ಐಪಿಎಲ್ 2021 ಗಾಗಿ ಎಲ್ಲಾ ತಂಡಗಳ ಫ್ರಾಂಚೈಸಿಗಳು ಭರ್ಜರಿ ಸಿದ್ದತೆಯಲ್ಲಿದೆ. ಕಳೆದ ಸೀಸನ್ನಲ್ಲಿ ಫೈನಲ್ ಪ್ರವೇಶಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಂದಿನ ಆವೃತ್ತಿಗಾಗಿ ಟೀಮ್ ಇಂಡಿಯಾ ಮಾಜಿ ಆಟಗಾರ ಪ್ರವೀಣ್ ಆಮ್ರೆ ಅವರನ್ನು ಸಹಾಯಕ ಕೋಚ್ ಆಗಿ ನೇಮಿಸಿದೆ. 2014 ರಿಂದ 2019 ರವರೆಗೆ ಡೆಲ್ಲಿ ತಂಡದ ಪ್ರತಿಭಾವನ್ವೇಷಣೆ ವಿಭಾಗದಲ್ಲಿ ಆಮ್ರೆ ಕಾರ್ಯ ನಿರ್ವಹಿಸಿದ್ದರು. ಇದೀಗ ಹೊಸ ಜವಾಬ್ದಾರಿಯೊಂದಿಗೆ ಅವರನ್ನು ತಂಡಕ್ಕೆ ಬರ ಮಾಡಿಕೊಳ್ಳಲಾಗಿದೆ.
ಹೊಸದಿಲ್ಲಿ: ಕಳೆದ ಎರಡೂ ಆವೃತ್ತಿಗಳಲ್ಲಿ ನಾಕ್ಔಟ್ ಹಂತಕ್ಕೇರುವ ಮೂಲಕ ಸ್ಥಿರ ಪ್ರದರ್ಶನ ಕಾಯ್ದುಕೊಂಡಿರುಲಾಗುವ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಮುಂಬರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಸಲುವಾಗಿ ಬ್ಯಾಟಿಂಗ್ ತರಬೇತುದಾರ ಪ್ರವೀಣ್ ಆಮ್ರೆ ಅವರನ್ನು ಸಹಾಯಕ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.
52 ವರ್ಷದ ಪ್ರವೀಣ್ ಆಮ್ರೆ ಟೀಮ್ ಇಂಡಿಯಾ ಪರ 11 ಟೆಸ್ಟ್ ಮತ್ತು 37 ಏಕದಿನ ಪಂದ್ಯಗಳನ್ನು ಆಡಿದ್ದರು. ಇದಾದ ಬಳಿಕ ದೇಶೀಯ ಕ್ರಿಕೆಟ್ನಲ್ಲಿ ಆಟಗಾರ ಮತ್ತು ತರಬೇತುದಾರರಾಗಿ ಕಾಣಿಸಿಕೊಂಡಿದ್ದರು. ಮುಂಬೈ ತಂಡವು ಮೂರು ಬಾರಿ ರಣಜಿ ಟ್ರೋಫಿ ಗೆದ್ದಾಗ ಆಮ್ರೆ ತರಬೇತುದಾರರಾಗಿದ್ದರು. ಅಲ್ಲದೆ ಅನೇಕ ಅಂತರರಾಷ್ಟ್ರೀಯ ಆಟಗಾರರೊಂದಿಗೆ ವೈಯಕ್ತಿಕ ತರಬೇತುದಾರರಾಗಿಯೂ ಕೆಲಸ ಮಾಡಿದ್ದಾರೆ.
ಇದೀಗ ಮತ್ತೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿರುವ ಬಗ್ಗೆ ಸಂತಸ ಹಂಚಿಕೊಂಡಿರುವ ಆಮ್ರೆ, ಡೆಲ್ಲಿ ಫ್ರಾಂಚೈಸಿ ನನ್ನ ಇರಿಸಿದ ನಂಬಿಕೆಗೆ ಅಭಾರಿಯಾಗಿದ್ದೇನೆ. ಕಳೆದ ಸೀಸನ್ನಲ್ಲಿ ಡೆಲ್ಲಿ ಮೊದಲ ಬಾರಿ ಫೈನಲ್ ಪ್ರವೇಶಿಸಿತ್ತು. ಇದೀಗ ಅದೇ ತಂಡದಲ್ಲಿ ಅವಕಾಶ ಸಿಕ್ಕಿರುವುದು ಉತ್ಸಾಹವನ್ನು ಹೆಚ್ಚಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಕೋಚ್ ರಿಕಿ ಪಾಂಟಿಂಗ್ ಅವರೊಂದಿಗೆ ಕೆಲಸ ಮಾಡುವುದನ್ನು ಕೌತುಕದಿಂದ ಎದುರು ನೋಡುತ್ತಿರುವುದಾಗಿ ಪ್ರವೀಣ್ ಆಮ್ರೆ ತಿಳಿಸಿದ್ದಾರೆ.
ಆಮ್ರೆ ಅವರ ಆಗಮನದ ಬಗ್ಗೆ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಿಇಒ ಧೀರಜ್ ಮಲ್ಹೋತ್ರ, ನಮ್ಮ ತಂಡಕ್ಕೆ ಶ್ರೇಯಸ್ ಅಯ್ಯರ್, ಪೃಥ್ವಿ ಶಾ ಮತ್ತು ರಿಷಭ್ ಪಂತ್ ಅವರಂತಹ ಪ್ರತಿಭಾವಂತೆ ಆಟಗಾರರನ್ನು ಆಯ್ಕೆ ಮಾಡುವಲ್ಲಿ ಆಮ್ರೆ ಮುಖ್ಯ ಪಾತ್ರ ವಹಿಸಿದ್ದರು. ಹೀಗಾಗಿ ಅವರ ಅನುಭವ ನಮ್ಮ ತಂಡದ ಪಾಲಿಗೆ ಅತ್ಯಂತ ಮಹತ್ವದ್ದು. ಅವರು ಮತ್ತೆ ಡೆಲ್ಲಿ ತಂಡ ಸೇರಿಸಿಕೊಂಡಿರುವುದಕ್ಕೆ ಬಹಳ ಸಂತೋಷವಿದೆ ಎಂದಿದ್ದಾರೆ.
ಯುಎಇನಲ್ಲಿ ನಡೆದ 2020ರ ಐಪಿಎಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಬಾರಿ ಫೈನಲ್ ಪ್ರವೇಶಿಸಿತ್ತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲುವ ಮೂಲಕ ಟೂರ್ನಿಯನ್ನು ಅಂತ್ಯಗೊಳಿಸಿದ್ದರು. ಇದೀಗ ದೇಶೀಯ ಸ್ಟಾರ್ ತರಬೇತುದಾರರನ್ನು ತಂಡಕ್ಕೆ ಕರೆ ತರುವಲ್ಲಿ ಡೆಲ್ಲಿ ಫ್ರಾಂಚೈಸಿ ಯಶಸ್ವಿಯಾಗಿದ್ದು, ಹೀಗಾಗಿ ಈ ಬಾರಿ ಒಂದಷ್ಟು ಯುವ ಪ್ರತಿಭೆಗಳು ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ