Mohammad Amir: ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ ಪಾಕ್ ವೇಗಿ ಮೊಹಮ್ಮದ್ ಅಮೀರ್

ಪಾಕಿಸ್ತಾನದ ಪರ 36 ಟೆಸ್ಟ್ ಪಂದ್ಯಗಳಿಂದ 119 ವಿಕೆಟ್ ಹಾಗೂ 61 ಏಕದಿನ ಪಂದ್ಯಗಳಿಂದ 81 ವಿಕೆಟ್ ಉರುಳಿಸಿದ್ದರು. ಹಾಗೆಯೇ 50 ಟಿ20 ಪಂದ್ಯಗಳನ್ನಾಡಿರುವ ಅಮೀರ್ 59 ವಿಕೆಟ್ ಕಬಳಿಸಿದ್ದಾರೆ.

Mohammad Amir

Mohammad Amir

 • Share this:
  ಪಾಕಿಸ್ತಾನದ ಖ್ಯಾತ ಎಡಗೈ ವೇಗಿ ಮೊಹಮ್ಮದ್ ಅಮೀರ್ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ. ಕಳೆದ ವರ್ಷವಷ್ಟೇ ಟೆಸ್ಟ್ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದ ಅಮೀರ್, ಇದೀಗ​ ಪಾಕ್ ಕ್ರಿಕೆಟ್ ಮಂಡಳಿಯ ನಡೆಯಿಂದ ಬೆಸತ್ತು ಏಕದಿನ ಹಾಗೂ ಟಿ20 ಕ್ರಿಕೆಟ್​ಗೆ ನಿವೃತ್ತಿ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ಉತ್ತಮ ಫಾರ್ಮ್​ನಲ್ಲಿದ್ದರೂ ನ್ಯೂಜಿಲೆಂಡ್​ ವಿರುದ್ಧದ ಸೀಮಿತ ಓವರ್​ಗಳ ಸರಣಿಯಿಂದ ಅಮೀರ್ ಅವರನ್ನು ಕೈ ಬಿಡಲಾಗಿತ್ತು. ಇದರಿಂದ ಎಡಗೈ ವೇಗಿ ನೊಂದುಕೊಂಡಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಹೊಸ ತಂಡದ ನಿರ್ವಹಣೆಯ ಚಿಂತನೆಯಿಂದ ಬೇಸರಗೊಂಡು 28ನೇ ವಯಸ್ಸಿಗೆ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿ ಅಚ್ಚರಿ ಮೂಡಿಸಿದ್ದಾರೆ.

  ಮೊಹಮ್ಮದ್ ಅಮೀರ್ 2009ರಲ್ಲಿ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಪದಾರ್ಪಣೆ ಮಾಡಿದ್ದರು. ಅಲ್ಲದೆ 2009 ರಲ್ಲಿ ಪಾಕಿಸ್ತಾನ ತಂಡಕ್ಕೆ ಟಿ20 ವಿಶ್ವಕಪ್ ಗೆದ್ದುಕೊಡುವಲ್ಲಿ ಅಮೀರ್ ಪ್ರಮುಖ ಪಾತ್ರವಹಿಸಿದ್ದರು. ಇದರ ಬೆನ್ನಲ್ಲೇ ಯುವ ಕ್ರಿಕೆಟಿಗನ ವಿರುದ್ಧ ಫಿಕ್ಸಿಂಗ್ ಆರೋಪ ಕೇಳಿ ಬಂದಿತ್ತು. 2010ರಲ್ಲಿ ಇಂಗ್ಲೆಂಡ್ ಪ್ರವಾಸದ ವೇಳೆ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾರಣ ಅವರನ್ನು ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿಷೇಧ ಮಾಡಲಾಗಿತ್ತು.

  2016 ರಲ್ಲಿ ಮತ್ತೆ ಅಂಗಳಕ್ಕೆ ಮರಳಿದ ಅಮೀರ್ ತಮ್ಮ ಎಂದಿನ ಫಾರ್ಮ್​ ಪ್ರದರ್ಶಿಸಿ ಎಲ್ಲರನ್ನು ಚಕಿತರನ್ನಾಗಿಸಿದ್ದರು. ಅಷ್ಟೇ ಅಲ್ಲದೆ 2017 ರಲ್ಲಿ ಪಾಕ್ ತಂಡಕ್ಕೆ ಚೊಚ್ಚಲ ಐಸಿಸಿ ಚಾಂಪಿಯನ್ಸ್ ಟ್ರೋಫಿ ತಂದುಕೊಡುವಲ್ಲಿ ಎಡಗೈ ವೇಗಿ ಬಹುಮುಖ್ಯ ಪಾತ್ರವಹಿಸಿದ್ದರು. 2019 ರಲ್ಲಿ ವೈಯುಕ್ತಿಕ ಕಾರಣ ನೀಡಿ ಟೆಸ್ಟ್ ಕ್ರಿಕೆಟ್​ಗೆ ಗುಡ್​ಬೈ ಹೇಳಿದ್ದರು. ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

  ಈ ನಡುವೆ ಪಾಕಿಸ್ತಾನದ ಪರ 36 ಟೆಸ್ಟ್ ಪಂದ್ಯಗಳಿಂದ 119 ವಿಕೆಟ್ ಹಾಗೂ 61 ಏಕದಿನ ಪಂದ್ಯಗಳಿಂದ 81 ವಿಕೆಟ್ ಉರುಳಿಸಿದ್ದರು. ಹಾಗೆಯೇ 50 ಟಿ20 ಪಂದ್ಯಗಳನ್ನಾಡಿರುವ ಅಮೀರ್ 59 ವಿಕೆಟ್ ಕಬಳಿಸಿದ್ದಾರೆ. ಇದರ ಹೊರತಾಗಿಯೂ ಅನೇಕ ಲೀಗ್​ ಕ್ರಿಕೆಟ್​ನಲ್ಲೂ ಎಡಗೈ ವೇಗಿ ತೊಡಗಿಸಿಕೊಂಡಿದ್ದಾರೆ.

  Virat Kohli- Amir


  ಕ್ರಿಕೆಟ್ ಅಂಗಳದಲ್ಲಿ ವಿರಾಟ್ ಕೊಹ್ಲಿ ಎದುರಾಳಿ ಎಂದೇ ಖ್ಯಾತಿ ಪಡೆದಿದ್ದ ಮೊಹಮ್ಮದ್ ಅಮೀರ್ ಅವರ ದಿಢೀರ್ ನಿವೃತ್ತಿ ನಿರ್ಧಾರ ಅಪಾರ ಕ್ರಿಕೆಟ್​ ಪ್ರೇಮಿಗಳಿಗೆ ಅಚ್ಚರಿ ತಂದಿದೆ. ಸದ್ಯ ಲಂಕಾ ಕ್ರಿಕೆಟ್ ಲೀಗ್​ನಲ್ಲಿ ತೊಡಗಿಸಿಕೊಂಡಿರುವ ಅಮೀರ್, ಪಾಕ್​ಗೆ ಮರಳಿದ ಬಳಿಕ ಅಧಿಕೃತವಾಗಿ ನಿವೃತ್ತಿ ಪ್ರಕಟಿಸಲಿದ್ದಾರೆ.
  Published by:zahir
  First published: