ಫುಟ್ಬಾಲ್ ಅಂಗಳದ ಆಕ್ರಮಣಕಾರಿ ಆಟಗಾರನೆಂದೇ ಖ್ಯಾತರಾಗಿರುವ ಪೋರ್ಚುಗಲ್ನ ಸೆನ್ಸೇಷನ್ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಂದು ವಿಶ್ವ ದಾಖಲೆಯತ್ತ ಮುಖ ಮಾಡಿದ್ದಾರೆ. ಬುಧವಾರ ನಡೆದ ಯುರೋ-2020 ಟೂರ್ನಿಯಲ್ಲಿ ಫ್ರಾನ್ಸ್ ವಿರುದ್ದ 2 ಗೋಲುಗಳನ್ನು ದಾಖಲಿಸುವ ಮೂಲಕ ರೊನಾಲ್ಡೊ ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ಅತೀ ಹೆಚ್ಚು ಗೋಲುಗಳಿಸಿದ ದಾಖಲೆಯನ್ನು ಸರಿಗಟ್ಟಿದ್ದಾರೆ.
ಹಂಗೇರಿಯ ಬುಡಾಪೆಸ್ಟ್ನಲ್ಲಿ ನಡೆದ ಈ ಪಂದ್ಯದಲ್ಲಿ 29ನೇ ನಿಮಿಷದಲ್ಲಿ ಫ್ರಾನ್ಸ್ ಗೋಲ್ ಕೀಪರ್ ಮಾಡಿದ ತಪ್ಪಿನಿಂದ ಪೆನಾಲ್ಟಿ ಪಡೆದ ಪೋರ್ಚುಗಲ್ ಪರ ಕ್ರಿಸ್ಟಿಯಾನೊ ಮೊದಲ ಗೋಲು ದಾಖಲಿಸಿದರು. ಆದರೆ ಮೊದಲಾರ್ಧದ ಅಂತಿಮ ಕ್ಷಣದಲ್ಲಿ ಪೆಪೆ ಎದುರಾಳಿ ಆಟಗಾರ ಎಂಬಾಪೆಯನ್ನು ನೆಲಕ್ಕುರುಳಿಸಿದ ಪರಿಣಾಮ ಫ್ರಾನ್ಸ್ಗೂ ಪೆನಾಲ್ಟಿ ಅವಕಾಶ ಲಭಿಸಿತು. ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ಕರೀಂ ಬೆನ್ಝಮಾ ಚೆಂಡನ್ನು ಗುರಿ ಮುಟ್ಟಿಸುವ ಮೂಲಕ ಗೋಲಿನ ಅಂತರವನ್ನು 1-1 ಸಮಬಲಗೊಳಿಸಿದರು.
ಇದರ ಬೆನ್ನಲ್ಲೇ 47 ನಿಮಿಷದಲ್ಲಿ ಬೆನ್ಝಮಾ ಮತ್ತೊಮ್ಮೆ ಮುನ್ನಗ್ಗಿ ಬಂದು ಚೆಂಡನ್ನು ಗೋಲು ಬಲೆಯೊಳಗೆ ತಲುಪಿಸಿದರು. ಇತ್ತ 2-1 ಅಂತರದಿಂದ ಹಿನ್ನಡೆ ಹೊಂದಿದ ಪೋರ್ಚುಗಲ್ ಹಲವು ಬಾರಿ ಫ್ರಾನ್ಸ್ ಗೋಲಿನತ್ತ ದಾಳಿ ನಡೆಸಿದರೂ ಪ್ರಯೋಜನವಾಗಲಿಲ್ಲ. 59 ನಿಮಿಷದಲ್ಲಿ ಫ್ರಾನ್ಸ್ ಡಿಫೆಂಡರ್ ರೊನಾಲ್ಡೊ ಬಾರಿಸಿ ಚೆಂಡನ್ನು ಕೈಯಲ್ಲಿ ತಡೆದ ಪರಿಣಾಮ ಪೋರ್ಚುಗಲ್ ತಂಡಕ್ಕೆ ಮತ್ತೊಂದು ಪೆನಾಲ್ಟಿ ಅವಕಾಶ ದೊರೆಯಿತು.
ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಕ್ರಿಸ್ಟಿಯಾನೊ ರೊನಾಲ್ಡೊ ಗೋಲಿನ ಅಂತರವನ್ನು 2-2 ಸಮಬಲಗೊಳಿಸಿದರು. ಇದಾಗ್ಯೂ ಉಭಯ ತಂಡಗಳಿಂದ ಅಂತಿಮ ಹಂತದವರೆಗೆ ಉತ್ತಮ ಹೋರಾಟ ಕಂಡು ಬಂದರೂ ಗೋಲುಗಳಿಸಲು ಸಾಧ್ಯವಾಗಿರಲಿಲ್ಲ. ಇದರೊಂದಿಗೆ ಪೋರ್ಚುಗಲ್-ಫ್ರಾನ್ಸ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡತಾಯಿತು.
ರೊನಾಲ್ಡೊ ಬಾರಿಸಿದ ಈ ಎರಡು ಗೋಲುಗಳ ನೆರವಿನಿಂದ ಫೋರ್ಚ್‌ಗಲ್ ಅಂತಿಮ ಯುರೋ ಕಪ್ನ 16ರ ಘಟ್ಟಕ್ಕೆ ತಲುಪಿದೆ. ಅಲ್ಲದೆ ಈ ಎರಡು ಗೋಲುಗಳ ಮೂಲಕ ಇರಾನಿನ ಮಾಜಿ ಫುಟ್ಬಾಲ್ ಆಟಗಾರ ಅಲಿ ಡೇರಿ ಹೆಸರಿನಲ್ಲಿರುವ 109 ಅಂತಾರಾಷ್ಟ್ರೀಯ ಗೋಲುಗಳ ದಾಖಲೆಯನ್ನು ಕ್ರಿಸ್ಟಿಯಾನೊಸರಿಗಟ್ಟಿದ್ದು, ಇನ್ನೊಂದು ಗೋಲು ಮೂಡಿಬಂದರೆ ವಿಶ್ವ ದಾಖಲೆ ನಿರ್ಮಾಣವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ