ಆಸ್ಟ್ರೇಲಿಯಾ ಹಾಗೂ ಭಾರತದ ನಡುವಣ ಪ್ರತಿಷ್ಠಿತ ಸರಣಿ ಶುರುವಾಗಿದೆ. ಮೊದಲ ಏಕದಿನ ಪಂದ್ಯದಲ್ಲಿ ಆರೋನ್ ಫಿಂಚ್ ಪಡೆ 66 ರನ್ಗಳಿಂದ ಭರ್ಜರಿ ಜಯ ಸಾಧಿಸಿದೆ. ಮುಂದಿನ ಪಂದ್ಯದಲ್ಲಿ ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸುವ ಇರಾದೆಯಲ್ಲಿದೆ ಕೊಹ್ಲಿ ಬಳಗ. ಹಾಗೆಯೇ ಏಕದಿನ ಟೂರ್ನಿ ಬಳಿಕ ಮೂರು ಟಿ20 ಪಂದ್ಯಗಳನ್ನೂ ಸಹ ಭಾರತ ಆಡಲಿದೆ. ಇದರ ನಂತರ 4 ಟೆಸ್ಟ್ಗಳ ಸರಣಿ ಶುರುವಾಗಲಿದೆ. ಆದರೆ ಈ ಬಾರಿಯ ಆಸೀಸ್ ಪ್ರವಾಸದಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಡಲಾಗಿತ್ತು. ಐಪಿಎಲ್ ವೇಳೆ ಉಂಟಾದ ಗಾಯದ ಕಾರಣದಿಂದ ಆಯ್ಕೆಗೆ ಪರಿಗಣಿಸಲಾಗಿರಲಿಲ್ಲ. ಆದರೆ ಆ ಬಳಿಕ ಟೆಸ್ಟ್ ತಂಡಕ್ಕೆ ಹಿಟ್ಮ್ಯಾನ್ ಅವರನ್ನು ಆಯ್ಕೆ ಮಾಡಲಾಗಿತ್ತು. ಇದಾಗ್ಯೂ ದುಬೈನಲ್ಲಿದ್ದ ರೋಹಿತ್ ಶರ್ಮಾ ಟೆಸ್ಟ್ ಸರಣಿಗೆ ಆಸ್ಟ್ರೇಲಿಯಾ ತೆರಳಲಿದ್ದಾರೆ ಎನ್ನಲಾಗಿತ್ತು.
ಆದರೆ ರೋಹಿತ್ ಶರ್ಮಾ ದುಬೈಯಿಂದ ಭಾರತಕ್ಕೆ ಮರಳಿದ್ದರು. ಇದರಿಂದ ಹಿಟ್ಮ್ಯಾನ್ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವುದಿಲ್ಲವಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿತು. ಅತ್ತ ಏಕದಿನ ಸರಣಿ ಆರಂಭಕ್ಕೂ ಮುನ್ನ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರ ಗಾಯದ ಕುರಿತು ಬಿಸಿಸಿಐಗೆ ಸ್ಪಷ್ಟತೆಯ ಕೊರತೆ ಮತ್ತು ಗೊಂದಲದಿಂದಾಗಿ ಅವರನ್ನು ಆಯ್ಕೆ ಮಾಡಿಲ್ಲ ಎಂಬ ಕಾರಣ ನೀಡಿದ್ದರು. ಅಲ್ಲದೆ ದುಬೈಯಿಂದ ಭಾರತಕ್ಕೆ ಹಿಂತಿರುಗಿರುವ ಕಾರಣ ತಿಳಿದಿಲ್ಲ ಎಂದಿದ್ದರು.
ಇದೀಗ ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಅಧಿಕಾರಿಯೊಬ್ಬರು, ಕಾನ್ಫೆರೆನ್ಸ್ ಕರೆಯ ಮೂಲಕ ರೋಹಿತ್ ಶರ್ಮಾ ಸೇರಿದಂತೆ ಪ್ರಮುಖರೊಂದಿಗೆ ಚರ್ಚಿಸಿದ್ದೇವೆ. ಅವರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಬೇಕಾದ ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ದುಬೈನಿಂದ ಆಸ್ಟ್ರೇಲಿಯಾಗೆ ಪ್ರಯಾಣಿಸದ ಕಾರಣವನ್ನೂ ಕೂಡ ತಿಳಿಸಿದ್ದಾರೆ.
ರೋಹಿತ್ ಶರ್ಮಾ ಅವರ ತಂದೆ ಕೊರೋನಾ ಸೋಂಕಿಗೆ ತುತ್ತಾಗಿದ್ದರು. ಹೀಗಾಗಿ ಅವರು ಭಾರತಕ್ಕೆ ಮರಳಿದ್ದರು. ಇದು ಅವರ ವೈಯುಕ್ತಿಕ ವಿಚಾರವಾಗಿದ್ದು, ಹೀಗಾಗಿ ಹೆಚ್ಚಿನ ಮಾಹಿತಿಯಿಲ್ಲ. ಸದ್ಯ ಅವರ ಗಾಯ ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಪ್ರಮುಖರು ಒಳಗೊಂಡ ಕಾನ್ಫೆರೆನ್ಸ್ ನಡೆಸಿದ್ದು, ಹೀಗಾಗಿ ಡಿಸೆಂಬರ್ನಲ್ಲಿ ರೋಹಿತ್ ಶರ್ಮಾ ಆಸ್ಟ್ರೇಲಿಯಾ ಸರಣಿಗಾಗಿ ತೆರಳುವುದು ಬಹುತೇಕ ಖಚಿತ ಎಂದಿದ್ದಾರೆ.
ಇದನ್ನೂ ಓದಿ: ರಾಹುಲ್, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್ ಕೀಪರ್ಗಳನ್ನು ಹೆಸರಿಸಿದ ಗಂಗೂಲಿ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ