ಪಂಜಾಬ್ ಕಿಂಗ್ಸ್ ತಂಡದ ಅನುಭವಿ ಆಟಗಾರ ದೀಪಕ್ ಹೂಡಾ ಬರೋಡಾ ಕ್ರಿಕೆಟ್ ತಂಡವನ್ನು ತೊರೆದಿದ್ದಾರೆ. ಹೂಡಾ ಅವರು ಬೇರೆ ರಾಜ್ಯದ ಪರ ಆಡಲು ಬರೋಡಾ ಕ್ರಿಕೆಟ್ ಅಸೋಸಿಯೇಶನ್ನಿಂದ (ಬಿಸಿಎ) ಎನ್ಒಸಿಯನ್ನು ಕೋರಿದ್ದಾರೆ. ಜನವರಿಯಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ 20 ಟೂರ್ನಿ ವೇಳೆ ಬರೋಡ ತಂಡದ ನಾಯಕ ಕೃನಾಲ್ ಪಾಂಡ್ಯ ಹಾಗೂ ದೀಪಕ್ ಹೂಡಾ ನಡುವೆ ಜಗಳ ನಡೆದಿತ್ತು. ಹೀಗಾಗಿ ಉಪನಾಯಕನಾಗಿದ್ದ ದೀಪಕ್ ಹೂಡಾ ಟೂರ್ನಿಯಿಂದ ಹಿಂದೆ ಸರಿದಿದ್ದರು. ಅಷ್ಟೇ ಅಲ್ಲದೆ ಈ ಘಟನೆಯ ನಂತರ, ಬಿಸಿಎ ಈ ಸೀಸನ್ನಲ್ಲಿ ಹೂಡಾವನ್ನು ಅಮಾನತುಗೊಳಿಸಿತ್ತು. ಇದೀಗ ಬರೋಡಾ ಕ್ರಿಕೆಟ್ ತಂಡದಿಂದ ಹೂಡಾ ಹೊರ ನಡೆದಿರುವುದರ ಬಗ್ಗೆ ಟೀಮ್ ಇಂಡಿಯಾ ಮಾಜಿ ಆಲ್ರೌಂಡರ್ ಇರ್ಫಾನ್ ಪಠಾಣ್ ನಿರಾಶೆ ವ್ಯಕ್ತಪಡಿಸಿದ್ದಾರೆ.
"ಎಷ್ಟು ಕ್ರಿಕೆಟ್ ಸಂಸ್ಥೆಗಳು ಭಾರತೀಯ ತಂಡಕ್ಕೆ ಆಯ್ಕೆಯಾಗುವ ಪಟ್ಟಿಯಲ್ಲಿರುವ ಒಬ್ಬ ಆಟಗಾರನನ್ನು ಕೈಬಿಡುತ್ತವೆ? ದೀಪಕ್ ಹೂಡಾ ಬರೋಡಾ ಕ್ರಿಕೆಟ್ ಸಂಸ್ಥೆಯನ್ನು ತೊರೆದಿರುವುದು ಬಿಸಿಎಗೆ ದೊಡ್ಡ ನಷ್ಟ. ಅವರಿನ್ನೂ ಯುವ ಆಟಗಾರ, ಇನ್ನೂ ಹತ್ತು ವರ್ಷಗಳ ಕಾಲ ಬರೋಡಾ ಪರ ಆಡಬಹುದಿತ್ತು. ಬರೋಡಾದ ಕ್ರಿಕೆಟಿಗನಾಗಿ ಅವರ ನಡೆಯಿಂದ ನಾನು ತುಂಬಾ ನಿರಾಶನಾಗಿದ್ದೇನೆ ಎಂದು ಇರ್ಫಾನ್ ಪಠಾಣ್ ತಿಳಿಸಿದ್ದಾರೆ.
ದೀಪಕ್ ಹೂಡಾ ಬರೋಡಾ ಪರ 46 ಪ್ರಥಮ ದರ್ಜೆ ಪಂದ್ಯಗಳನ್ನು, 68 ಲಿಸ್ಟ್ ಎ ಪಂದ್ಯಗಳನ್ನು ಮತ್ತು 123 ಟಿ 20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಆದರೆ ಜನವರಿಯಲ್ಲಿ ಬರೋಡಾ ನಾಯಕ ಕೃನಾಲ್ ಪಾಂಡ್ಯ ಅವರೊಂದಿಗೆ ಜಗಳವಾಡಿದ ನಂತರ ಹೂಡಾ ಬಿಸಿಎಗೆ ಇಮೇಲ್ ಕಳುಹಿಸಿ ಅಸಮಾಧಾನ ವ್ಯಕ್ತಪಡಿಸಿದ್ದರು, "ಈ ಸಮಯದಲ್ಲಿ ನಾನು ನಿರಾಶೆಗೊಂಡಿದ್ದೇನೆ ಮತ್ತು ಒತ್ತಡದಲ್ಲಿದ್ದೇನೆ. ಕಳೆದ ಕೆಲವು ದಿನಗಳಿಂದ, ನನ್ನ ತಂಡದ ನಾಯಕ ಕ್ರುನಾಲ್ ಪಾಂಡ್ಯ ನನ್ನ ತಂಡದ ಆಟಗಾರರ ಮುಂದೆ ನನ್ನೊಂದಿಗೆ ನಿಂದನೀಯ ಭಾಷೆ ಬಳಸುತ್ತಿದ್ದಾರೆ. ಇಲ್ಲಿನ ರಿಲಯನ್ಸ್ ಸ್ಟೇಡಿಯಂ ವಡೋದರಾದಲ್ಲಿ ಭಾಗವಹಿಸಲು ಬಂದ ಇತರ ತಂಡಗಳ ಆಟಗಾರರ ಮುಂದೆ ಅವರು ಅದೇ ರೀತಿ ಮಾಡುತ್ತಿದ್ದಾರೆ."
ಮುಖ್ಯ ತರಬೇತುದಾರ ಪ್ರಭಾಕರ್ ಅವರ ಅನುಮತಿಯೊಂದಿಗೆ ನಾನು ಮೊದಲ ಪಂದ್ಯಕ್ಕಾಗಿ ನೆಟ್ಗಳಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಕ್ರುನಾಲ್ ಪಾಂಡ್ಯ ಅಲ್ಲಿಗೆ ಬಂದು ನನ್ನೊಂದಿಗೆ ಕೆಟ್ಟದಾಗಿ ವರ್ತಿಸಿದನು" ಎಂದು ಈಮೇಲ್ ಮೂಲಕ ಆರೋಪಿಸಿದ್ದರು. ಇದಾಗ್ಯೂ ಬರೋಡಾ ಕ್ರಿಕೆಟ್ ಅಸೋಸಿಯೇಶನ್ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೇ ಕಾರಣದಿಂದ ಇದೀಗ ದೀಪಕ್ ಹೂಡಾ ಬಿಸಿಎ ಅನ್ನು ತೊರೆದಿದ್ದಾರೆ. ಇನ್ನು ಬರೋಡಾ ಕ್ರಿಕೆಟ್ ಅಸೋಸಿಯೇಶನ್ನಿಂದ (ಬಿಸಿಎ) ಎನ್ಒಸಿಯನ್ನು ಪಡೆದರೆ ದೀಪಕ್ ಹೂಡಾ ಬೇರೊಂದು ರಾಜ್ಯದ ಪರ ಆಡಬಹುದು.
(
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.) ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ