ಸಾಮಾನ್ಯವಾಗಿ ಕ್ರಿಕೆಟ್ ಆಟದ ಮೈದಾನದಲ್ಲಿ ಎದುರಾಳಿ ತಂಡದ ಆಟಗಾರ ತಮ್ಮ ಚೆಂಡನ್ನು ಬೌಂಡರಿ ಆಚೆಗೆ ಅಟ್ಟಿದರೆ ಬೌಲರ್ಗೆ ಕೋಪ ಬರುವುದನ್ನು ನಾವೆಲ್ಲಾ ನೋಡಿರುತ್ತೇವೆ. ಅದೇ ರೀತಿಯ ಒಂದು ಘಟನೆ ನಿನ್ನೆ ಜೈಪುರದಲ್ಲಿ ನಡೆದ ಭಾರತ ಮತ್ತು ನ್ಯೂಜಿಲ್ಯಾಂಡ್ (India vs New Zealand T20 Match at Jaipur) ನಡುವೆ ಆರಂಭವಾದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ನಡೆದಿದೆ. ಮಾರ್ಟಿನ್ ಗಪ್ಟಿಲ್ (Martin Guptill) ಮತ್ತು ದೀಪಕ್ ಚಾಹರ್ (Deepak Chahar) ನಡುವಿನ ಸಮರ ಅದು. ಇಲ್ಲಿ ಬ್ಯಾಟರ್ ಮತ್ತು ಬೌಲರ್ ಇಬ್ಬರೂ ವಾಗ್ವಾದಕ್ಕೆ ಇಳಿಯಲಿಲ್ಲ. ಅವರ ಬ್ಯಾಟ್ ಮತ್ತು ಬಾಲ್ಗಳ ಜೊತೆಗೆ ದೃಷ್ಟಿಯುದ್ಧವೂ ಆಯಿತು. ಆದರೆ, ಅಂತಿಮವಾಗಿ ಗೆದ್ದದ್ದು ಬೌಲರ್ ದೀಪಕ್ ಚಾಹರ್. ತಮ್ಮ ಬಾಲ್ನಿಂದ ಗಪ್ಟಿಲ್ ಅವರನ್ನ ಔಟ್ ಮಾಡಿದ್ದೂ ಅಲ್ಲದೆ, ತಮ್ಮ ಕಣ್ಣಿಂದಲೂ ಅವರನ್ನ ತಿವಿಯುವ ಕೆಲಸ ಮಾಡಿದರು.
ಈ ಟಿ20 ಸರಣಿಯಲ್ಲಿ ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಮೊದಲು ಬ್ಯಾಟಿಂಗ್ಗೆ ಇಳಿದ ನಂತರ, ಭಾರತ ಕ್ರಿಕೆಟ್ ತಂಡದ ವೇಗಿ ಭುವನೇಶ್ವರ್ ಕುಮಾರ್ ಮೊದಲ ಓವರ್ನಲ್ಲಿಯೇ ಡೆರಿಲ್ ಮಿಚೆಲ್ ಅವರನ್ನು ಬೌಲ್ಡ್ ಮಾಡಿದರು. ಇದರೊಂದಿಗೆ ನ್ಯೂಜಿಲ್ಯಾಂಡ್ ತಂಡ ಕಳಪೆ ಆರಂಭವನ್ನು ಪಡೆಯಿತು. ಆದರೆ, ಮಾರ್ಟಿನ್ ಗುಪ್ಟಿಲ್ ಮತ್ತು ಮಾರ್ಕ್ ಚಾಪ್ಮನ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಕಿವೀಸ್ ಚೇತರಿಸಿಕೊಳ್ಳಲು ಮತ್ತು ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ಸಹಾಯ ಮಾಡಿದರು.
ಅದರಲ್ಲಿಯೂ ಗಪ್ಟಿಲ್ ಬ್ಯಾಟಿಂಗ್ ಅಮೋಘವಾಗಿತ್ತು. ಚಾಪ್ಮನ್ ಔಟಾದ ಬಳಿಕ ನ್ಯೂಜಿಲೆಂಡ್ ತಂಡದ ಇನ್ನಿಂಗ್ಸ್ಗೆ ಪುಷ್ಟಿ ಕೊಟ್ಟಿದ್ದು ಗಪ್ಟಿಲ್ ಅವರ ಆಟ. ಕೊನೆಕೊನೆಯ ಓವರ್ಗಳಲ್ಲಿ ದೊಡ್ಡ ಶಾಟ್ಗಳನ್ನಾಡಿ ತಂಡದ ಮೊತ್ತವನ್ನು ವೇಗವಾಗಿ ಹೆಚ್ಚಿಸಿದರು.
ಗಪ್ಟಿಲ್-ದೀಪಕ್ ದೃಷ್ಟಿಯುದ್ಧ:
ಆದರೆ ದೀಪಕ್ ಚಾಹರ್ ಮಾಡಿದ 18ನೇ ಓವರ್ನಲ್ಲಿ ಗಪ್ಟಿಲ್ ಅವರು ಮೊದಲ ಎಸೆತದಲ್ಲಿ ದೊಡ್ಡ ಸಿಕ್ಸ್ವೊಂದನ್ನು ಹೊಡೆಯುತ್ತಾರೆ. ಆಗ ಗಪ್ಟಿಲ್ ಅವರು ಬೌಲರ್ ಚಾಹರ್ ಅವರನ್ನ ಕಣ್ಣಿಂದಲೇ ಗುರಾಯಿಸಿ ಎಚ್ಚರಿಕೆ ಕೊಡುತ್ತಾರೆ. ಆದರೆ ಇದಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸದ ದೀಪಕ್ ಚಾಹರ್ ಹಾಗೆಯೇ ಮುಂದಿನ ಚೆಂಡನ್ನು ಹಾಕಲು ನಡೆದುಕೊಂಡು ಹೋದರು.
ಇದನ್ನೂ ಓದಿ: HBD Rachin- ನ್ಯೂಜಿಲೆಂಡ್ ಆಲ್ರೌಂಡರ್ ರಚಿನ್ ರವೀಂದ್ರ ಯಾರು? ದ್ರಾವಿಡ್, ಸಚಿನ್ಗೂ ಇವರಿಗೂ ಇದೆ ಸಂಬಂಧ
ಮುಂದಿನ ಎಸೆತದಲ್ಲಿ ಮತ್ತೊಮ್ಮೆ ಅದೇ ರೀತಿಯಲ್ಲಿ ಸ್ವಲ್ಪ ನಿಧಾನಗತಿಯಲ್ಲಿ ಬೌಲಿಂಗ್ ಮಾಡುತ್ತಾರೆ. ಮಾರ್ಟಿನ್ ಗುಪ್ಟಿಲ್ ಅದನ್ನು ಮತ್ತೊಮ್ಮೆ ಬೌಂಡರಿ ಆಚೆಗೆ ಅಟ್ಟಲು ಪ್ರಯತ್ನ ಮಾಡಿ ಶ್ರೇಯಸ್ ಅಯ್ಯರ್ಗೆ ಕ್ಯಾಚಿತ್ತು ಮೈದಾನದಿಂದ ಹೊರ ನಡೆಯಬೇಕಾಯಿತು. ಹಿಂದಿನ ಎಸೆತದಲ್ಲಿ ತಮ್ಮನ್ನ ಗುರಾಯಿಸಿದ್ದ ಗಪ್ಟಿಲ್ಗೆ ತಿರುಗುಬಾಣ ಕೊಡುವ ಸರದಿ ಚಾಹರ್ ಅವರದ್ದಾಯಿತು. ಗಪ್ಟಿಲ್ ಔಟಾಗಿ ಪೆವಿಲಿಯನ್ನತ್ತ ನಡೆದುಕೊಂಡೊ ಹೋಗುತ್ತಿರುವಂತೆಯೇ ಅವರತ್ತಲೇ ಚಾಹರ್ ದಿಟ್ಟಿಸಿ ನೋಡುತ್ತಿದ್ದರು.
ಗುರಾಯಿಸಿದ್ದಕ್ಕೆ ಪ್ರಶಸ್ತಿ!!
ತಮಾಷೆ ಎಂದರೆ ಈ ಪಂದ್ಯದ ನಂತರ, ದೀಪಕ್ ಚಹರ್ ಅವರ ಈ ನೋಟಕ್ಕಾಗಿ 'ಕಮಾಲ್ ಕಾ ಮೊಮೆಂಟ್' ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲ ಅದಕ್ಕೆ ಒಂದು ಲಕ್ಷ ರೂಪಾಯಿ ಬಹುಮಾನವೂ ಸಿಕ್ಕಿದೆ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿ ಸದ್ದು ಮಾಡುತ್ತಿದೆ.
Deepak chahar is known for this 👀pic.twitter.com/TyZMPrD9pY
— VIVO IPL 2022 | Wear a Mask 😷 (@IPL2022_) November 17, 2021
ಇದನ್ನೂ ಓದಿ: ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡ ಟೀಮ್ ಇಂಡಿಯಾ; ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಜಯ
ಗಪ್ಟಿಲ್ ರೋಚಕ ಬ್ಯಾಟಿಂಗ್:
ಮಾರ್ಟಿನ್ ಗಪ್ಟಿಲ್ ನಿಧಾನಗತಿಯ ಆರಂಭದ ನಂತರ ಕೊನೆಯ ಓವರ್ಗಳಲ್ಲಿ ತಮ್ಮ ಸ್ಟ್ರೋಕ್ಗಳನ್ನು ಹೊಡೆಯಲು ಪ್ರಾರಂಭಿಸಿದರು. 12ನೇ ಓವರ್ ಪ್ರಾರಂಭವಾಗುವವರೆಗೂ ಗುಪ್ಟಿಲ್ ಕೇವಲ 20 ಎಸೆತಗಳನ್ನು ಎದುರಿಸಿದ್ದರು. ಜೈಪುರದ ಬಹುತೇಕ ನಿರ್ಜೀವ ಪಿಚ್ನಲ್ಲಿ 42 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸ್ಗಳೊಂದಿಗೆ ಅವರು 70 ರನ್ ಗಳಿಸಿದರು.
ಭಾರತಕ್ಕೆ 5 ವಿಕೆಟ್ ಜಯ:
ನ್ಯೂಜಿಲ್ಯಾಂಡ್ ತನ್ನ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 164 ರನ್ಗಳನ್ನು ಕಲೆ ಹಾಕಿತು. ನಂತರ ಬ್ಯಾಟಿಂಗ್ಗೆ ಇಳಿದ ಭಾರತ ತಂಡವು ಕೊನೆಯ ಓವರ್ನಲ್ಲಿ ರನ್ ಗುರಿಯನ್ನು ತಲುಪಿ 5 ವಿಕೆಟ್ಗಳಿಂದ ಜಯ ಸಾಧಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ