2020-21ನೇ ಸಾಲಿನ ದೇಶೀಯ ಕ್ರಿಕೆಟ್ ಸೀಸನ್ ಶುರು ಮಾಡಲು ಬಿಸಿಸಿಐ ನಿರ್ಧರಿಸಿದೆ. ಅದರಂತೆ ಮುಂದಿನ ವರ್ಷ ಜನವರಿ 10 ರಿಂದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಮೂಲಕ ಟೂರ್ನಿಗೆ ಚಾಲನೆ ದೊರೆಯಲಿದೆ. ಆರು ರಾಜ್ಯಗಳಲ್ಲಿ ಟೂರ್ನಿ ನಡೆಸಲು ತೀರ್ಮಾನಿಸಲಾಗಿದ್ದು, ಜನವರಿ 10 ರಿಂದ 31ರವರೆಗೆ ದೇಶೀಯ ಟಿ20 ಪಂದ್ಯಾವಳಿ ನಡೆಯಲಿದೆ.
ಇನ್ನು ಕೊರೋನಾ ಹಿನ್ನೆಲೆಯಲ್ಲಿ ದೇಶೀಯ ಟೂರ್ನಿಯನ್ನು ಸಹ ಬಯೋ ಸೆಕ್ಯೂರ್ ಬಬಲ್ನಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಈ ಬಗ್ಗೆ ಈಗಾಗಲೇ ಎಲ್ಲಾ ರಾಜ್ಯಗಳ ಕ್ರಿಕೆಟ್ ಮಂಡಳಿಗಳಿಗೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಈಮೇಲ್ ರವಾನಿಸಿದ್ದಾರೆ.
ಈ ಸಂದೇಶದಲ್ಲಿ ಪ್ರತಿ ರಾಜ್ಯಗಳ ತಂಡಗಳು ಜನವರಿ 2 ರಂದು ಬಿಸಿಸಿಐ ನಿಯೋಜಿತ ಸ್ಥಳಗಳಲ್ಲಿ ಒಗ್ಗೂಡಬೇಕಾಗಿ ತಿಳಿಸಿದ್ದು, ಆ ಬಳಿಕ ಯಾರನ್ನೂ ಭೇಟಿಯಾಗಲು ಅವಕಾಶವಿರುವುದಿಲ್ಲ ಎನ್ನಲಾಗಿದೆ. ಅಲ್ಲದೆ ಒಂದು ವಾರಗಳ ಬಳಿಕ, ಅಂದರೆ ಜನವರಿ 10 ರಂದು ಭಾನುವಾರ ಟೂರ್ನಿಗೆ ಚಾಲನೆ ದೊರೆಯಲಿದ್ದು ಆಟಗಾರರು ಜನವರಿ 31ರವರೆಗೆ ಬಯೋ ಬಬಲ್ನಲ್ಲಿರಬೇಕಾಗಿದೆ ಎಂದು ತಿಳಿಸಲಾಗಿದೆ.
ಸದ್ಯ ಮುಷ್ತಾಕ್ ಅಲಿ ಟ್ರೋಫಿಗೆ ಮಾತ್ರ ದಿನಾಂಕಗಳನ್ನು ನಿಗದಿ ಮಾಡಲಾಗಿದ್ದು, ಆ ಬಳಿಕವಷ್ಟೇ ವಿಜಯ್ ಹಜಾರೆ ಟ್ರೋಫಿಯ ಬಗ್ಗೆ ನಿರ್ಧರಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. ಒಟ್ಟಿನಲ್ಲಿ ಕೊರೋನಾ ಕಾರಣದಿಂದ ಸ್ಥಗಿತಗೊಂಡಿದ್ದ ಕ್ರಿಕೆಟ್ನ್ನು ಪುನರಾರಂಭಿಸಲು ದೇಶೀಯ ಕ್ರಿಕೆಟ್ ಆಟಗಾರರು ಉತ್ಸುಕರಾಗಿದ್ದು, ಈ ಮೂಲಕ ಮುಂದಿನ ಐಪಿಎಲ್ಗಾಗಿ ಫ್ರಾಂಚೈಸಿಗಳ ಗಮನ ಸೆಳೆಯುವ ವಿಶ್ವಾಸದಲ್ಲಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ