Eng Vs Pak Test Match- ಸೋಲಿನ ಸುಳಿಯಿಂದ ಪಾರಾಗಿ ಪಾಕಿಸ್ತಾನವನ್ನು ಮಣಿಸಿದ ಇಂಗ್ಲೆಂಡ್

ಮ್ಯಾಂಚೆಸ್ಟರ್​ನ ಓಲ್ಡ್ ಟ್ರಫಾರ್ಡ್​ನಲ್ಲಿ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯರು 3 ವಿಕೆಟ್​ಗಳಿಂದ ರೋಚಕ ಗೆಲುವು ಸಾಧಿಸಿದರು.

ಇಂಗ್ಲೆಂಡ್​ಗೆ ಗೆಲುವು ತಂದುಕೊಟ್ಟ ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್

ಇಂಗ್ಲೆಂಡ್​ಗೆ ಗೆಲುವು ತಂದುಕೊಟ್ಟ ಜೋಸ್ ಬಟ್ಲರ್ ಮತ್ತು ಕ್ರಿಸ್ ವೋಕ್ಸ್

  • Share this:
ಲಂಡನ್: ಪ್ರವಾಸಿ ಪಾಕಿಸ್ತಾನ ಮತ್ತು ಆತಿಥೇಯ ಇಂಗ್ಲೆಂಡ್ ನಡುವಿನ ಅತಿರೋಚಕ ಟೆಸ್ಟ್ ಪಂದ್ಯಕ್ಕೆ ಮ್ಯಾಂಚೆಸ್ಟರ್ ನಗರದ ಓಲ್ಡ್ ಟ್ರಫಾರ್ಡ್ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಿತು. ಟೆಸ್ಟ್ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 3 ವಿಕೆಟ್​ಗಳಿಂದ ರೋಚಕ ಗೆಲುವು ಸಾಧಿಸಿತು. ಸೋಲಿನ ಸುಳಿಯಲ್ಲಿದ್ದ ಇಂಗ್ಲೆಂಡ್ ತಂಡವನ್ನು ಕ್ರಿಸ್ ವೋಕ್ಸ್ ಮತ್ತು ಜೋಸ್ ಬಟ್ಲರ್ ಗೆಲುವಿನ ದಡ ಮುಟ್ಟಿಸಿದರು.

ಎರಡನೇ ಇನ್ನಿಂಗ್ಸ್​ನಲ್ಲಿ ಗೆಲ್ಲಲು 277 ರನ್ ಬೆನ್ನತ್ತಿದ ಇಂಗ್ಲೆಂಡ್ ಒಂದು ಹಂತದಲ್ಲಿ 1 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿತ್ತು. ನಂತರ ದಿಢೀರ್ ಪತನ ಕಂಡು 117 ರನ್​ಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. ಆದರೆ, ಕ್ರಿಸ್ ವೋಕ್ಸ್ ಮತ್ತು ಜೋಸ್ ಬಟ್ಲರ್ ಇಬ್ಬರೂ 6ನೇ ವಿಕೆಟ್​ಗೆ 139 ರನ್ ಜೊತೆಯಾಟ ಆಡಿ ತಂಡವನ್ನು ಗೆಲುವಿನ ಗಡಿ ಸಮೀಪ ಮುಟ್ಟಿಸಿದರು. ಬಟ್ಲರ್ 75 ರನ್ ಗಳಿಸಿ ಔಟಾದರೆ, ಕ್ರಿಸ್ ವೋಕ್ಸ್ ಅಜೇಯ 84 ರನ್ ಗಳಿಸಿ ಇಂಗ್ಲೆಂಡ್ ಗೆಲುವನ್ನು ಖಾತ್ರಿಪಡಿಸಿದರು. ಪಂದ್ಯಶ್ರೇಷ್ಠ ಗೌರವ ಕೂಡ ಅವರಿಗೆ ಪಾತ್ರವಾಯಿತು.

ಈ ಪಂದ್ಯದ ಮೊದಲ ಎರಡು ದಿನ ಪಾಕಿಸ್ತಾನದ ಪ್ರಾಬಲ್ಯವೇ ಪ್ರಮುಖವಾಗಿತ್ತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಮೊದಲ ಇನ್ನಿಂಗ್ಸಲ್ಲಿ 326 ರನ್ ಗಳಿಸಿತು. ಶಾನ್ ಮಸೂದ್ ಭರ್ಜರಿ ಶತಕ (156 ರನ್) ಗಳಿಸಿದರು. ಬಾಬರ್ ಅಝಮ್ 69 ಹಾಗೂ ಶದಾಬ್ ಖಾನ್ 45 ರನ್ ಗಳಿಸಿದ ಫಲವಾಗಿ ಪಾಕಿಸ್ತಾನ 300 ರನ್ ಗಡಿ ದಾಟಿ ಹೋಗಲು ಶಕ್ಯವಾಯಿತು.

ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್​ನ ಮೊದಲ ಇನ್ನಿಂಗ್ಸ್ 219 ರನ್​ಗೆ ಮಗುಚಿಕೊಂಡಿತು. ಓಲೀ ಪೋಪ್ ಅವರೊಬ್ಬರೇ ಅರ್ಧಶತಕ ಭಾರಿಸಿದ್ದು. ಯಾಸಿರ್ ಶಾ ನೇತೃತ್ವದಲ್ಲಿ ಪಾಕಿಸ್ತಾನದ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ತತ್ತರಿಸಿತು.

ಆದರೆ, ಎರಡನೇ ಇನ್ನಿಂಗ್ಸಲ್ಲಿ ಇಂಗ್ಲೆಂಡ್ ಭರ್ಜರಿ ಕಂಬ್ಯಾಕ್ ಮಾಡಿತು. 107 ರನ್​ಗಳ ಮೊದಲ ಇನ್ನಿಮಗ್ಸ್ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆಡಿದ ಪಾಕಿಸ್ತಾನ ಕೇವಲ 169 ರನ್​ಗೆ ಆಲೌಟ್ ಆಯಿತು. ಇದರೊಂದಿಗೆ ಪಂದ್ಯ ಮತ್ತೆ ಕುತೂಹಲಕಾರಿ ತಿರುವು ಪಡೆಯಿತು. ಪಾಕಿಸ್ತಾನದ ಈ ಎರಡನೇ ಇನ್ನಿಂಗ್ಸಲ್ಲಿ ಯಾಸಿರ್ ಶಾ 33 ರನ್ ಗಳಿಸಿದ್ದೇ ವೈಯಕ್ತಿಕ ಗರಿಷ್ಠ ಸ್ಕೋರ್ ಆಯಿತು. ಇಂಗ್ಲೆಂಡ್ ಬೌಲರ್​ಗಳಾದ ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್, ಬೆನ್ ಸ್ಟೋಕ್ಸ್ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದರು.

ಆ ನಂತರ ಗೆಲ್ಲಲು 277 ರನ್ ಗುರಿ ಪಡೆದ ಇಂಗ್ಲೆಂಡ್ ರೋಚಕ ತಿರುವುಗಳನ್ನ ದಾಟಿ ಗೆಲುವಿನ ದಟ ಮುಟ್ಟಿ ಸೈ ಎನಿಸಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಕೊಡುಗೆ ನೀಡಿದ ಕ್ರಿಸ್ ವೋಕ್ಸ್ ಪಂದ್ಯಶ್ರೇಷ್ಠ ಗೌರವ ಪಡೆದರು.

ಮುಂದಿನ ಪಂದ್ಯಗಳು:

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇದು ಮೊದಲ ಪಂದ್ಯವಾಗಿದೆ. ಮುಂದಿನ ಟೆಸ್ಟ್ ಪಂದ್ಯ ಸೌತಾಂಪ್ಟನ್​ನಲ್ಲಿ ಆಗಸ್ಟ್ 13ರಂದು ಪ್ರಾರಂಭವಾಗುತ್ತದೆ. 3 ಪಂದ್ಯ ಅದೇ ನಗರದಲ್ಲಿ ಆಗಸ್ಟ್ 21ರಿಂದ ನಡೆಯಲಿದೆ. ಟೆಸ್ಟ್ ಸರಣಿಯ ನಂತರ ಎರಡೂ ತಂಡಗಳು 3 ಪಂದ್ಯಗಳ ಟಿ20 ಸರಣಿಯಲ್ಲೂ ಮುಖಾಮುಖಿಯಾಗಲಿವೆ.

ಟೆಸ್ಟ್ ಚಾಂಪಿಯನ್​ಶಿಪ್​ಗೆ ಅಂಕಗಳು:

ಇಂಗ್ಲೆಂಡ್ ತಂಡ ಮ್ಯಾಂಚೆಸ್ಟರ್ ಪಂದ್ಯದ ಗೆಲುವಿನ ಬಳಿಕ 40 ಪಾಯಿಂಟ್ ಸಂಗ್ರಹಿಸಿತು. ಐಸಿಸಿ ಟೆಸ್ಟ್ ಚಾಂಪಿಯನ್​ಶಿಪ್​ನಲ್ಲಿ ಅದರ ಪಾಯಿಂಟ್ ಮೊತ್ತ 266ಕ್ಕೆ ಏರಿದಂತಾಗಿದೆ. 360 ಪಾಯಿಂಟ್ಸ್ ಹೊಂದಿರುವ ಭಾರತ ಸದ್ಯ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 296 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ 140 ಪಾಯಿಂಟ್​ಗಳೊಂದಿಗೆ 5ನೇ ಸ್ಥಾನದಲ್ಲಿದೆ. ವರ್ಷಾಂತ್ಯಕ್ಕೆ ಅತಿ ಹೆಚ್ಚು ಅಂಕ ಹೊಂದಿರುವ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಪಟ್ಟ ಗಳಿಸಲಿದೆ.

ಸ್ಕೋರು ವಿವರ:

ಪಾಕಿಸ್ತಾನ ಮೊದಲ ಇನ್ನಿಂಗ್ಸ್ 109.3 ಓವರ್ 326 ರನ್ ಆಲೌಟ್
(ಶಾನ್ ಮಸೂದ್ 156, ಬಾಬರ್ ಅಜಮ್ 69, ಶದಾಬ್ ಖಾನ್ 45, ಅಬಿದ್ ಅಲಿ 16 ರನ್ – ಸ್ಟುವರ್ಟ್ ಬ್ರಾಡ್ 54/3, ಜೋಫ್ರಾ ಆರ್ಚರ್ 59/3, ಕ್ರಿಸ್ ವೋಕ್ಸ್ 43/2).

ಇಂಗ್ಲೆಂಡ್ ಮೊದಲ ಇನಿಂಗ್ಸ್ 70.3 ಓವರ್ 219 ರನ್ ಆಲೌಟ್
(ಓಲಿ ಪೋಪ್ 62, ಜೋ ಬಟ್ಲರ್ 38, ಸ್ಟುವರ್ಟ್ ಬ್ರಾಡ್ ಅಜೇಯ 29, ಕ್ರಿಸ್ ವೋಕ್ಸ್ 19, ಜೋಫ್ರಾ ಆರ್ಚರ್ 16, ಜೋ ರೂಟ್ 14 ರನ್ – ಯಾಸಿರ್ ಶಾ 66/4, ಶದಾಬ್ ಖಾನ್ 13/2, ಮೊಹಮ್ಮದ್ ಅಬ್ಬಾಸ್ 33/2)

ಪಾಕಿಸ್ತಾನ ಎರಡನೇ ಇನಿಂಗ್ಸ್ 46.4 ಓವರ್ 169 ರನ್ ಆಲೌಟ್
(ಯಾಸಿರ್ ಶಾ 33, ಅಸದ್ ಶಫಿಕ್ 29, ಮೊಹಮ್ಮದ್ ರಿಜ್ವಾನ್ 27, ಅಬಿದ್ ಅಲಿ 20, ಅಜರ್ ಅಲಿ 18, ಶದಾಬ್ ಖಾನ್ 15 ರನ್ – ಸ್ಟುವರ್ಟ್ ಬ್ರಾಡ್ 37/3, ಕ್ರಿಸ್ ವೋಕ್ಸ್ 11/1, ಬೆನ್ ಸ್ಟೋಕ್ಸ್ 11/2)

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 82.1 ಓವರ್ 277/7
(ಕ್ರಿಸ್ ವೋಕ್ಸ್ ಅಜೇಯ 84, ಜೋಸ್ ಬಟ್ಲರ್ 75, ಜೋ ರೂಟ್ 42, ಡಾಮ್ ಸಿಬ್ಲೇ 36, ರೋರಿ ಬರ್ನ್ಸ್ 10 ರನ್ – ಯಾಸಿರ್ ಶಾ 99/4).
Published by:Vijayasarthy SN
First published: