news18-kannada Updated:February 9, 2021, 5:23 PM IST
ಸಾಂದರ್ಭಿಕ ಚಿತ್ರ
ಭಾರತದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಗಳ ವೀಕ್ಷಣೆ ಇನ್ಮುಂದೆ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ. ಏಕೆಂದರೆ ಪಂದ್ಯಾವಳಿಯ ಚಿತ್ರೀಕರಣಕ್ಕೆ ಡ್ರೋಣ್ಗಳನ್ನು ಬಳಸಲು ಕೇಂದ್ರ ಸರ್ಕಾರ ಬಿಸಿಸಿಐಗೆ ಷರತ್ತುಬದ್ಧ ಅನುಮತಿ ನೀಡಿದೆ. ಹೀಗಾಗಿ ಮುಂಬರುವ ಐಪಿಎಲ್ ವೇಳೆ ಡ್ರೋಣ್ ಮೂಲಕ ಕೂಡ ಪಂದ್ಯಗಳ ಚಿತ್ರೀಕರಣ ನಡೆಯಲಿದೆ.
ಈ ಹಿಂದೆಯೇ ಪಂದ್ಯಗಳ ಚಿತ್ರೀಕರಣಕ್ಕಾಗಿ ಡ್ರೋಣ್ಗಳನ್ನು ಹಾರಾಟ ನಡೆಸಲು ನಾಗರೀಕ ವಿಮಾನಯಾನಗಳ ಸಚಿವಾಲಯ ಹಾಗೂ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಶನ್ಗೆ ಬಿಸಿಸಿಐ ಮನವಿ ಸಲ್ಲಿಸಿತ್ತು. ಈ ಬಗ್ಗೆ ಪರಿಶೀಲಿಸಿದ ವಿಮಾನಯಾನ ಸಚಿವಾಲಯ ಒಂದು ವರ್ಷದವರೆಗೆ ಷರತ್ತುಬದ್ಧ ಅನುಮತಿ ನೀಡಿದೆ.
ಹಾಗೆಯೇ ಆಯಾ ಕ್ರೀಡಾಂಗಣದಲ್ಲಿ ಡ್ರೋಣ್ ಬಳಸುವ ಮುನ್ನ ಕೆಲ ವಿಭಾಗಗಳ ಅನುಮತಿಯನ್ನು ಪಡೆದುಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಅದರಂತೆ ಸ್ಥಳೀಯ ಆಡಳಿತ, ರಕ್ಷಣಾ ಸಚಿವಾಲಯ, ಗೃಹ ಸಚಿವಾಲಯ ಮತ್ತು ವಾಯುಸೇನಾ ವಿಭಾಗಗಳಿಂದ ಅನುಮತಿ ಪಡೆದುಕೊಳ್ಳುವಂತೆ ಬಿಸಿಸಿಐಗೆ ತಿಳಿಸಿದೆ. ಇನ್ನು ಡ್ರೋಣ್ ಹಾರಾಟ ನಡೆಸುವ ಸಿಬ್ಬಂದಿಯು ಪ್ರಮಾಣಿತ ಕಾರ್ಯಾಚರಣಾ ವಿಭಾಗದಿಂದ ತರಬೇತಿ ಪಡೆದಿರಬೇಕು ಎಂದು ಷರತ್ತು ವಿಧಿಸಲಾಗಿದೆ.
ಈ ಎಲ್ಲಾ ಷರತ್ತುಗಳಿಗೆ ಬಿಸಿಸಿಐ ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದ್ದು, ಹೀಗಾಗಿ ಮುಂದಿನ ಇಂಗ್ಲೆಂಡ್ ವಿರುದ್ಧದ ಏಕದಿನ, ಟಿ20 ಸರಣಿ ಅಥವಾ ಐಪಿಎಲ್ ಸೀಸನ್ 14 ವೇಳೆ ಡ್ರೋಣ್ ಕ್ಯಾಮೆರಾ ಬಳಕೆಯ ಮೂಲಕ ಪಂದ್ಯದ ನೇರ ಪ್ರಸಾರದ ಪಕ್ಷಿ ನೋಟವನ್ನು ವೀಕ್ಷಕರು ಎಂಜಾಯ್ ಮಾಡಬಹುದಾಗಿದೆ.
Published by:
zahir
First published:
February 9, 2021, 5:23 PM IST