HOME » NEWS » Sports » CRICKET CHETAN SAKARIA THE SON OF A TEMPO DRIVER AND A NET BOWLER IN RCB LAST SEASON HAS SOLD FOR GOOD AMOUNT SNVS

IPL - ಆರ್​ಸಿಬಿಯಲ್ಲಿ ನೆಟ್ ಬೌಲರ್ ಆಗಿದ್ದ ಈ ಟೆಂಪೋ ಡ್ರೈವರ್​ನ ಮಗ ಈಗ ಒಳ್ಳೆಯ ಮೊತ್ತಕ್ಕೆ ಸೇಲ್

ಸೌರಾಷ್ಟ್ರದ ಚೇತನ್ ಸಕಾರಿಯಾ ಅವರು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 1.2 ಕೋಟಿ ರೂಗೆ ಸೇಲ್ ಆಗಿದ್ದಾರೆ. ಟೆಂಪೋ ಡ್ರೈವರ್​ನ ಮಗನಾದ ಈತ ಕಳೆದ ವರ್ಷ ಅರ್​ಸಿಬಿಯಲ್ಲಿ ನೆಟ್ ಬೌಲರ್ ಆಗಿ ಕಾರ್ಯನಿರ್ವಹಿಸಿದ್ದ.

news18-kannada
Updated:February 19, 2021, 11:28 AM IST
IPL - ಆರ್​ಸಿಬಿಯಲ್ಲಿ ನೆಟ್ ಬೌಲರ್ ಆಗಿದ್ದ ಈ ಟೆಂಪೋ ಡ್ರೈವರ್​ನ ಮಗ ಈಗ ಒಳ್ಳೆಯ ಮೊತ್ತಕ್ಕೆ ಸೇಲ್
ಚೇತನ್ ಸಕಾರಿಯಾ
  • Share this:
ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್​ನ ಅಕ್ಷನ್ ಪ್ರಕ್ರಿಯೆಯಲ್ಲಿ ನಿನ್ನೆ ಭರ್ಜರಿ ಹರಾಜು ಪ್ರಕ್ರಿಯೆ ನಡೆದಿದೆ. ಕ್ರಿಸ್ ಮಾರಿಸ್, ಕೈಲ್ ಜೇಮೀಸನ್, ಗ್ಲೆನ್ ಮ್ಯಾಕ್ಸ್​ವೆಲ್, ಝೈ ರಿಚರ್ಡ್ಸನ್ ಅವರು 10 ಕೋಟಿ ರೂಗಿಂತಲೂ ಹೆಚ್ಚು ಮೊತ್ತಕ್ಕೆ ಮಾರಾಟವಾದರು. ಕರ್ನಾಟಕದ ಕೃಷ್ಣಪ್ಪ ಗೌತಮ್ 9.25 ಕೋಟಿ ರೂಪಾಯಿಗೆ ಮಾರಾಟವಾಗಿ ಅಚ್ಚರಿ ಮೂಡಿಸಿದ್ದಾರೆ. ಹೆಚ್ಚು ಪರಿಚಿತರಲ್ಲದ ಶಾರುಖ್ ಖಾನ್ ಸೇರಿದಂತೆ ಅನೇಕ ಎಳೆಯ ಪ್ರತಿಭೆಗಳು ಒಳ್ಳೆಯ ಬೆಲೆಗೆ ಸೇಲ್ ಆದರು. ಹೀಗೆ ಅಚ್ಚರಿ ಹುಟ್ಟಿಸಿದ ಆಟಗಾರರಲ್ಲಿ ಗುಜರಾತ್ ರಾಜ್ಯದ ಸೌರಾಷ್ಟ್ರದ ಚೇತನ್ ಸಕಾರಿಯಾ ಕೂಡ ಒಬ್ಬರು. 20 ಲಕ್ಷ ರೂ ಮೂಲಬೆಲೆಯಲ್ಲಿ ಬಿಡ್ ಮಾಡಲಾದ ಈತನನ್ನ ರಾಜಸ್ಥಾನ್ ರಾಯಲ್ಸ್ 1.20 ಕೋಟಿ ರೂ ಕೊಟ್ಟು ಖರೀದಿ ಮಾಡಿದೆ. ಕಳೆದ ವರ್ಷ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದಲ್ಲಿ ನೆಟ್ ಬೌಲರ್ ಆಗಿದ್ದ ಚೇತನ್ ಅವರ ಲಕ್ ಈಗ ಖುಲಾಯಿಸಿದೆ. 22 ವರ್ಷದ ಈ ವೇಗದ ಬೌಲರ್ ಈ ಹಂತಕ್ಕೆ ಬರಲು ಬಹಳ ಪರಿಶ್ರಮಪಡಬೇಕಾಯಿತು. ಈತನ ತಂದೆ ಒಬ್ಬ ಟೆಂಪೋ ಚಾಲಕ. ಬಡಸ್ತನದ ಕಾರಣಕ್ಕೆ ಒಂದು ಹಂತದಲ್ಲಿ ಕ್ರಿಕೆಟ್​ಗೇ ವಿದಾಯ ಹೇಳಬೇಕಾದ ಪರಿಸ್ಥಿತಿ ಬಂದಿದ್ದರೂ ಛಲ ಬಿಡದೆ, ಪ್ರೀತಿ ಬಿಡದೆ ಆಟದಲ್ಲಿ ತೊಡಗಿಸಿಕೊಂಡಿದ್ದಕ್ಕೆ ಈತನಿಗೆ ಈಗ ಪ್ರತಿಫಲ ಸಿಕ್ಕಿದೆ.

ಸೌರಾಷ್ಟ್ರ ಪ್ರದೇಶ ಭಾವನಗರ್ ಜಿಲ್ಲೆಯ ವರ್ತೇಜ್ ಎಂಬ ಗ್ರಾಮದ ಚೇತನ್ ಸಕಾರಿಯಾ ಕ್ರಿಕೆಟ್ ಆಟ ಶುರು ಮಾಡಿದ್ದೇ 13ನೇ ವಯಸ್ಸಿನಲ್ಲಿ. ಈತ ತಂದೆ ಕಾನಿಜ್​ಭಾಯ್ ಟೆಂಪೋ ಚಾಲಕರಾಗಿ ಜೀವನ ನಿರ್ವಹಣೆ ಮಾಡುತ್ತಾರೆ. ತಾಯಿ ವರ್ಷಾಬೆನ್ ಗೃಹಿಣಿ. ಓದಿನಲ್ಲಿ ಚುರುಕಾಗಿದ್ದ ಈತ ಮುಂದೆ ಉತ್ತಮ ವಿದ್ಯಾಭ್ಯಾಸ ಮಾಡಿ ಉನ್ನತ ಅಧಿಕಾರಿ ಆಗಲಿ ಎಂಬುದು ಈತನ ಪೋಷಕರ ಆಸೆಯಾಗಿತ್ತು. 12ನೇ ತರಗತಿಯ ನಂತರ ಈತ ಓದಿಗೆ ತಿಲಾಂಜಲಿ ಹಾಡಿದ. ಮತ್ತೆ ಓದಲು ಸಾಧ್ಯವಾಗಲಿಲ್ಲ.

ಈ ಹುಡುಗನನ್ನು ಶಾಲೆಗೆ ಓದಲು ಕಳುಹಿಸಿದರೆ ಈತ ಹೇಳದೇ ಕೇಳದೇ ಶಾಲೆಯಿಂದ ಮನೆಗೆ ವಾಪಸ್ ಬಂದು ಬೇರೆ ಹುಡುಗರ ಜೊತೆ ಕ್ರಿಕೆಟ್ ಆಡುತ್ತಿದ್ದ. ಆ ಸಂದರ್ಭದಲ್ಲಿ ಈತನ ಪೋಷಕರು ಬಹಳ ಕೋಪಗೊಳ್ಳುತ್ತಿದ್ದರು. ಕ್ರಿಕೆಟ್​ಗೋಸ್ಕರ ಈತ ಪರೀಕ್ಷೆಗೂ ಬಂಕ್ ಹಾಕುತ್ತಿದ್ದ. ಆದರೆ, ಒಂದು ಹಂತದಲ್ಲಿ ಮನೆಯಲ್ಲಿದ್ದ ಬಡತನದ ಪರಿಸ್ಥಿತಿಯು ಈತನನ್ನು ಕ್ರಿಕೆಟ್​ನಿಂದಲೂ ದೂರ ಮಾಡುವುದರಲ್ಲಿತ್ತು. ಈತನ ದೊಡ್ಡಪ್ಪ ಒಂದು ಕೆಲಸ ಕೊಡಿಸಿದ್ದರಿಂದ ಹೇಗೋ ಅದೃಷ್ಟವಶಾತ್ ಕ್ರಿಕೆಟ್ ಆಟ ಮುಂದುವರಿಸಿದ್ದ.

ಇದನ್ನೂ ಓದಿ: IPL 2021: ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊಸ ತಂಡ ಹೀಗಿದೆ..!

ಕಳೆದ ವರ್ಷದ ಐಪಿಎಲ್ ಟೂರ್ನಿಯಲ್ಲಿ ಈತ ಆರ್​ಸಿಬಿಯಲ್ಲಿ ನೆಟ್ ಬೌಲರ್ ಆದ ಬಳಿಕ ಅದೃಷ್ಟ ಕುಲಾಯಿಸಿತು. ಯಾವುದೇ ಪಂದ್ಯದಲ್ಲಿ ಈತ ಆಡದಿದ್ದರೂ ಡೇಲ್ ಸ್ಟೇನ್ ಅವರಂಥ ವೇಗಿಗಳಿಂದ ಕಲಿತ ಪಾಠ ಈತನಿಗೆ ಆತ್ಮವಿಶ್ವಾಸ ತುಂಬಿತು. ವಿರಾಟ್ ಕೊಹ್ಲಿ, ಎಬಿ ಡೀವಿಲಿಯರ್ಸ್ ಅವರಂಥ ವಿಶ್ವಶ್ರೇಷ್ಠ ಬ್ಯಾಟ್ಸ್​ಮನ್​ಗಳಿಗೆ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿದ್ದು ಈತನಿಗೆ ಇನ್ನಿಲ್ಲದ ಹುರುಪು ತುಂಬಿತ್ತು. ತಾನು ಈ ಅತ್ಯುಚ್ಚ ಮಟ್ಟದಲ್ಲಿ ಆಡಬಲ್ಲೆ ಎಂಬ ವಿಶ್ವಾಸವೂ ಈತನ ಮನಮುಟ್ಟಿತ್ತು.

ಚೆನ್ನೈನ ಎಂಆರ್​ಎಫ್ ಅಕಾಡೆಮಿಯಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಗ್ಲೆನ್ ಮೆಕ್​ಗ್ರಾಥ್ ಅವರಿಂದ ತರಬೇತಿ ಪಡೆದಿರುವ ಚೇತನ್ ಸಕಾರಿಯಾ, ಸೌರಾಷ್ಟ್ರ ಪ್ರೀಮಿಯರ್ ಲೀಗ್​ನಲ್ಲಿ ಸಖತ್ತಾಗಿ ಮಿಂಚಿ ತನ್ನ ತಂಡ ಪ್ರಶಸ್ತಿ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದ. ಆ ಟೂರ್ನಿಯಲ್ಲಿ ಈತನೇ ಮ್ಯಾನ್ ಆಫ್ ದ ಸೀರೀಸ್. ಈತನ ಪ್ರದರ್ಶನವು ಕಳೆದ ವರ್ಷ ಆರ್​ಸಿಬಿಗೆ ದಾರಿ ತೋರಿಸಿತ್ತು.

ಈ ಬಾರಿಯ ಸಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ 12 ವಿಕೆಟ್ ಪಡೆದು ಎಲ್ಲರ ಗಮನ ಸೆಳೆದಿದ್ದಾನೆ. ಈ ಟೂರ್ನಿಯಲ್ಲಿ ಸಿಕ್ಕ ಯಶಸ್ಸಿಗೆ ಈತ ತಾನು ಆರ್​ಸಿಬಿಯಲ್ಲಿ ನೆಟ್​ಬೌಲರ್ ಆಗಿ ಗಳಿಸಿದ ಅನುಭವ ಕಾರಣ ಎಂದು ಹೇಳಿಕೊಂಡಿದ್ದಾನೆ. ಈಗ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೇರಿಕೊಂಡಿರುವ ಈತ ಈ ಐಪಿಎಲ್​ನಲ್ಲಿ ಆಡಿ ತನ್ನ ಸಾಮರ್ಥ್ಯ ತೋರ್ಪಡಿಸುವ ಒಳ್ಳೆಯ ಅವಕಾಶ ಸಿಕ್ಕಿದೆ.
Published by: Vijayasarthy SN
First published: February 19, 2021, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories