Virender Sehwag- ಧೋನಿ ಮೆಂಟರ್ ಆಗಿದ್ದರಿಂದ ಯಾರಿಗೆ ಹೆಚ್ಚು ಲಾಭ? ಸೆಹ್ವಾಗ್ ಉತ್ತರ ಇದು

Virender Sehwag on Dhoni and Kohli- ಅಪಾರ ಅಭಿಮಾನಿ ಬಳಗ ಹೊಂದಿರುವ ವಿರಾಟ್ ಕೊಹ್ಲಿಗೆ ಐಪಿಎಲ್ ಟ್ರೋಫಿ ಕೊರತೆ ಕಾಡುತ್ತದೆ. ಅವರು ಆರ್​ಸಿಬಿ ಕ್ಯಾಪ್ಟನ್ ಆಗಿ ಒಮ್ಮೆಯಾದರೂ ಐಪಿಎಲ್ ಗೆಲ್ಲಬೇಕು ಎಂದು ಸೆಹ್ವಾಗ್ ಹೇಳಿದ್ದಾರೆ.

ಎಂ.ಎಸ್. ಧೋನಿ

ಎಂ.ಎಸ್. ಧೋನಿ

  • Cricketnext
  • Last Updated :
  • Share this:
    ಎಂ ಎಸ್ ಧೋನಿ (Mahendra Singh Dhoni) ಯಾವತ್ತೂ ಬೌಲರ್​ಗಳ ಕ್ಯಾಪ್ಟನ್ ಆಗಿದ್ದವರು. ಅವರು ಟೀಮ್ ಇಂಡಿಯಾದ ಮೆಂಟರ್ (Mentor- ಮಾರ್ಗದರ್ಶಕ) ಆಗಿರುವುದು ಜಸ್​ಪ್ರೀತ್ ಬುಮ್ರಾ ಮೊದಲಾದವರಿಗೆ ಭಾರೀ ಪ್ರಯೋಜನ ಆಗಲಿದೆ ಎಂದು ಮಾಜಿ ಕ್ರಿಕೆಟಿಗ ವೀರೇಂದರ್ ಸೆಹ್ವಾಗ್ (Virender Sehwag) ಅಭಿಪ್ರಾಯಪಟ್ಟಿದ್ದಾರೆ. ಟಿ20 ವಿಶ್ವಕಪ್​ಗಾಗಿ ಎಂ ಎಸ್ ಧೋನಿಯನ್ನು ಟೀಮ್ ಇಂಡಿಯಾದ ಮೆಂಟರ್ ಆಗಿ ಆಯ್ಕೆ ಮಾಡಿದ ಬಿಸಿಸಿಐ ನಿರ್ಧಾರವನ್ನು ಸಂಪೂರ್ಣವಾಗಿ ಸ್ವಾಗತಿಸಿದ ಸೆಹ್ವಾಗ್, “ಧೋನಿ ಮೆಂಟರ್ ಆಗಲು ಒಪ್ಪಿದ್ದು ಕೇಳಿ ಖುಷಿ ಆಯಿತು. ಭಾರತೀಯ ಕ್ರಿಕೆಟ್​ನ ಮುಖ್ಯ ವಾಹಿನಿಗೆ ಧೋನಿ ಬರಬೇಕೆಂದು ಬಹಳಷ್ಟು ಜನರು ಬಯಸಿದ್ದರು. ಮೆಂಟರ್ ಆಗುವ ಮೂಲಕ ಅವರು ಮರಳಿರುವುದು ಒಳ್ಳೆಯ ಸುದ್ದಿ” ಎಂದು ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸೆಹ್ವಾಗ್ ತಿಳಿಸಿದ್ದಾರೆ.

    ಸ್ಫೋಟಕ ಆರಂಭಿಕ ಬ್ಯಾಟ್ಸ್​ಮನ್ ಆಗಿದ್ದ ವೀರೇಂದ್ರ ಸೆಹ್ವಾಗ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಎರಡರಲ್ಲೂ ಯಶಸ್ಸು ಕಂಡವರು. ಧೋನಿ ಜೊತೆ ಸುಮಾರು 10 ವರ್ಷ ಕಾಲ ಟೀಮ್ ಇಂಡಿಯಾಗಾಗಿ ಆಡಿದ್ದಾರೆ. ಧೋನಿ ಕ್ಯಾಪ್ಟನ್ ಆಗಿ ಎಂಥ ಸಾಮರ್ಥ್ಯ ಹೊಂದಿದ್ದಾರೆ ಎಂಬ ಒಳ ಹೊರಗು ಸೆಹ್ವಾಗ್​ಗೆ ತಿಳಿದಿದೆ. ಬೌಲರ್​ಗಳನ್ನ ಹೇಗೆ ಸದ್ವಿನಿಯೋಗ ಮಾಡಿಕೊಳ್ಳಬೇಕು, ಪ್ರತೀ ಬೌಲರ್​ಗೂ ಫೀಲ್ಡಿಂಗ್ ಪ್ಲೇಸ್ಮೆಂಟ್ ಹೇಗಿರಬೇಕು ಎಂಬ ತಂತ್ರಗಾರಿಕೆ ಧೋನಿಗೆ ಚೆನ್ನಾಗಿ ತಿಳಿದಿತ್ತು ಎಂದು ಸೆಹ್ವಾಗ್ ಹೇಳುತ್ತಾರೆ.

    “ವಿಕೆಟ್ ಕೀಪರ್ ಆಗಿ ಎಂಎಸ್ ಅವರಿಗೆ ಫೀಲ್ಡ್ ಪ್ಲೇಸ್​ಮೆಂಟ್ಸ್ ಹೇಗೆ ಮಾಡಬೇಕು ಎಂಬ ಅರಿವು ಚೆನ್ನಾಗಿ ಇತ್ತು. ಈ ವರ್ಲ್ಡ್ ಕಪ್​ನಲ್ಲಿ ಭಾರತದ ಬೌಲರ್ಸ್​ಗೆ ಇದು ಉಪಯೋಗಕ್ಕೆ ಬರಲಿದೆ. ಬೌಲರ್​ಗಳು ಧೋನಿಯ ತಂತ್ರಗಾರಿಕೆಯ ಪ್ರಯೋಜನ ಪಡೆಯಬಹುದು. ಒಬ್ಬೊಬ್ಬ ಎದುರಾಳಿ ಬ್ಯಾಟ್ಸ್​ಮನ್​ಗೂ ಹೇಗೆ ಯೋಜನೆ ರೂಪಿಸಬೇಕೆಂದು ಧೋನಿಯಿಂದ ಸಲಹೆ ಪಡೆದುಕೊಳ್ಳಬಹುದು” ಎಂದು ವೀರೂ ತಿಳಿಸುತ್ತಾರೆ.

    ಫೀಲ್ಡ್​ನಲ್ಲಿ ತಮ್ಮ ಭಾವನೆಗಳನ್ನ ಹೊರಚೆಲ್ಲಲು ಸಂಕೋಚ ಪಡುವ ಯುವ ಆಟಗಾರರಿಗೆ ಧೋನಿಗಿಂತ ಒಳ್ಳೆಯ ಮೆಂಟರ್ ಸಿಗಲು ಸಾಧ್ಯವಿಲ್ಲ ಎಂಬುದು ಅವರ ಅನಿಸಿಕೆ. “ಯಾವುದೇ ಅಂತರರಾಷ್ಟ್ರೀಯ ತಂಡವಿರಲಿ ನಾಯಕನ ಬಳಿ ಹೋಗಿ ಆಟದ ಬಗ್ಗೆ ಮಾತನಾಡಲು ಆಟಗಾರರು ಹಿಂದೇಟು ಹಾಕುತ್ತಾರೆ. ಆದರೆ ಎಂಎಸ್ ಅವರು ಯುವ ಆಟಗಾರರಿಗೆ ಯಾವಾಗಲೂ ಲಭ್ಯ ಇರುತ್ತಾರೆ. ಅವರ ಸಮಸ್ಯೆಗಳಿಗೆ ಪರಿಹಾರ ಕೊಡಲು ಅವರೇ ಬೆಸ್ಟ್ ಟ್ರಬಲ್ ಶೂಟರ್ ಆಗಬಲ್ಲರು” ಎಂದು ಸೆಹ್ವಾಗ್ ಹೇಳುತ್ತಾರೆ.

    ಇದನ್ನೂ ಓದಿ: Sonu Sood- ಬೋಗಸ್ ಕಂಪನಿ, ಬೋಗಸ್ ಸಾಲ, ಕೋಟಿಕೋಟಿ ತೆರಿಗೆ ವಂಚನೆ: ಸೋನು ಸೂದ್ ಕರ್ಮಕಾಂಡ ಬಯಲು

    ಟಿ20 ವಿಶ್ವಕಪ್​ಗಾಗಿ 15 ಆಟಗಾರರು ಹಾಗೂ 3 ಮೀಸಲು ಆಟಗಾರರ ಟೀಮ್ ಇಂಡಿಯಾವನ್ನು ಬಿಸಿಸಿಐ ಪ್ರಕಟಿಸಿದೆ. ತಂಡಗಳಲ್ಲಿ ಬದಲಾವಣೆ ಮಾಡುವ ಅವಕಾಶ ಅಕ್ಟೋಬರ್ 10ರವರೆಗೆ ಇದೆ. ಅವಕಾಶ ಸಿಗದೇ ಇರುವ ಆಟಗಾರರು ಈ ವೇಳೆಯಲ್ಲಿ ಉತ್ತಮ ಪ್ರದರ್ಶನ ತೋರಿ ಆಯ್ಕೆಗಾರರ ಗಮನ ಸೆಳೆಯುವ ಅವಕಾಶ ಇದೆ. ಬಿಸಿಸಿಐ ಪ್ರಕಟಿಸಿದ ಮೂಲ ತಂಡದಲ್ಲಿ ಅಂತಿಮವಾಗಿ ಒಂದಷ್ಟು ಬದಲಾವಣೆಗಳಾದರೆ ಅಚ್ಚರಿ ಇಲ್ಲ ಎಂಬುದು ಅವರ ಅಭಿಪ್ರಾಯ.

    ವಿರಾಟ್ ಕೊಹ್ಲಿ ಬಗ್ಗೆ ಮಾತನಾಡಿದ ವಿರೇಂದರ್ ಸೆಹ್ವಾಗ್, ಕೊಹ್ಲಿಗೆ ಐಪಿಎಲ್ ಟ್ರೋಫಿ ಕೊರತೆ ನೀಗಿಸಿಕೊಳ್ಳುವ ಅಗತ್ಯತೆ ಇದೆ ಎಂದಿದ್ದಾರೆ. “ಪ್ರತಿಯೊಬ್ಬ ನಾಯಕನಿಗೂ ಐಪಿಎಲ್ ಬಹಳ ಮುಖ್ಯ. ದೊಡ್ಡ ಅಭಿಮಾನಿ ಬಳಗ ಹೊಂದಿರುವ ವಿರಾಟ್ ಕೊಹ್ಲಿಗೆ ಇದು ಇನ್ನೂ ಮುಖ್ಯ. ಆರ್​ಸಿಬಿ ತಂಡಕ್ಕಾಗಿ ವಿರಾಟ್ ಐಪಿಎಲ್ ಟ್ರೋಫಿ ಎತ್ತಿಹಿಡಿಯಬೇಕೆಂದು ಅವರ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ಅವರು ಆರ್​ಸಿಬಿ ಕ್ಯಾಪ್ಟನ್ ಆಗಿ ಒಮ್ಮೆಯಾದರೂ ಐಪಿಎಲ್ ಗೆಲ್ಲಬೇಕು” ಎಂದು ವೀರೇಂದರ್ ಸೆಹ್ವಾಗ್ ತಿಳಿಸುತ್ತಾರೆ.
    Published by:Vijayasarthy SN
    First published: