ಮುಂಬೈ, ಡಿ. 31: ಭಾರತ ಟಿ20 ಮತ್ತು ಓಡಿಐ ತಂಡಗಳ ಕ್ಯಾಪ್ಟನ್ಸಿ ವಿಚಾರದಲ್ಲಿ ವಿರಾಟ್ ಕೊಹ್ಲಿ ಮತ್ತು ಬಿಸಿಸಿಐ ಮಧ್ಯೆ ವಿವಾದ ಮತ್ತು ಭಿನ್ನಾಭಿಪ್ರಾಯದ ಹೇಳಿಕೆಗಳು ಬಂದದ್ದು ಹೌದು. ವಿರಾಟ್ ಕೊಹ್ಲಿ ಟಿ20 ಕ್ಯಾಪ್ಟನ್ಸಿಗೆ ವಿದಾಯ ಹೇಳಿದ್ದು, ಬಿಸಿಸಿಐ ವಿರಾಟ್ ಕೊಹ್ಲಿಯ ಓಡಿಐ ಕ್ಯಾಪ್ಟನ್ಸಿಯನ್ನೂ ಹಿಂಪಡೆದದ್ದು, ಕೊಹ್ಲಿಗೆ ಟಿ20 ಕ್ಯಾಪ್ಟನ್ಸಿ ಬಿಡಬೇಡವೆಂದರೂ ಕೇಳಲಿಲ್ಲವೆಂದು ಗಂಗೂಲಿ ಹೇಳಿದ್ದು, ಅದಕ್ಕೆ ತದ್ವಿರುದ್ಧವಾಗಿ ಕೊಹ್ಲಿ ಹೇಳಿಕೆ ನೀಡಿದ್ದು, ಅಲ್ಲದೇ ಓಡಿಐ ಕ್ಯಾಪ್ಟನ್ಸಿ ಹಿಂಪಡೆಯುವ ವಿಚಾರವನ್ನ ಮುಂಚಿತವಾಗಿ ತನಗೆ ಯಾರೂ ತಿಳಿಸಲಿಲ್ಲ ಎಂದು ಕೊಹ್ಲಿ ಹೇಳಿದ್ದು ಇವೆಲ್ಲಾ ನಾಟಕೀಯ ಬೆಳವಣಿಗೆಗಳು ಒಂದೆರಡು ತಿಂಗಳಲ್ಲಿ ಭಾರತೀಯ ಕ್ರಿಕೆಟ್ ಅನ್ನು ಅಲುಗಾಡಿಸಿವೆ.
ಸೌತ್ ಆಫ್ರಿಕಾ ಸರಣಿಗೆ ಮುನ್ನ ದಿಢೀರ್ ಪತ್ರಿಕಾಗೋಷ್ಠಿ ನಡೆಸಿ ವಿರಾಟ್ ಕೊಹ್ಲಿ ನೀಡಿದ್ದ ಹೇಳಿಕೆಗಳಿಗೆ ಇದೂವರೆಗೆ ನಿರಾಕರಣೆಯಾಗಲೀ, ಪ್ರತಿಕ್ರಿಯೆ ಬಂದಿರಲಿಲ್ಲ. ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಈಗ ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ. ಬಿಸಿಸಿಐ ಈ ವಿಚಾರ ನೋಡಿಕೊಳ್ಳುತ್ತದೆ ಎಂದು ಹೇಳಿದ್ದರು. ಇದೀಗ ವಿರಾಟ್ ಕೊಹ್ಲಿಯ ಓಡಿಐ ಕ್ಯಾಪ್ಟನ್ಸಿಯನ್ನ ಹಿಂಪಡೆದ ಬಿಸಿಸಿಐನ ಮುಖ್ಯ ಸಲಹೆಗಾರ ಚೇತನ್ ಸಲಹೆಗಾರ ಅವರು ವಿರಾಟ್ ಕೊಹ್ಲಿಯ ಹೇಳಿಕೆಗಳಿಗೆ ಸ್ಪಂದಿಸಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಟಿ20 ತಂಡದ ನಾಯಕತ್ವವನ್ನ ಬಿಟ್ಟುಕೊಡುವ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದಾಗ ಬಿಸಿಸಿಐನಲ್ಲಿನ ಪ್ರತಿಯೊಬ್ಬರೂ ಬೇಡ ಎಂದರು. ವಿಶ್ವಕಪ್ ಮುಗಿಯುವವರೆಗೂ ಯಾವುದೇ ನಿರ್ಧಾರ ತಿಳಿಸಬೇಡಿ, ಸುಮ್ಮನಿರಿ ಎಂದು ಬಿಸಿಸಿಐನ ಪದಾಧಿಕಾರಿಗಳು, ಆಯ್ಕೆಗಾರರು ಎಲ್ಲರೂ ವಿರಾಟ್ ಕೊಹ್ಲಿ ತಿಳಿಸಿದ್ದರು ಎಂದು ಚೇತನ್ ಶರ್ಮಾ ಹೇಳಿದ್ದಾರೆ.
“ವಿಶ್ವಕಪ್ಗೆ ಮುನ್ನ ನಡೆದ ಸಭೆಯಲ್ಲಿ ಎಲ್ಲರಿಗೂ ಅಚ್ಚರಿ ಆಯಿತು. ವಿರಾಟ್ ಕೊಹ್ಲಿಗೆ ಅವರ ನಿರ್ಧಾರದ ಬಗ್ಗೆ ಮರು ಆಲೋಚಿಸಬೇಕೆಂದು ಎಲ್ಲರೂ ಹೇಳಿದರು. ಈ ನಿರ್ಧಾರದಿಂದ ವಿಶ್ವಕಪ್ನಲ್ಲಿ ಪರಿಣಾಮ ಬೀರುತ್ತದೆ ಎಂಬುದು ಎಲ್ಲರ ಆತಂಕವಾಗಿತ್ತು. ಭಾರತೀಯ ಕ್ರಿಕೆಟ್ಗೋಸ್ಕರ ಮುಂದುವರಿಯಬೇಕೆಂದು ಬಿಸಿಸಿಐನ ಎಲ್ಲಾ ಸಂಚಾಲಕರು ಮತ್ತು ಮಂಡಳಿ ಅಧಿಕಾರಿಗಳು ವಿರಾಟ್ ಕೊಹ್ಲಿಗೆ ಮನವಿಮಾಡಿದರು. ಎಲ್ಲರೂ ಆಘಾತಗೊಂಡಿದ್ದರು. ವಿಶ್ವಕಪ್ ನಂತರ ನಾವು ಮಾತನಾಡಬೇಕೆಂದಿದ್ದೆವು” ಎಂದು ಚೇತನ್ ಶರ್ಮಾ ತಿಳಿಸಿದ್ದಾರೆ.
ಇದನ್ನೂ ಓದಿ: KL Rahul Captain: ಸೌತ್ ಆಫ್ರಿಕಾ ಓಡಿಐ ಸರಣಿಗೆ ಟೀಮ್ ಇಂಡಿಯಾ ಪ್ರಕಟ; ಕೆಎಲ್ ರಾಹುಲ್ ನಾಯಕ
“ಒಂದು ಮಾದರಿ ಕ್ರಿಕೆಟ್ ತಂಡದ ನಾಯಕತ್ವ ಬಿಟ್ಟರೆ ಇನ್ನೊಂದು ತಂಡದ ಕ್ಯಾಪ್ಟನ್ಸಿಯನ್ನೂ ಬಿಡಬೇಕಾಗುತ್ತದೆ ಎಂದು ಹೇಳುವ ಸ್ಥಿತಿಯಲ್ಲಿ ನಾವು ಇರಲಿಲ್ಲ… ಅವರು ಕ್ಯಾಪ್ಟನ್ಸಿ ತೊರೆಯುವ ನಿರ್ಧಾರ ತಿಳಿಸಿದ ಬಳಿಕ ವಿಶ್ವಕಪ್ ಬಳಿಕ ಮರು ಆಲೋಚಿಸೋಣ ಎಂದು ನಾವೆಲ್ಲರೂ ಅವರಿಗೆ ಹೇಳಿದೆವು. ಭಾರತೀಯ ತಂಡ ಉನ್ನತ ಮಟ್ಟದಲ್ಲಿ ಬರಬೇಕು ಎಂಬುದು ನಮ್ಮ ಗುರಿಯಾಗಿತ್ತು. ನಮಗೆ ವಿವಾದಗಳು ಬೇಕಿರಲಿಲ್ಲ. ಅತ್ಯುತ್ತಮ ಆಟಗಾರರು ದೇಶವನ್ನು ಪ್ರತಿನಿಧಿಸುವುದು ಅಗತ್ಯ ಇತ್ತು” ಎಂದು ಮಾಜಿ ಆಟಗಾರರೂ ಆಗಿರುವ ಚೇತನ್ ಶರ್ಮಾ ಮಾಹಿತಿ ನೀಡಿದ್ಧಾರೆ.
ಕೊಹ್ಲಿ-ರೋಹಿತ್ ಕಿತ್ತಾಟ ನಿಜವಾ?
ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಧ್ಯೆ ಒಳಜಗಳ ಇದೆ. ತಂಡದಲ್ಲಿ ವಿವಿಧ ಗುಂಪುಗಳಿವೆ ಎಂಬಂತಹ ವರದಿಗಳು ಇತ್ತೀಚೆಗೆ ಬಹಳ ಬಂದಿವೆ. ಆದರೆ, ಚೇತನ್ ಶರ್ಮಾ ಈ ಸುದ್ದಿಗಳನ್ನ ಬರೀ ವದಂತಿ ಎಂದು ತಳ್ಳಿಹಾಕಿದ್ದಾರೆ. “ಏನೂ ಸಮಸ್ಯೆಗಳಿಲ್ಲ. ಎಲ್ಲಾ ಸರಿಯಾಗಿದೆ. ವದಂತಿಗಳನ್ನ ನಂಬಬೇಡಿ ಎಂದು ಹೇಳುತ್ತೇನೆ. ನಾವು ಮೊದಲು ಕ್ರಿಕೆಟಿಗರು, ಬಳಿಕ ಆಯ್ಕೆಗಾರರು. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಮಧ್ಯೆ ಯಾವ ಸಮಸ್ಯೆಯೂ ಇಲ್ಲ” ಎಂದು ಚೇತನ್ ಶರ್ಮಾ ಹೇಳಿದ್ದಾರೆ.
“ಅವರಿಬ್ಬರ ಬಗ್ಗೆ ಬರುವ ಸುದ್ದಿಗಳನ್ನ ಓದಿ ನಾನು ನಕ್ಕುಬಿಡುತ್ತೇನೆ. ಭವಿಷ್ಯದ ಬಗ್ಗೆ ಅವರಿಬ್ಬರ ಮಧ್ಯೆ ಒಳ್ಳೆಯ ಯೋಜನೆ ಇದೆ. ಈ ಆಟಗಾರರು ಒಂದು ತಂಡವಾಗಿ, ಕುಟುಂಬವಾಗಿ ಹೇಗೆ ಕೆಲಸ ಮಾಡುತ್ತಾರೆ ಎಂದು ನೀವು ನನ್ನ ಜಾಗದಲ್ಲಿ ನಿಂತು ನೋಡಿದ್ದರೆ ಖುಷಿ ಪಡುತ್ತಿದ್ದಿರಿ” ಎಂದವರು ಅಭಿಪ್ರಾಯಪಟ್ಟಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ