KL Rahul Captain: ಸೌತ್ ಆಫ್ರಿಕಾ ಓಡಿಐ ಸರಣಿಗೆ ಟೀಮ್ ಇಂಡಿಯಾ ಪ್ರಕಟ; ಕೆಎಲ್ ರಾಹುಲ್ ನಾಯಕ

India Cricket Team For ODI Series: ಜನವರಿ 19, 21 ಮತ್ತು 23ರಂದು ಸೌತ್ ಆಫ್ರಿಕಾದಲ್ಲಿ ನಡೆಯಲಿರುವ ಮೂರು ಏಕದಿನ ಕ್ರಿಕೆಟ್ ಪಂದ್ಯಗಳಿಗೆ 18 ಆಟಗಾರರ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. ಕೆಎಲ್ ರಾಹುಲ್ ಮತ್ತು ಜಸ್ಪ್ರೀತ್ ಬುಮ್ರಾ ನಾಯಕ ಮತ್ತು ಉಪನಾಯಕರಾಗಿದ್ಧಾರೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

 • Share this:
  ಮುಂಬೈ, ಡಿ. 31: ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಬಳಿಕ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 18 ಆಟಗಾರರ ತಂಡವನ್ನ ಬಿಸಿಸಿಐ ಪ್ರಕಟಿಸಿದ್ದು, ಕೆಎಲ್ ರಾಹುಲ್ ಅವರನ್ನ ನಾಯಕರನ್ನಾಗಿ ಆಯ್ಕೆ ಮಾಡಿದೆ. ಹಾಗೆಯೇ ಜಸ್​ಪ್ರೀತ್ ಬುಮ್ರಾ ಅವರಿಗೆ ಉಪನಾಯಕತ್ವ ಕೊಟ್ಟಿರುವುದು ಗಮನಾರ್ಹ. ನಿರೀಕ್ಷೆಯಂತೆ ಗಾಯಾಳು ರೋಹಿತ್ ಶರ್ಮಾ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಅವರಿಗೆ ಕ್ಯಾಪ್ಟನ್ಸಿ ಒಲಿದಿದೆ.

  ಸೌತ್ ಆಫ್ರಿಕಾ ಪ್ರವಾಸಕ್ಕೆ ಮೊದಲು ಮುಂಬೈನಲ್ಲಿ ನೆಟ್ ಪ್ರಾಕ್ಟೀಸ್ ಮಾಡುವ ವೇಳೆ ರೋಹಿತ್ ಶರ್ಮಾ ಅವರ ಕೈಗೆ ಗಾಯವಾಗಿತ್ತು. ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಅವರಿಗೆ ಚಿಕಿತ್ಸೆ ಕೊಡಲಾಗುತ್ತಿತ್ತು. ಆದರೆ, ಏಕದಿನ ಕ್ರಿಕೆಟ್ ಸರಣಿಯಷ್ಟರಲ್ಲಿ ಅವರು ಚೇತರಿಸಿಕೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಸದ್ಯ ರೋಹಿತ್ ಶರ್ಮಾ ಮುಂಬೈನ ತಮ್ಮ ನಿವಾಸದಲ್ಲೇ ಇದ್ದಾರೆ. ಅವರು ಸಂಪೂರ್ಣ ಗುಣಮುಖರಾಗಲು ಇನ್ನೂ ಕೆಲ ವಾರಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ.

  ಜನವರಿ 19, 21 ಮತ್ತು 23ರಂದು ನಡೆಯಲಿರುವ ಮೂರು ಓಡಿಐ ಪಂದ್ಯಗಳಿಗೆ ಬಿಸಿಸಿಐ ಪ್ರಕಟಿಸಿರುವ ಟೀಮ್ ಇಂಡಿಯಾದಲ್ಲಿ ಕರ್ನಾಟಕದ ಪ್ರಸಿದ್ಧ್ ಕೃಷ್ಣ ಕೂಡ ಸ್ಥಾನ ಪಡೆದಿದ್ದಾರೆ. ಐಪಿಎಲ್​ನಲ್ಲಿ ಮಿಂಚಿದ್ದ ಋತುರಾಜ್ ಗಾಯಕ್ವಡ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ಇಶಾನ್ ಕಿಶನ್ ಮತ್ತು ಶಾರ್ದೂಲ್ ಠಾಕೂರ್ ಅವರಿಗೂ ಅವಕಾಶ ಸಿಕ್ಕಿದೆ.

  ಸ್ಪಿನ್ನರ್ ಯುಜವೇಂದ್ರ ಚಹಲ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಆರ್ ಅಶ್ವಿನ್ ಮತ್ತು ಮೊಹಮ್ಮದ್ ಸಿರಾಜ್ ಅವರೂ ತಂಡದಲ್ಲಿದ್ದಾರೆ.

  ಇದನ್ನೂ ಓದಿ: India wins U19 Asia Cup: ಲಂಕನ್ನರನ್ನ ಸದೆಬಡಿದ ಭಾರತದ ಕಿರಿಯರಿಗೆ ಏಷ್ಯಾ ಕಪ್ ಟ್ರೋಫಿ

  ಶಿಖರ್ ಧವನ್ ಅವರಿಗೆ ಮತ್ತೆ ಅವಕಾಶ ಕೊಡಲಾಗಿದೆ. ಆಲ್​ರೌಂಡರ್ ವಾಷಿಂಗ್ಟನ್ ಸುಂದರ್, ಶ್ರೇಯಸ್ ಅಯ್ಯರ್ ಇದ್ದಾರೆ. ವಿಕೆಟ್ ಕೀಪರ್ಸ್ ಆಗಿ ರಿಷಭ್ ಪಂತ್ ಮತ್ತು ಇಶಾನ್ ಕಿಶನ್ ಇದ್ದಾರೆ.

  ಓಡಿಐ ತಂಡದ ಆಯ್ಕೆಯನ್ನ ವಿಜಯ್ ಹಜಾರೆ ಟ್ರೋಫಿ ಮುಗಿದ ಕೂಡಲೇ ಮಾಡಬೇಕಿತ್ತು. ರೋಹಿತ್ ಶರ್ಮಾ ಗಾಯಗೊಂಡು ಎನ್​ಸಿಎಯಲ್ಲಿ ಪುನಶ್ಚೇತನ ಚಿಕಿತ್ಸೆ ಪಡೆಯುತ್ತಿದ್ದರಿಂದ ಕೆಲ ದಿನಗಳ ಕಾಲ ಕಾದುನೋಡಲು ನಿರ್ಧರಿಸಲಾಗಿತ್ತು. ಡಿಸೆಂಬರ್ 30 ಅಥವಾ 31ರವರೆಗೆ ಕಾದು ನೋಡಿ ಆ ಬಳಿಕ ತಂಡದ ಆಯ್ಕೆ ಮಾಡಲಾಗುತವುದು ಎಂದು ವಾರದ ಹಿಂದೆಯೇ ಬಿಸಿಸಿಐ ಮೂಲಗಳು ತಿಳಿಸಿದ್ದವು. ಅದರಂತೆ ರೋಹಿತ್ ಶರ್ಮಾ ಅವರು ಗಾಯದಿಂದ ಬೇಗ ಗುಣಮುಖರಾಗುವುದು ಅಸಾಧ್ಯ ಎಂಬುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಂದು ಓಡಿಐ ಟೀಮ್ ಅನ್ನು ಘೋಷಿಸಲಾಗಿರುವುದು ತಿಳಿದುಬಂದಿದೆ.

  ಇದನ್ನೂ ಓದಿ: Harbhajan: 31ನೇ ವಯಸ್ಸಲ್ಲಿ 400 ವಿಕೆಟ್ ಪಡೆದ ನನಗೆ ಆಡಲು ಅವಕಾಶ ಕೊಡಲಿಲ್ಲ: ಹರ್ಭಜನ್ ಕಹಿ ನೆನಪು

  ಆರ್ ಅಶ್ವಿನ್ ಕಂಬ್ಯಾಕ್:

  ಇದೇ ವೇಳೆ, ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿ ವೇಳೆ ಗಾಯಗೊಂಡಿದ್ದ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರೂ ಆಯ್ಕೆಗೆ ಅಲಭ್ಯರಾಗಿದ್ದಾರೆ. ಇದರಿಂದಾಗಿ ಯುಜವೇಂದ್ರ ಚಹಲ್ ಮತ್ತು ಆರ್ ಅಶ್ವಿನ್ ಅವರಿಗೆ ಅವಕಾಶ ಸಿಕ್ಕಿದೆ. ಆರ್ ಅಶ್ವಿನ್ ನಾಲ್ಕು ವರ್ಷಗಳ ಬಳಿಕ ಏಕದಿನ ಕ್ರಿಕೆಟ್ ತಂಡಕ್ಕೆ ಮರಳಿದಂತಾಗಿದೆ.

  ಓಡಿಐ ಟೀಮ್ ಇಂಡಿಯಾ (18 ಆಟಗಾರರ ತಂಡ): ಕೆಎಲ್ ರಾಹುಲ್ (ನಾಯಕ), ಜಸ್​ಪ್ರೀತ್ ಬುಮ್ರಾ (ಉಪನಾಯಕ), ಶಿಖರ್ ಧವನ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೀ), ಇಶಾನ್ ಕಿಶನ್ (ವಿಕೀ), ಯುಜವೇಂದ್ರ ಚಹಲ್, ಆರ್ ಅಶ್ವಿನ್, ವಾಷಿಂಗ್ಟನ್ ಸುಂದರ್, ಭುವನೇಶ್ವರ್ ಕುಮಾರ್, ದೀಪಕ್ ಚಾಹರ್, ಪ್ರಸಿದ್ಧ್ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್.
  Published by:Vijayasarthy SN
  First published: