ಮಾರ್ಚ್ 3ರಿಂದ ಶ್ರೀಲಂಕಾ ವಿರುದ್ಧ ಆರಂಭಗೊಳ್ಳಲಿರುವ ಟಿ20 ಕ್ರಿಕೆಟ್ ಸರಣಿಗಾಗಿ ವೆಸ್ಟ್ ಇಂಡೀಸ್ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ 41 ವರ್ಷದ ಕ್ರಿಸ್ ಗೇಲ್ ಹಾಗೂ 39 ವರ್ಷದ ಫಿಡೆಲ್ ಎಡ್ವರ್ಡ್ಸ್ ಸ್ಥಾನ ಪಡೆದಿದ್ದಾರೆ. ಗೇಲ್ 2019 ರಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದರು. ಇದೀಗ 3 ವರ್ಷಗಳ ಬಳಿಕ ರಾಷ್ಟ್ರೀಯ ತಂಡಕ್ಕೆ ಯುನಿವರ್ಸ್ ಬಾಸ್ ರಿ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಮುಂಬರುವ ಟಿ20 ವಿಶ್ವಕಪ್ನಲ್ಲೂ ಕೆರಿಬಿಯನ್ ದೈತ್ಯ ಬ್ಯಾಟ್ಸ್ಮನ್ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
ಇನ್ನು 2012 ರಲ್ಲಿ ಕೊನೆಯ ಬಾರಿ ಟಿ20 ಪಂದ್ಯವನ್ನಾಡಿರುವ ಫಿಡೆಲ್ ಎಡ್ವರ್ಡ್ಸ್ 9 ವರ್ಷಗಳ ಬಳಿಕ ತಂಡದಲ್ಲಿ ಸ್ಥಾನ ಪಡೆದು ಅಚ್ಚರಿ ಮೂಡಿಸಿದ್ದಾರೆ. ಕಳೆದ ಬಾರಿ ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಮಿಂಚಿದ್ದ ಫಿಡೆಲ್ ಇತ್ತೀಚೆಗಷ್ಟೇ ರಾಷ್ಟ್ರೀಯ ತಂಡಕ್ಕೆ ಮರಳುವ ವಿಶ್ವಾಸ ವ್ಯಕ್ತಪಡಿಸಿದ್ದರು. ಇನ್ನು ವೆಸ್ಟ್ ಇಂಡೀಸ್ ತಂಡವನ್ನು ಕೀರನ್ ಪೊಲಾರ್ಡ್ ಮುನ್ನಡೆಸಲಿದ್ದು, ಉಪನಾಯಕನಾಗಿ ನಿಕೋಲಸ್ ಪೂರನ್ ಆಯ್ಕೆಯಾಗಿದ್ದಾರೆ.
ವೆಸ್ಟ್ ಇಂಡೀಸ್ನ ಅಂಟಿಗುವಾದಲ್ಲಿ ಮಾರ್ಚ್ 3 ರಂದು ಮೊದಲ ಟಿ20 ಪಂದ್ಯ ನಡೆಯಲಿದ್ದು, 2ನೇ ಪಂದ್ಯವು 5 ರಂದು ಜರುಗಲಿದೆ. ಹಾಗೆಯೇ ಮೂರನೇ ಟಿ20 ಪಂದ್ಯವು ಮಾರ್ಚ್ 7ರಂದು ನಡೆಯಲಿದೆ. ಇದರ ಬೆನ್ನಲ್ಲೇ ಮಾರ್ಚ್ 10 ರಿಂದ ಏಕದಿನ ಪಂದ್ಯ ನಡೆಯಲಿದೆ.
ವೆಸ್ಟ್ ಇಂಡೀಸ್ ಟಿ 20 ತಂಡ : ಕೀರನ್ ಪೊಲಾರ್ಡ್(ನಾಯಕ) ನಿಕೋಲಸ್ ಪೂರನ್(ಉಪ ನಾಯಕ), ಫ್ಯಾಬಿಯನ್ ಅಲೆನ್, ಡ್ವೇನ್ ಬ್ರಾವೋ, ಫಿಡೆಲ್ ಎಡ್ವರ್ಡ್ಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಜೇಸನ್ ಹೋಲ್ಡರ್, ಅಕೀಲ್ ಹೊಸೈನ್, ಎವಿನ್ ಲೂಯಿಸ್, ಒಬೆಡ್ ಮೆಕಾಯ್, ರೋವ್ಮನ್ ಪೊವೆಲ್, ಲೆಂಡ್ಲ್ ಸಿಮನ್ಸ್, ಕೆವಿನ್ ಸಿಂಕ್ಲೇರ್
ಏಕದಿನ ತಂಡ : ಕೀರನ್ ಪೊಲಾರ್ಡ್(ನಾಯಕ), ಶಾಹ್ ಹೋಪ್(ಉಪ ನಾಯಕ) ಫ್ಯಾಬಿಯನ್ ಅಲೆನ್, ಡೇರನ್ ಬ್ರಾವೋ, ಜೇಸನ್ ಹೋಲ್ಡರ್, ಅಕೀಲ್ ಹೊಸೈನ್, ಅಲ್ಜಾರಿ ಜೋಸೆಫ್, ಎವಿನ್ ಲೂಯಿಸ್, ಕೈಲ್ ಮೇಯರ್ಸ್,ಜೇಸನ್ ಮೊಹಮ್ಮದ್, ನಿಕೋಲಸ್ ಪೂರನ್, ಶೆಫರ್ಡ್, ಕೆವಿನ್ ಸಿಂಕ್ಲೇರ್ ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ