ಬೆಂಗಳೂರು: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವನ್ನ ಭಾರತ ಗೆದ್ದಿದೆ. ಈ ಮೂಲಕ ಸರಣಿಯಲ್ಲಿ 2-1 ಮುನ್ನಡೆ ಪಡೆದಿದೆ. ನಿನ್ನೆ ಮುಕ್ತಾಯಗೊಂಡ ರೋಚಕ ಹಣಾಹಣಿಯಲ್ಲಿ ಭಾರತಕ್ಕೆ 157 ರನ್ಗಳ ಭರ್ಜರಿ ಗೆಲುವು ಸಿಕ್ಕಿತು. ಬೌಲರ್ಗಳಿಗೆ ಅಸಹಕಾರಿಯಾಗಿದ್ದ ಪಿಚ್ನಲ್ಲೂ ಭಾರತದ ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿ ಇಂಗ್ಲೆಂಡ್ ಬ್ಯಾಟುಗಾರರನ್ನ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರೋಹಿತ್ ಶರ್ಮಾ ಮತ್ತು ಶಾರ್ದೂಲ್ ಠಾಕೂರ್ ಈ ಪಂದ್ಯದ ಹೀರೋಗಳಾದರೂ ಬೌಲರ್ಗಳ ಪಾತ್ರವೂ ನಿರ್ಣಾಯಕವೇ.
ಪಂದ್ಯದ ಕೊನೆಯ ದಿನ ಹಲವು ದಾಖಲೆ, ಮೈಲಿಗಲ್ಲು ಮತ್ತು ಸಾಧನೆಗಳು ಬಂದಿವೆ. ಅಂಥ ಕೆಲವು ಇಲ್ಲಿವೆ:
* ವಿದೇಶೀ ಪಿಚ್ಗಳಲ್ಲಿ ಮೊದಲ ಇನ್ನಿಂಗ್ಸಲ್ಲಿ 200ಕ್ಕೂ ಕಡಿಮೆ ರನ್ ಗಳಿಸಿಯೂ ಭಾರತ ಟೆಸ್ಟ್ ಪಂದ್ಯ ಗೆದ್ದದ್ದು ಇದು ಎರಡನೇ ಬಾರಿ. 2018ರಲ್ಲಿ ಜೋಹಾನ್ಸ್ಬರ್ಗ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಇನ್ನಿಂಗ್ಸಲ್ಲಿ 187 ರನ್ ಗಳಿಸಿದರೂ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.
* ದಿ ಓವಲ್ ಮೈದಾನದಲ್ಲಿ ಭಾರತಕ್ಕೆ ಸಿಕ್ಕ ಎರಡನೇ ಟೆಸ್ಟ್ ಗೆಲುವು ಇದು. 1971ರಲ್ಲಿ ಇಲ್ಲಿ ಭಾರತ ಮೊದಲ ಬಾರಿಗೆ ರೋಚಕ ಗೆಲುವು ಸಾಧಿಸಿತ್ತು. ಒಟ್ಟು 14 ಪಂದ್ಯಗಳನ್ನ ಭಾರತ ಈ ಮೈದಾನದಲ್ಲಿ ಆಡಿದೆ.
* ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಇಂಗ್ಲೆಂಡ್ ನೆಲದಲ್ಲಿ ಭಾರತ ತಂಡಕ್ಕೆ ಸಿಕ್ಕ 3ನೇ ಟೆಸ್ಟ್ ಗೆಲುವು ಇದು. ಈ ಸಾಧನೆ ಮಾಡಿದ ಏಕೈಕ ಭಾರತೀಯ ಕ್ಯಾಪ್ಟನ್ ವಿರಾಟ್ ಕೊಹ್ಲಿ. ಕಪಿಲ್ ದೇವ್ ಅವರ ನಾಯಕತ್ವದಲ್ಲಿ 2 ಟೆಸ್ಟ್ ಪಂದ್ಯಗಳನ್ನ ಇಲ್ಲಿ ಭಾರತ ಗೆದ್ದಿದೆ.
ಇದನ್ನೂ ಓದಿ: India Vs England Test: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ಓವಲ್ನಲ್ಲಿ 157 ರನ್ಗಳ ಜಯ
* ಇಂಗ್ಲೆಂಡ್ ನೆಲದಲ್ಲಿ ನಡೆದ ಟೆಸ್ಟ್ ಸರಣಿಯೊಂದರಲ್ಲಿ ಒಂದಕ್ಕಿಂತ ಹೆಚ್ಚು ಪಂದ್ಯಗಳನ್ನ ಭಾರತ ಗೆದ್ದಿದ್ದು ಇದು ಎರಡನೇ ಬಾರಿ. 1986ರಲ್ಲಿ ಭಾರತ 2-0ಯಿಂದ ಟೆಸ್ಟ್ ಸರಣಿ ಗೆದ್ದಿತ್ತು.
* ಇಂಗ್ಲೆಂಡ್ ತಂಡ 99ಕ್ಕೂ ಹೆಚ್ಚು ರನ್ಗಳ ಮೊದಲ ಇನ್ನಿಂಗ್ಸ್ ಲೀಡ್ ಪಡೆದೂ ಟೆಸ್ಟ್ ಪಂದ್ಯ ಸೋತಿದ್ದು ಇದು ಆರನೇ ಬಾರಿ. ತವರಿನ ನೆಲದಲ್ಲಿ ಇದು ಎರಡನೇ ಬಾರಿ ಮಾತ್ರ.
* ಜಸ್ಪ್ರೀತ್ ಬುಮ್ರಾ ಅತೀ ಕಡಿಮೆ ಪಂದ್ಯಗಳಲ್ಲಿ 100 ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ದಾಖಲೆಗೆ ಬಾಜನರಾಗಿದ್ದಾರೆ. ಇವರು 24 ಟೆಸ್ಟ್ ಪಮದ್ಯಗಳಲ್ಲಿ 100 ವಿಕೆಟ್ ಪಡೆದಿದ್ದಾರೆ. ಕಪಿಲ್ ದೇವ್ ಅವರು 100 ವಿಕೆಟ್ ಪಡೆಯಲು 25 ಪಂದ್ಯಗಳನ್ನ ಆಡಬೇಕಾಯಿತು.
* ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್ನಲ್ಲಿ ಗಳಿಸಿದ್ದು 8 ಶತಕ. ಇವರು ಶತಕ ಗಳಿಸಿದ ಟೆಸ್ಟ್ ಪಂದ್ಯಗಳೆಲ್ಲದರಲ್ಲೂ ಭಾರತ ಗೆದ್ದಿದೆ. ವಿಶ್ವದ ಬೇರೆ ಯಾವ ಆಟಗಾರನಿಗೂ ಈ ಶ್ರೇಯಸ್ಸು ಸಿಕ್ಕಿಲ್ಲ.
ಇದನ್ನೂ ಓದಿ: Ind vs Eng- ಕಳೆದ 54 ವರ್ಷದಲ್ಲೇ ದಾಖಲೆ; 350ಕ್ಕಿಂತ ಹೆಚ್ಚು ರನ್ ಟಾರ್ಗೆಟ್ ಕೊಟ್ಟಾಗೆಲ್ಲಾ ಭಾರತ ಸೋತಿದ್ದಿಲ್ಲ
* ಓವಲ್ ಟೆಸ್ಟ್ನಲ್ಲಿ ಭಾರತದ ಬೌಲರ್ಗಳು ಇಂಗ್ಲೆಂಡ್ ತಂಡದ ಬ್ಯಾಟುಗಾರರನ್ನ ಒಂಬತ್ತು ಬಾರಿ ಬೌಲ್ಡ್ ಔಟ್ ಆಗಿದ್ಧಾರೆ. ಇದು ದಾಖಲೆಯೇ. ಇಂಗ್ಲೆಂಡ್ ತಂಡಕ್ಕೂ ಇದು ಎರಡನೇ ಗರಿಷ್ಠವಾಗಿದೆ. 1994ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಒಂದು ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟುಗಾರರು 10 ಬಾರಿ ಬೌಲ್ಡ್ ಔಟ್ ಆಗಿದ್ದರು.
* ಈ ಟೆಸ್ಟ್ ಸರಣಿಯ ಮೂರೂ ಪಂದ್ಯಗಳಲ್ಲಿ ಗೆದ್ದ ತಂಡಗಳು ಟಾಸ್ ಸೋತಿದ್ದವು. ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿಯಲ್ಲಿ ಟಾಸ್ ಸೋತ ತಂಡಗಳು ಹೆಚ್ಚು ಗೆಲುವು ಪಡೆದ ದಾಖಲೆ ಸ್ಥಾಪನೆಯಾಗಿದೆ. ಈ ಸರಣಿಯಲ್ಲಿ ಭಾರತ ಲಂಡನ್ ಲಾರ್ಡ್ಸ್ ಮತ್ತು ದಿ ಓವಲ್ ಮೈದಾನದಲ್ಲಿ ನಡೆದ ಪಂದ್ಯಗಳನ್ನ ಭಾರತ ಗೆದ್ದಿದೆ. ಲೀಡ್ಸ್ನಲ್ಲಿ ಭಾರತ ಟಾಸ್ ಗೆದ್ದಿಯೂ ಪಂದ್ಯ ಸೋತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ