ಚೆನ್ನೈ(ಏ. 14): ಈ ಬಾರಿಯ ಐಪಿಎಲ್ ಸೀಸನ್ನ ಟೂರ್ನಿ ರೋಚಕವಾಗಿರುವುದಕ್ಕೆ ಮೊದಲ ಐದು ಪಂದ್ಯಗಳೇ ನಿದರ್ಶನವಾಗಿವೆ. ಡಿಫೆಂಡಿಂಗ್ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡವನ್ನ ಮೊದಲ ಪಂದ್ಯದಲ್ಲಿ ಸೋಲಿಸಿ ಗಮನ ಸೆಳೆದಿರುವ ಆರ್ಸಿಬಿ ತಂಡ ಇದೀಗ ತನ್ನ ಎರಡನೇ ಪಂದ್ಯದಲ್ಲಿ ಹೈದರಾಬಾದ್ ಸನ್ ರೈಸರ್ಸ್ ತಂಡದ ಸವಾಲು ಎದುರಿಸಲಿದೆ. ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಗೆಲುವಿನ ಹೊಸ್ತಿಲಿಗೆ ಹೋಗಿ ಎಡವಿದ ಹೈದರಾಬಾದ್ ತಂಡ ಈಗ ಗಾಯಗೊಂಡ ಹುಲಿಯಂತಾಗಿದೆ. ಹೊಸ ಹುರುಪಿನಲ್ಲಿರುವ ಆರ್ಸಿಬಿ ಮತ್ತು ಗಾಯಗೊಂಡ ಹುಲಿಯಂತಿರುವ ಎಸ್ಆರ್ಎಚ್ ನಡುವೆ ಇಂದು ಚೆನ್ನೈನಲ್ಲಿ ನಡೆಯಿರುವ ಐಪಿಎಲ್ನ ಆರನೇ ಪಂದ್ಯ ರೋಚಕವಾಗಿರುವುದರಲ್ಲಿ ಸಂಶಯವೇ ಇಲ್ಲ.
ಈ ಪಂದ್ಯದಲ್ಲಿ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳ ಕಣ್ಣು ಇಬ್ಬರು ಕನ್ನಡಿಗರ ಮೇಲೆ ನೆಟ್ಟಿರಲಿದೆ. ಸನ್ರೈಸರ್ಸ್ ಹೈದರಾಬಾದ್ ತಂಡದ ಮನೀಶ್ ಪಾಂಡೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಅಜೇಯ 61 ರನ್ ಗಳಿಸಿದ್ದರು. ಕೊನೆಯವರೆಗೂ ಕ್ರೀಸ್ನಲ್ಲಿದ್ದ ಅವರು ತಂಡವನ್ನು ಗೆಲುವಿನ ದಡ ಮುಟ್ಟಿಸಲು ವಿಫಲರಾಗಿ ನಿರಾಶೆ ಮೂಡಿಸಿದ್ದರು. ಆ ನಿರಾಸೆ ಹೋಗಲಾಡಿಸುವ ಅವಕಾಶ ಅವರಿಗೆ ಸಿಕ್ಕಿದೆ. ಇನ್ನು, ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಮೊದಲ ಪಂದ್ಯದಲ್ಲಿ ಸಿಡಿಯಲಿಲ್ಲ. ಅವರಿಂದ ಭರ್ಜರಿ ಆಟ ಸಿಕ್ಕರೆ ಎಸ್ಆರ್ಎಚ್ ಬ್ಯಾಟಿಂಗ್ಗೆ ಆನೆಬಲ ಬಂದಂತಾಗುತ್ತದೆ. ಭುವನೇಶ್ವರ್ ಕುಮಾರ್, ಟಿ ನಟರಾಜನ್, ರಷೀದ್ ಖಾನ್, ಮೊಹಮ್ಮದ್ ನಬಿ, ಸಂದೀಪ್ ಶರ್ಮಾ ಅವರಿರುವ ಹೈದರಾಬಾದ್ ಬೌಲಿಂಗ್ ಪಡೆ ಈ ಐಪಿಎಲ್ನಲ್ಲಿ ಅತ್ಯಂತ ಪ್ರಬಲ ಬೌಲಿಂಗ್ ಪಡಗಳಲ್ಲಿ ಒಂದೆನೆಸಿದೆ.
ಇದನ್ನೂ ಓದಿ: IPL 2021, KKR vs MI: ಮುಂಬೈ ಬೌಲರುಗಳ ಪರಾಕ್ರಮ: ಕೆಕೆಆರ್ಗೆ ಸೋಲು..!
ಆರ್ಸಿಬಿ ತಂಡದಲ್ಲಿ ಇವತ್ತಿನ ಪಂದ್ಯಕ್ಕೆ ಒಂದು ಬದಲಾವಣೆ ಆಗುವ ನಿರೀಕ್ಷೆ ಇದೆ. ಕೋವಿಡ್ ಕಾರಣಕ್ಕೆ ಮೊದಲ ಪಂದ್ಯದಲ್ಲಿ ಆಡಲು ಸಾಧ್ಯವಾಗದಿದ್ದ ದೇವದತ್ ಪಡಿಕ್ಕಲ್ ಈ ಎರಡನೇ ಪಂದ್ಯದಲ್ಲಿ ತಂಡಕ್ಕೆ ಬಲ ನೀಡುವ ಸಾಧ್ಯತೆ ಇದೆ. ಆದರೆ, ಯಾರ ಬದಲು ಆಡುತ್ತಾರೆ ಎಂಬುದು ಪ್ರಶ್ನೆ. ರಜತ್ ಪಾಟೀದಾರ್ ಅಥವಾ ಶಹಬಾಜ್ ಅಹ್ಮದ್ ಅವರಲ್ಲೊಬ್ಬರು ತಂಡದಿಂದ ಹೊರಗುಳಿಯಬೇಕಾಗುತ್ತದೆ. ಆದರೆ, ಆರ್ಸಿಬಿ ತಂಡದಲ್ಲಿ ಬೌಲರ್ಗಳ ಸಂಖ್ಯೆ ಹೆಚ್ಚಿದ್ದು, ಶಹಬಾಜ್ ಅಹ್ಮದ್ ಅವರ ಬದಲು ದೇವದತ್ ಪಡಿಕ್ಕಲ್ ಆಡಬಹುದು ಎನ್ನಲಾಗುತ್ತಿದೆ.
ಆರ್ಸಿಬಿ ತಂಡದ ಬ್ಯಾಟಿಂಗ್ ಎಂದಿನಂತೆ ವಿರಾಟ್ ಕೊಹ್ಲಿ ಮತ್ತು ಎಬಿ ಡೀವಿಲಿಯರ್ಸ್ ಅವರನ್ನ ಹೆಚ್ಚಾಗಿ ನೆಚ್ಚಿಕೊಂಡಿದೆ. ಈಗ ದೇವದತ್ ಪಡಿಕ್ಕಲ್ ಆಗಮಿಸಿ ಸಿಡಿದಲ್ಲಿ ಬೆಂಗಳೂರಿಗೆ ಪ್ಲಸ್ ಪಾಯಿಂಟ್. ಗ್ಲೆನ್ ಮ್ಯಾಕ್ಸ್ವೆಲ್, ವಾಷಿಂಗ್ಟನ್ ಸುಂದರ್, ಡೇನಿಯಲ್ ಕ್ರಿಸ್ಟಿಯನ್ ಅವರೂ ಕೂಡ ಫಾರ್ಮ್ ಕಂಡುಕೊಂಡರೆ ಆರ್ಸಿಬಿ ಬ್ಯಾಟಿಂಗ್ ಬಲಿಷ್ಠವಾಗಿರಲಿದೆ. ಮ್ಯಾಕ್ಸ್ವೆಲ್ ಅವರೂ ಕೂಡ ಗೇಮ್ ಚೇಂಜರ್ ಆಗುವ ಸಾಮರ್ಥ್ಯ ಹೊಂದಿದ್ದಾರೆ.
ಬೆಂಗಳೂರು ತಂಡದ ಬೌಲಿಂಗ್ ಕೂಡ ಉತ್ತಮ ಸಾಮರ್ಥ್ಯದಿಂದ ಕೂಡಿದೆ. ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಲ್, ಕೈಲೆ ಜೇಮಿಸನ್, ಹರ್ಷಲ್ ಪಟೇಲ್ ಅವರು ಆರ್ಸಿಬಿಗೆ ಬಲ ಒದಗಿಸಿದ್ದಾರೆ. ಡೇನಿಯಲ್ ಕ್ರಿಸ್ಟಿಯನ್, ವಾಷಿಂಗ್ಟನ್ ಸುಂದರ್ ಕೂಡ ತಂಡದ ಬೌಲಿಂಗ್ ಆಯ್ಕೆಗಳಲ್ಲಿ ಇದ್ದಾರೆ.
ಈ ಐಪಿಎಲ್ ಋತುವಿನಲ್ಲಿ ಚೆನ್ನೈನಲ್ಲಿ ನಡೆಯುತ್ತಿರುವ ನಾಲ್ಕನೇ ಪಂದ್ಯ ಇದಾಗಿದ್ದು ರಾತ್ರಿ 7:30ಕ್ಕೆ ಪ್ರಾರಂಭವಾಗಲಿದೆ. ಈವರೆಗಿನ ಮೂರು ಪಂದ್ಯಗಳಲ್ಲಿ ಇಲ್ಲಿ ದಾಖಲಾದ ಗರಿಷ್ಠ ಸ್ಕೋರು 187 ರನ್ ಆಗಿದೆ.
ಇದನ್ನೂ ಓದಿ: IPL 2021: SRH ಸೋಲಿಗೆ ಮನೀಷ್ ಪಾಂಡೆ ಬ್ಯಾಟಿಂಗ್ ಕಾರಣ ಎಂದ ಸೆಹ್ವಾಗ್..!
ಆಡಲಿರುವ ಸಂಭಾವ್ಯ ತಂಡಗಳು:
ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್, ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡೀವಿಲಿಯರ್ಸ್, ಡೇನಿಯಲ್ ಕ್ರಿಸ್ಟಿಯನ್, ವಾಷಿಂಗ್ಟನ್ ಸುಂದರ್, ಕೈಲ್ ಜೇಮೀಸನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜವೇಂದ್ರ ಚಹಲ್
ಹೈದರಾಬಾದ್ ಸನ್ ರೈಸರ್ಸ್ ತಂಡ: ಡೇವಿಡ್ ವಾರ್ನರ್, ವೃದ್ಧಿಮಾನ್ ಸಾಹಾ, ಮನೀಶ್ ಪಾಂಡೆ, ಜಾನಿ ಬೇರ್ಸ್ಟೋ, ವಿಜಯ್ ಶಂಕರ್, ಮೊಹಮ್ಮದ್ ನಬಿ, ಅಬ್ದುಲ್ ಸಮದ್, ರಷೀದ್ ಖಾನ್, ಭುವನೇಶ್ವರ್ ಕುಮಾರ್, ಸಂದೀಪ್ ಶರ್ಮಾ, ಟಿ ನಟರಾಜನ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ