India vs England – ಫಾರ್ಮ್​ಗೆ ಮರಳಿದ ಕೊಹ್ಲಿ, ಪೂಜಾರ – ಭಾರತಕ್ಕೆ ಗೆಲ್ಲುವ ಅವಕಾಶ ಎಷ್ಟು?

ಮೊದಲ ಇನ್ನಿಂಗ್ಸಲ್ಲಿ ಪತಪತನೇ ಉದುರಿ ಅಲ್ಪಮೊತ್ತಕ್ಕೆ ಆಲೌಟ್ ಆಗಿದ್ದ ಭಾರತ ಎರಡನೇ ಇನ್ನಿಂಗ್ಸಲ್ಲಿ ತಿರುಗಿನಿಂತಿದೆ. 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿ ಒಟ್ಟಾರೆ ಹಿನ್ನಡೆಯನ್ನ 129 ರನ್ಗೆ ಇಳಿಸಿದೆ. ಇನ್ನೂ ಎರಡು ದಿನದ ಆಟ ಬಾಕಿ ಇದೆ.

ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ

ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ

  • Share this:
    ಲೀಡ್ಸ್: ಆತಿಥೇಯ ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಭಾರತ ಪುಟಿದೆದ್ದಿದೆ. ಮೊದಲ ಇನ್ನಿಂಗ್ಸಲ್ಲಿ ಕೇವಲ 78 ರನ್​ಗೆ ಆಲೌಟ್ ಆಗಿದ್ದ ಭಾರತ ತಂಡ ಎರಡನೇ ಇನ್ನಿಂಗ್ಸಲ್ಲಿ 2 ವಿಕೆಟ್ ನಷ್ಟಕ್ಕೆ 215 ರನ್ ಗಳಿಸಿದೆ. 354 ರನ್​ಗಳ ಬೃಹತ್ ಮೊದಲ ಇನ್ನಿಂಗ್ಸ್ ಹಿನ್ನಡೆಯನ್ನ ಮೂರನೇ ದಿನಾಂತ್ಯದಲ್ಲಿ 139 ರನ್​ಗೆ ಇಳಿಸಿದೆ. ಈ ಸರಣಿಯಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ಚೇತೇಶ್ವರ ಪೂಜಾರ ಮತ್ತು ವಿರಾಟ್ ಕೊಹ್ಲಿ ಅವರು ಮತ್ತೆ ಲಯಕ್ಕೆ ಮರಳಿದಂತಿದೆ. ಪೂಜಾರ ಅವರಂತೂ ಪುಟಿದೆದ್ದು ನಿಂತಿದ್ದಾರೆ. ಇನ್ನೂ ಎರಡು ದಿನದ ಆಟ ಬಾಕಿ ಇದೆ. ಮೂರನೇ ದಿನದಂದು ಆಡಿದ ರೀತಿಯಲ್ಲೇ ಭಾರತದ ಬ್ಯಾಟಿಂಗ್ ನಾಲ್ಕನೇ ದಿನವೂ ಮುಂದುವರಿದರೆ ಸೋಲಿನ ಸುಳಿಯಿಂದ ತಪ್ಪಿಸಿಕೊಳ್ಳುವುದರ ಜೊತೆಗೆ ಗೆಲುವಿನ ಸಾಧ್ಯತೆಯೂ ದಟ್ಟವಾಗಬಹುದು.

    ಮೊನ್ನೆ ಎರಡನೇ ದಿನದಾಟದ ಅಂತ್ಯದಲ್ಲಿ 8 ವಿಕೆಟ್ ನಷ್ಟಕ್ಕೆ 423 ರನ್ ಗಳಿಸಿದ್ದ ಇಂಗ್ಲೆಂಡ್​ನ ಮೊದಲ ಇನ್ನಿಂಗ್ಸ್ ಆಟ ಹೆಚ್ಚು ಹೊತ್ತು ಮುಂದುವರಿಯಲಿಲ್ಲ. ಕೇವಲ 9 ರನ್ ಗಳಿಸುವಷ್ಟರಲ್ಲಿ ಉಳಿದ 2 ವಿಕೆಟ್​ಗಳು ಬಿದ್ದವು. ಮೊಹಮ್ಮದ್ ಶಮಿ 4 ವಿಕೆಟ್ ಪಡೆದರೆ, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಮೊದಲ ಕ್ರಮಾಂಕದ ನಾಲ್ವರು ಆಟಗಾರರು ಉತ್ತಮ ಬ್ಯಾಟಿಂಗ್ ಮಾಡಿದ್ದು ಹೈಲೈಟ್ ಆಯಿತು. 354 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 34 ರನ್ ಆಗುವಷ್ಟರಲ್ಲಿ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ ಉತ್ತಮ ಲಯದಲ್ಲಿ ಇದ್ದಂತೆ ಕಂಡರೂ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಇದ್ದು ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದರೆ, ರೋಹಿತ್ ಶರ್ಮಾ ಮತ್ತು ಚೇತೇಶ್ವರ್ ಪೂಜಾರ ಜೊತೆಗೂ ಭಾರತದ ಇನ್ನಿಂಗ್ಸ್​ಗೆ ಪುಷ್ಟಿ ನೀಡಿದರು. ಬಹಳ ನಿಧಾನಗತಿಯಲ್ಲಿ ರನ್ ಗಳಿಸುವ ಪೂಜಾರ ನಿನ್ನೆ ತುಸು ಚುರುಕಾಗಿ ಆಡಿದಂತೆ ಕಂಡಿತು. ಪೂಜಾರ ಹೆಚ್ಚು ವೇಗವಾಗಿ ರನ್ ಗಳಿಸಬೇಕು ಎಂದು ಬ್ರಿಯಾನ್ ಲಾರಾ ನೀಡಿದ್ದ ಸಲಹೆ ಪೂಜಾರರ ಕಿವಿ ಮುಟ್ಟಿರಬೇಕು. ಇಂದು ಪೂಜಾರ 180 ಎಸೆತಗಳಲ್ಲಿ 91 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಅವರ 19ನೇ ಟೆಸ್ಟ್ ಶತಕಕಕ್ಕೆ 9 ರನ್ ಬಾಕಿ ಇದೆ. ರೋಹಿತ್ ಶರ್ಮಾ ಮತ್ತು ಪೂಜಾರ ಇಬ್ಬರೂ 2ನೇ ವಿಕೆಟ್​ಗೆ 82 ರನ್ ಜೊತೆಯಾಟ ನೀಡಿದರು. ರೋಹಿತ್ ಶರ್ಮಾ 59 ರನ್ ಗಳಿಸಿ ಅನ್ಯಾಯವಾಗಿ ಔಟಾದರು. ರೋಹಿತ್ ಇಷ್ಟು ರನ್ ಗಳಿಸಲು 156 ಎಸೆತ ತೆಗೆದುಕೊಂಡಿದ್ದ ಅಚ್ಚರಿ ಎನಿಸಿತು.

    ಶರ್ಮಾ ಬಳಿಕ ಬಂದ ವಿರಾಟ್ ಕೊಹ್ಲಿ ಅವರು ಲಯಕ್ಕೆ ಬರಲು ಬಹಳ ಕಷ್ಟಪಡಬೇಕಾಯಿತು. ಆರಂಭದಲ್ಲಿ ರನ್ ಗಳಿಸಲು ಪರದಾಡುತ್ತಿದ್ದ ವಿರಾಟ್ ಕೊಹ್ಲಿ ಹೋಗಹೋಗುತ್ತಾ ನಿಧಾನವಾಗಿ ಫಾರ್ಮ್​ಗೆ ಮರಳಿದಂತಿತ್ತು. ಪೂಜಾರ ರೀತಿಯಲ್ಲಿ ಸಿಂಗಲ್ಸ್ ರನ್ ತೆಗೆದುಕೊಳ್ಳುವುದರತ್ತ ಹೆಚ್ಚು ಗಮನ ಕೊಟ್ಟರು. ಇದರಿಂದ ತಂಡದ ಸ್ಕೋರು ಕೂಡ ಹೆಚ್ಚುತ್ತಾ ಹೋಯಿತು. ದಿನಾಂತ್ಯದಲ್ಲಿ ಕೊಹ್ಲಿ ಅಜೇಯ 45 ರನ್ ಗಳಿಸಿದರೆ ಪೂಜಾರ ಅಜೇಯ 59 ರನ್ ಗಳಿಸಿದ್ಧಾರೆ. ಇವರಿಬ್ಬರೂ 3ನೇ ವಿಕೆಟ್​ಗೆ 99 ರನ್​ಗಳ ಮುರಿಯದ ಜೊತೆಯಾಟ ನೀಡಿದ್ಧಾರೆ.

    ಇದನ್ನೂ ಓದಿ: ಕೆಕೆಆರ್ ಸ್ಟಾರ್ ಆಟಗಾರನ ಜೊತೆ ಸಚಿನ್ ಮಗಳು ಸಾರಾ ತೆಂಡೂಲ್ಕರ್ ಡೇಟಿಂಗ್?

    ಇಂದು ನಾಲ್ಕನೇ ದಿನದಾಟ ಬಹಳ ಮಹತ್ವದ್ದಾಗಿದೆ. ಇಂದು ಆರಂಭದಲ್ಲೇ ಇಂಗ್ಲೆಂಡ್ ಬೌಲರ್​ಗಳು ಹೊಸ ಚೆಂಡು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಇದು ಮೊದಲ ಸೆಷೆನ್​ನಲ್ಲಿ ಭಾರತದ ಬ್ಯಾಟ್ಸ್​ಮನ್​​ಗೆ ತುಸು ಕಠಿಣ ಸಂದರ್ಭಗಳನ್ನ ಒಡ್ಡಬಹುದು. ಇದನ್ನ ಯಾವುದೇ ಅವಘಡ ಇಲ್ಲದೇ ಯಶಸ್ವಿಯಾಗಿ ದಾಟಿದರೆ ಭಾರತ ಇಡೀ ದಿನ ಆಡಬಹುದು. ಭಾರತ ಇನ್ನೂ 300ಕ್ಕೂ ಹೆಚ್ಚು ರನ್​ಗಳನ್ನ ಸೇರಿಸಿ ಸುಮಾರು 250 ರನ್​ಗಳ ಗುರಿಯನ್ನ ಇಂಗ್ಲೆಂಡ್​ಗೆ ನೀಡಿದರೆ ಗೆಲುವಿನ ಅವಕಾಶ ಇರಬಹುದು ಎನ್ನುತ್ತಾರೆ ಕೆಲ ತಜ್ಞರು. ಅದು ಸಾಧ್ಯವಾಗಬೇಕಾದರೆ ಭಾರತ ನಾಲ್ಕನೇ ದಿನದಾಟದ ಜೊತೆಗೆ ಐದನೇ ದಿನದಂದೂ ಒಂದತ್ತು ಓವರ್​ಗಳವರೆಗಾದರೂ ಆಡಬೇಕಾಗಬಹುದು.

    ಸ್ಕೋರು ವಿವರ:

    ಭಾರತ ಮೊದಲ ಇನ್ನಿಂಗ್ಸ್ 40.5 ಓವರ್ 78/10

    ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ 132.2 ಓವರ್ 432/10

    ಭಾರತ ಎರಡನೇ ಇನ್ನಿಂಗ್ಸ್ 80 ಓವರ್ 215/2
    (ಚೇತೇಶ್ವರ್ ಪೂಜಾರ ಅಜೇಯ 91, ರೋಹಿತ್ ಶರ್ಮಾ 59, ವಿರಾಟ್ ಕೊಹ್ಲಿ ಅಜೇಯ 45 ರನ್)
    Published by:Vijayasarthy SN
    First published: