Kapil Dev- ಸ್ಟಾರ್ ಆಟಗಾರರು ಆಡುತ್ತಿಲ್ಲವಾ, ತೆಗೆದುಹಾಕಿ: ಕಪಿಲ್ ದೇವ್ ಶಾಕಿಂಗ್ ಸಲಹೆ

T20 World Cup- ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗಬೇಕು ಎಂದು ಸುನೀಲ್ ಗವಾಸ್ಕರ್ ಒಂದಷ್ಟು ಸಲಹೆ ಕೊಟ್ಟಿದ್ದಾರೆ. ಇನ್ನೊಂದೆಡೆ ಟೀಮ್ ಇಂಡಿಯಾದ ದೊಡ್ಡ ಆಟಗಾರರನ್ನ ಕೈಬಿಡುವಂತೆ ಕಪಿಲ್ ದೇವ್ ಒತ್ತಾಯಿಸಿದ್ದಾರೆ.

ಕಪಿಲ್ ದೇವ್

ಕಪಿಲ್ ದೇವ್

 • Share this:
  ನವದೆಹಲಿ, ನ. 03: ಸತತ ಸೋಲುಗಳಿಂದ ವಿಶ್ವಕಪ್​ನಿಂದ ಹೊರಬೀಳುವ ಸ್ಥಿತಿಗೆ ಬಂದಿರುವ ಟೀಮ್ ಇಂಡಿಯಾ (Indian Cricket Team on brink of exiting T20 World Cup 2021) ಬಗ್ಗೆ ಬಹಳಷ್ಟು ಟೀಕೆ ಟಿಪ್ಪಣಿಗಳು ಬಂದಿವೆ. ಭಾರತ ತಂಡದ ಧೋರಣೆ ಬಗ್ಗೆ ಕಟುವಾಗಿ ಟೀಕಿಸುತ್ತಿರುವವರಲ್ಲಿ ಕಪಿಲ್ ದೇವ್ (Former Cricketer Kapil Dev) ಒಬ್ಬರು. ಇವರು ಬಹಳ ಕಠಿಣ ಶಬ್ದಗಳಲ್ಲಿ ಭಾರತದ ಪ್ರದರ್ಶನವನ್ನು ಟೀಕಿಸುತ್ತಾ ಬಂದಿದ್ದಾರೆ. ಈಗ ಟೀಮ್ ಇಂಡಿಯಾದಲ್ಲಿ ದೊಡ್ಡ ಬದಲಾವಣೆ ಮಾಡುವ ಕಾಲ ಬಂದಿದೆ (Time to make big changes in Team) ಎಂದು ಮಾಜಿ ಆಲ್​ರೌಂಡರ್ ಕಪಿಲ್ ದೇವ್ ಹೇಳಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯಕ್ಕೆ ಮುನ್ನ ಕಪಿಲ್ ದೇವ್ ಇಂಥದ್ದೊಂದು ಸಲಹೆ ನೀಡಿ ಶಾಕ್ ಕೊಟ್ಟಿದ್ದಾರೆ.

  ಭಾರತದ ತಂಡದ ಮುನ್ನಡೆಯು ಇತರ ತಂಡಗಳ ಮೇಲೆ ಅವಲಂಬಿತವಾಗಬಾರದು. ಈಗಾಗಲೇ ತಂಡದಲ್ಲಿ ಊರಿರುವ ಆಟಗಾರರು ತಮ್ಮ ಮೌಲ್ಯವನ್ನು ಸಾಬೀತು ಮಾಡಲು ವಿಫಲರಾದರೆ ಬಿಸಿಸಿಐ ಮಧ್ಯ ಪ್ರವೇಶಿಸಿ ಬೇರೆ ಆಟಗಾರರನ್ನ ಪರಿಗಣಿಸಬೇಕು ಎಂದು ಎಬಿಪಿ ನ್ಯೂಸ್ ಜೊತೆ ಮಾತನಾಡುತ್ತಾ ಕಪಿಲ್ ದೇವ್ ಹೇಳಿದ್ಧಾರೆ.

  ದೊಡ್ಡ ಆಟಗಾರರ ಭವಿಷ್ಯ ನಿರ್ಧರಿಸಿ:

  “ಇತರ ತಂಡಗಳ ಆಧಾರದ ಮೇಲೆ ನಾವು ಗಳಿಸುವ ಯಶಸ್ಸನ್ನ ಭಾರತೀಯ ಕ್ರಿಕೆಟ್ ಎಂದಿಗೂ ಸ್ವೀಕರಿಸುವುದಿಲ್ಲ. ನೀವು ವಿಶ್ವಕಪ್ ಗೆಲ್ಲಬೇಕಾದರೆ ಅಥವಾ ಸೆಮಿಫೈನಲ್​ಗಾದರೂ ತಲುಪಬೇಕಾದರೆ ನಿಮ್ಮ ಸಾಮರ್ಥ್ಯದ ಮೇಲೆ ಗೆಲ್ಲಿರಿ. ಬೇರೆ ತಂಡಗಳ ಮೇಲೆ ಅವಲಂಬಿತವಾಗದಿರುವುದು ಒಳ್ಳೆಯದು. ತಂಡದಲ್ಲಿರುವ ದೊಡ್ಡ ಆಟಗಾರರ ಭವಿಷ್ಯದ ಬಗ್ಗೆ ಆಯ್ಕೆಗಾರರು ನಿರ್ಧರಿಸಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು 1983ರ ವಿಶ್ವಕಪ್ ವಿಜೇತ ಟೀಮ್ ಇಂಡಿಯಾ ನಾಯಕರಾಗಿದ್ದ ಅವರು ನಿಷ್ಠುರವಾಗಿ ತಿಳಿಸಿದ್ಧಾರೆ.

  ಯುವ ಪ್ರತಿಭೆಗಳಿಗೆ ಮಣೆಹಾಕಿ:

  “ಐಪಿಎಲ್​ನಲ್ಲಿ ಚೆನ್ನಾಗಿ ಆಡಿರುವ ಯುವ ಪ್ರತಿಭೆಗಳಿಗೆ ಕೊಡಬಹುದಾ ಯೋಚಿಸಲಿ. ಮುಂದಿನ ತಲೆಮಾರಿನ ಕ್ರಿಕೆಟಿಗರನ್ನ ಉತ್ತಮಗೊಳಿಸುವುದು ಹೇಗೆ? ಅವರು ವಿಫಲರಾದರೆ ತೊಂದರೆ ಇಲ್ಲ, ಅವರಿಗೆ ಅನುಭವ ಸಿಕ್ಕಂತಾಗುತ್ತದೆ. ಆದರೆ, ಈ ದೊಡ್ಡ ಆಟಗಾರರು ಸರಿಯಾಗಿ ಆಡದಿದ್ದರೆ, ಅಥವಾ ಕೆಟ್ಟ ಆಟ ಆಡಿದರೆ ಟೀಕೆಗಳ ಮಹಾಪೂರ ಎದುರಿಸಬೇಕಾಗುತ್ತದೆ. ಬಿಸಿಸಿಐ ಮಧ್ಯಪ್ರವೇಶಿಸಿ, ಹೆಚ್ಚೆಚ್ಚು ಯುವ ಆಟಗಾರರನ್ನ ತಂಡಕ್ಕೆ ಸೇರಿಸಿಕೊಳ್ಳುವುದರತ್ತ ಗಮನ ಕೊಡಬೇಕು” ಎಂದು ಕಪಿಲ್ ದೇವ್ ಸಲಹೆ ನೀಡಿದ್ದಾರೆ.

  ಕೊಹ್ಲಿ ಹೇಳಿಕೆಗೆ ಕಿಡಿ:

  ಕಪಿಲ್ ದೇವ್ ಮೊನ್ನೆಯಷ್ಟೇ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಪಂದ್ಯೋತ್ತರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯೂಜಿಲೆಂಡ್ ವಿರುದ್ಧ ಭಾರತ ಸೋತ ನಂತರ ವಿರಾಟ್ ಕೊಹ್ಲಿ ಮಾತನಾಡಿ, ತಮ್ಮ ತಂಡ ಧೈರ್ಯಗೆಟ್ಟಿತ್ತು (Team was not brave enough, said Virat Kohli) ಎಂದು ಹೇಳಿಕೊಂಡಿದ್ದರು. ಈ ಹೇಳಿಕೆಯನ್ನ ಕಟುವಾಗಿ ಟೀಕಿಸಿದ ಕಪಿಲ್ ದೇವ್, ಕೊಹ್ಲಿಯಂತಹ ಒಬ್ಬ ವ್ಯಕ್ತಿಯಿಂದ ಇಂಥ ಹೇಳಿಕೆ ನಿರೀಕ್ಷಿಸಿರಲಿಲ್ಲ. ಇದು ತಂಡದ ಉತ್ಸಾಹವನ್ನ ಇನ್ನಷ್ಟು ತಗ್ಗಿಸುತ್ತದೆ ಎಂದಿದ್ದರು.

  ಇದನ್ನೂ ಓದಿ: T20 World Cup- ರವಿಶಾಸ್ತ್ರಿ 24 ಗಂಟೆ ನಶೆಯಲ್ಲೇ ಇರ್ತಾರೆ: ನಟ ಕೆಆರ್​ಕೆ ಗಂಭೀರ ಆರೋಪ

  “ಅವರು ಒಬ್ಬ ಹೋರಾಟಗಾರ. ಆ ಕ್ಷಣದ ಭಾವೋದ್ವೇಗಕ್ಕೆ ಒಳಗಾದಂತಿದೆ. ನಾವು ಸಾಕಷ್ಟು ಅಧೈರ್ಯ ಮುಂತಾದ ಪದಗಳನ್ನ ನಾಯಕರಾದವರು ಆಡಬಾರದು. ನಿಮ್ಮ ದೇಶಕ್ಕಾಗಿ ನೀವು ಆಡುತ್ತಿರುತ್ತೀರಿ. ಇಂಥ ಪದಗಳನ್ನ ಆಡಿದಾಗ ನಿಮ್ಮತ್ತ ಬೆರಳು ತಿರುತ್ತದೆ” ಎಂದು ಕಪಿಲ್ ದೇವ್ ಎಚ್ಚರಿಸಿದ್ದರು.

  ತಂಡದಲ್ಲಿ ಬದಲಾವಣೆಗೆ ಸುನೀಲ್ ಗವಾಸ್ಕರ್ ಸಲಹೆ:

  ಇವತ್ತು ಅಫ್ಘಾನಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಟಿಮ್ ಇಂಡಿಯಾದಲ್ಲಿ ಕೆಲ ಬದಲಾವಣೆಗಳಾಗಬೇಕೆಂದು ಮಾಜಿ ಆಟಗಾರ ಸುನೀಲ್ ಗವಾಸ್ಕರ್ (Former Cricketer Sunil Gavaskar) ಸಲಹೆ ನೀಡಿದ್ದಾರೆ. ತಂಡದಲ್ಲಿ ಇಬ್ಬರು ವೇಗದ ಬೌಲರ್ ಮತ್ತು ಮೂವರು ಸ್ಪಿನ್ನರ್​ಗಳು ಇರಬೇಕು ಎಂಬುದು ಅವರ ಅನಿಸಿಕೆ.

  ವರುಣ್ ಚಕ್ರವರ್ತಿ ಬದಲು ಆರ್ ಅಶ್ವಿನ್ ಅವರನ್ನ ಆಡಿಸಬೇಕು. ಅಫ್ಘಾನಿಸ್ತಾನ್ ವಿರುದ್ಧ ವರುಣ್ ಚಕ್ರವರ್ತಿಯಂಥ ಮಿಸ್ಟರಿ ಸ್ಪಿನ್ನರ್​ಗಳು ಪರಿಣಾಮಕಾರಿ ಆಗುವುದಿಲ್ಲ. ರಾಹುಲ್ ಚಾಹರ್ ಅವರನ್ನೂ ಪರಿಗಣಿಸಬಹುದು ಎಂದು ಗವಾಸ್ಕರ್ ತಿಳಿಸಿದ್ದಾರೆ.

  ವೇಗದ ಬೌಲರ್​ಗಳ ಪೈಕಿ ಮೊಹಮ್ಮದ್ ಶಮಿ ಅಥವಾ ಶಾರ್ದೂಲ್ ಠಾಕೂರ್ ಅವರಿಬ್ಬರಲ್ಲಿ ಒಬ್ಬರನ್ನ ಕೈಬಿಡಬಹುದು. ಮೂರನೇ ವೇಗದ ಬೌಲರ್ ಆಗಿ ಹಾರ್ದಿಕ್ ಪಾಂಡ್ಯ ಅವರನ್ನೇ ನಿಯುಕ್ತಗೊಳಿಸಬಹುದು ಎಂದು ಮಾಜಿ ಟೀಮ್ ಇಂಡಿಯಾ ನಾಯಕರೂ ಆದ ಸುನೀಲ್ ಗವಾಸ್ಕರ್ ಹೇಳಿದ್ದಾರೆ.
  Published by:Vijayasarthy SN
  First published: