HOME » NEWS » Sports » CRICKET BORDER GAVASKAR TROPHY CRICKET TEAM RECORDS ZP

India vs Australia: ಬಾರ್ಡರ್​-ಗವಾಸ್ಕರ್​ ಸರಣಿಯಲ್ಲಿ ಯಾವ ತಂಡದ್ದು ಮೇಲುಗೈ?

15ನೇ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಗುರುವಾರದಿಂದ ಸೆಣಸಾಟ ಶುರುವಾಗಲಿದೆ. ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸುವ ತವಕದಲ್ಲಿ ಆಸ್ಟ್ರೇಲಿಯಾ ಇದ್ದರೆ, ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಟೀಮ್ ಇಂಡಿಯಾ ಇದೆ.

news18-kannada
Updated:December 16, 2020, 5:35 PM IST
India vs Australia: ಬಾರ್ಡರ್​-ಗವಾಸ್ಕರ್​ ಸರಣಿಯಲ್ಲಿ ಯಾವ ತಂಡದ್ದು ಮೇಲುಗೈ?
Border-GavaskarTrophy
  • Share this:
ಡಿಸೆಂಬರ್ 17 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಆರಂಭವಾಗಲಿದೆ. ಹೊನಲು-ಬೆಳಕಿನಲ್ಲಿ ನಡೆಯಲಿರುವ ಮೊದಲ ಟೆಸ್ಟ್​ ಪಂದ್ಯವನ್ನು ವೀಕ್ಷಿಸಲು ಇಡೀ ವಿಶ್ವ ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅಡಿಲೇಡ್​ನ ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಬೆಳಗ್ಗೆ 9:30ಕ್ಕೆ ಆರಂಭವಾಗಲಿದೆ.

ಇನ್ನೂ ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್​ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್​ ಬ್ರಿಸ್ಬೇನ್​ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮುಂಜಾನೆ 5 ಗಂಟೆಗೆ ಶುರುವಾದರೆ, ಅಂತಿಮ ಟೆಸ್ಟ್​ 5:30ಕ್ಕೆ ಆರಂಭವಾಗಲಿದೆ.

ಟೆಸ್ಟ್ ಕ್ರಿಕೆಟ್‌ನಲ್ಲಿ 10,000 ರನ್ ಗಳಿಸಿದ ಮೊದಲ ಬ್ಯಾಟ್ಸ್​ಮನ್​ಗಳಾದ ಸುನೀಲ್ ಗವಾಸ್ಕರ್ ಮತ್ತು ಅಲನ್ ಬಾರ್ಡರ್ ಹೆಸರಿನಲ್ಲಿ 1996 ರಿಂದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯನ್ನು ಉಭಯ ಕ್ರಿಕೆಟ್ ಮಂಡಳಿಗಳು ಆಯೋಜಿಸುತ್ತಿದೆ. ಈ ಸರಣಿಯಲ್ಲಿ 14 ಬಾರಿ ಮುಖಾಮುಖಿಯಾಗಿದೆ. ಚೊಚ್ಚಲ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾವನ್ನು 1-0 ಅಂತರದಿಂದ ಬಗ್ಗುಬಡಿಯಿತು. 1997-98 ರಲ್ಲಿ ನಡೆದ ಎರಡನೇ ಟೆಸ್ಟ್​ ಸರಣಿಯಲ್ಲೂ ಟೀಮ್ ಇಂಡಿಯಾ 2-1 ಅಂತರದಿಂದ ಜಯ ಸಾಧಿಸಿತ್ತು.

1999-2000 ರಲ್ಲಿ ಮೂರನೇ ಬಾರಿ ಆಸ್ಟ್ರೇಲಿಯಾದಲ್ಲಿ ನಡೆದ ಟೆಸ್ಟ್ ಕದನದಲ್ಲಿ ಆಸೀಸ್ ಪಡೆ ಭಾರತವನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿ ಸೇಡು ತೀರಿಸಿಕೊಂಡಿತು. 2001-02 ರಲ್ಲಿ ನಡೆದ ಸರಣಿಯನ್ನು 2-1 ಅಂತರದಿಂದ ಗೆಲ್ಲುವ ಮೂಲಕ ಟೀಮ್ ಇಂಡಿಯಾ ವಿಜಯದ ನಗೆ ಬೀರಿತು. 2003-04 ರಲ್ಲಿ ನಡೆದ ಟೆಸ್ಟ್​ ಸರಣಿಯು 1-1 ಸಮಬಲವಾಗಿ ಡ್ರಾದಲ್ಲಿ ಅಂತ್ಯವಾಯಿತು.

2004-05 ಆಸ್ಟ್ರೇಲಿಯಾ ಟೀಮ್ ಇಂಡಿಯಾವನ್ನು 2-1 ಅಂತರದಿಂದ ಬಗ್ಗು ಬಡಿಯಿತು. ಇನ್ನು 2007-08 ರಲ್ಲಿ ಮತ್ತದೇ ಮೇಲುಗೈ ಸಾಧಿಸಿದ ಆಸೀಸ್ ಪಡೆ ಭಾರತಕ್ಕೆ 2-1 ಅಂತರದಿಂದ ಸೋಲಿನ ರುಚಿ ತೋರಿಸಿತು. 2008-09 ರಲ್ಲಿ ಭಾರತ 2-0 ಅಂತರದಿಂದ ಆಸ್ಟ್ರೇಲಿಯಾಗೆ ಸೋಲುಣಿಸುವ ಮೂಲಕ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಹಾಗೆಯೇ 2010-11 ರಲ್ಲೂ 2-0 ಅಂತರದಿಂದ ಭಾರತ ಗೆದ್ದುಕೊಂಡಿತು.

2011-12 ರಲ್ಲಿ ಭಾರತವನ್ನು 4-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡುವ ಆಸ್ಟ್ರೇಲಿಯಾ ಐತಿಹಾಸಿಕ ಜಯ ಸಾಧಿಸಿತು. 2012-13 ರಲ್ಲಿ ಆಸೀಸ್ ಪಡೆಯನ್ನು 4-0 ಅಂತರದಿಂದ ಸೋಲಿಸುವ ಮೂಲಕ ಕ್ಲೀನ್ ಸ್ವೀಪ್​ನ ಸೇಡು ತೀರಿಸಿಕೊಂಡಿತು. 2014-15 ರಲ್ಲಿ 2-0 ಅಂತರದಿಂದ ಬಗ್ಗು ಬಡಿಯುವ ಮೂಲಕ ಮತ್ತೆ ಟ್ರೋಫಿಯನ್ನು ಆಸ್ಟ್ರೇಲಿಯಾ ಮುಡಿಗೇರಿಸಿತು. 2016-17 ಹಾಗೂ 2018-19 ರಲ್ಲಿ ಭಾರತ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಸೋಲಿಸುವ ಮೂಲಕ ಜಯದ ನಗೆ ಬೀರಿತು. ಈ ಸರಣಿಯಲ್ಲಿ ಭಾರತ 8 ಬಾರಿ ಟ್ರೋಫಿಗೆ ಮುತ್ತಿಟ್ಟಿದ್ದರೆ, ಆಸ್ಟ್ರೇಲಿಯಾ 5 ಬಾರಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇನ್ನು ಒಂದು ಬಾರಿ ಸರಣಿ ಡ್ರಾನಲ್ಲಿ ಅಂತ್ಯಗೊಂಡಿದೆ.
ಇದೀಗ 15ನೇ ಬಾರಿ ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಗುರುವಾರದಿಂದ ಸೆಣಸಾಟ ಶುರುವಾಗಲಿದೆ. ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸುವ ತವಕದಲ್ಲಿ ಆಸ್ಟ್ರೇಲಿಯಾ ಇದ್ದರೆ, ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಟೀಮ್ ಇಂಡಿಯಾ ಇದೆ.
Published by: zahir
First published: December 16, 2020, 5:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories