ಕಾಂಗರೂಗಳ ನಾಡಿನಲ್ಲಿ ನಡೆಯುತ್ತಿರುವ 2020-21ನೇ ಆವೃತ್ತಿಯ ಬಿಗ್ಬ್ಯಾಷ್ ಲೀಗ್ ರೋಚಕತೆ ಸೃಷ್ಟಿಸುತ್ತಿದೆ. ಅದರಲ್ಲೂ ಭಾನುವಾರ ನಡೆದ ಪಂದ್ಯದಲ್ಲಿ ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಆಡಿದ ಜಾಷ್ ಫಿಲಿಪ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸಿಡ್ನಿ ಸಿಕ್ಸರ್ಸ್ ತಂಡ ಮೆಲ್ಬೋರ್ನ್ ರೆನೆಗೇಡ್ಸ್ ಐತಿಹಾಸಿಕ ಜಯ ಸಾಧಿಸಿತು. ಡೇನಿಯೆಲ್ ಹ್ಯೂಸ್ ಪಡೆ ಬರೋಬ್ಬರಿ 145 ರನ್ಗಳ ಅಂತರದಿಂದ ಜಯ ಸಾಧಿಸುವ ಮೂಲಕ ಬಿಬಿಎಲ್ ಇತಿಹಾಸದಲ್ಲೇ ತಂಡವೊಂದಕ್ಕೆ ಸಿಕ್ಕಿ ಅತ್ಯಂತ ದೊಡ್ಡ ಮೊತ್ತದ ಗೆಲುವು ಇದಾಯಿತು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಸಿಡ್ನಿ ಸಿಕ್ಸರ್ಸ್ ತಂಡ ಆರಂಭದಲ್ಲೇ ಜ್ಯಾಕ್ ಎಡ್ವರ್ಡ್ಸ್(1) ಹಾಗೂ ಜೆ. ವಿನ್ಸ್(17) ವಿಕೆಟ್ ಕಳೆದುಕೊಂಡಿತಾದರೂ, ಇತ್ತ ಜಾಷ್ ಫಿಲಿಪ್ ಸ್ಫೋಟಕ ಆಟವಾಡುತ್ತಾ ಮುನ್ನುಗ್ಗಿದರು. ನಾಯಕ ಡೇನಿಯೆಲ್ ಹ್ಯೂಸ್ ಜೊತೆಗೂಡಿ ಚೆಂಡನ್ನು ಬೌಂಡರಿ-ಸಿಕ್ಸರ್ಗೆ ಅಟ್ಟಿದರು. ಹ್ಯೂಸ್ 23 ಎಸೆತಗಳಲ್ಲಿ 32 ಬಾರಿಸಿದರು.
IND vs AUS A: ಡ್ರಾನಲ್ಲಿ ಅಂತ್ಯಕಂಡ ಭಾರತ – ಆಸ್ಟ್ರೇಲಿಯಾ ಎ ಅಭ್ಯಾಸ ಪಂದ್ಯ: ಇಲ್ಲಿದೆ ಸ್ಕೋರ್ ವಿವರ
ಬಳಿಕ ಅಂತಿಮ ಹಂತದಲ್ಲಿ ಜಾರ್ಡನ್ ಸಿಲ್ಕ್ ಜೊತೆಯಾದ ಫಿಲಿಪ್ ಅಬ್ಬರಿಸಿದರು. ಕೊನೆಯ ಓವರ್ ವರೆಗೆ ಕ್ರೀಸ್ನಲ್ಲಿದ್ದ ಈ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ತಂಡದ ಮೊತ್ತ 200ರ ಗಡಿ ದಾಟಲು ಪ್ರಮುಖ ಪಾತ್ರವಹಿಸಿದರು.
ಅಂತಿಮವಾಗಿ ಸಿಡ್ನಿ ಸಿಕ್ಸರ್ಸ್ ತಂಡ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 205 ರನ್ ಬಾರಿಸಿತು. ಫಿಲಿಪ್ ಕೇವಲ 57 ಎಸೆತಗಳಲ್ಲಿ 9 ಫೋರ್, 3 ಸಿಕ್ಸರ್ನೊಂದಿಗೆ 95 ರನ್ ಚಚ್ಚಿದರೆ, ಸಿಲ್ಕ್ ಕೇವಲ 19 ಎಸೆತಗಳಲ್ಲಿ ಅಜೇಯ 45 ರನ್ ಸಿಡಿಸಿದರು.
AUS v IND: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ಗಳು ಇವರೇ..!
ಇತ್ತ 206 ರನ್ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ಆ್ಯರೋನ್ ಫಿಂಚ್ ನೇತೃತ್ವದ ಮೆಲ್ಬೋರ್ನ್ ತಂಡ 10.4 ಓವರ್ನಲ್ಲಿ 60 ರನ್ಗೆ ಸರ್ವಪತನ ಕಂಡಿತು. ಬೆನ್ ಡ್ವಾರ್ಷಿಯಸ್ 13 ರನ್ಗೆ 4 ವಿಕೆಟ್ ಕಿತ್ತು ವೃತ್ತಿ ಬದುಕಿನ ಶ್ರೇಷ್ಠ ಬೌಲಿಂಗ್ ಪ್ರದರ್ಶನ ನೀಡಿದರೆ, ಸ್ಟೀವ್ ಓ'ಕೀಫ್ ಮೂರು ಓವರ್ಗಳಲ್ಲಿ 16ಕ್ಕೆ 3 ವಿಕೆಟ್ ಉರುಳಿಸಿದರು.
ಜಾಷ್ ಫಿಲಿಪ್ ಸ್ಫೋಟಕ ಆಟ ಕಂಡು ಆರ್ಸಿಬಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಾಡಿಹೊಗಳಿದೆ. 13ನೇ ಆವೃತ್ತಿಯ ಐಪಿಎಲ್ನಲ್ಲಿ ಫಿಲಿಪ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನು ನೀಡಲಿಲ್ಲ. ಆಡಿದ 5 ಪಂದ್ಯಗಳಲ್ಲಿ ಕೇವಲ 78 ರನ್ ಮಾತ್ರ ಗಳಿಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ