ಕೊಲೆ ಆರೋಪ ಎದುರಿಸುತ್ತಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್(Sushil Kumar)ಗೆ ದೆಹಲಿ ನ್ಯಾಯಾಲಯ ಜಾಮೀನು(Bail) ನೀಡಲು ನಿರಾಕರಿಸಿದೆ. ವಾದ–ಪ್ರತಿವಾದಗಳನ್ನು ಆಲಿಸಿರುವ ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್(Shivaji Anand) ಅವರು ಸುಶೀಲ್ ಕುಮಾರ್ ಅವರನ್ನು ಬಿಡುಗಡೆಗೊಳಿಸಲು ಅನುಮತಿಯನ್ನು ನಿರಾಕರಿಸಿದರು. "ನಾನು ನಿಜಕ್ಕೂ ತಪ್ಪು ಮಾಡಿಲ್ಲ. ನನ್ನ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿದ್ದಾರೆ. ನಾನೇ ಈ ಕೃತ್ಯ ಎಸಗಿದ್ದಾನೆ ಎಂದು ಬಿಂಬಿಸುತ್ತಿದ್ದಾರೆ. ನಾನು ಅಪರಾಧಿಯಲ್ಲ ನನಗೆ ಜಾಮೀನು ನೀಡಿ" ಎಂದು ಸುಶೀಲ್ ಕುಮಾರ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಸುಶೀಲ್ ಕುಮಾರ್ ಗೆ ನೀಡಲು ನಿರಾಕರಿಸಿದೆ. ಜೈಲಿನಿಂದ ಬಿಡುಗಡೆಯಾಗುತ್ತದೆ ಎಂಬ ಕನಸು ಕಂಡಿದ್ದ ಸುಶೀಲ್, ಮತ್ತೆ ಕಂಬಿ ಹಿಂದೆಯೇ ಕಾಲ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.
ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಕಂಚು ಹಾಗೂ ಲಂಡನ್ ಒಲಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ 38 ವರ್ಷದ ಕುಸ್ತಿಪಟು ಸುಶೀಲ್ ಕುಮಾರ್, ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಕುಸ್ತಿಪಟು ಸಾಗರದ ಅವರನ್ನು ಥಳಿಸಿ ಕೊಲೆಗೈದ ಆರೋಪದಲ್ಲಿ ಜೈಲು ಪಾಲಾಗಿದ್ದಾರೆ. ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಮೇ 23 ರಂದು ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ಜೂನ್ 2ರಂದು ಅವರನ್ನು ಜೈಲಿಗೆ ರವಾನಿಸಲಾಗಿತ್ತು.
ಜೈಲು ಸೇರಿದಾಗಿನಿಂದಲೂ ಜಾಮೀನು ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಹೇಗಾದರೂ ಮಾಡಿ ಹೊರಬರಲು ಸತತ ಪ್ರಯತ್ನ ನಡೆಸುತ್ತಿದ್ದರು. ಸುಶೀಲ್ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸುತ್ತಲೇ ಬಂದಿದ್ದಾರೆ. ಸುಶೀಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೆಚ್ಚುವರಿ ಸೆಷನ್ ಕೋರ್ಟ್ ಜಾಮೀನು ನೀಡಲು ನಿರಾಕರಿಸಿದೆ. ಸುಶೀಲ್ ಪರ ವಕೀಲರು ಹಾಗೂ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನಡುವೆ ವಾದ-ವಿವಾದಗಳು ನಡೆದಿವೆ. ಬಳಿಕ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.
ಇದನ್ನು ಓದಿ: Viral Story: ಪೆಟ್ರೋಲ್ ಬಂಕ್ನಲ್ಲಿ ಟ್ರಕ್ ಹಿಂದೆ ಟಾರ್ಚ್ಲೈಟ್ ಬೆಳಕಿನಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ..!
ಮೇ 4ರಂದು ದೆಹಲಿಯ ಛತ್ರಸಾಲ್ ಕ್ರೀಡಾಂಗಣ (Chhatrasal Stadium)ದಲ್ಲಿ
ಕುಸ್ತಿ ಕೂಟ ಆಯೋಜಿಸಲಾಗಿತ್ತು. ಈ ವೇಳೆ ಯುವ ಕುಸ್ತಿಪಟು ಸಾಗರ ರಾಣಾ ಅವರ ಕೊಲೆಯಾಗಿತ್ತು. ಈ ಮರ್ಡರ್ ಕೇಸ್ ನಲ್ಲಿ ಸುಶೀಲ್ ಕುಮಾರ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು. ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ(Sagar Rana) ಮತ್ತು ಅವರ ಗೆಳೆಯರಾದ ಸೋನು(Sonu) ಮತ್ತು ಅಮಿತ್ ಕುಮಾರ್(Amith Kumar) ಮೇಲೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು. ಇದರಲ್ಲಿ ಸುಶೀಲ್ ಮತ್ತು ಅವರ ಸಹಚರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಾಗರ್ ರಾಣಾ ನಂತರ ಮೃತಪಟ್ಟಿದ್ದರು. ಮೆದುಳಿಗೆ ಹಾನಿಯುಂಟಾಗಿ ಸಾಗರ್ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಹೇಳಲಾಗಿತ್ತು.
ಇದನ್ನು ಓದಿ: Chaiwali: ಗಂಡನ ಮೇಲಿನ ಪ್ರೀತಿಗಾಗಿ 31 ವರ್ಷದಿಂದ ಚಹಾ ಮಾತ್ರ ಕುಡಿಯುತ್ತ ಬದುಕುತ್ತಿದ್ದಾಳೆ ಈಕೆ!
ಇದಾದ ಬಳಿಕ ತಲೆಮರೆಸಿಕೊಂಡಿದ್ದ ಸುಶೀಲ್ ಕುಮಾರ್ ನನ್ನು ಬಂಧಿಸಲು ಪೊಲೀಸರು ತೀವ್ರ ಪ್ರಯತ್ನ ನಡೆಸಿದ್ದರು. ಕುಸ್ತಿಪಟು ಸುಶೀಲ್ ಕುಮಾರ್ ಬಗ್ಗೆ ಸುಳಿವು ನೀಡಿದವರಿಗೆ ಒಂದು ಲಕ್ಷ ರೂ, ಆತನ ಸಹಚರ ಅಜಯ್ ಬಗ್ಗೆ ಮಾಹಿತಿ ನೀಡಿದವರಿಗೆ 50,000 ರೂ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಮೇ 23ರಂದು ಸುಶೀಲ್ ಕುಮಾರ್ ಹಾಗೂ ಆತನ ಸಹಚರ ಅಜಯ್ ಪಂಜಾಬ್ ನಲ್ಲಿ ಇರುವ ಬಗ್ಗೆ ಮಾಹಿತಿ ದೊರೆತಿತ್ತು. ಪಂಜಾಬ್ ಗೆ ತೆರಳಿದ ದೆಹಲಿ ಪೊಲೀಸರು ಇಬ್ಬರನ್ನು ಬಂಧಿಸಿ ಕರೆತಂದಿದ್ದರು.
ವರದಿ - ವಾಸುದೇವ್.ಎಂ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ