ನವದೆಹಲಿ: ವಿಶ್ವಕಪ್ ಇತಿಹಾಸದಲ್ಲಿ
ಪಾಕಿಸ್ತಾನಕ್ಕೆ ಒಮ್ಮೆಯೂ ಸೋಲದ
ಟೀಮ್ ಇಂಡಿಯಾ ನಿನ್ನೆ ಮೊದಲ ಬಾರಿಗೆ ಪಾಕಿಸ್ತಾನಕ್ಕೆ ಶರಣಾಯಿತು. ದುಬೈನ ಇಂಟರ್ನ್ಯಾಷನಲ್ ಮೈದಾನದಲ್ಲಿ ಪಾಕಿಸ್ತಾನ ನಿನ್ನೆ
ಐತಿಹಾಸಿಕ ಗೆಲುವು ಸಾಧಿಸಿತು. ವಿರಾಟ್ ಕೊಹ್ಲಿ ನಿನ್ನೆಯ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಮಿಂಚಿದರಾದರೂ ಹೀನಾಯ ಸೋಲಿನ ಕಪ್ಪು ಚುಕ್ಕೆ ಅವರನ್ನ ದೀರ್ಘಕಾಲ ಬಾಧಿಸದೇ ಇರದು. ವಿರಾಟ್ ಕೊಹ್ಲಿಗೆ ನಾಯಕನಾಗಿ ಬಹುಶಃ ಇದು ಕೊನೆಯ
ಟಿ20 ವಿಶ್ವಕಪ್ ಇರಬಹುದು. ಇದಾದ ಬಳಿಕ ಅವರು ಟಿ20 ತಂಡದ ಕ್ಯಾಪ್ಟನ್ಸಿ ಬಿಡುತ್ತೇನೆ ಎಂದು ತಿಂಗಳ ಹಿಂದೆಯೇ
ಹೇಳಿದ್ಧಾರೆ. ನಾಯಕತ್ವ ಬಿಡುವ ಮುನ್ನ ಅವರ ನಾಯಕತ್ವದಲ್ಲಿ ಬಂದ ಕೆಲ ಹೀನಾಯ ದಾಖಲೆಗಳು ಅವರನ್ನ ಬೆನ್ನು ಹತ್ತುವುದು ಹೌದು.
ಇದೇ ವಿಶ್ವಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತೆ ಸಂಧಿಸುವ ಸಾಧ್ಯತೆ ಇದ್ದೇ ಇರುತ್ತದೆ. ಈ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ಅವಕಾಶ ಸಿಗಬಹುದು. ಆದರೆ, ಈ ಹೀನಾಯ ಸೋಲನ್ನ ಮರೆಯುವುದು ಕಷ್ಟ. ವಿರಾಟ್ ಕೊಹ್ಲಿ ನಾಯಕರಾಗಿ ಅಂಟಿಸಿಕೊಂಡ ಕೆಲ ಕೆಟ್ಟ ದಾಖಲೆಗಳು ಈ ಕೆಳಕಂಡಂತಿ ಇವೆ ಗಮನಿಸಿ.
29 ವರ್ಷಗಳ ಬಳಿಕ ಸೋಲು:
ಏಕದಿನ ಅಥವಾ ಟಿ20 ಕ್ರಿಕೆಟ್ ಯಾವುದೇ ವಿಶ್ವಕಪ್ ಆಗಲಿ ಭಾರತದ ವಿರುದ್ಧ ಪಾಕಿಸ್ತಾನ ಒಮ್ಮೆಯೂ ಗೆದ್ದಿರಲಿಲ್ಲ. ಏಕದಿನ ಕ್ರಿಕೆಟ್ ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ 7 ಬಾರಿ ಗೆದ್ದಿತ್ತು. ಟಿ20 ವಿಶ್ವಕಪ್ಗಳಲ್ಲಿ ಭಾರತ 5 ಬಾರಿ ಗೆದ್ದಿತ್ತು. ಕಳೆದ 29 ವರ್ಷಗಳಿಂದ ಎಲ್ಲಾ ವಿಶ್ವಕಪ್ಗಳಲ್ಲೂ ಪಾಕ್ ವಿರುದ್ಧ ಭಾರತ ಸೋಲಿಲ್ಲದ ಸರದಾರನಾಗಿ ಮೆರೆದಿತ್ತು. ಆದರೆ, ಈ 29 ವರ್ಷಗಳ ದಾಖಲೆ ಓಟ ನಿನ್ನೆ ನಿಂತುಹೋಯಿತು. ಪಾಕಿಸ್ತಾನ ಭರ್ಜರಿಯಾಗೇ ಭಾರತದ ಕುದುರೆಯನ್ನ ಕಟ್ಟಿಹಾಕಿತು.
10 ವಿಕೆಟ್ಗಳಿಂದ ಸೋಲು:
ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಭಾರತ ಎಂದೂ ಯಾವ ತಂಡಕ್ಕೂ 10 ವಿಕೆಟ್ಗಳಿಂದ ಸೋತಿದ್ದಿರಲಿಲ್ಲ. ಆಸ್ಟ್ರೇಲಿಯಾ, ಸೌತ್ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧ 9 ವಿಕೆಟ್ಗಳಿಂದ ಸೋತಿದ್ದೇ ಅತಿ ಹೀನಾಯ ಎನಿಸಿತ್ತು. ಆದರೆ, ಪಾಕಿಸ್ತಾನ ವಿಶ್ವಕಪ್ನಂಥ ವೇದಿಕೆಯಲ್ಲೇ ಭಾರತವನ್ನ 10 ವಿಕೆಟ್ಗಳಿಂದ ಸೋಲಿಸಿ ಮೆರೆಯಿತು.
ಪಾಕಿಸ್ತಾನ ಯಾವ ತಂಡದ ಮೇಲೂ ಟಿ20 ಕ್ರಿಕೆಟ್ ಪಂದ್ಯದಲ್ಲಿ 10 ವಿಕೆಟ್ಗಳಿಂದ ಗೆದ್ದದ್ದಿಲ್ಲ. ಈಗ ಭಾರತದ ವಿರುದ್ಧವೇ ಆ ಸಾಧನೆ ಮಾಡಿ ಉಬ್ಬಿ ಹೋಗಿದೆ.
ಇದನ್ನೂ ಓದಿ: T20 World Cup: ಭಾರತದ ಸೋಲಿಗೆ ಐದು ಕಾರಣಗಳು
ಎರಡನೇ ಬಾರಿ 10 ವಿಕೆಟ್ ಸೋಲು:
ಟಿ20 ಕ್ರಿಕೆಟ್ನಲ್ಲಿ ಭಾರತ 10 ವಿಕೆಟ್ಗಳಿಂದ ಸೋತಿದ್ದು ಇದೇ ಮೊದಲು. ಆದರೆ, ಏಕದಿನ ಕ್ರಿಕೆಟ್ನಲ್ಲಿ ಭಾರತ ಒಮ್ಮೆ ಅಂಥದ್ದೊಂದು ದೌರ್ಭಾಗ್ಯಕ್ಕೆ ತುತ್ತಾಗಿತ್ತು. 2020 ಜನವರಿಯಲ್ಲಿ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 10 ವಿಕೆಟ್ಗಳಿಂದ ಸೋತಿತು. ಆ ಪಂದ್ಯದಲ್ಲಿ ಆರೋನ್ ಫಿಂಚ್ ಮತ್ತು ಡೇವಿಡ್ ವಾರ್ನರ್ ಭರ್ಜರಿ ಶತಕ ಭಾರಿಸಿ ನೋಲಾಸ್ನಲ್ಲಿ ಭಾರತ ಒಡ್ಡಿದ 256 ರನ್ ಟಾರ್ಗೆಟನ್ನು ಚೇಸ್ ಮಾಡಿದ್ದರು. ಆ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕತ್ವ ಇದ್ದದ್ದು ವಿರಾಟ್ ಕೊಹ್ಲಿಯದ್ದೇ.
ಮೊದಲ ಪಂದ್ಯದಲ್ಲೇ ಸೋಲು:
ಯಾವುದೇ ಟಿ20 ವಿಶ್ವಕಪ್ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲೇ ಸೋತಿದ್ದು ಇದು ಎರಡನೇ ಬಾರಿ ಆಗಿದೆ. ಹಿಂದೆ 2016ರ ಟಿ20 ವಿಶ್ವಕಪ್ನಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನ ನ್ಯೂಜಿಲೆಂಡ್ ಎದುರು ಸೋತಿತ್ತು. ಆ ಪಂದ್ಯದಲ್ಲಿ ಟೀಮ್ ಇಂಡಿಯಾದ ನಾಯಕತ್ವ ಮಹೇಂದ್ರ ಸಿಂಗ್ ಅವರದ್ದಾಗಿತ್ತು. ಅದಾದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಈ ಕಳಪೆ ಸಾಧನೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ