Babar Azam- ಅಲ್ಲಿ ವೆಂಟಿಲೇಟರ್​ನಲ್ಲಿ ಅಮ್ಮ; ಇಲ್ಲಿ ವಿಶ್ವಕಪ್; ಸಂಕಷ್ಟದಲ್ಲೂ ದೃತಿಗೆಡದ ಬಾಬರ್

T20 World Cup- ಭಾರತ ಮತ್ತು ಪಾಕಿಸ್ತಾನ್ ತಂಡದ ಪಂದ್ಯ ನಡೆದ ದಿನದಂದು ಬಾಬರ್​ನ ತಾಯಿ ವೆಂಟಿಲೇಟರ್​ನಲ್ಲಿ ಇದ್ದರು. ಆದರೂ ದೃತಿಗೆಡದೆ ಬಾಬರ್ ಪಾಕಿಸ್ತಾನ್ ತಂಡಕ್ಕಾಗಿ ಮೂರು ಪಂದ್ಯಗಳನ್ನ ಆಡಿದರೆನ್ನಲಾಗಿದೆ.

ಬಾಬರ್ ಅಜಂ ತಮ್ಮ ತಾಯಿಯೊಂದಿಗೆ

ಬಾಬರ್ ಅಜಂ ತಮ್ಮ ತಾಯಿಯೊಂದಿಗೆ

 • Share this:
  ಸಚಿನ್ ತೆಂಡೂಲ್ಕರ್ ತಮ್ಮ ತಂದೆ ತೀರಿಕೊಂಡ ನೋವಿನಲ್ಲೂ 1999ರ ವಿಶ್ವಕಪ್​ನಲ್ಲಿ ಭಾರತ ತಂಡವನ್ನ ಅಪಾಯದಿಂದ ಪಾರು ಮಾಡುವಂಥ ಆಟ ಆಡಿದ್ದರು. ಕೀನ್ಯಾ ವಿರುದ್ಧದ ಮಾಡು ಇಲ್ಲ ಮಡಿ ಪಂದ್ಯದಲ್ಲಿ ಸಚಿನ್ ಶತಕ ಗಳಿಸಿದರು. ಭಾರತದ ಕ್ರಿಕೆಟ್ ಲೋಕದಲ್ಲಿ ಅದೊಂದು ಅವಿಸ್ಮರಣೀಯ ಘಳಿಗೆ ಎನಿಸಿದೆ. ಈಗ ನಡೆಯುತ್ತಿರುವ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ್ ಕ್ರಿಕೆಟ್ ತಂಡದ ಕ್ಯಾಪ್ಟನ್ ಬಾಬರ್ ಅಜಂ ಕೂಡ ವೈಯಕ್ತಿಕ ಭಾವೋದ್ವೇಗದ ಸ್ಥಿತಿಯಲ್ಲೂ ತಮ್ಮ ದೇಶಕ್ಕಾಗಿ ಆಡಿ ತಂಡವನ್ನು ಮುನ್ನೆಸಿದ್ದಾರೆ.

  ಈ ಟಿ20 ವಿಶ್ವಕಪ್​ನಲ್ಲಿ ಪಾಕಿಸ್ತಾನ ಸತತ 3 ಪಂದ್ಯ ಗೆದ್ದು ಬೀಗುತ್ತಿದೆ. ಭಾರತ, ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ್ ತಂಡಗಳ ಮೇಲೆ ಪಾಕ್ ದಿಗ್ವಿಜಯ ಸಾಧಿಸಿ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಆದರೆ, ಅ. 24ರಂದು ಭಾರತ ವಿರುದ್ಧ ಪಂದ್ಯ ನಡೆದ ದಿನ ಬಾಬರ್ ಅಜಂ ಬಹಳ ನೋವಿನಲ್ಲಿದ್ದರು. ಅಂದು ಅವರ ತಾಯಿ ಅನಾರೋಗ್ಯದಿಂದ ಐಸಿಯುನಲ್ಲಿ ವೆಂಟಿಲೇಟರ್​ನಲ್ಲಿ ಇದ್ದರು ಎಂದು ಅವರ ತಂದೆ ಅಜಂ ಸಿದ್ದಿಕಿ ಇತ್ತೀಚೆಗೆ ಹೇಳಿದ್ದಾರೆ.

  ಬಾಬರ್ ತಂದೆ ತಿಳಿಸಿದ್ದು ಇದು:

  “ನನ್ನ ದೇಶಕ್ಕೆ ಒಂದು ಸತ್ಯ ಹೇಳುವ ಕಾಲ ಬಂದಿದೆ. ಎಲ್ಲಾ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಕ್ಕೆ ಎಲ್ಲರಿಗೂ ಅಭಿನಂದನೆಗಳನ್ನ ಹೇಳುತ್ತಾರೆ. ಆದರೆ, ನಮ್ಮ ಮನೆಯಲ್ಲಿ ಒಂದು ದೊಡ್ಡ ಪರೀಕ್ಷೆಯೇ ಆಗಿತ್ತು. ಭಾರತ ವಿರುದ್ಧದ ಪಂದ್ಯದ ದಿನ ಬಾಬರ್​ನ ತಾಯಿ ವೆಂಟಿಲೇಟರ್​ನಲ್ಲಿ ಇದ್ದರು” ಎಂದು ಅಜಂ ಸಿದ್ದಿಕಿ ತಮ್ಮ ಇನ್ಸ್​ಟಾಗ್ರಾಮ್​ನಲ್ಲಿ ಬರೆದಿದ್ದಾರೆ.

  “ಬಹಳ ಒತ್ತಡದಲ್ಲಿ ಬಾಬರ್ ಎಲ್ಲಾ ಮೂರು ಪಂದ್ಯಗಳನ್ನ ಆಡಿದ. ನಾನು ಇಲ್ಲಿಗೆ ಬರಬೇಕಾಗಿರಲಿಲ್ಲ. ಅದರೆ, ಬಾಬರ್ ದುರ್ಬಲಗೊಳ್ಳಬಾರದು ಎಂಬ ಉದ್ದೇಶದಿಂದ ನಾನು ಬಂದೆ. ದೇವರ ಕೃಪೆಯಿಂದ ಆತ ಈಗ ಆರಾಮವಾಗಿದ್ದಾನೆ” ಎಂದು ಅಜಂ ಸಿದ್ದಿಕಿ ತಿಳಿಸಿದ್ದಾರೆ.

  ಇದನ್ನೂ ಓದಿ: Harbhajan Singh- ಹರ್ಭಜನ್ ಛೇಡಿಸಿದ ಈ ಪಾಕಿಸ್ತಾನೀ ಪತ್ರಕರ್ತೆಗೆ ಸಿಕ್ತು ಸರಿಯಾದ ಉತ್ತರ

  “ನಮ್ಮ ರಾಷ್ಟ್ರೀಯ ಹೀರೋಗಳನ್ನ ವಿನಾಕಾರಣ ಟೀಕಿಸಬಾರದು. ಒಂದು ಸ್ಥಾನಕ್ಕೆ ಹೋದಾಗ ನೀವು ಪರೀಕ್ಷೆ ಎದುರಿಸಬೇಕಾಗುತ್ತದೆ. ಪಾಕಿಸ್ತಾನಕ್ಕೆ ಜಯವಾಗಲಿ” ಎಂದಿದ್ದಾರೆ.  ಬಾಬರ್ ಅಜಂ ಅಮೋಘ ಆಟ:

  ಭಾರತ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಂ ಭರ್ಜರಿ ಅರ್ಧಶತಕ ಭಾರಿಸಿ ಪಾಕಿಸ್ತಾನದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ತಾಯಿ ಐಸಿಯುನಲ್ಲಿದ್ದ ನೋವಿನಲ್ಲೂ ಬಾಬರ್ ಅಜಂ ಈ ಮಹತ್ವದ ಪಂದ್ಯದಲ್ಲಿ ಆಡಿದ್ದರು. ಅಷ್ಟೇ ಅಲ್ಲ, ಭಾರತದ ಪಂದ್ಯದ ಬಳಿಕ ನ್ಯೂಜಿಲೆಂಡ್ ಮತ್ತು ಅಫ್ಘಾನಿಸ್ತಾನ ಪಂದ್ಯದಲ್ಲೂ ಅವರು ತಮ್ಮ ನೋವನ್ನು ಬದಿಗೊತ್ತಿ ದೇಶಕ್ಕಾಗಿ ಅಡಿದ್ದರು.

  ಬಾಬರ್ ಅಜಂ ಪಾಕಿಸ್ತಾನ ತಂಡದ ಬ್ಯಾಟರ್ ಮಾತ್ರವಾಗಲ್ಲ, ಕ್ಯಾಪ್ಟನ್ ಆಗಿಯೂ ಗಮನ ಸೆಳೆಯುವಂಥ ಪ್ರದರ್ಶನ ತೋರಿದ್ದಾರೆ. ಮೂರು ಪಂದ್ಯದಲ್ಲಿ 2 ಅರ್ಧಶತಕ ಸೇರಿ 128 ರನ್ ಗಳಿಸಿ ಪಾಕಿಸ್ತಾನದ ಸತತ ಮೂರು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಂದ್ಯದಲ್ಲಿ ಅವರ ನಾಯಕತ್ವ ಗುಣ ಅನೇಕರ ಪ್ರಶಂಸೆಗೆ ಪಾತ್ರವಾಗಿದೆ.

  ಸಚಿನ್ ನೆನಪು:

  ಈ ಸುದ್ದಿಯ ಆರಂಭದಲ್ಲಿ ಸಚಿನ್ ತೆಂಡೂಲ್ಕರ್ ತಂದೆ ಸಾವಿನ ಬಗ್ಗೆ ಉಲ್ಲೇಖಿಸಲಾಗಿತ್ತು. 1999ರ ವಿಶ್ವಕಪ್​ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯದಲ್ಲಿ ಸೌಥ್ ಆಫ್ರಿಕಾ ವಿರುದ್ಧ ಸೋತಿತು. ಆಗ ಸಚಿನ್ ತೆಂಡೂಲ್ಕರ್ ಅವರ ತಂದೆ ರಮೇಶ್ ತೆಂಡೂಲ್ಕರ್ ಸಾವಾಯಿತು. ತಂದೆಯ ಅಂತ್ಯಸಂಸ್ಕಾರಕ್ಕೆಂದು ಸಚಿನ್ ಇಂಗ್ಲೆಂಡ್​ನಿಂದ ಭಾರತಕ್ಕೆ ಮರಳಿದ್ದರು. ಈ ಸಂದರ್ಭದಲ್ಲಿ ಭಾರತ ತಂಡ ಸಚಿನ್ ಅನುಪಸ್ಥಿತಿಯಲ್ಲಿ ನಡೆದ ತನ್ನ ಎರಡನೇ ಪಂದ್ಯದಲ್ಲಿ ಜಿಂಬಾಬ್ವೆ ವಿರುದ್ಧ ಸೋತಿತು.

  ಇದನ್ನೂ ಓದಿ: MS Dhoni- ಎಂಎಸ್ ಧೋನಿ ಕ್ಯಾಪ್ಟನ್ಸಿ ಬಿಟ್ಟಿದ್ದು ಯಾಕೆ? ನಿಜವಾದ ಕಾರಣ ಇದು

  ಮುಂದಿನ ಪಂದ್ಯ ಕೀನ್ಯಾ ವಿರುದ್ಧ ಇತ್ತು. ಕೀನ್ಯಾ ವಿರುದ್ಧ ಸೋತರೆ ಭಾರತ ಟೂರ್ನಿಯಿಂದ ಔಟ್ ಆಗುವ ಅಪಾಯ ಇತ್ತು. ಆಗ ಎಲ್ಲರಿಗೂ ನೆನಪಾಗಿದ್ದು ಸಚಿನ್ ತಂಡದಲ್ಲಿ ಇರಬೇಕಿತ್ತು ಎಂಬುದು. ಸಚಿನ್ ತಮ್ಮ ತಂದೆಯ ಅಂತಿಮ ಕಾರ್ಯಗಳನ್ನ ಮುಗಿಸಿ ತತ್​ಕ್ಷಣವೇ ಇಂಗ್ಲೆಂಡ್​ಗೆ ಹೋದರು. ಕೀನ್ಯಾ ವಿರುದ್ಧದ ಪಂದ್ಯದಲ್ಲಿ ಆಡಿದರು. ಸಚಿನ್ ತೆಂಡೂಲ್ಕರ್ 101 ಬಾಲ್​ನಲ್ಲಿ ಅಜೇಯ 140 ರನ್ ಗಳಿಸಿದರು. ಆ ಪಂದ್ಯದಲ್ಲಿ ಭಾರತ 94 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು.

  ತಮ್ಮ ತಂದೆಯ ಸಾವಿನಿಂದಾದ ನೋವಿನ ದುಃಖದಲ್ಲೂ ಸಚಿನ್ ತೆಂಡೂಲ್ಕರ್ ಮನಸು ಗಟ್ಟಿ ಮಾಡಿಕೊಂಡು ದೇಶಕ್ಕಾಗಿ ಆಡಿ ಸೈ ಎನಿಸಿದ್ದರು.
  Published by:Vijayasarthy SN
  First published: