ಬೆಂಗಳೂರು (ಫೆ. 04): ಅಬುಧಾಬಿಯಲ್ಲಿ ಸಾಗುತ್ತಿರುವ ಟಿ-10 ಲೀಗ್ ಸಾಕಷ್ಟು ರೋಚಕತೆ ಸೃಷ್ಟಿಸುತ್ತಿದೆ. ಬ್ಯಾಟ್ಸ್ಮನ್ಗಳ ಆರ್ಭಟ ಊಹೆಗೂ ಸಿಲುಕದಂತಿದೆ. ನಿನ್ನೆ ನಡೆದ ಮರಾಠಾ ಅರೇಬಿಯನ್ಸ್ ವಿರುದ್ಧದ ಪಂದ್ಯದಲ್ಲಿ ಟೀಂ ಅಬುಧಾಬಿ ವೆಸ್ಟ್ ಇಂಡೀಸ್ ದಾಂಡಿಗ ಕ್ರಿಸ್ ಗೇಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಮನಬಂದಂತೆ ಬ್ಯಾಟ್ ಬೀಸಿದ ಗೇಲ್ ಕೇವಲ 22 ಎಸೆತಗಳಲ್ಲಿ 84 ರನ್ ಚಚ್ಚಿ ದಾಖಲೆ ಬರೆದರು ಎಂಬುದು ವಿಶೇಷ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಮರಾಠಾ ತಂಡ ನಿಗದಿತ 10 ಓವರ್ಗಳಲ್ಲಿ4 ವಿಕೆಟ್ ಕಳೆದುಕೊಂಡು 97 ರನ್ ಸಿಡಿಸಿತು. ಅಲಿಶಾನ್ ಶರಫ್ 33 ರನ್ ಹಾಗೂ ಹಫೀಜ್ 20 ರನ್ ಬಾರಿಸಿದರು. ಇತ್ತ ಟಾರ್ಗೆಟ್ ಬೆನ್ನಟ್ಟಿದ ಟೀಂ ಅಬುಧಾಬಿ ಪರ ಆರಂಭಿಕನಾಗಿ ಕಣಕ್ಕಿಳಿದ ಕ್ರಿಸ್ ಗೇಲ್ ಮೊದಲ ಓವರ್ನಿಂದಲೇ ಅಬ್ಬರಿಸಲು ಶುರುಮಾಡಿದರು.
Video: ಚೆಂಡು ಬೌಂಡರಿ ಲೈನ್ ಕಡೆ ಹೋಗುತ್ತಿದ್ದರೆ, ಫೀಲ್ಡರ್ ಜೆರ್ಸಿ ಬದಲಿಸುತ್ತಿದ್ದ..!
2.2 ಓವರ್ ಹೊತ್ತಿಗೆ ಟೀಂ ಅಬಿಧಾಬಿ 47 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿತು. ಆದರೂ ಗೇಲ್ ಆರ್ಭಟ ನಂತರವೂ ಮುಂದುವರಿಯಿತು. ಚೆಂಡನ್ನು ಬೌಂಡರಿ-ಸಿಕ್ಸರ್ಗೆ ಅಟ್ಟಿದ ಗೇಲ್ ಬೌಲರ್ಗಳ ಬೆವರಿಳಿಸಿ ಬಿಟ್ಟರು. ಹೀಗೆ ಕೇವಲ 5.3 ಓವರ್ನಲ್ಲೇ ಅಬುಧಾಬಿ 100 ರನ್ ಸಿಡಿಸಿ ಅಮೋಘ ಗೆಲುವು ಸಾಧಿಸಿತು.
ಕ್ರಿಸ್ ಗೇಲ್ ಕೇವಲ 22 ಎಸೆತಗಳಲ್ಲಿ 6 ಬೌಂಡರಿ ಹಾಗೂ 9 ಅಮೋಘ ಸಿಕ್ಸರ್ನೊಂದಿಗೆ ಅಜೇಯ 84 ರನ್ ಗಳಿಸಿದರು. ಅಲ್ಲದೆ ಕೇವಲ 12 ಎಸೆತಗಳಲ್ಲಿ 50 ರನ್ ಬಾರಿಸುವ ಮೂಲಕ ತನ್ನ ಹೆಸರಿನಲ್ಲೇ ಇರುವ ಅತೀ ವೇಗ ಅರ್ಧ ಶತಕ ದಾಖಲೆಯನ್ನು ಸರಿದೂಗಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ