T20 World Cup- ಅಲ್ಲಾಹು ದಾರಿ ತೋರಿಸು: ಬಾಂಗ್ಲಾ ಕೋಮುಗಲಭೆಗೆ ಕಣ್ಣೀರಿಟ್ಟ ಕ್ರಿಕೆಟಿಗ ಮೊರ್ತಾಜಾ

Bangladesh Communal Violence- ದುರ್ಗಾ ಮಂದಿರದ ಮೇಲೆ ಕಳೆದ ಬುಧವಾರ ದುಷ್ಕರ್ಮಿಗಳು ದಾಳಿ ನಡೆಸಿದ ಘಟನೆ ಬಳಿಕ ಹಲವೆಡೆ ಹಿಂದೂಗಳಿಗೆ ಸೇರಿದ ಆಸ್ತಿಗಳನ್ನ ಗುರಿಯಾಗಿಸಿ ದಾಳಿಗಳಾಗುತ್ತಿವೆ. ಈ ಘಟನೆ ಬಗ್ಗೆ ಬಾಂಗ್ಲಾ ಕ್ರಿಕೆಟ್ ಕ್ಯಾಪ್ಟನ್ ಮಶ್ರಫ್ ಮೊರ್ತಾಜಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಶ್ರಫ್ ಮೊರ್ತಾಜಾ

ಮಶ್ರಫ್ ಮೊರ್ತಾಜಾ

 • Share this:
  ಅಬುಧಾಬಿ: ಬಾಂಗ್ಲಾದೇಶದಲ್ಲಿ ಹಲವು ದಿನಗಳಿಂದ ಸಂಭವಿಸುತ್ತಿರುವ ಕೋಮುಗಲಭೆ ಘಟನೆಗಳಿಗೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ಮಾಜಿ ನಾಯಕ ಮಶ್ರಫ್ ಮೊರ್ತಾಜಾ ಅತೀವ ಸಂಕಟ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ಮೊನ್ನೆ ತನ್ನ ಮೊದಲ ಪಂದ್ಯವನ್ನು ಸ್ಕಾಟ್​ಲೆಂಡ್ ಎದುರು ಸೋಲನುಭಿಸಿದ ಮರುದಿನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಅವರು ತಮ್ಮ ದೇಶದಲ್ಲಿ ನಡೆಯುತ್ತಿರುವ ಕೋಮುಗಲಭೆ ಹಿಂಸಾಚಾರ ಘಟನೆಗಳನ್ನ ಖಂಡಿಸಿದ್ದಾರೆ. ಬಾಂಗ್ಲಾದೇಶ ದ್ವಜದ ಬಣ್ಣವಾದ ಹಸಿರು ಮತ್ತು ಕೆಂಪನ್ನು ಸೂಚಿಸುವಂತಹ ಹಿಂಸಾಚಾರ ಘಟನೆಯ ಚಿತ್ರವೊಂದನ್ನೂ ಅವರು ತಮ್ಮ ಪೋಸ್ಟ್​ನಲ್ಲಿ ಹಾಕಿ ಮರುಗಿದ್ಧಾರೆ.

  “ನಿನ್ನೆ ನಾನು ಎರಡು ಸೋಲುಗಳನ್ನ ಕಂಡೆ. ಒಂದು ಸೋಲು ಬಾಂಗ್ಲಾದೇಶ ಕ್ರಿಕೆಟ್ ತಂಡದ್ದು. ಮತ್ತೊಂದು ಸಾಲು, ಇಡೀ ಬಾಂಗ್ಲಾದೇಶದ್ದು. ಇದು ನನ್ನ ಹೃದಯವನ್ನು ಛಿದ್ರಗೊಳಿಸಿದೆ. ಇಂಥ ಕೆಂಪು ಮತ್ತು ಹಸಿರು ನಮಗೆ ಬೇಕಾಗಿಲ್ಲ. ಅದೆಷ್ಟೋ ಕನಸುಗಳು ಹಾಗೂ ಜೀವಗಳು ಕ್ಷಣಮಾತ್ರದಲ್ಲಿ ಕಳೆದುಹೋಗಿವೆ. ಅಲ್ಲಾಹು ನಮಗೆ ದಾರಿ ತೋರಿಸಿ ಕರುಣಿಸಲಿ” ಎಂದು ಬಂಗಾಳಿ ಭಾಷೆಯಲ್ಲಿ ಅವರು ತಮ್ಮ ಹತಾಶೆಯನ್ನ ಹೊರಹಾಕಿದ್ದಾರೆ. ಈ ಫೋಟೋದಲ್ಲಿ ಹಸಿರು ಬಾಂಗ್ಲಾದೇಶದ ನೆಲವನ್ನ ಪ್ರತಿನಿಧಿಸುತ್ತಿದ್ದರೆ, ಕೆಂಪು ಬೆಂಕಿಯ ಬಣ್ಣವಾಗಿದೆ. ಬಾಂಗ್ಲಾ ನೆಲವನ್ನು ಬೆಂಕಿ ಸುಡುತ್ತಿದೆ ಎಂದರ್ಥದಲ್ಲಿ ಮಶ್ರಫ್ ಈ ಪೋಸ್ಟ್ ಹಾಕಿ ವ್ಯಥೆಪಟ್ಟಿದ್ದಾರೆ.

  ಬಾಂಗ್ಲಾದೇಶದ ಹಲವೆಡೆ ಕಳೆದ ಒಂದು ವಾರದಿಂದ ಕೋಮುಗಲಭೆ ತೀವ್ರ ಮಟ್ಟದಲ್ಲಿ ನಡೆಯುತ್ತಿದ್ದು ಆರು ಮಂದಿ ಬಲಿಯಾಗಿದ್ಧಾರೆ. ಅಲ್ಲಿನ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಜನರ ಮೇಲೆ ತೀವ್ರವಾದಿಗಳು ಅಲ್ಲಲ್ಲಿ ದಾಳಿ ನಡೆಸುತ್ತಲೇ ಇದ್ದಾರೆ. ಹಿಂದೂ ಸಮುದಾಯಕ್ಕೆ ಸೇರಿದ ದೇವಸ್ಥಾನ, ಅಂಗಡಿ ಮುಂಗಟ್ಟುಗಳು, ಮನೆಗಳ ಮೇಲೆ ದಾಳಿಗಳಾಗುತ್ತಿವೆ. ಕೆಲವೆಡೆ ಬಾಂಗ್ಲಾದೇಶದ ಅರೆಸೈನಿಕ ಪಡೆಗಳನ್ನ ನಿಯೋಜಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರದಂತಾಗಿದೆ ಎಂಬ ವರದಿಗಳೂ ಇವೆ.

  ಕೋಮುಗಲಭೆಗೆ ಕಾರಣವಾಗಿದ್ದು ಏನು?

  ಕಳೆದ ಬುಧವಾರದಂದು ಢಾಕಾದಿಂದ 100 ಕಿಮೀ ದೂರದಲ್ಲಿರುವ ಚಾಂದ್​ಪುರ್ ಗಡಿ ಸಮೀಪದ ಕುಮಿಲಾ ಎಂಬಲ್ಲಿ ದುರ್ಗಾ ಪೂಜೆ ನಡೆಯುತ್ತಿದ್ದ ಮಂದಿರದ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಗರ್ಭಗುಡಿಯನ್ನ ಹಾಳು ಮಾಡಿದ್ದರು. ಈ ಘಟನೆ ಸೋಷಿಯಲ್ ಮೀಡಿಯಾದಲ್ಲಿ ಹರಡತೊಡಗುತ್ತಿರುವಂತೆಯೇ ಇಂಥ ಇನ್ನಷ್ಟು ಘಟನೆಗಳು ಅಲ್ಲಲ್ಲಿ ನಡೆಯತೊಡಗಿದವು. ಚಂದ್​ಪುರ್​ನ ಹಾಜಿಗಂಜ್, ಛತ್ತೋಗ್ರಾಮ್​ನ ಬನ್ಷ್​ಕಾಲಿ, ಕಾಕ್ಸ್ ಬಜಾರ್​ನ ಪೆಕುವಾ ಬಳಿ ಹಿಂದೂ ದೇವಸ್ಥಾನಗಳ ಮೇಲೆ ದಾಳಿಗಳಾದವು.

  ಇದನ್ನೂ ಓದಿ: OMN vs BAN, T20 WC 2021: ಈ ಪಂದ್ಯವನ್ನೂ ಸೋತರೆ ಬಾಂಗ್ಲಾ ಟೂರ್ನಿಯಿಂದ ಔಟ್; ಗೆಲುವಿನ ಹುಮ್ಮಸ್ಸಿನಲ್ಲಿ ಓಮನ್!

  ಅಷ್ಟಕ್ಕೆ ನಿಲ್ಲದೆ ದೇಶದ ಹಲವೆಡೆ ದುರ್ಗಾ ಪೂಜೆ ನಡೆಯುತ್ತಿದ್ದ ಸ್ಥಳಗಳ ಮೇಲೆ ದುಷ್ಕರ್ಮಿಗಳ ದಾಳಿಗಳಾದವು. ಅ.14ರಂದು ನೋವಾಖಲಿಯಲ್ಲಿನ ಇಸ್ಕಾನ್ ಮಂದಿರದ ಮೇಲೆ ದಾಳಿಯಾಗಿ ಅಲ್ಲಿ ಒಬ್ಬನನ್ನು ದುಷ್ಕರ್ಮಿಗಳು ಕೊಂದು ಹಾಕಿದರು. ಹಿಂದೂ ಮಂದಿರಗಳ ರಕ್ಷಣೆಗೆ ಪ್ರಯತ್ನಿಸಿದ ಭದ್ರತಾ ಪಡೆಗಳ ಮೇಲೆಯೂ ಅಲ್ಲಲ್ಲಿ ದಾಳಿಗಾಳದವು. ಇಲ್ಲಿಯವರೆಗೆ ಆರು ಮಂದಿ ಹಿಂದೂಗಳನ್ನ ಅಲ್ಲಿನ ಕಿಡಿಗೇಡಿಗಳು ಬಲಿತೆಗೆದುಕೊಂಡಿದ್ದಾರೆ. ರಂಗಪುರ್ ಜಿಲ್ಲೆಯ ಪೀರ್​ಗುಂಜ್​ನ ಹಳ್ಳಿಯೊಂದರಲ್ಲಿ ಮೊನ್ನೆ ಭಾನುವಾರ ಹಲವು ಹಿಂದೂಗಳ ಮನೆಗಳನ್ನ ಸುಟ್ಟುಹಾಕಲಾಗಿರುವುದು ವರದಿಯಾಗಿದೆ.

  ಅಲ್ಪಸಂಖ್ಯಾತ ಸಂಘಟನೆಯಿಂದ ಉಪವಾಸ ನಿರಶನಕ್ಕೆ ನಿರ್ಧಾರ:

  ಅಲ್ಪಸಂಖ್ಯಾತ ಸಮುದಾಯದ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಲು ಮತ್ತು ಹಿಂಸಾಚಾರ ತಡೆಯಲು ವಿಫಲವಾಗಿರು ಸರ್ಕಾರದ ವಿರುದ್ಧ ಪ್ರತಿಭಟಿಸಲು ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರೈಸ್ತ ಏಕತೆ ಮಂಡಳಿ (Bangladesh Hindu Buddhist Christian Unity Council) ಅಕ್ಟೋಬರ್ 23ರಂದು ಉಪವಾಸ ನಿರಶನ ಕೂರಲು ಕರೆ ನೀಡಿದೆ. ಸರ್ಕಾರ ತಮ್ಮ ಧ್ವನಿಗೆ ಕಿವಿಗೊಡದಿದ್ದರೆ ಇನ್ನೂ ದೊಡ್ಡ ಮಟ್ಟದಲ್ಲಿ ಆಂದೋಲನ ನಡೆಸುವುದಾಗಿ ಈ ಸಂಘಟನೆಯ ಅಧ್ಯಕ್ಷ ಮಿಲನ್ ಕಾಂತಿ ದತ್ತ ಎಚ್ಚರಿಕೆ ನೀಡಿದ್ದಾರೆ.

  ಇದನ್ನೂ ಓದಿ: Terrorist Attack in Kashmir| ಕಣಿವೆ ರಾಜ್ಯದಲ್ಲಿ ಭಯೋತ್ಪಾದಕರ ಅಟ್ಟಹಾಸ; ಉಗ್ರರ ಗುಂಡೇಟಿಗೆ ಬಿಹಾರಿ ಕಾರ್ಮಿಕರು ಬಲಿ!

  ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಎಷ್ಟಿದ್ದಾರೆ?

  ಬಾಂಗ್ಲಾದೇಶದಲ್ಲಿ 2011ರ ಜನಗಣತಿ ಪ್ರಕಾರ ಒಟ್ಟಾರೆ ಜನಸಂಖ್ಯೆ ಸುಮಾರು 15 ಕೋಟಿ ಇದೆ. ಇದರಲ್ಲಿ ಮುಸ್ಲಿಮರು ಶೇ. 90.4ರಷ್ಟಿದ್ಧಾರೆ. ಹಿಂದೂಗಳು 1.27 ಕೋಟಿಯಷ್ಟಿದ್ಧಾರೆ. ಅಂದರೆ ಸುಮಾರು ಶೇ. 8.5ರಷ್ಟು ಹಿಂದೂಗಳ ಸಂಖ್ಯೆ ಇಲ್ಲಿದೆ. ಬೌದ್ಧ ಮತ್ತು ಕ್ರೈಸ್ತ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳ ಸಂಖ್ಯೆ ಶೇ. 1ರಷ್ಟಿದೆ.

  ಇದೇ ವೇಳೆ, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನ ಗುರಿಯಾಗಿಸಿ ನಡೆಯುತ್ತಿರುವ ಹಿಂಸಾಚಾರದ ಕಿಡಿ ಭಾರತಕ್ಕೂ ಹರಡುವ ಅಪಾಯ ಇದೆ. ಇದನ್ನ ತಪ್ಪಿಸುವಂತೆ ಅಲ್ಲಿನ ಸರ್ಕಾರ ಭಾರತಕ್ಕೆ ಮನವಿ ಮಾಡಿದೆ.
  Published by:Vijayasarthy SN
  First published: