Ban vs NZ T20| ನ್ಯೂಜಿಲೆಂಡ್ ತಂಡವನ್ನು 3-2 ಅಂತರದಲ್ಲಿ ಮಣಿಸಿದ ಬಾಂಗ್ಲಾ; ಒಂದೇ ತಿಂಗಳಲ್ಲಿ ಮೂರು ಸರಣಿ ಹುಲಿಗಳ ವಶಕ್ಕೆ!
ಕಳೆದ ಒಂದು ತಿಂಗಳ ಅವಧಿಯಲ್ಲಿ ಬಾಂಗ್ಲಾದೇಶ ಸತತ ಮೂರು ಟಿ20 ಸರಣಿಯನ್ನು ಕೈವಶಪಡಿಸಿಕೊಳ್ಳುವ ಮೂಲಕ ತಾನೂ ಸಹ ಬಲಿಷ್ಠ ತಂಡ ಎಂಬುದನ್ನು ಸಾರಿದೆ. ಅಲ್ಲದೆ, ವಿಶ್ವಕಪ್ ಟೂರ್ನಿಯಲ್ಲಿ ಇತರೆ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಢಾಕಾ (ಸೆಪ್ಟೆಂಬರ್ 10); ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಶೇರ್ ಏ ಬಾಂಗ್ಲಾ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧ ಕೊನೆಯ ಟಿ20 ಪಂದ್ಯದಲ್ಲಿ ಸೋಲನುಭವಿಸಿದರೂ ಸಹ ಸರಣಿಯನ್ನು ವಶಪಡಿಸಿಕೊಳ್ಳುವಲ್ಲಿ ಬಾಂಗ್ಲಾದೇಶ ಸಫಲವಾಗಿದೆ. ಬಲಿಷ್ಠ ನ್ಯೂಜಿಲೆಂಡ್ ತಂಡವನ್ನು 3-2 ಅಂತರದಲ್ಲಿ ಸೋಲಿಸುವ ಮೂಲಕ ಬಾಂಗ್ಲಾದೇಶ ಟಿ20 ವಿಶ್ವಕಪ್ ಗೆ ಆತ್ಮವಿಶ್ವಾಸದಿಂದ ಸಜ್ಜಾಗುತ್ತಿದೆ. ಅಲ್ಲದೆ, ಕಳೆದ ಒಂದು ತಿಂಗಳ ಅವಧಿಯಲ್ಲಿ ಬಾಂಗ್ಲಾದೇಶ ಸತತ ಮೂರು ಟಿ20 ಸರಣಿಯನ್ನು ಕೈವಶಪಡಿಸಿಕೊಳ್ಳುವ ಮೂಲಕ ತಾನೂ ಸಹ ಬಲಿಷ್ಠ ತಂಡ ಎಂಬುದನ್ನು ಸಾರಿದೆ. ಅಲ್ಲದೆ, ವಿಶ್ವಕಪ್ ಟೂರ್ನಿಯಲ್ಲಿ ಇತರೆ ತಂಡಗಳಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ. ವಿಶ್ವಕಪ್ ಬೆನ್ನಿಗೆ ಈ ಗೆಲುವು ಬಾಂಗ್ಲಾದೇಶಕ್ಕೆ ಮತ್ತಷ್ಟು ಹುರುಪು ನೀಡಲಿದೆ ಎನ್ನಲಾಗುತ್ತಿದೆ.
ಕಳೆದ ತಿಂಗಳು ಬಾಂಗ್ಲಾದೇಶ ಟಿ20 ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿತ್ತು. ಈ ವೇಳೆ 3-0 ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಬಾಂಗ್ಲಾ ಹುಲಿಗಳು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಇನ್ನೂ ಈ ಟೂರ್ನಿಯ ನಂತರ ತವರಿನಲ್ಲೇ ಆಸ್ಪ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿಯನ್ನು ಆಯೋಜಿಸಲಾಗಿತ್ತು.
ಈ ಸರಣಿಯಲ್ಲಿ ಮ್ಯಾಥ್ಯೂ ವೇಡ್ ನಾಯಕತ್ವದಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಬಲಿಷ್ಠ ತಂಡವನ್ನೇ ಬಾಂಗ್ಲಾದೇಶಕ್ಕೆ ಕಳುಹಿಸಿತ್ತು. ಆದರೆ, ಆಸ್ಟ್ರೇಲಿಯಾದ ಬ್ಯಾಟ್ಸ್ಮನ್ಗಳು ಬಾಂಗ್ಲಾದ ಬೌಲಿಂಗ್ ಎದುರು ತರೆಗೆಳೆಗಳಂತೆ ಉದುರಲು ಆರಂಭಿಸಿದ್ದರು. ಪರಿಣಾಮ ಈ ಸರಣಿಯಲ್ಲಿ ಬಾಂಗ್ಲಾದೇಶ 4-1 ಅಂತರದಲ್ಲಿ ಭಾರೀ ಜಯಭೇರಿ ಭಾರಿಸಿತ್ತು. ಅಲ್ಲದೆ, ಇದು ಆಸ್ಟ್ರೇಲಿಯಾ ಪಾಲಿಗೆ ಅತ್ಯಂತ ಹೀನಾಯ ಸೋಲು ಎಂದೇ ಬಣ್ಣಿಸಲಾಗಿತ್ತು.
ಈ ಸರಣಿ ಬೆನ್ನಿಗೆ ಕಳೆದ ವಾರ ನ್ಯೂಜಿಲೆಂಡ್ 5 ಟಿ20 ಪಂದ್ಯಗಳ ಸರಣಿಗಾಗಿ ಬಾಂಗ್ಲಾದೇಶಕ್ಕೆ ಆಗಮಿಸಿತ್ತು. ಆದರೆ, ಎಷ್ಟೇ ಪ್ರಯತ್ನ ಪಟ್ಟರೂ ಬಲಿಷ್ಠ ಕಿವೀಸ್ ತಂಡ ಸರಣಿ ಗೆಲ್ಲುವುದು ಸಾಧ್ಯವಾಗಿಲ್ಲ. ಪರಿಣಾಮ ಈ ಸರಣಿಯಲ್ಲೂ ಬಾಂಗ್ಲಾದೇಶ 3-2 ಅಂತರದಲ್ಲಿ ಗೆಲುವು ಸಾಧಿಸಿದೆ. ವಿಶ್ವಕಪ್ ದೃಷ್ಠಿಯಲ್ಲಿ ಈ ಗೆಲುವು ಬಾಂಗ್ಲಾದೇಶಕ್ಕೆ ಮಹತ್ವದ್ದಾಗಿದ್ದು, ವಿಶ್ವಕಪ್ನಲ್ಲಿ ಈ ತಂಡ ಹೇಗೆ ನಿರ್ವಹಣೆ ತೋರಲಿದೆ? ಎಂಬುದನ್ನು ಕಾದುನೋಡಬೇಕಿದೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ