ಕ್ರಿಕೆಟ್ (Cricket) ಮತ್ತು ಬಾಲಿವುಡ್ (Bollywood) ಸೆಲೆಬ್ರಿಟಿಗಳು ಆನಂದಿಸುವಂತಹ ಐಷಾರಾಮಿ (Luxury) ಜೀವನಶೈಲಿಯನ್ನು ಬಹುಶಃ ಬೇರೆ ಯಾವ ಸೆಲೆಬ್ರಿಟಿಗಳು ಆನಂದಿಸಿರಲಿಕ್ಕಿಲ್ಲ. ಅಷ್ಟರ ಮಟ್ಟಿಗೆ ಈ ಕ್ರಿಕೆಟ್ ಆಟಗಾರರು ಮತ್ತು ಬಾಲಿವುಡ್ನ ನಟ ಮತ್ತು ನಟಿಯರು ತಮ್ಮ ಕೆಲಸದ ನಂತರ ಪಾರ್ಟಿಗಳು, ತಮ್ಮ ಸಂಗಾತಿಗಳ ಜೊತೆಯಲ್ಲಿ ಸುತ್ತಾಡುವುದು ಮತ್ತು ಕಾರ್, ಬೈಕ್ ಅಂತ ನೂರೆಂಟು ಕ್ರೇಜ್ಗಳು ಇವರಿಗಿರುತ್ತವೆ. ಬಹುತೇಕ ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಕ್ಯಾಪ್ಟನ್ ಕೂಲ್ ಅಂತಾನೆ ಖ್ಯಾತಿ ಪಡೆದಿರುವ ಭಾರತ (India) ಕ್ರಿಕೆಟ್ ಕಂಡ ಅದ್ಭುತ ನಾಯಕರುಗಳಲ್ಲಿ ಒಬ್ಬರಾದ ಎಂ ಎಸ್ ಧೋನಿ (MS Dhoni) ಅವರ ಬಗ್ಗೆ ಇಲ್ಲಿ ನಾವು ನಿಮಗೊಂದು ಆಸಕ್ತಿದಾಯಕವಾದ ಸಂಗತಿಯನ್ನು ಹೇಳುತ್ತೇವೆ ಕೇಳಿ.
ಕ್ರಿಕೆಟ್ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಧೋನಿ ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಅವಧಿಯಲ್ಲಿ ಐಸಿಸಿ ಆಯೋಜಿಸುವ ಎಲ್ಲಾ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕರಾಗಿದ್ದಾರೆ. ಧೋನಿ ಐಪಿಎಲ್ನಲ್ಲಿಯೂ ಅದ್ಭುತ ದಾಖಲೆಯನ್ನು ಹೊಂದಿದ್ದಾರೆ ಮತ್ತು ಅವರು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡಕ್ಕೆ ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಬಾರಿ ಐಪಿಎಲ್ ಪ್ರಶಸ್ತಿಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ. ಅವರ ನಾಯಕತ್ವದಲ್ಲಿ ಸಿಎಸ್‌ಕೆ ಆಡಿದ ಮೊದಲ 10 ಋತುಗಳಲ್ಲಿ ಎರಡನೇ ಸುತ್ತಿಗೆ ಅರ್ಹತೆ ಪಡೆಯಿತು.
ತಂಡದ ಆಟಗಾರರನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರಂತೆ
ಧೋನಿ ತಮ್ಮ ತಂಡದ ಆಟಗಾರರನ್ನು ಸಂಪೂರ್ಣವಾಗಿ ಬೆಂಬಲಿಸಲು ಇಷ್ಟಪಡುತ್ತಾರೆ ಮತ್ತು ಯುವಕರಲ್ಲಿ ಆ ಪ್ರತಿಭೆ ಇದ್ದರೆ ಅವರಿಗೆ ಅವಕಾಶವನ್ನು ಕೊಡಿಸಲು ಅವರು ಕೈಲಾದಷ್ಟು ಪ್ರಯತ್ನ ಪಡುತ್ತಾರೆ. ಭವಿಷ್ಯದ ಐಸಿಸಿ ಹಾಲ್ ಆಫ್ ಫೇಮ್ ಆಟಗಾರ ಯುವ ಆಟಗಾರರೊಂದಿಗಿನ ಅಡೆತಡೆಗಳನ್ನು ಮುರಿಯಲು ಮತ್ತು ಅವರನ್ನು ಒಂದು ರೀತಿಯಲ್ಲಿ ಆರಾಮದಾಯಕವಾಗಿಸಲು ತಮ್ಮದೆ ಆದ ಒಂದು ಮಾರ್ಗವನ್ನು ಹೊಂದಿದ್ದರು.
ಧೋನಿ ರೂಮ್ನಲ್ಲಿ ಹುಕ್ಕಾ ಸೆಟ್ ಅಪ್
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರೈಸಿಂಗ್ ಪುಣೆ ಸೂಪರ್ ಜೇಂಟ್ಸ್ನಲ್ಲಿ ಧೋನಿ ನಾಯಕತ್ವದಲ್ಲಿ ಆಡಿದ ಜಾರ್ಜ್ ಬೈಲಿ ಯುವ ಆಟಗಾರರಿಗೆ ಧೋನಿ ಅವರ ಕೋಣೆಯ ಬಾಗಿಲು ಸದಾ ತೆರೆದಿರುತ್ತಿತ್ತು ಎಂದು ಬಹಿರಂಗಪಡಿಸಿದ್ದಾರೆ.
Cricket.com.au ಜೊತೆ ಮಾತನಾಡಿದ ಆಸ್ಟ್ರೇಲಿಯಾದ ಮಾಜಿ ನಾಯಕ ಧೋನಿ ತಮ್ಮ ಕೋಣೆಯಲ್ಲಿ ಹುಕ್ಕಾ ಅಥವಾ ಶೀಶಾದ ಸೆಟ್ ಅಪ್ಅನ್ನು ಸ್ಥಾಪಿಸಿಕೊಂಡಿದ್ದರು ಎಂದು ಬಹಿರಂಗಪಡಿಸಿದರು.
ಹುಕ್ಕಾ ಸೇದುವುದು ಧೋನಿಗೆ ಇಷ್ಟ
"ಅವರಿಗೆ ಸ್ವಲ್ಪ ಮಟ್ಟಿಗೆ ಶೀಶಾ ಅಥವಾ ಹುಕ್ಕಾ ಸೇದುವುದು ಇಷ್ಟವಾಗುತ್ತಿತ್ತು. ಆದ್ದರಿಂದ, ಅವರು ಆಗಾಗ್ಗೆ ಅದನ್ನು ತಮ್ಮ ಕೋಣೆಯಲ್ಲಿ ಸೆಟ್ ಅಪ್ ಮಾಡಿಕೊಳ್ಳುತ್ತಿದ್ದರು ಮತ್ತು ಯಾವುದೇ ಆಟಗಾರರಿಗೆ ಅಲ್ಲಿಗೆ ಹೋಗಲು ಅವರು ತಮ್ಮ ಕೋಣೆಯ ಬಾಗಿಲನ್ನು ಸದಾ ತೆರೆದಿಡುತ್ತಿದ್ದರು" ಎಂದು ತಿಳಿಸಿದ್ದಾರೆ.
ನೀವು ಅವರ ಕೋಣೆಗೆ ಹೋದರೆ, ಅಲ್ಲಿ ಸಾಕಷ್ಟು ಯುವ ಆಟಗಾರರನ್ನು ನೋಡಬಹುದಾಗಿತ್ತು. ಭಾರತ ಅಥವಾ ಇತರ ಕ್ರಿಕೆಟ್ ತಂಡಗಳಲ್ಲಿ ಇದು ಹಿರಿಯ ಆಟಗಾರರು ಮತ್ತು ಕಿರಿಯ ಆಟಗಾರರು ಎಂಬ ಭಾವನೆ ಇರುತ್ತದೆ. ಆದರೆ ಧೋನಿ ಅದನ್ನು ಮುರಿದಿದ್ದರು " ಎಂದು ಬೈಲಿ Cricket.com.au ಗೆ ತಿಳಿಸಿದ್ದಾರೆ.
ತಡರಾತ್ರಿಯವರೆಗೂ ಹರಟೆ ಹೊಡೆಯುತಿದ್ರಂತೆ ಮಾಹಿ
"ನೀವು ತಡರಾತ್ರಿಯವರೆಗೂ ಅವರ ಕೋಣೆಯಲ್ಲಿ ಆಟದ ಬಗ್ಗೆ ಅಥವಾ ಆಟದ ವಿವಿಧ ಅಂಶಗಳ ಬಗ್ಗೆ ಅಥವಾ ವಿಭಿನ್ನ ಜನರೊಂದಿಗೆ ಹರಟೆ ಹೊಡೆಯುತ್ತಿರುವುದನ್ನು ನೋಡಬಹುದಿತ್ತು. ಮತ್ತು ಆಟಗಾರರಲ್ಲಿ ಆ ಹಿರಿಯರು ಮತ್ತು ಕಿರಿಯರು ಅನ್ನೋ ಮನಸ್ಥಿತಿಯನ್ನು ಮುರಿಯಲು ಇದು ಉತ್ತಮ ಮಾರ್ಗವಾಗಿತ್ತು" ಎಂದು ಜಾರ್ಜ್ ಬೈಲಿ ಹೇಳಿದ್ದಾರೆ. ಬೈಲಿ ಒಂದು ಸೀಸನ್ನಲ್ಲಿ ಸಿಎಸ್‌ಕೆ ಪರ ಮತ್ತು ಒಂದು ಸೀಸನ್ನಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ಪರ ಆಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ