ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿರುವ ಟೀಮ್ ಇಂಡಿಯಾಗೆ ಆಟಗಾರರ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಸರಣಿ ಆರಂಭಕ್ಕೂ ಮುನ್ನ ಇಶಾಂತ್ ಶರ್ಮಾ ಹಾಗೂ ರೋಹಿತ್ ಶರ್ಮಾ ಸೀಮಿತ ಓವರ್ಗಳಿಂದ ಹೊರಗುಳಿದಿದ್ದರು. ಇದಾದ ಬಳಿಕ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಗಾಯಗೊಂಡು ಹೊರನಡೆದಿದ್ದರು. ಇನ್ನು ಅಭ್ಯಾಸದ ಪಂದ್ಯದ ವೇಳೆ ಕೆಎಲ್ ರಾಹುಲ್ ಸಹ ಗಾಯಗೊಂಡು ಭಾರತಕ್ಕೆ ವಾಪಾಸಾಗಿದ್ದರು.
ಇದೀಗ ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಕೂಡ ಗಾಯಗೊಂಡಿದ್ದಾರೆ. ಸಿಡ್ನಿ ಕ್ರಿಕೆಟ್ ಗ್ರೌಂಡ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ವೇಳೆ ರವೀಂದ್ರ ಜಡೇಜಾ ಗಾಯಕ್ಕೆ ತುತ್ತಾಗಿದ್ದಾರೆ.
ಭಾರತದ ಮೊದಲ ಇನಿಂಗ್ಸ್ ವೇಳೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುವಾಗ ಎಡಗೈ ಹೆಬ್ಬೆರಳಿಗೆ ಪೆಟ್ಟು ಮಾಡಿಕೊಂಡಿದ್ದರು. ಹೀಗಾಗಿ ಅವರನ್ನು ಸ್ಕ್ಯಾನ್ಗಾಗಿ ಕರೆದೊಯ್ಯಲಾಗಿತ್ತು. ಅಲ್ಲದೆ ಗಾಯದ ಗಂಭೀರತೆಯನ್ನು ಪರಿಗಣಿಸಿ ಜಡೇಜಾರನ್ನು ದ್ವಿತೀಯ ಇನಿಂಗ್ಸ್ನಲ್ಲಿ ಫೀಲ್ಡಿಂಗ್ಗೆ ಇಳಿಸಿರಲಿಲ್ಲ.
ಅಲ್ಲದೆ ಅಂತಿಮ ದಿನದ ಬ್ಯಾಟಿಂಗ್ಗೂ ರವೀಂದ್ರ ಜಡೇಜಾ ಅವರು ಕಣಕ್ಕಿಳಿಯಲಿಲ್ಲ. ಇದೀಗ ಜಡೇಜಾ ಅವರ ವೈದ್ಯಕೀಯ ರಿಪೋರ್ಟ್ ಬಂದಿದ್ದು, 6 ವಾರಗಳ ಕಾಲ ವಿಶ್ರಾಂತಿ ಸೂಚಿಸಲಾಗಿದೆ. ಅಂದರೆ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಿಂದ ರವೀಂದ್ರ ಜಡೇಜಾ ಹೊರಗುಳಿಯಲಿದ್ದಾರೆ.
ಅಷ್ಟೇ ಅಲ್ಲದೆ ಫೆಬ್ರವರಿ 5 ರಂದು ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೂ ಜಡೇಜಾ ಅಲಭ್ಯರಾಗಲಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಟೆಸ್ಟ್ನಲ್ಲಿ ರವೀಂದ್ರ ಜಡೇಜಾ ಸ್ಥಾನದಲ್ಲಿ ಕುಲದೀಪ್ ಯಾದವ್ ಕಣಕ್ಕಿಳಿಯುವ ಸಾಧ್ಯತೆಯಿದೆ.
ಜನವರಿ 15 ರಿಂದ ಭಾರತ-ಆಸ್ಟ್ರೇಲಿಯಾ ನಡುವಣ 4ನೇ ಟೆಸ್ಟ್ ಪಂದ್ಯವು ಬಿಸ್ಬೇನ್ನಲ್ಲಿ ಆರಂಭವಾಗಲಿದ್ದು, ಉಭಯ ತಂಡಗಳು 1-1 ಸಮಬಲ ಸಾಧಿಸಿದ್ದರಿಂದ ಅಂತಿಮ ಟೆಸ್ಟ್ ಪಂದ್ಯವು ಫೈನಲ್ ಕದನವಾಗಿ ಮಾರ್ಪಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ