news18-kannada Updated:February 15, 2021, 5:23 PM IST
cheteshwar pujara
ಚೆನ್ನೈನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ 3ನೇ ದಿನ ಟೀಮ್ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ವಿಚಿತ್ರವಾಗಿ ರನೌಟ್ ಆಗಿದ್ದಾರೆ. ಮೂರನೇ ದಿನದಾಟದ ಮೊದಲ ಓವರ್ನಲ್ಲಿಯೇ ಭಾರತ ಪೂಜಾರ ವಿಕೆಟ್ ಕಳೆದುಕೊಂಡಿತು. ಆದರೆ ಪೂಜಾರ ವಿಕೆಟ್ ಒಪ್ಪಿಸಿದ್ದು ರನೌಟ್ ಮೂಲಕ ಎಂಬುದು ಅಚ್ಚರಿ.
ಹೌದು, ಮೊಯೀನ್ ಅಲಿ ಎಸೆದ ಮೊದಲ ಓವರ್ನ ಎಸೆತವೊಂದನ್ನು ಪೂಜಾರ ಮುನ್ನುಗ್ಗಿ ಆಡಲು ಯತ್ನಿಸಿದರು. ಆದರೆ ಚೆಂಡು ಪ್ಯಾಡ್ಗೆ ತಗುಲಿ ಶಾರ್ಟ್ ಲೆಗ್ನಲ್ಲಿದ್ದ ಫೀಲ್ಡರ್ ಕೈ ಸೇರಿತು. ಅಷ್ಟೇ ವೇಗದಲ್ಲಿ ಫೀಲ್ಡರ್ ಚೆಂಡನ್ನು ಕೀಪರ್ ಕೈಗಿತ್ತರು. ಅಷ್ಟರಲ್ಲಾಗಲೇ ಕ್ರೀಸ್ಗೆ ಪೂಜಾರ ಬ್ಯಾಟ್ ಇಟ್ಟಿದ್ದರು. ಆದರೆ ದುರಾದೃಷ್ಟ ಬ್ಯಾಟ್ ಅವರ ಕೈಯಿಂದ ನೆಲಕ್ಕುರುಳಿತು.
ಕ್ಷಣಾರ್ಧದಲ್ಲೇ ವಿಕೆಟ್ ಕೀಪರ್ ಫೋಕ್ಸ್ ಮಿಂಚಿನಂತೆ ವಿಕೆಟ್ ಬೇಲ್ಸ್ ಎಗರಿಸಿದರು. ಇದಾಗ್ಯೂ ಪೂಜಾರ ಕಾಲು ಕ್ರೀಸ್ನಲ್ಲಿತ್ತು. ಮೂರನೇ ಅಂಪೈರ್ ಮೊರೆ ಹೋದಾಗ ಬ್ಯಾಟ್ ಕ್ರೀಸ್ ತಲುಪಿದರೂ ಕೈಯಿಂದ ಜಾರಿ ಬಿದ್ದಿತ್ತು. ಅಲ್ಲದೆ ಕಾಲು ಕ್ರೀಸ್ನಲ್ಲಿಡುವಷ್ಟರಲ್ಲಿ ಕೀಪರ್ ರನೌಟ್ ಮಾಡಿದ್ದರು. ಹೀಗೆ ಬಹಳ ಅಪರೂಪದ ರೀತಿಯಲ್ಲಿ ಚೇತೇಶ್ವರ್ ಪೂಜಾರ ತಮ್ಮ ವಿಕೆಟ್ ಕಳೆದುಕೊಂಡರು.
ಇನ್ನು ಮೂರನೇ ದಿನದಾಟದ ಆರಂಭದಲ್ಲೇ ಪೂಜಾರ (7) ಹಾಗೂ ರೋಹಿತ್ ಶರ್ಮಾ (26) ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರಕ್ಷಣಾತ್ಮಕ ಆಟದೊಂದಿಗೆ ತಂಡಕ್ಕೆ ಆಸರೆಯಾದರು. ಆದರೆ ಮತ್ತೊಂದೆಡೆ ರಿಷಭ್ ಪಂತ್ (8), ಅಜಿಂಕ್ಯ ರಹಾನೆ (10) ಹಾಗೂ ಅಕ್ಷರ್ ಪಟೇಲ್ (7) ಕೂಡ ಬೇಗನೆ ವಿಕೆಟ್ ಒಪ್ಪಿಸಿ ನಿರ್ಮಿಸಿದರು.
7ನೇ ವಿಕೆಟ್ಗೆ ಜೊತೆಗೂಡಿದ ಕೊಹ್ಲಿ ಹಾಗೂ ಅಶ್ವಿನ್ 96 ರನ್ಗಳ ಅಮೂಲ್ಯ ಜೊತೆಯಾಟ ಆಡಿದರು. ವೇಳೆ ವಿರಾಟ್ ಕೊಹ್ಲಿ (62) ಅರ್ಧಶತಕ ಪೂರೈಸಿ ವಿಕೆಟ್ ಒಪ್ಪಿಸಿ ಹೊರನಡೆದರು. ಆದರೆ ಮತ್ತೊಂದೆಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಅಶ್ವಿನ್ ಶತಕ ಸಿಡಿಸಿ ಮಿಂಚಿದರು. ಕೊನೆವರೆಗೂ ಏಕಾಂಗಿಯಾಗಿ ಹೋರಾಟ ನಡೆಸಿದ ಅಶ್ವಿನ್ 148 ಎಸೆತಗಳಲ್ಲಿ 14 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ 106 ರನ್ಗಳನ್ನು ಬಾರಿಸಿದರು. ಪರಿಣಾಮ ಟೀಮ್ ಇಂಡಿಯಾ ದ್ವಿತೀಯ ಇನಿಂಗ್ಸ್ನಲ್ಲಿ 286 ರನ್ಗಳಿಸುವಂತಾಯಿತು. ಮೊದಲ ಇನಿಂಗ್ಸ್ನ 195 ರನ್ಗಳ ಮುನ್ನಡೆಯೊಂದಿಗೆ ಟೀಮ್ ಇಂಡಿಯಾ ಇಂಗ್ಲೆಂಡ್ಗೆ ಗೆಲ್ಲಲು 482 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ.
Published by:
zahir
First published:
February 15, 2021, 5:23 PM IST