Sourav Ganguly Heart Attack - ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಹೃದಯಾಘಾತ; ಆಸ್ಪತ್ರೆಗೆ ದಾಖಲು
ಶನಿವಾರ ಬೆಳಗ್ಗೆ ಜಿಮ್ನಲ್ಲಿ ವರ್ಕೌಟ್ ಮಾಡುವಾಗ ನಿತ್ರಾಣಗೊಂಡು ಕುಸಿದ ಸೌರವ್ ಗಂಗೂಲಿ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪರೀಕ್ಷಾ ವರದಿ ಪ್ರಕಾರ ಅವರಿಗೆ ಸಣ್ಣಗೆ ಹೃದಯಾಘಾತವಾಗಿದೆ. ಸಂಜೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ಮಾಡುವ ಸಾಧ್ಯತೆ ಇದೆ.
ಕೋಲ್ಕತಾ(ಜ. 02): ಬಿಸಿಸಿಐ ಅಧ್ಯಕ್ಷ, ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅವರಿಗೆ ಹೃದಯಾಘಾತವಾಗಿರುವ ಮಾಹಿತಿ ಬಂದಿದ್ದು, ಅವರನ್ನು ಇಲ್ಲಿಯ ವುಡ್ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಸಂಜೆ ಅವರಿಗೆ ಆಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಇದು ಶನಿವಾರ ಬೆಳಗ್ಗೆ ವರ್ಕೌಟ್ ಮಾಡುವ ವೇಳೆ ಅವರಿಗೆ ತಲೆಸುತ್ತು ಬಂದಿದೆ. ಎದೆ ನೋವು ಕೂಡ ಕಾಣಿಸಿಕೊಂಡು, ನಂತರ ಅವರನ್ನ ಆಸ್ಪತ್ರೆಗೆ ಸೇರಿಸಲಾಗಿದೆ. ಯಾವ ಕಾರಣಕ್ಕೆ ಎದೆ ನೋವು ಕಾಣಿಸಿಕೊಂಡಿತು ಎಂಬ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇಇಜಿ, ಇಸಿಜಿ, ಇಸಿಒ ಕಾರ್ಡಿಯೋಗ್ರಫಿ ಸೇರಿದಂತೆ ವಿವಿಧ ಹೃದಯಸಂಬಂಧಿ ಪರೀಕ್ಷೆಗಳನ್ನ ನಡೆಸಲಾಗಿದೆ. ಇಸಿಒ ಕಾರ್ಡಿಯೋಗ್ರಫಿ ಪರೀಕ್ಷೆಯ ವರದಿ ಪ್ರಕಾ ಅವರಿಗೆ ಸಣ್ಣದಾಗಿ ಹೃದಯಾಘಾತವಾಗಿದೆ. ಆಸ್ಪತ್ರೆ ಕಡೆಯಿಂದ ಅಧಿಕೃತ ಮಾಹಿತಿ ಬರಬೇಕಿದೆ.
ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಅವರ ಚಿಕಿತ್ಸೆಗಾಗಿ ವುಡ್ಲ್ಯಾಂಡ್ಸ್ ಆಸ್ಪತ್ರೆಯ 5 ಸದಸ್ಯರ ವೈದ್ಯಕೀಯ ತಂಡವೊಂದನ್ನ ರಚಿಸಲಾಗಿದೆ. ಗಂಗೂಲಿ ಅವರಿಗೆ ಮೈಕಾರ್ಡಿಯಲ್ ಸೋಂಕು ತಗುಲಿರಬಹುದು ಎಂಬುದು ವೈದ್ಯರ ಶಂಕೆ.
ಮೂರು ದಿನಗಳ ಹಿಂದೆ ಅವರು ಈಡನ್ ಗಾರ್ಡನ್ಸ್ ಕ್ರೀಡಾಂಗಣಕ್ಕೆ ಭೇಟಿ ನೀಡಿ ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಅವಿಷೇಕ್ ದಾಲ್ಮಿಯಾ ಅವರೊಂದಿಗೆ ಸಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳ ಆಯೋಜನೆ ಬಗ್ಗೆ ಚರ್ಚೆ ನಡೆಸಿ ಸಿದ್ಧತೆಗಳನ್ನ ಪರಿಶೀಲಿಸಿದ್ದರು.
ಇದೇ ವೇಳೆ, ಆಸ್ಪತ್ರೆಗೆ ದಾಖಲಾಗಿರುವ ಸೌರವ್ ಗಂಗೂಲಿ ಅವರಿಗೆ ಶುಭಕೋರಿ ಹಲವರು ಟ್ವೀಟ್ ಮಾಡಿದ್ದಾರೆ. ಅನಿಲ್ ಕುಂಬ್ಳೆ, ವಿರಾಟ್ ಕೊಹ್ಲಿ ಸೇರಿದಂತೆ ಹಲವು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಗಂಗೂಲಿ ಆರೋಗ್ಯ ಚೇತರಿಕೆಗೆ ಹಾರೈಸಿದ್ದಾರೆ. ಬಂಗಾಳದ ಹಲವು ಕ್ರಿಕೆಟಿಗರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಹಲವು ಬಿಜೆಪಿ ಮುಖಂಡರು ಗಂಗೂಲಿ ಆರೋಗ್ಯಕ್ಕೆ ಪ್ರಾರ್ಥನೆ ಮಾಡಿದ್ದಾರೆ.
Sourav Ganguly is stable haemodynamically. He has received loading doses of dual anti platelets and statin and is undergoing primary angioplasty now: Dr Rupali Basu, MD & CEO, Woodlands https://t.co/neXSwr5UUG
ಸೌರವ್ ಗಂಗೂಲಿ ಭಾರತ ಕ್ರಿಕೆಟ್ ತಂಡ ಕಂಡ ಅತ್ಯಂತ ಶ್ರೇಷ್ಠ ಕ್ಯಾಪ್ಟನ್ಗಳಲ್ಲಿ ಒಬ್ಬರೆನಿಸಿದ್ದಾರೆ. ಟೀಮ್ ಇಂಡಿಯಾ ವಿಶ್ವದ ಬಲಾಢ್ಯ ಕ್ರಿಕೆಟ್ ತಂಡವಾಗಿ ಪುನಶ್ಚೇತನಗೊಳ್ಳಲು ಅವರ ನಾಯಕತ್ವ ಮುನ್ನುಡಿ ಬರೆದಿದೆ ಎಂಬುದು ಕ್ರಿಕೆಟ್ ಪಂಡಿತರ ಅಭಿಮತ. ಬಿಸಿಸಿಐನ ಅಧ್ಯಕ್ಷರಾಗಿಯೂ ಅವರು ಕಾರ್ಯನಿರ್ವಹಿಸುತ್ತಿದ್ದು, ಮಂಡಳಿ ಆಡಳಿತದಲ್ಲಿ ಸಕಾತ್ಮಕ ಪ್ರಭಾವ ಬೀರುವ ನಿರೀಕ್ಷೆಗಳಿವೆ. ಈ ಮಧ್ಯೆ, ಅವರು ಬಿಜೆಪಿಗೆ ಸೇರ್ಪಡೆಗೊಂಡು ರಾಜಕಾರಣಕ್ಕೆ ಬರುವ ಬಗ್ಗೆಯೂ ಸುದ್ದಿಗಳಿವೆ. ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಅವರು ಕಣಕ್ಕಿಳಿಯಬಹುದು ಎಂಬ ಬಗ್ಗೆ ಕೆಲ ವರದಿಗಳು ಪ್ರಕಟಗೊಂಡಿದ್ದವು. ಆದರೆ, ಇತ್ತೀಚೆಗಷ್ಟೇ ಗಂಗೂಲಿ ಅವರು ರಾಜಕಾರಣಕ್ಕೆ ಬರುವ ವಿಚಾರವನ್ನು ಬರೀ ವದಂತಿಗಳೆಂದು ಸ್ಪಷ್ಟಪಡಿಸುವ ಮೂಲಕ ತಾವು ರಾಜಕಾರಣಕ್ಕೆ ಬರುವುದಿಲ್ಲ ಎಂದು ಸೂಚ್ಯವಾಗಿ ತಿಳಿಸಿದ್ದರು.
Published by:Vijayasarthy SN
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ