Ind vs NZ- ನ್ಯೂಜಿಲೆಂಡ್​ನ ದೊಡ್ಡ ಶಕ್ತಿ ಯಾವುದು ಗೊತ್ತಾ? ಭಾರತಕ್ಕೆ ಜಹೀರ್ ಎಚ್ಚರಿಕೆ ಕರೆಗಂಟೆ

T20 World Cup, Ind vs NZ at Dubai: ಪಾಕಿಸ್ತಾನ ವಿರುದ್ಧ ಸುಲಭವಾಗಿ ಸೋಲೊಪ್ಪದ ನ್ಯೂಜಿಲೆಂಡ್ ತಂಡದ ಈ ದೊಡ್ಡ ಸ್ವಭಾವದ ಬಗ್ಗೆ ಭಾರತ ಎಚ್ಚರಿಕೆಯಿಂದ ಇರಬೇಕು ಎಂದು ಜಹೀರ್ ಖಾನ್ ಎಚ್ಚರಿಸಿದ್ದಾರೆ.

ಜಹೀರ್ ಖಾನ್

ಜಹೀರ್ ಖಾನ್

 • Share this:
  ದುಬೈ: ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇದೇ ಭಾನುವಾರ ಹಣಾಹಣಿ ನಡೆಸಲಿವೆ. ಎರಡೂ ತಂಡಗಳು ಗಾಯಗೊಂಡ ಹುಲಿಗಳಾಗಿವೆ. ಎರಡೂ ಕೂಡ ಪಾಕಿಸ್ತಾನ ತಂಡದ ವಿರುದ್ಧವೇ ಮೊದಲ ಪಂದ್ಯದಲ್ಲಿ ಸೋತಿವೆ. ಆದರೆ, ಸೋಲಿನಲ್ಲಿ ವ್ಯತ್ಯಾಸ ಇದೆ ಎನ್ನುತ್ತಾರೆ ಟೀಮ್ ಇಂಡಿಯಾ ಮಾಜಿ ವೇಗದ ಬೌಲರ್ ಜಹೀರ್ ಖಾನ್. ಪಾಕಿಸ್ತಾನಕ್ಕೆ ಭಾರತ ಸುಲಭವಾಗಿ ಶರಣಾದರೆ, ನ್ಯೂಜಿಲೆಂಡ್ ಎದುರು ಗೆಲ್ಲಲು ಪಾಕಿಸ್ತಾನ ಪ್ರಯಾಸ ಪಡಬೇಕಾಯಿತು. ಈ ವಿಚಾರವನ್ನು ಉಲ್ಲೇಖಿಸಿದ ಜಹೀರ್ ಖಾನ್ ಕಿವೀಸ್ ಪಡೆಯ ಹೋರಾಟ ಮನೋಭಾವವನ್ನು ಮೆಚ್ಚಿಕೊಂಡಿದ್ದಾರೆ.

  ಅಕ್ಟೋಬರ್ 24ರಂದು ದುಬೈನಲ್ಲಿ ನಡೆದ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನ 10 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಭಾರತದ 151 ರನ್ ಮೊತ್ತವನ್ನು ಪಾಕಿಸ್ತಾನ ಸಲೀಸಾಗಿ ಚೇಸ್ ಮಾಡಿತು. ಶಾಹೀನ್ ಅಫ್ರಿದಿಯ ಭರ್ಜರಿ ಬೌಲಿಂಗ್, ಮೊಹಮ್ಮದ್ ರಿಜ್ವಾನ್ ಮತ್ತು ಬಾಬರ್ ಅಜಂ ಅವರ ಸೂಪರ್ ಬ್ಯಾಟಿಂಗ್ ಕಾರಣದಿಂದ ಪಾಕಿಸ್ತಾನ ನಿರೀಕ್ಷೆಮೀರಿ ಸುಲಭ ಗೆಲುವು ಪಡೆಯಿತು.

  ಅಕ್ಟೋಬರ್ 24ರಂದು ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಕೇವಲ 134 ರನ್ ಸ್ಕೋರ್ ಮಾಡಿದರೂ ಪಾಕಿಸ್ತಾನಕ್ಕೆ ಸುಲಭವಾಗಿ ಪಂದ್ಯ ಬಿಟ್ಟುಕೊಡಲಿಲ್ಲ. ಭಾರತದ ವಿರುದ್ಧ ನೋಲಾಸ್​ನಲ್ಲಿ ಗೆಲುವು ಪಡೆದಿದ್ದ ಪಾಕಿಸ್ತಾನ ಕಿವೀಸ್ ವಿರುದ್ಧ 5 ವಿಕೆಟ್ ಕಳೆದುಕೊಂಡಿತು. ಸುಲಭವಾಗಿ ಚೇಸ್ ಮಾಡಬಹುದು ಎಂಬ ನಿರೀಕ್ಷೆ ಇದ್ದರೂ ಪಾಕಿಸ್ತಾನ ಸಾಕಷ್ಟು ಬೆವರು ಹರಿಯುವಂತೆ ನ್ಯೂಜಿಲೆಂಡ್ ಮಾಡಿತು. ಇನ್ನಿಂಗ್ಸ್​ನ 16 ಓವರ್ ಅಂತ್ಯದವರೆಗೂ ನ್ಯೂಜಿಲೆಂಡ್​ಗೆ ಗೆಲುವಿನ ದಾರಿ ಕಣ್ಣಿಗೆ ಕಾಣುವಂತೆಯೇ ಇತ್ತು. ಆದರೆ, 17ನೇ ಓವರ್​ನಿಂದ ಪಂದ್ಯ ಪಾಕಿಸ್ತಾನದತ್ತ ವಾಲಿತು.

  ಇದನ್ನೂ ಓದಿ: IPL 2022- ಐಪಿಎಲ್​ನಲ್ಲಿ 10 ಟೀಮ್, ಪ್ರತೀ ತಂಡಕ್ಕೆ 14 ಪಂದ್ಯ; ಹೇಗೆ ಸಾಧ್ಯ? ಟೂರ್ನಿ ಸ್ವರೂಪ ಏನು?

  ಭಾರತ ಈ ವಿಚಾರದಲ್ಲಿ ಎಚ್ಚರದಿಂದಿರಬೇಕು:

  ನ್ಯೂಜಿಲೆಂಡ್ ತಂಡ ತನ್ನ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾಯಿತು ಎನ್ನುತ್ತಾರೆ ಜಹೀರ್ ಖಾನ್. “ಒಂದಂತೂ ಸ್ಪಷ್ಟ ಎನಿಸುತ್ತದೆ. ಈ ನ್ಯೂಜಿಲೆಂಡ್ ತಂಡ ಬಹಳ ಉತ್ಸಾಹಿಯಾಗಿದ್ದು ಪ್ರತಿಯೊಂದು ಪಂದ್ಯವನ್ನೂ ಗೆಲ್ಲುವ ಗುರಿ ಹೊಂದಿದೆ. ಪಾಕಿಸ್ತಾನ ಪಂದ್ಯದ ಫಲಿತಾಂಶ ಅಂದುಕೊಂಡಂತೆ ಬರದೇ ಹೋದರೂ ಅವರು ತೋರಿದ ಹೋರಾಟ ಅದ್ಭುತವಾಗಿತ್ತು. ತಮ್ಮ ಇನ್ನಿಂಗ್ಸಲ್ಲಿ ಹೆಚ್ಚು ರನ್ ಸ್ಕೋರ್ ಮಾಡದಿದ್ದರೂ ಬೌಲಿಂಗ್ ಮತ್ತು ಫೀಲ್ಡಿಂಗ್ ಮೂಲಕವೇ ಹೋರಾಟ ಮಾಡಿದರು. ಅವರೆಂದೂ ಗೆಲುವಿನ ಆಸೆ ಬಿಡುವುದಿಲ್ಲ ಎಂಬುದನ್ನು ಸೂಚಿಸುತ್ತದೆ. ಈ ವಿಚಾರದಲ್ಲಿ ಭಾರತ ಎಚ್ಚರಿಕೆಯಿಂದಿರಬೇಕು” ಎಂದು ಜಹೀರ್ ಖಾನ್ ಸಲಹೆ ನೀಡಿದ್ದಾರೆ.

  ಭಾರತಕ್ಕೆ ವಿಶ್ವಕಪ್ ಗೆಲ್ಲುವ ಸಾಮರ್ಥ್ಯ ಇದೆ:

  “ಭಾರತ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಯಾವ ತಂಡದ ವಿರುದ್ಧವೂ ಗೆಲ್ಲಬಲ್ಲುದು. ಯಾವುದೇ ತಂಡವಾದರೂ ಆದಷ್ಟೂ ಬೇಗ ಗೆಲುವಿನ ಲಯಕ್ಕೆ ಬರುವುದು ಬಹಳ ಮುಖ್ಯ. ಅದರಲ್ಲೂ ವಿಶ್ವಕಪ್​ನಲ್ಲಿ ಇದು ಹೆಚ್ಚು ಮುಖ್ಯ. ಭಾರತ ಈಗಾಗಲೇ ಮೊದಲ ಪಂದ್ಯವನ್ನು ಸೋತಿದೆ. ಈಗ ಗೆಲುವಿನ ಹಾದಿಗೆ ಬೇಗ ಬರದೇ ಹೋದರೆ ಕಾಲ ಮಿಂಚಿಹೋಗಬಹುದು. ನ್ಯೂಜಿಲೆಂಡ್ ವಿರುದ್ಧದ ಮುಂದಿನ ಪಂದ್ಯ ಮಾಡು ಇಲ್ಲ ಮಡಿ ಆಗಿದೆ” ಎಂದು ಮಾಜಿ ಆಟಗಾರ ಜಹೀರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

  ಇದನ್ನೂ ಓದಿ: David Warner- ಕಾಂಕ್ರೀಟ್ ಪಿಚ್​ನಲ್ಲಿ ಡೇವಿಡ್ ವಾರ್ನರ್ ಪ್ರಾಕ್ಟೀಸ್; ಸಿಂಥೆಟಿಕ್ ಟ್ರ್ಯಾಕ್​ನಿಂದ ಏನು ಲಾಭ?

  ನ್ಯೂಜಿಲೆಂಡ್ ಬೌಲಿಂಗ್ ಡೇಂಜರಸ್:

  ನ್ಯೂಜಿಲೆಂಡ್ ತಂಡದ ಬೌಲಿಂಗ್ ಕೂಡ ಭಾರತಕ್ಕೆ ಡೇಂಜರ್ ಎನಿಸಬಹುದು. ಪಾಕಿಸ್ತಾನದ ಎಡಗೈ ವೇಗದ ಬೌಲರ್ ಶಾಹೀನ್ ಅಫ್ರಿದಿ ಅವರ ಸ್ವಿಂಗ್ ಬೌಲಿಂಗ್ ಭಾರತದ ಬ್ಯಾಟುಗಾರರನ್ನ ಬಹಳವಾಗಿ ಕಾಡಿತು. ಹಾಗೆಯೇ, ನ್ಯೂಜಿಲೆಂಡ್ ತಂಡದಲ್ಲೂ ಎಡಗೈ ವೇಗಿ ಇದ್ದಾರೆ. ಟ್ರೆಂಟ್ ಬೌಲ್ಟ್ ಅವರು ಶಾಹೀನ್ ಅಫ್ರಿದಿಯಂತೆ ಭಾರತಕ್ಕೆ ಮಾರಕವಾಗಬಹುದು ಎಂಬ ಅಭಿಪ್ರಾಯ ಇದೆ.

  ಭಾನುವಾರ ಸಂಜೆ 7:30ಕ್ಕೆ ಪಂದ್ಯ ಆರಂಭವಾಗುತ್ತದೆ. ಈ ಪಂದ್ಯದ ಬಳಿಕ ಎರಡೂ ತಂಡಗಳಿಗೆ ಅಫ್ಘಾನಿಸ್ತಾನ, ಸ್ಕಾಟ್​ಲೆಂಡ್ ಮತ್ತು ನಮೀಬಿಯಾ ತಂಡಗಳ ಸವಾಲುಗಳು ಉಳಿಯುತ್ತವೆ. ಅಫ್ಘಾನಿಸ್ತಾನ ತಾವೆಷ್ಟು ಡೇಂಜರಸ್ ಎಂಬುದನ್ನು ಸ್ಕಾಟ್​ಲೆಂಡ್ ವಿರುದ್ಧದ ಪಂದ್ಯದಲ್ಲಿ ತೋರಿಸಿದೆ. ನಮೀಬಿಯಾ ಕೂಡ ತಾನು ದುರ್ಬಲ ಎಂಬ ಸಂದೇಶವನ್ನು ಸ್ಕಾಟ್ಲೆಂಡ್ ಮೇಲೆ ಗೆಲ್ಲುವ ಮೂಲಕ ಜಗಜ್ಜಾಹೀರುಗೊಳಿಸಿದೆ.
  Published by:Vijayasarthy SN
  First published: