಕ್ಸರ್ ಸಿಡಿದಿತ್ತು. ಕೇವಲ 24 ಎಸೆತವನ್ನು ಎದುರಿಸಿದ್ದ ಡ್ರೇಕ್ಸ್ 48 ರನ್ ಗಳಿಸುವ ಮೂಲಕ ಪೇಟ್ರಯಾಟ್ಸ್ಗೆ ಚೊಚ್ಚಲ ಪ್ರಶಸ್ತಿಯನ್ನು ತಂದು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ