ಬೆಂಗಳೂರು (ಸೆ. 06): ಬಾಂಗ್ಲಾದೇಶ ಪ್ರವಾಸದಲ್ಲಿರುವ ಅಫ್ಘಾನಿಸ್ತಾನ ತಂಡ ಏಕೈಕ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಮೊದಲ ದಿನವೇ ಮೇಲುಗೈ ಸಾಧಿಸಿದ್ದ ಕ್ರಿಕೆಟ್ ಶಿಶುಗಳು ಇಂದಿನ 2ನೇ ದಿನವೂ ಭರ್ಜರಿ ಪ್ರದರ್ಶನ ತೋರುತ್ತಿದೆ. 342 ರನ್ಗೆ ಆಲೌಟ್ ಆಗಿ ಬೌಲಿಂಗ್ ಆರಂಭಿಸಿರುವ ರಶೀದ್ ಖಾನ್ ಬಳಗ ಮಾರಕ ದಾಳಿ ನಡೆಸುತ್ತಿದೆ. ಬಾಂಗ್ಲಾದೇಶ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ಅಂದುಕೊಂಡಂತೆ ಉತ್ತಮ ಆರಂಭ ಪಡೆದುಕೊಂಡಿಲ್ಲ. ಇಬ್ರಾಹಿಂ ಜರ್ದನ್(21), ಇಶ್ಮತುಲ್ಲ ಜನತ್(9) ಹಾಗೂ ಹಶ್ಮತುಲ್ಲ ಶಾಹಿದಿ(14) ಬೇಗನೆ ಪೆವಿಲಿಯನ್ ಸೇರಿಕೊಂಡರು. ಈ ಸಂದರ್ಭ ಒಂದಾದ ರೆಹ್ಮತ್ ಶಾ ಹಾಗೂ ಅಸ್ಗರ್ ಅಫ್ಗನ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು.
ನಿಧಾನಗತಿಯಲ್ಲಿ ಬ್ಯಾಟ್ ಬೀಸಿದ ಈ ಜೋಡಿ ತಂಡದ ರನ್ ಗತಿಯನ್ನು ಏರಿಸಿದರು. ರೆಹ್ಮತ್-ಅಸ್ಗರ್ 4ನೇ ವಿಕೆಟ್ಗೆ 120 ರನ್ಗಳ ಕಾಣಿಕೆ ನೀಡಿದರು. ಅಲ್ಲದೆ ರೆಹ್ಮತ್ ಶಾ ಆಕರ್ಷಕ ಶತಕ ಸಿಡಿಸಿ ಮಿಂಚಿದರು. ಆದರೆ, ಸೆಂಚುರಿ ಬೆನ್ನಲ್ಲೆ ರೆಹ್ಮತ್ 187 ಎಸೆತಗಳಲ್ಲಿ 102 ರನ್ ಗಳಿಸಿ ನಿರ್ಗಮಿಸಿದರು. ಬಂದ ಬೆನ್ನಲ್ಲೆ ಮೊಹಮ್ಮದ್ ನಬಿ ಸೊನ್ನೆ ಸುತ್ತಿದರೆ, ಅಸ್ಗರ್ 174 ಎಸೆತಗಳಲ್ಲಿ 92 ರನ್ಗೆ ಔಟ್ ಆಗಿ ಶತಕ ವಂಚಿತರಾದರು.
ಐಪಿಎಲ್ 2019ರ ತಂಡಗಳು ಟಿ-20 ಬದಲಿಗೆ ಟೆಸ್ಟ್ ಕ್ರಿಕೆಟ್ ಆಡಿದ್ದರೆ ಹೀಗಾಗುತ್ತಿತ್ತು!
ಹೀಗೆ ದಿಢೀರ್ ಕುಸಿದ ತಂಡಕ್ಕೆ ಆಸರೆಯಾಗಿದ್ದು ನಾಯಕ ರಶೀದ್ ಖಾನ್ ಹಾಗೂ ಅಸ್ಫರ್ ಜಜಾಯ್. ರಶೀದ್ ಬಿರುಸಿನ ಆಟದ ಮೊರೆ ಹೋದರೆ, ಅಸ್ಫರ್ ಉತ್ತಮ ಸಾತ್ ನೀಡಿದರು. ಇವರಿಬ್ಬರ ಜೊತೆಯಾಟದ ನೆರವಿನಿಂದ ತಂಡದ ಮೊತ್ತ 300ಕ್ಕೆ ತಲುಪಿತು. ಅಸ್ಫರ್ 115 ಎಸೆತಗಳಲ್ಲಿ 41 ರನ್ ಗಳಿಸಿ ನಿರ್ಗಮಿಸಿದರು.
ಇತ್ತ ಕೊನೆಯಲ್ಲಿ ರಶೀದ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅರ್ಧಶತಕ ಸಿಡಿಸಿದರು. 61 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿ ರಶೀದ್ 51 ರನ್ಗೆ ಔಟ್ ಆಗುವ ಮೂಲಕ ಅಫ್ಘಾನಿಸ್ತಾನ ಮೊದಲ ಇನ್ನಿಂಗ್ಸ್ ಅಂತ್ಯವಾಯಿತು, ಅಫ್ಘಾನ್ 117 ಓವರ್ನಲ್ಲಿ 342 ರನ್ಗೆ ಆಲೌಟ್ ಆಯಿತು. ಬಾಂಗ್ಲಾ ಪರ ತೈಜುಲ್ ಇಸ್ಲಾಂ 4 ವಿಕೆಟ್ ಕಿತ್ತರೆ, ಶಕಿಬ್ ಹಾಗೂ ನಯೀಮ್ ಹಸನ್ ತಲಾ 2 ವಿಕೆಟ್ ಪಡೆದರು.
(Video): 2025ರಲ್ಲಿ ಪಾಕಿಸ್ತಾನ ಪರ ವಿರಾಟ್ ಕೊಹ್ಲಿ ಕಣಕ್ಕೆ; ನಾಚಿಕೆಗೇಡಿನ ವಿಡಿಯೋ ಮಾಡಿದ ಪಾಕ್
ಸದ್ಯ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ್ದು 150 ರನ್ಗೂ ಮೊದಲೇ 7 ವಿಕೆಟ್ ಕಳೆದುಕೊಂಡು ಆಲೌಟ್ ಭೀತಿಯಲ್ಲಿದೆ. ಲಿಟನ್ ದಾಸ್ 33 ಹಾಗೂ ಮೊಯಿನುಲ್ ಹಖ್ 52 ರನ್ ಗಳಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ಮನ್ಗಳು ಸಂಪೂರ್ಣ ವೈಫಲ್ಯ ಅನುಭವಿಸಿದ್ದಾರೆ.
ಅಫ್ಘಾನ್ ಪರ ಮಾರಕ ದಾಳಿ ನಡೆಸುತ್ತಿರುವ ನಾಯಕ ರಶೀದ್ ಖಾನ್ ಈಗಾಗಲೇ ಎದುರಾಳಿಯ 4 ವಿಕೆಟ್ ಕಿತ್ತು ಮಿಂಚಿದ್ದಾರೆ.
ರಶೀದ್ ನೂತನ ದಾಖಲೆ:
ಬ್ಯಾಟಿಂಗ್-ಬೌಲಿಂಗ್ನಲ್ಲಿ ಮಿಂಚುತ್ತಿರುವ ರಶೀದ್ ಖಾನ್ ನೂತನ ದಾಖಲೆ ಬರೆದಿದ್ದಾರೆ. ರಶೀದ್ ತಮ್ಮ ವೃತ್ತಿ ಜೀವನದಲ್ಲಿ ಮೊದಲ ಬಾರಿ ಅಫ್ಘಾನಿಸ್ತಾನ ಟೆಸ್ಟ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆ ಮೂಲಕ ಟೆಸ್ಟ್ ತಂಡದ ನಾಯಕತ್ವ ವಹಿಸಿದ ವಿಶ್ವದ ಅತಿ ಕಿರಿಯ ನಾಯಕ ಎಂಬ ಹೆಗ್ಗಳಿಕೆಗೆ ರಶೀದ್ ಪಾತ್ರರಾಗಿದ್ದಾರೆ. ರಶೀದ್ ಖಾನ್ 20 ವರ್ಷ 350 ದಿನಗಳ ವಯಸ್ಸಿನಲ್ಲಿ ಅಫ್ಘಾನಿಸ್ತಾನ ತಂಡದ ಸಾರಥ್ಯ ವಹಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ