ಯುವೆಂಟಸ್ ಕ್ಲಬ್ ಪರ ಆಡುತ್ತಿರುವ ವಿಶ್ವದ ಶ್ರೇಷ್ಠ ಫುಟ್ಬಾಲರ್ ಕ್ರಿಸ್ಟಿಯಾನೊ ರೊನಾಲ್ಡೊ ಇಟಾಲಿಯನ್ ಸೀರಿ ಎ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಹಿಂದೆ ರಿಯಲ್ ಮ್ಯಾಡ್ರಿಡ್ ತಂಡವನ್ನು ಪ್ರತಿನಿಧಿಸುತ್ತಿದ್ದ ಕ್ರಿಸ್ಟಿಯಾನೊ ಕಳೆದ ವರ್ಷವಷ್ಟೇ ದಾಖಲೆ ಬೆಲೆಗೆ ಯುವೆಂಟಸ್ ಕ್ಲಬ್ ಪರ ಸಹಿ ಹಾಕಿದ್ದರು. ಇದೀಗ ಹೊಸ ಕ್ಲಬ್ಗೆ ಸೇರ್ಪಡೆಯಾದ ಒಂದು ವರ್ಷದಲ್ಲೇ ಇಟಾಲಿಯನ್ ಕ್ಲಬ್ನ ವರ್ಷದ ಆಟಗಾರನೆಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
2007 ರಲ್ಲಿ ಇಂಗ್ಲಿಷ್ ಪ್ರೀಮಿಯರ್ ಲೀಗ್ನಲ್ಲಿ ವರ್ಷದ ಆಟಗಾರನೆಂಬ ಹಿರಿಮೆಗೆ ರೊನಾಲ್ಡೊ ಪಾತ್ರರಾಗಿದ್ದರು. ಅಷ್ಟೇ ಅಲ್ಲದೆ ರಿಯಲ್ ಮ್ಯಾಡ್ರಿಡ್ ತಂಡದಲ್ಲಿದ್ದಾಗ 2014ರಲ್ಲಿ ಸ್ಪೇನ್ ಕ್ಲಬ್ನ ಶ್ರೇಷ್ಠ ಆಟಗಾರನ ಪ್ರಶಸ್ತಿ ಪಡೆದುಕೊಂಡಿದ್ದರು. ಇದೀಗ ಮೂರನೇ ಬಾರಿ ವರ್ಷದ ಶ್ರೇಷ್ಠ ಕ್ಲಬ್ ಆಟಗಾರನೆಂಬ ಪ್ರಶಸ್ತಿಯನ್ನು ಕ್ರಿಸ್ಟಿಯಾನೊ ತಮ್ಮದಾಗಿಸಿದ್ದಾರೆ. ಈ ಮೂಲಕ ಮೂರು ದೇಶಗಳ ಕ್ಲಬ್ನಲ್ಲಿ ವರ್ಷದ ಆಟಗಾರನೆಂಬ ಗುರುತಿಸಿಕೊಂಡ ಹಿರಿಮೆ ಕ್ರಿಸ್ಟಿಯಾನೊ ಪಾತ್ರರಾಗಿದ್ದಾರೆ.
ಈಗಾಗಲೇ ವಿಶ್ವ ಪುಟ್ಬಾಲ್ನ ಆಸ್ಕರ್ ಎಂದು ಕರೆಯಲ್ಪಡುವ ಬ್ಯಾಲನ್ ಡಿ ಒರ್ ಪ್ರಶಸ್ತಿಯನ್ನು ಫೋರ್ಚುಗಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಐದು ಬಾರಿ ಮುಡಿಗೇರಿಸಿಕೊಂಡಿದ್ದಾರೆ. ಈ ಸೀಸನ್ನಲ್ಲಿ ಯುವೆಂಟಸ್ ಪರ 21 ಗೋಲುಗಳನ್ನು ಬಾರಿಸಿ ಅಮೋಘ ಪ್ರದರ್ಶನ ನೀಡಿರುವ 34ರ ರೊನಾಲ್ಡೊಗೆ ಇದೀಗ ಸೀರಿ ಎ ಶ್ರೇಷ್ಠ ಆಟಗಾರನೆಂಬ ಗರಿ ಲಭಿಸಿದೆ.
ಮಾನವೀಯತೆ ಮೆರೆಯುವ ಕ್ರಿಸ್ಟಿಯಾನೊ ರೊನಾಲ್ಡೊ:
ಫುಟ್ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ತಾನೇಗೆ ಇತರೆ ವಿಶ್ವ ತಾರೆಗಳಿಕ್ಕಿಂತ ಭಿನ್ನ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಈಗಾಗಲೇ ಯುದ್ದದಿಂದ ತತ್ತರಿಸಿ ಹೋಗಿರುವ ಪ್ಯಾಲೆಸ್ತೀನ್ನ ಗಾಝಾ ನಿವಾಸಿಗಳಿಗಾಗಿ ಕ್ರಿಸ್ಟಿಯಾನೊ 1.5 ಮಿಲಿಯನ್ ಡಾಲರ್ ದಾನ ನೀಡಿದ್ದಾರೆ ಎಂದು ವರದಿಯಾಗಿದೆ. ಅಂದರೆ ಈ ಫುಟ್ಬಾಲ್ ದಿಗ್ಗಜ ನೀಡಿರುವುದು ಸುಮಾರು 10.5 ಕೋಟಿ ರೂ.
ಇಸ್ರೇಲ್ ದಾಳಿಯಿಂದ ತೀವ್ರ ಸಂಕಷ್ಟದಲ್ಲಿರುವ ಗಾಝಾ ನಗರದ ಮುಸ್ಲಿಮರು ಪವಿತ್ರ ರಂಜಾನ್ ಉಪವಾಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರ ನೆರೆವಿಗಾಗಿ ಕ್ರಿಸ್ಟಿಯಾನೊ ಬೃಹತ್ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ವಿಶ್ವ ಐಕ್ಯತೆ, ಸಾಮರಸ್ಯ, ಸೌಹಾರ್ದತೆಯನ್ನು ಸಾರಲು ಹಾಗೂ ಮಾನವೀಯತೆಯನ್ನು ಎತ್ತಿ ಹಿಡಿಯಲು ರೊನಾಲ್ಡೊ ಪ್ಯಾಲೆಸ್ತೀನಿಯರಿಗೆ ಸಹಾಯ ಮಾಡಿದ್ದಾರೆ ಎಂದು ಟೆಲಿಸರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ವಿಶ್ವದ ದುಬಾರಿ ಕ್ರೀಡಾಪಟು ಎನಿಸಿಕೊಂಡಿರುವ ಪೋರ್ಚುಗೀಸ್ ಸ್ಟ್ರೈಕರ್ ಸದ್ಯ ಯುವೆಂಟಸ್ ಕ್ಲಬ್ ಪರ ಆಡುತ್ತಿದ್ದಾರೆ. ಫುಟ್ಬಾಲ್ ಅಂಗಳದ ಆಕ್ರಮಣಕಾರಿ ಆಟಗಾರ ಎಂದೇ ಖ್ಯಾತಿ ಪಡೆದಿರುವ ಕ್ರಿಸ್ಟಿಯಾನೊ, ಮೈದಾನದ ಹೊರಗೆ ಮಾತ್ರ ಮಾನವೀಯತೆಯ ಸರದಾರನಾಗಿ ಹಲವು ಬಾರಿ ಗುರುತಿಸಿಕೊಂಡಿದ್ದರು.
2011 ರಲ್ಲಿ ದೊರೆತ 'ಗೋಲ್ಡನ್ ಬೂಟ್' ಪ್ರಶಸ್ತಿಯನ್ನು ಹರಾಜಿಗಿಟ್ಟಿದ್ದ ಪೋರ್ಚುಗಲ್ ತಾರೆ, ಇದರಿಂದ ದೊರೆತ 1.2 ಮಿಲಿಯನ್ ಪೌಂಡ್ ಮೊತ್ತವನ್ನು ಯುದ್ದ ಪೀಡಿತ ಪ್ಯಾಲೇಸ್ತೀನ್ನ ಶಾಲೆಗಳ ಪುನರ್ಸ್ಥಾಪನೆಗೆ ದಾನ ಮಾಡಿದ್ದರು. ಹಾಗೆಯೇ 2013 ರಲ್ಲಿ ಲಭಿಸಿದ ಫುಟ್ಬಾಲ್ ಲೋಕದ ಆಸ್ಕರ್ ಎಂದು ಕರೆಯಲ್ಪಡುವ 'ಬಾಲನ್ ಡಿ ಒರ್' ಪ್ರಶಸ್ತಿಯನ್ನು ಕೂಡ ಹರಾಜಿಗೆ ನೀಡಿದ್ದರು. ಇದರಿಂದ ದೊರೆತ 5.3 ಲಕ್ಷ ಪೌಂಡ್ ಅನ್ನು 'ಮೇಕ್ ಎ ವಿಶ್' ಎಂಬ ಸಂಸ್ಥೆಗೆ ನೀಡಿ ಅನಾರೋಗ್ಯ ಪೀಡಿತ ಮಕ್ಕಳ ಶ್ರುಶೂಷೆಗೆ ರೊನಾಲ್ಡೊ ನೆರವಾಗಿದ್ದರು.
2014 ರಲ್ಲಿ ರಿಯಲ್ ಮ್ಯಾಡ್ರಿಡ್ ತಂಡವನ್ನು 10ನೇ ಬಾರಿ ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಕ್ರಿಸ್ಟಿಯಾನೊ, ತನಗೆ ಸಿಕ್ಕಿದ ಪ್ರಶಸ್ತಿ ಮೊತ್ತವನ್ನು ಮೂರು ಸೇವಾ ಸಂಘಟನೆಗಳಿಗೆ ದಾನವಾಗಿ ನೀಡಿದ್ದರು. ಅದೇ ರೀತಿ ಸಾಮಾಜಿಕ ತಾಣದಲ್ಲಿ ವಿವಾದಕ್ಕೀಡಾಗಿದ್ದ 'ಐಸ್ ಬಕೆಟ್' ಚಾಲೆಂಜ್ನಲ್ಲೂ ಭಾಗವಹಿಸಿ ಲಭಿಸಿದ್ದ ಫಂಡ್ ಅನ್ನು 'ಮೊಟೊರ್ ನ್ಯೂರೊನ್' ಕಾಯಿಲೆ ಬಾಧಿಸಿದವರ ಚಿಕಿತ್ಸೆಗೆ ರೊನಾಲ್ಡೊ ನೀಡಿದ್ದರು. ಈ ರೀತಿಯಾಗಿ ಹಲವು ಬಾರಿ ಮಾನವೀಯತೆ ಮರೆದಿರುವ CR7 ಮತ್ತೊಮ್ಮೆ ಗಾಝಾ ಪಾಲಿನ ಜನರಿಗೆ ಸಹಾಯಹಸ್ತ ಚಾಚಿರುವುದು ಮೆಚ್ಚಲೇಬೇಕು.
ಇದನ್ನೂ ಓದಿ: ಧೋನಿಯನ್ನೂ ಮೀರಿಸುವಂತೆ ರನೌಟ್ ಮಾಡಿದ ಆದಿಲ್ ರಶೀದ್: ವಿಡಿಯೋ ವೈರಲ್
ನಿಮ್ಮ ನ್ಯೂಸ್ 18 ಕನ್ನಡವನ್ನು ಇನ್ಸ್ಟಾಗ್ರಾಂನಲ್ಲೂ ಹಿಂಬಾಲಿಸಿ