ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಹಮ್ಮಿಕೊಳ್ಳಲಿದೆ. 3 ಟಿ20, 3 ಏಕದಿನ ಹಾಗೂ 4 ಟೆಸ್ಟ್ ಪಂದ್ಯಗಳ ಸರಣಿಗಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಆದರೆ ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಅವರನ್ನು ಆಯ್ಕೆಗೆ ಪರಿಗಣಿಸಲಾಗಿರಲಿಲ್ಲ. ಬದಲಾಗಿ ಭಾರತ ತಂಡದ ಉಪನಾಯಕನ ಸ್ಥಾನವನ್ನು ಕೆಎಲ್ ರಾಹುಲ್ಗೆ ನೀಡಲಾಗಿತ್ತು.
ಇದರ ಬೆನ್ನಲ್ಲೇ ಅಭ್ಯಾಸದಲ್ಲಿ ನಿರತರಾಗಿದ್ದ ರೋಹಿತ್ ಶರ್ಮಾ ಅವರ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಇದರಿಂದ ಟೀಮ್ ಇಂಡಿಯಾ ಆಯ್ಕೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿತ್ತು. ಇದೀಗ ಈ ವಾದ-ವಿವಾದಗಳಿಗೆ ತೆರೆ ಎಳೆಯಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಎಂಟ್ರಿ ಕೊಟ್ಟಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪ್ರತಿಷ್ಠಿತ ಸರಣಿಗೆ ರೋಹಿತ್ ಶರ್ಮಾ ಅವರ ಅಲಭ್ಯತೆ ಬಗ್ಗೆ ಮಾತನಾಡಿದ ಗಂಗೂಲಿ, ಒಂದು ವೇಳೆ ಹಿಟ್ಮ್ಯಾನ್ ಪೂರ್ಣ ಪ್ರಮಾಣದ ಫಿಟ್ನೆಸ್ ಸಾಧಿಸಿದರೆ ಖಂಡಿತವಾಗಿಯೂ ಆಯ್ಕೆಗೆ ಪರಿಗಣಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ರೋಹಿತ್ ಶರ್ಮಾ ಚೇತರಿಸಿಕೊಂಡರೆ ತಂಡಕ್ಕೆ ಆಯ್ಕೆಯಾಗುವ ಸೂಚನೆ ನೀಡಿದ್ದಾರೆ ದಾದಾ.
ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡಬಲ್ ಸೂಪರ್ ಓವರ್ ಪಂದ್ಯದ ವೇಳೆ ಮುಂಬೈ ನಾಯಕ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಿಎಸ್ಕೆ ಹಾಗೂ ಆರ್ಸಿಬಿ ವಿರುದ್ಧದ ಪಂದ್ಯಗಳಲ್ಲಿ ಹಿಟ್ಮ್ಯಾನ್ ಕಣಕ್ಕಿಳಿದಿರಲಿಲ್ಲ. ಬದಲಾಗಿ ಕೀರನ್ ಪೊಲಾರ್ಡ್ ಮುಂಬೈ ತಂಡವನ್ನು ಮುನ್ನಡೆಸಿದ್ದರು. ಇದೇ ಕಾರಣದಿಂದ ಅವರನ್ನು ಭಾರತ ತಂಡದ ಆಯ್ಕೆಗೆ ಪರಿಗಣಿಸಲಾಗಿರಲಿಲ್ಲ.
ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಗಂಗೂಲಿ, ರೋಹಿತ್ ಶರ್ಮಾ ಹಾಗೂ ಇಶಾಂತ್ ಶರ್ಮಾ ಅವರು ಮುಂದಿನ ಕೆಲ ದಿನಗಳಲ್ಲಿ ಫಿಟ್ನೆಸ್ ಸಾಧಿಸಿದರೆ ಆಸೀಸ್ ಟೂರ್ನಿಗೆ ಬಿಸಿಸಿಐ ಆಯ್ಕೆ ಸಮಿತಿ ಪರಿಗಣಿಸಲಿದೆ. ಇವರಿಬ್ಬರ ಗಾಯದ ಕುರಿತು ಮಾಹಿತಿಯನ್ನು ಪಡೆಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಪ್ಲೇ ಆಫ್ ಪ್ರವೇಶಿಸಿರುವ ಮುಂಬೈ ಇಂಡಿಯನ್ಸ್ ಬಳಗದಲ್ಲಿ ರೋಹಿತ್ ಶರ್ಮಾ ಮತ್ತೆ ಕಣಕ್ಕಿಳಿದು ಮಿಂಚಿದರೆ, ಇತ್ತ ಭಾರತ ತಂಡದಲ್ಲೂ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
ಭಾರತ-ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿ ನವೆಂಬರ್ 27 ರಿಂದ ಆರಂಭವಾಗಲಿದ್ದು, ಉಳಿದೆರಡು ಮ್ಯಾಚ್ಗಳು ನವೆಂಬರ್ 29 ಹಾಗೂ ಡಿಸೆಂಬರ್ 2 ರಂದು ನಡೆಯಲಿದೆ. ಹಾಗೆಯೇ ಮೊದಲ ಟಿ20 ಪಂದ್ಯ ಡಿಸೆಂಬರ್ 4 ರಂದು ನಡೆಯಲಿದ್ದು, ಡಿಸೆಂಬರ್ 6 ಮತ್ತು 8 ರಂದು 2ನೇ ಮತ್ತು 3ನೇ ಟಿ20 ಪಂದ್ಯ ಜರುಗಲಿದೆ.
ಇನ್ನು ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಡಿಸೆಂಬರ್ 17 ರಿಂದ ಆರಂಭವಾಗಲಿದೆ. ಓವಲ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಹೊನಲು ಬೆಳಕಿನಲ್ಲಿ ನಡೆಯಲಿರುವುದು ವಿಶೇಷ. ಹಾಗೆಯೇ ಎರಡನೇ ಟೆಸ್ಟ್ ಡಿಸೆಂಬರ್ 26 ರಿಂದ 30ರವರೆಗೆ ಮೆಲ್ಬೋರ್ನ್ನಲ್ಲಿ, 3ನೇ ಟೆಸ್ಟ್ ಪಂದ್ಯ ಜನವರಿ 7 ರಿಂದ 11 ರವರೆಗೆ ಸಿಡ್ನಿ ಮೈದಾನದಲ್ಲಿ ಹಾಗೂ ಅಂತಿಮ ಟೆಸ್ಟ್ ಬ್ರಿಸ್ಬೇನ್ನಲ್ಲಿ ಜನವರಿ 15 ರಿಂದ 19 ರವರೆಗೆ ನಡೆಯಲಿದೆ.
ಏಕದಿನ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 9.10 ಕ್ಕೆ ಆರಂಭವಾಗಲಿದ್ದು, ಹಾಗೆಯೇ ಟಿ20 ಪಂದ್ಯಗಳು ಮಧ್ಯಾಹ್ನ 1.40 ಕ್ಕೆ ನಡೆಯಲಿದೆ. ಇನ್ನು ಡೇ-ನೈಟ್ ಟೆಸ್ಟ್ ಪಂದ್ಯ ಬೆಳಿಗ್ಗೆ 9.30 ರಿಂದ ಆರಂಭವಾದರೆ, ಉಳಿದೆರೆಡು ಟೆಸ್ಟ್ ಪಂದ್ಯಗಳು ಮುಂಜಾನೆ 5 ಕ್ಕೆ ಶುರುವಾಗಲಿದೆ.
ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾದ ಟೀಮ್ ಇಂಡಿಯಾ
ಟಿ20 ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ಕೆ.ಎಲ್ ರಾಹುಲ್, ಮೊಹಮ್ಮದ್ ಶಮಿ, ನವದೀಪ್ ಸೈನಿ, ದೀಪಕ್ ಚಹರ್, ವರುಣ್ ಚಕ್ರವರ್ತಿ, ಹಾರ್ದಿಕ್ ಪಾಂಡ್ಯ, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ
ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಶುಭ್ಮನ್ ಗಿಲ್, ಕೆ.ಎಲ್ ರಾಹುಲ್, ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಮಯಾಂಕ್ ಅಗರ್ವಾಲ್, ರವೀಂದ್ರ ಜಡೇಜಾ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ನವದೀಪ್ ಸೈನಿ, ಶಾರ್ದುಲ್ ಠಾಕೂರ್
ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ನಾಯಕ), ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಕೆ.ಎಲ್ ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ಶುಭ್ಮನ್ ಗಿಲ್, ವೃದ್ಧಿಮಾನ್ ಸಾಹ, ರಿಷಭ್ ಪಂತ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಉಮೇಶ್ ಯಾದವ್, ನವದೀಪ್ ಸೈನಿ, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಆರ್.ಅಶ್ವಿನ್, ಮೊಹಮ್ಮದ್ ಸಿರಾಜ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ