4 Balls 4 Wickets- ಕರ್ನಾಟಕ ವಿರುದ್ಧ 4 ಬಾಲ್​ಗೆ 4 ವಿಕೆಟ್; ದರ್ಶನ್ ನಾಲಕಂಡೆ ದಾಖಲೆ

Syed Mushtaq Ali Trophy T20: Darshan Nalkande record- ವಿದರ್ಭಾದ ವೇಗದ ಬೌಲರ್ ದರ್ಶನ್ ನಾಲಕಂಡೆ ಅವರು ಕರ್ನಾಟಕ ವಿರುದ್ಧದ ಟಿ20 ಟೂರ್ನಿ ಸೆಮಿಫೈನಲ್​ನಲ್ಲಿ 4 ಬಾಲ್​ಗೆ 4 ವಿಕೆಟ್ ಪಡೆದಿದ್ದಾರೆ. ಆದರೆ, ಈ ಸಾಧನೆಯಿಂದ ವಿದರ್ಭಾಗೆ ಗೆಲುವು ಪ್ರಾಪ್ತವಾಗಲಿಲ್ಲ.

ದರ್ಶನ್ ನಾಲ್ಕಂಡೆ

ದರ್ಶನ್ ನಾಲ್ಕಂಡೆ

 • Share this:
  ದೆಹಲಿ: ಸಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ (Syed Mushtaq Ali Trophy T20) ಪ್ಲೇಟ್ ಗ್ರೂಪ್​ನಿಂದ ಆರಂಭಿಸಿ ಪಂದ್ಯಗಳ ಮೇಲೆ ಪಂದ್ಯಗಳನ್ನ ಗೆಲ್ಲುತ್ತಲೇ ವಿದರ್ಭಾ (Vidarbha) ತಂಡದ ನಾಗಾಲೋಟ ಸೆಮಿಫೈನಲ್​ನಲ್ಲಿ ಕರ್ನಾಟಕ (Karnataka Cricket Team) ಎದುರು ನಿಂತಿತು. ನಿನ್ನೆ ನಡೆದ ರೋಚಕ ಸೆಮಿಫೈನಲ್​ನಲ್ಲಿ ಕರ್ನಾಟಕ 4 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ವಿದರ್ಭಾ ತಂಡ ಸೋಲೊಪ್ಪುವ ಮುನ್ನ ವೀರೋಚಿತ ಹೋರಾಟವನ್ನಂತೂ ತೋರಿತು. ಈ ಪಂದ್ಯದಲ್ಲಿ ವಿದರ್ಭಾದ ವೇಗದ ಬೌಲರ್ ದರ್ಶನ್ ನಾಲಕಂಡೆ (Darshan Nalkande) ಹೊಸ ದಾಖಲೆ ಬರೆದರು. ಕರ್ನಾಟಕ ಇನ್ನಿಂಗ್ಸ್​ನ ಕೊನೆಯ ಓವರ್​ನಲ್ಲಿ ದರ್ಶನ್ 4 ಬಾಲ್​ನಲ್ಲಿ 4 ವಿಕೆಟ್ ಪಡೆದರು.

  ಈ ದಾಖಲೆ ಬರೆದ ಎರಡನೇ ಭಾರತೀಯ: ಟಿ20 ಕ್ರಿಕೆಟ್​ನಲ್ಲಿ ಕರ್ನಾಟಕದ ಅಭಿಮನ್ಯು ಬಿಟ್ಟರೆ ನಾಲ್ಕು ಬಾಲ್​ಗೆ ನಾಲ್ಕು ವಿಕೆಟ್ ಪಡೆದ ಸಾಧನೆ ಮಾಡಿದ ಎರಡನೇ ಭಾರತೀಯನೆಂದರೆ ದರ್ಶನ್ ನಾಲಕಂಡೆ. ಅಭಿಮನ್ಯು ಮಿಥುನ್ ಅವರು ಕಳೆದ ಸೀಸನ್​ನ ಎಸ್​ಎಂಎ ಟಿ20ಯಲ್ಲಿ ಈ ಸಾಧನೆ ಮಾಡಿದ್ದರು. ನಿನ್ನೆ ಕರ್ನಾಟಕ ವಿರುದ್ಧದ ಪಂದ್ಯದಲ್ಲೇ ವಿದರ್ಭಾದ ದರ್ಶನ್ ನಾಲಕಂಡೆ ಈ ದಾಖಲೆ ಸರಿಗಟ್ಟಿದ್ಧಾರೆ. 23 ವರ್ಷದ ದರ್ಶನ್ ನಿನ್ನೆಯ ಪಂದ್ಯದಲ್ಲಿ 4 ಓವರ್​ನಲ್ಲಿ 28 ರನ್ನಿತ್ತು 4 ವಿಕೆಟ್ ಪಡೆದರು. ಬಿ ಶರತ್, ಅಭಿನವ್ ಮನೋಹರ್, ಬಿ ಶರತ್ ಮತ್ತು ಜೆ ಸುಚಿತ್ ಈ ನಾಲ್ವರನ್ನ ದರ್ಶನ್ ಸತತ ಬಾಲ್​ಗಳಲ್ಲಿ ಔಟ್ ಮಾಡಿದರು.

  ಅಕ್ಷಯ್ ಕರ್ನೇವಾರ್ ಮ್ಯಾಜಿಕ್ ನಡೆಯಲಿಲ್ಲ:

  ದರ್ಶನ್ ನಾಲಕಂಡೆಯ ದಾಖಲೆ ಓವರ್​ನ ಸಾಧನೆ ಇಲ್ಲದೇ ಹೋಗಿದ್ದರೆ ಕರ್ನಾಟಕದ ಸ್ಕೋರು ಇನ್ನೂ 10 ರನ್​ಗಳಷ್ಟಾದರೂ ಹೆಚ್ಚಾಗುವ ಸಾಧ್ಯತೆ ಇತ್ತು. ಅಂತಿಮವಾಗಿ ಕರ್ನಾಟಕ 7 ವಿಕೆಟ್​ಗೆ 176 ರನ್ ಗಳಿಸಿತು. ರೋಹನ್ ಕದಮ್ ಮತ್ತು ಮನೀಶ್ ಪಾಂಡೆ ಅರ್ಧಶತಕಗಳನ್ನ ಭಾರಿಸಿದರು. ಅಭಿನವ್ ಮನೋಹರ್ 13 ಬಾಲ್​ನಲ್ಲಿ 27 ರನ್ ಗಳಿಸಿದರು. 19ನೇ ಓವರ್​ನಲ್ಲಿ ಕರುಣ್ ನಾಯರ್ ಔಟಾಗುವುದರೊಂದಿಗೆ ಕರ್ನಾಟಕದ ಕುಸಿತ ಆರಂಭವಾಯಿತು. 19ನೇ ಓವರ್​ನ 2ನೇ ಬಾಲ್​ನಿಂದ 5ನೇ ಬಾಲ್​ವರೆಗೂ ದರ್ಶನ್ ನಾಲಕಂಡೆ ಸತತವಾಗಿ ವಿಕೆಟ್ ಪಡೆದರು. ವಿದರ್ಭ ದುರದೃಷ್ಟಕ್ಕೆ ಇಡೀ ಟೂರ್ನಿಯಲ್ಲಿ ಮಿಂಚಿದ್ದ ಸ್ಪಿನ್ನರ್ ಅಕ್ಷಯ್ ಕರ್ನೇವಾರ್ (Akshay Karnewar) ಅವರ ಮ್ಯಾಜಿಕ್ ನಿನ್ನೆ ಕರ್ನಾಟಕದ ಮುಂದೆ ನಡೆಯಲಿಲ್ಲ.

  ಆದರೆ, ವಿದರ್ಭಾ ತಂಡ ಹೆಚ್ಚೂಕಡಿಮೆ ಈ ಬೃಹತ್ ಮೊತ್ತದ ಸನಿಹಕ್ಕೆ ಹೋಯಿತು. ಅಥರ್ವ ತೈದೆ, ಕರ್ನಾಟಕ ಮೂಲದ ಗಣೇಶ್ ಸತೀಶ್, ಅಕ್ಷಯ್ ವಾಡ್ಕರ್, ಶುಭಮ್ ದುಬೆ, ಅಪೂರ್ವ್ ವಾಂಖಡೆ, ಅಕ್ಷನ್ ಕರ್ನೇವಾರ್ ಉತ್ತಮ ಬ್ಯಾಟಿಂಗ್ ನಡೆಸಿ ಹೋರಾಟ ತೋರಿದರು. ಕೆ ಕಾರ್ಯಪ್ಪ ಮತ್ತು ವಿದ್ಯಾಧರ್ ಪಾಟೀಲ್ ಅವರ ಉತ್ತಮ ಬೌಲಿಂಗ್ ನೆರವನಿಂದ ಕರ್ನಾಟಕ ತಂಡ ರೋಚಕ ರೀತಿಯಲ್ಲಿ ಪಂದ್ಯವನ್ನು ಗೆಲ್ಲಲು ಸಾಧ್ಯವಾಯಿತು.

  ಇದನ್ನೂ ಓದಿ: Viral Video: ರಾಂಚಿ T20 ಪಂದ್ಯದ ಸಮಯದಲ್ಲಿ ನಿಯಮ ಉಲ್ಲಂಘಿಸಿದ ಅಭಿಮಾನಿ! ಮಾಡಿದ್ದೇನು ಗೊತ್ತೇ?

  ಪ್ರಯಾಸಕರ ಗೆಲುವುಗಳನ್ನ ಕಂಡಿದ್ದ ಕರ್ನಾಟಕ:

  ಕರ್ನಾಟಕ ತಂಡ ಪ್ರೀ ಕ್ವಾರ್ಟರ್ ಫೈನಲ್ ಮತ್ತು ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲೂ ಪ್ರಯಾಸಕರ ಗೆಲುವು ಸಾಧಿಸಿತ್ತು. ಕ್ವಾರ್ಟರ್ ಫೈನಲ್​ನಲ್ಲಿ ಬಂಗಾಳ ವಿರುದ್ಧ ಕರ್ನಾಟಕ ಗೆಲ್ಲಲು ಸೂಪರ್ ಓವರ್​ವರೆಗೂ ಸಾಗಬೇಕಾಯಿತು.

  ಆದರೆ, ವಿದರ್ಭಾ ತಂಡ ಪ್ಲೇಟ್ ಗ್ರೂಪ್​ನಿಂದ ಆರಂಭಿಸಿ ಕ್ವಾರ್ಟರ್ ಫೈನಲ್​ವರೆಗೆ ಪ್ರತಿಯೊಂದು ಪಂದ್ಯವನ್ನೂ ಸುಲಭವಾಗಿ ಜಯಿಸಿ ಸೆಮಿಫೈನಲ್​ಗೆ ಲಗ್ಗೆ ಹಾಕಿತ್ತು. ಆದರೆ, ಈ ಹಂತದಲ್ಲಿ ಕರ್ನಾಟಕದೆದುರು ವಿದರ್ಭಾ ಶರಣಾಗಬೇಕಾಯಿತು.

  ಇದನ್ನೂ ಓದಿ: Tim Paine- ನಾಲ್ಕು ವರ್ಷ ಹಿಂದಿನ ಅಶ್ಲೀಲ ಸಂದೇಶ; ಆಸ್ಟ್ರೇಲಿಯಾ ಟೆಸ್ಟ್ ನಾಯಕತ್ವ ತ್ಯಜಿಸಿದ ಟಿಮ್ ಪೈನೆ

  ಕರ್ನಾಟಕ-ತಮಿಳುನಾಡು ಫೈನಲ್:

  ನಾಳೆ ಸೋಮವಾರ ದೆಹಲಿಯಲ್ಲೇ ನಡೆಯುವ ಫೈನಲ್​ನಲ್ಲಿ ಕರ್ನಾಟಕ ಮತ್ತು ತಮಿಳುನಾಡು ಪ್ರಶಸ್ತಿಗಾಗಿ ಮುಖಾಮುಖಿಯಾಗಲಿವೆ. ತಮಿಳುನಾಡು ತಂಡ ಡಿಫೆಂಡಿಂಗ್ ಚಾಂಪಿಯನ್ ಆಗಿದೆ. ಎರಡು ಬಾರಿ ಟಿ20 ಚಾಂಪಿಯನ್ ಆಗಿರುವ ಕರ್ನಾಟಕ ಮತ್ತು ಡಿಫೆಂಡಿಂಗ್ ಚಾಂಪಿಯನ್ ಆಗಿರುವ ತಮಿಳುನಾಡು ನಡುವಿನ ಫೈನಲ್ ಹಣಾಹಣಿ ಭಾರೀ ರೋಚಕವಾಗಿರುವ ನಿರೀಕ್ಷೆ ಇದೆ.
  Published by:Vijayasarthy SN
  First published: