ಅಬುಧಾಬಿ, ಡಿ. 5: ಪಾಕಿಸ್ತಾನದ ವಹಾಬ್ ರಿಯಾಜ್ ನೇತೃತ್ವದ ಡೆಕನ್ ಗ್ಲೇಡಿಯೇಟರ್ಸ್ ತಂಡ ಅಬುಧಾಬಿ ಟಿ10 ಕ್ರಿಕೆಟ್ ಟೂರ್ನಿ ಚಾಂಪಿಯನ್ ಆಗಿದೆ. ನಿನ್ನೆ ನಡೆದ ಫೈನಲ್ನಲ್ಲಿ ಡೆಲ್ಲಿ ಬುಲ್ಸ್ ತಂಡವನ್ನು 56 ರನ್ಗಳಿಂದ ಗ್ಲೇಡಿಯೇಟರ್ಸ್ ಬಗ್ಗುಬಡಿದು ಜಯಿಸಿತು. ಕೆರಿಬಿಯನ್ ದೈತ್ಯ ಬ್ಯಾಟರ್ ಆಂಡ್ರೆ ರಸೆಲ್ ಮತ್ತು ಇಂಗ್ಲೆಂಡ್ ಬ್ಯಾಟರ್ ಟಾಮ್ ಕೊಹ್ಲರ್-ಕ್ಯಾಡ್ಮೋರ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಗ್ಲೇಡಿಯೇಟರ್ಸ್ ತಂಡ ಫೈನಲ್ ಪಂದ್ಯವನ್ನು ನಿರೀಕ್ಷೆಮೀರಿ ಗೆದ್ದಿತು.
ಮೊದಲು ಬ್ಯಾಟ್ ಮಾಡಿದ ಡೆಕನ್ ಗ್ಲೇಡಿಯೇಟರ್ಸ್ 10 ಓವರ್ಗಳಲ್ಲಿ 159 ರನ್ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಪ್ರತಿಯಾಗಿ ಡ್ವೇನ್ ಬ್ರಾವೋ ನಾಯಕತ್ವದ ಡೆಲ್ಲಿ ಬುಲ್ಸ್ ತಂಡ ಕೇವಲ 103 ರನ್ ಮಾತ್ರ ಗಳಿಸಲು ಶಕ್ಯವಾಯಿತು. ಬುಲ್ಸ್ ಸ್ಫೋಟಕ ಆರಂಭ ಮಾಡಿ ಚೇಸಿಂಗ್ ಕಹಳೆ ಊದಿತಾದರೂ ಟಾರ್ಗೆಟ್ ತೀರಾ ಕಠಿಣವಾಗಿತ್ತು. ವೆಸ್ಟ್ ಇಂಡೀಸ್ನ ಚಂದ್ರಪಾಲ್ ಹೇಮರಾಜ್ ಅವರೊಬ್ಬರು ಏಕಾಂಗಿಯಾಗಿ ಹೋರಾಡಿದರು. ಹೇಮರಾಜ್ 20 ಬಾಲ್ನಲ್ಲಿ 42 ರನ್ ಗಳಿಸಿದರು. ಆದರೆ, ಉಳಿದ ಬ್ಯಾಟುಗಾರರು ಹೆಚ್ಚು ಹೊತ್ತು ಕ್ರೀಸ್ನಲ್ಲಿ ಇರಲಿಲ್ಲ.
ಇದಕ್ಕೆ ಮುನ್ನ ಡೆಕನ್ ಗ್ಲೇಡಿಯೇಟರ್ಸ್ ಇನ್ನಿಂಗ್ಸಲ್ಲಿ ಆಂಡ್ರೆ ರಸೆಲ್ ಮತ್ತು ಟಾಮ್ ಕೊಹ್ಲರ್-ಕಾಡ್ಮೋರ್ ಅವರಿಂದ ಬಂದ 159 ರನ್ಗಳ ವಿಶ್ವದಾಖಲೆ ಜೊತೆಯಾಟ ಹೈಲೈಟ್ ಆಯಿತು. ಟಿ10 ಕ್ರಿಕೆಟ್ ಇತಿಹಾಸದಲ್ಲೇ ಯಾವುದೇ ವಿಕೆಟ್ಗೆ ಬಂದ ಅತಿ ದೊಡ್ಡ ಜೊತೆಯಾಟ ಇದು. 20 ಓವರ್ಗಳ ಕ್ರಿಕೆಟ್ನಲ್ಲೇ 160 ರನ್ ಗುರಿ ಬಹಳ ಕಷ್ಟ. ಇನ್ನು, 10 ಓವರ್ ಕ್ರಿಕೆಟ್ನಲ್ಲಿ ಇದು ಬಹುತೇಕ ಅಸಾಧ್ಯದ ಗುರಿ. ಆಂಡ್ರೆ ರಸೆಲ್ ಕೇವಲ 32 ಬಾಲ್ನಲ್ಲಿ 90 ರನ್ ಚಚ್ಚಿದರು. ಕ್ಯಾಡ್ಮೋರ್ 28 ಬಾಲ್ನಲ್ಲಿ 59 ರನ್ ಗಳಿಸಿದರು.
ಇದನ್ನೂ ಓದಿ: Exhibition Match- ಸೌರವ್ ಗಂಗೂಲಿ ತಂಡದ ವಿರುದ್ಧ ಜಯ್ ಶಾ ಟೀಮ್ಗೆ ರೋಚಕ ಜಯ
ಟೂರ್ನಿಯ ಸಿಡಿಲಬ್ಬರದ ಬ್ಯಾಟರ್ಸ್:
ಅಫ್ಘಾನಿಸ್ತಾನದ ಹಜ್ರತುಲ್ಲಾ ಜಜೈ 12 ಪಂದ್ಯಗಳಲ್ಲಿ 50ಕ್ಕೂ ಹೆಚ್ಚು ರನ್ ಸರಾಸರಿಯಲ್ಲಿ 353 ರನ್ ಗಳಿಸಿ ಟೂರ್ನಿಯಲ್ಲಿ ಟಾಪ್ ಬ್ಯಾಟರ್ ಎನಿಸಿದ್ದಾರೆ. ಇಂಗ್ಲೆಂಡ್ನ ಫಿಲ್ ಸಾಲ್ಟ್ ಅವರಂತೂ ಇಡೀ ಟೂರ್ನಿಯಲ್ಲಿ 143 ಎಸೆಗಳನ್ನ ಆಡಿ 344 ರನ್ ಚಚ್ಚಿ ಎರಡನೇ ಸ್ಥಾನ ಪಡೆದಿದ್ದಾರೆ.
ಟಾಪ್-5 ಬ್ಯಾಟರ್ಸ್:
1) ಹಜ್ರತುಲ್ಲಾ ಜಜೈ, ಬಾಂಗ್ಲಾ ಟೈಗರ್ಸ್: 353 ರನ್
2) ಫಿಲ್ ಸಾಲ್ಟ್, ಟೀಮ್ ಅಬುಧಾಬಿ: 344 ರನ್
3) ರಹಮನುಲ್ಲಾ ಗುರ್ಬಜ್, ಡೆಲ್ಲಿ ಬುಲ್ಸ್: 343
4) ಲಿಯಾಮ್ ಲಿವಿಂಗ್ಸ್ಟೋನ್, ಟೀಮ್ ಅಬುಧಾಬಿ: 309 ರನ್
5) ರಿಕಾರ್ಡೊ ಪೊವೆಲ್, ನಾರ್ತರ್ನ್ ವಾರಿಯರ್ಸ್: 305 ರನ್
ಇದನ್ನೂ ಓದಿ: ಕ್ಲೀನ್ ಬೌಲ್ಡ್ ಆದರೂ ರಿವ್ಯೂ ಕೊಟ್ಟು ಪೇಚಿಗೆ ಸಿಕ್ಕ ಆರ್ ಅಶ್ವಿನ್; ಕಾರಣ ಇದಿರಬಹುದು
ಟಾಪ್-5 ಬೌಲರ್ಸ್:
1) ವನಿಂದು ಹಸರಂಗ, ಡೆಕನ್ ಗ್ಲೇಡಿಯೇಟರ್ಸ್: 21 ವಿಕೆಟ್
2) ಡಾಮಿನಿಕ್ ಡ್ರೇಕ್ಸ್, ಡೆಲ್ಲಿ ಬುಲ್ಸ್: 19 ವಿಕೆಟ್
3) ಮರ್ಚಂಟ್ ಡೀ ಲಾಂಗೆ, ಟೀಮ್ ಅಬುಧಾಬಿ: 14 ವಿಕೆಟ್
4) ಟೈಲ್ ಮಿಲ್ಸ್, ಡೆಕನ್ ಗ್ಲೇಡಿಯೇಟರ್ಸ್: 11 ವಿಕೆಟ್
5) ಅದಿಲ್ ರಷೀದ್, ಡೆಲ್ಲಿ ಬುಲ್ಸ್: 11 ವಿಕೆಟ್
ಅತಿಹೆಚ್ಚು ಮೊತ್ತ:
1) ಡೆಕನ್ ಗ್ಲೇಡಿಯೇಟರ್ಸ್: 159/0
2) ನಾರ್ತರ್ನ್ ವಾರಿಯರ್ಸ್: 152/4
3) ನಾರ್ತರ್ನ್ ವಾರಿಯರ್ಸ್: 146/0
4) ಡೆಕನ್ ಗ್ಲೇಡಿಯೇಟರ್ಸ್: 146/3
5) ಟೀಮ್ ಅಬುಧಾಬಿ: 145/3
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ