ಆಸ್ಟ್ರೇಲಿಯಾದಲ್ಲಿ ಒಂದೆಡೆ ಟೀಮ್ ಇಂಡಿಯಾ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಮತ್ತೊಂದೆಡೆ ಪ್ರಸಿದ್ಧ ಟಿ20 ಲೀಗ್ ಬಿಗ್ ಬ್ಯಾಷ್ (ಬಿಬಿಎಲ್ 10) ಕೂಡ ನಡೆಯುತ್ತಿದೆ. ಈ ಲೀಗ್‌ನ ಪ್ರತಿಯೊಂದು ಪಂದ್ಯಗಳೂ ಒಂದಲ್ಲ ಒಂದು ಕಾರಣದಿಂದ ಪ್ರೇಕ್ಷಕರನ್ನು ರಂಜಿಸುತ್ತಿದೆ. ಟೂರ್ನಿಯ 27 ನೇ ಪಂದ್ಯದಲ್ಲಿ, ಮೆಲ್ಬೋರ್ನ್ ಸ್ಟಾರ್ಸ್ ಆಟಗಾರ ಆ್ಯಂಡ್ರೆ ಫ್ಲೆಚರ್ ಹಿಡಿದ ಅದ್ಭುತ ಕ್ಯಾಚ್ ಎಲ್ಲರನ್ನು ಬೆರಗಾಗಿಸಿದೆ.
ಟಾಸ್ ಗೆದ್ದ ಹೊಬಾರ್ಟ್ ಹುರಿಕೇನ್ಸ್ ತಂಡವು ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಬ್ಯಾಟಿಂಗ್ಗೆ ಇಳಿದ ಗ್ಲೆನ್ ಮ್ಯಾಕ್ಸ್ವೆಲ್ ನೇತೃತ್ವ ಮೆಲ್ಬೋರ್ನ್ ಸ್ಟಾರ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಆರಂಭಿಕ ಆಟಗಾರ ಮಾರ್ಕಸ್ ಸ್ಟೋಯಿನಿಸ್ ಅವರ ಅಜೇಯ 97 ರನ್ಗಳ ನೆರವಿನಿಂದ ಮೆಲ್ಬೋರ್ನ್ 6 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು.
ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಹೊಬಾರ್ಟ್ ಹುರಿಕೇನ್ಸ್ ತಂಡಕ್ಕೆ ಆರಂಭಿಕ ಬೆನ್ ಮೆಕ್ಡರ್ಮೊಟ್ ಭರ್ಜರಿ ಆರಂಭ ಒದಗಿಸಿದ್ದರು. ಒಂದೆಡೆ ವಿಕೆಟ್ ಉರುಳುತ್ತಿದ್ದರೆ ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಬೆನ್ ತಂಡವನ್ನು ಗೆಲುವಿನತ್ತ ಕೊಂಡೊಯ್ದಿದ್ದರು. ನಾಲ್ಕನೇ ಕ್ರಮಾಂಕದಲ್ಲಿ ಕಾಲಿನ್ ಇನ್ಗ್ರಾಮ್ ಕೂಡ ಜೊತೆಗೂಡುವುದರೊಂದಿಗೆ ಹುರಿಕೇನ್ಸ್ ಜಯಗಳಿಸಿದೆ ಎಂದೇ ಎಲ್ಲರೂ ಭಾವಿಸಿದ್ದರು.
ಆದರೆ 17ನೇ ಓವರ್ನಲ್ಲಿ ಆ್ಯಂಡ್ರೆ ಫ್ಲೆಚರ್ ಹಿಡಿದ ಅದ್ಭುತ ಕ್ಯಾಚ್ಗೆ ಕಾಲಿನ್ ಇನ್ಗ್ರಾಮ್ ಹೊರ ನಡೆಯಲೇಬೇಕಾಯಿತು. ಆದರೆ ಇನ್ನೊಂದೆಡೆ ಬೆನ್ ಮೆಕ್ಡರ್ಮೊಟ್ ತಮ್ಮ ಆರ್ಭಟ ಮುಂದುವರೆಸಿದ್ದರು. ಪಂದ್ಯದ 19ನೇ ಓವರ್ನಲ್ಲಿ ಬೆನ್ (91) ಬಾರಿಸಿದ ಚೆಂಡನ್ನು ಅತ್ಯಾದ್ಭುತ ಡೈವಿಂಗ್ ಮೂಲಕ ಹಿಡಿದ ಫ್ಲೆಚರ್ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದರು. ಅಷ್ಟೇ ಅಲ್ಲದೆ ಕ್ಯಾಚ್ ಹಿಡಿದ ಖುಷಿಯಲ್ಲೇ ಮೈದಾನದಲ್ಲಿ ನರ್ತಿಸಿದರು.
ಫ್ಲೆಚರ್ ಹಿಡಿದ ಈ ಎರಡು ಕ್ಯಾಚ್ಗಳು ಇಡೀ ಪಂದ್ಯದ ಚಿತ್ರಣ ಬದಲಿಸಿತು. ಗೆಲುವಿನ ಸಮೀಪದಲ್ಲಿದ್ದ ಹೊಬಾರ್ಟ್ ಹುರಿಕೇನ್ಸ್ ತಂಡ ಸೋಲಿಗೆ ಶರಣಾದರೆ, ಮೆಲ್ಬೋರ್ನ್ ಸ್ಟಾರ್ 10 ರನ್ಗಳ ರೋಚಕ ಜಯ ಸಾಧಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ